ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಕರಡಿ ಕುಣಿತ

ಒಂದೇ ದಿನ ಕರಗಿದ ₹4.59 ಲಕ್ಷ ಕೋಟಿ ಸಂಪತ್ತು
Published 17 ಜನವರಿ 2024, 15:32 IST
Last Updated 17 ಜನವರಿ 2024, 15:32 IST
ಅಕ್ಷರ ಗಾತ್ರ

ನವದೆಹಲಿ: ಷೇರು‍ಪೇಟೆಯಲ್ಲಿ ಗೂಳಿ ಓಟಕ್ಕೆ ತೆರೆ ಬಿದ್ದಿದ್ದು, ಕರಡಿ ಕುಣಿತ ಆರಂಭವಾಗಿದೆ.

ಹೂಡಿಕೆದಾರರ ಉತ್ಸಾಹ ಕುಗ್ಗಿಸಿದ ಅಮೆರಿಕದ ಫೆಡರಲ್ ಬ್ಯಾಂಕ್‌ನ ಹಣಕಾಸು ನೀತಿ, ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಜಾಗತಿಕ ಷೇರುಪೇಟೆಯಲ್ಲಿ ಮಾರಾಟದ ಒತ್ತಡದ ಕಾರಣಗಳಿಂದಾಗಿ ಬುಧವಾರ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಇಳಿಕೆಯ ಹಾದಿ ಹಿಡಿದವು. 

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ ಒಂದೂವರೆ ವರ್ಷದ ಕನಿಷ್ಠಕ್ಕೆ ಕುಸಿತ ಕಂಡಿದ್ದು, ಹೂಡಿಕೆದಾರರ ಸಂಪತ್ತು ಒಂದೇ ದಿನ ₹4.59 ಲಕ್ಷ ಕೋಟಿ ಕರಗಿದೆ.

ಫೆಡರಲ್ ಬ್ಯಾಂಕ್‌ನ ಬಡ್ಡಿದರ ಕಡಿತದ ವಿಳಂಬವು ಹೂಡಿಕೆದಾರರ ಉತ್ಸಾಹವನ್ನು ಕುಗ್ಗಿಸಿದೆ. ಇದರಿಂದ ಮಾರುಕಟ್ಟೆಯು ಇಳಿಮುಖ ಕಂಡಿದೆ ಎಂದು ಮೆಹ್ತಾ ಈಕ್ವಿಟೀಸ್‌ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ (ಸಂಶೋಧನೆ) ಪ್ರಶಾಂತ್‌ ತಾಪ್ಸೆ ಹೇಳಿದ್ದಾರೆ.

ಸೆನ್ಸೆಕ್ಸ್ 1,628 ಅಂಶ (ಶೇ 2.23) ಇಳಿಕೆಯಾಗಿ 71,500 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ದಿನದ ವಹಿವಾಟಿನ ವೇಳೆ 1,699 ಅಂಶ (ಶೇ 2.32) ಕುಸಿದು 71,429 ಅಂಶ ಕನಿಷ್ಠ ಮಟ್ಟಕ್ಕೆ ಮುಟ್ಟಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 460 ಅಂಶ ಕಡಿಮೆಯಾಗಿ 21,571ಕ್ಕೆ ಕೊನೆಗೊಂಡಿದೆ.

ಟಾಟಾ ಸ್ಟೀಲ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಆ್ಯಕ್ಸಿಸ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಬಜಾಜ್‌ ಫಿನ್‌ಸರ್ವ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ನ ಷೇರುಗಳು ನಷ್ಟ ಕಂಡಿವೆ. 

ಎಚ್‌ಸಿಎಲ್‌ ಟೆಕ್ನಾಲಜೀಸ್‌, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್‌, ಇನ್ಫೊಸಿಸ್‌, ಟೆಕ್‌ ಮಹೀಂದ್ರ, ಟೈಟನ್‌, ನೆಸ್ಟ್ಲೆ ಮತ್ತು ಪವರ್‌ಗ್ರಿಡ್‌ ಷೇರುಪೇಟೆ ನಷ್ಟ ಕಂಡರೂ ಲಾಭ ದಾಖಲಿಸಿವೆ. 

ಬಿಎಸ್‌ಇ ಮಿಡ್‌ ಕ್ಯಾಪ್‌ ಗೇಜ್‌ ಶೇ 1.09 ಮತ್ತು ಸ್ಮಾಲ್‌ ಕ್ಯಾಪ್‌ ಶೇ 0.90ರಷ್ಟು ಇಳಿಕೆ ಕಂಡಿವೆ. ಐ.ಟಿ ಮತ್ತು ಟೆಕ್‌ ಲಾಭ ಕಂಡಿವೆ. ಹಣಕಾಸು ಸೇವೆ (ಶೇ 3.76), ಲೋಹ (ಶೇ 2.86), ಸರಕುಗಳು (ಶೇ 2.31), ಟೆಲಿ ಕಮ್ಯುನಿಕೇಷನ್‌ (ಶೇ 1.94) ಮತ್ತು ರಿಯಾಲ್ಟಿ (ಶೇ 1.47) ಸೂಚ್ಯಂಕಗಳು ಇಳಿದಿವೆ.

ಏಷ್ಯನ್‌ ಮಾರುಕಟ್ಟೆಯಲ್ಲಿ, ಸಿಯೋಲ್‌, ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಕನಿಷ್ಠ ಮಟ್ಟದಲ್ಲಿ ಸ್ಥಿರಗೊಂಡವು. ಯುರೋಪಿಯನ್‌ ಮಾರುಕಟ್ಟೆ ಕೂಡ ವಹಿವಾಟಿನಲ್ಲಿ ಇಳಿಕೆ ಕಂಡಿತು. ಮಂಗಳವಾರ ಅಮೆರಿಕದ ಮಾರುಕಟ್ಟೆ ನಕಾರಾತ್ಮಕ ವಹಿವಾಟಿನಲ್ಲಿ ಅಂತ್ಯಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT