ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಜಿಆರ್‌ ಬಾಕಿ: ಮೊಬೈಲ್‌ ಕಂಪನಿಗಳಿಗೆ 10 ವರ್ಷ ಕಾಲಾವಕಾಶ ನೀಡಿದ ಸುಪ್ರೀಂ

ನಷ್ಟದಲ್ಲಿರುವ ಮೊಬೈಲ್‌ ಕಂಪನಿಗಳಿಗೆ ನೆಮ್ಮದಿ ತಂದ ಸುಪ್ರೀಂ ಕೋರ್ಟ್‌ ಆದೇಶ
Last Updated 1 ಸೆಪ್ಟೆಂಬರ್ 2020, 13:02 IST
ಅಕ್ಷರ ಗಾತ್ರ

ನವದೆಹಲಿ: ಹೊಂದಾಣಿಕೆ ಮಾಡಿದ ಒಟ್ಟು ವರಮಾನ (ಎಜಿಆರ್‌) ಬಾಕಿ ಪಾವತಿಸಲು ಮೊಬೈಲ್‌ ಸೇವಾ ಕಂಪನಿಗಳಿಗೆ ಕೆಲವು ಷರತ್ತುಗಳೊಂದಿಗೆ 10 ವರ್ಷಗಳ ಕಾಲಾವಕಾಶ ನೀಡಿ ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶಿಸಿದೆ.

ನಷ್ಟದಲ್ಲಿರುವ ಮೊಬೈಲ್‌ ಕಂಪನಿಗಳು ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ಸದ್ಯದ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ.

ಎಜಿಆರ್‌ ಬಾಕಿ ಪಾವತಿಗೆ 15 ವರ್ಷಗಳ ಕಾಲಾವಕಾಶ ನೀಡುವಂತೆ ವೊಡಾಫೋನ್‌ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ ಕಂಪನಿಗಳು ಈ ಹಿಂದೆ ಕೋರ್ಟ್‌ಗೆ ಮನವಿ ಮಾಡಿದ್ದವು.

ಬಾಕಿ ಪಾವತಿಸಲು ಈ ಹಿಂದೆ ನೀಡಿದ್ದ ಗಡುವು ಜನವರಿಗೆ ಅಂತ್ಯವಾಗಿದ್ದು, ಕಂಪನಿಗಳು ಬಾಕಿ ಪಾವತಿಸಲು ವಿಫಲವಾಗಿವೆ. ಕಂಪನಿಗಳು ನೀಡಬೇಕಿರುವ ಒಟ್ಟಾರೆ ಬಾಕಿ ಮೊತ್ತ ₹ 1.6 ಲಕ್ಷ ಕೋಟಿಗಳಷ್ಟಿದೆ.

ಎಜಿಆರ್ ಪ್ರಕರಣದಲ್ಲಿ ಮೊಬೈಲ್‌ ಕಂಪನಿಗಳು ತರಂಗಾಂತರ ಬಳಕೆ ಮತ್ತು ಪರವಾನಗಿ ಶುಲ್ಕವನ್ನು ದಂಡ, ಬಡ್ಡಿ ಸಮೇತ ದೂರಸಂಪರ್ಕ ಇಲಾಖೆಗೆ ಪಾವತಿಸಬೇಕಿದೆ.

ಸುಪ್ರೀಂ ಕೋರ್ಟ್‌ನ ಈ ಆದೇಶದಿಂದ ಮುಖ್ಯವಾಗಿ ವೊಡಾಫೋನ್‌ ಐಡಿಯಾ ಕಂಪನಿಗೆ ಹೆಚ್ಚಿನ ಅನುಕೂಲ ಆಗಲಿದೆ. ಏಕೆಂದರೆ, ಸತತವಾಗಿ ಎಂಟು ತ್ರೈಮಾಸಿಕಗಳಲ್ಲಿ ಕಂಪನಿಯು ನಷ್ಟ ಕಂಡಿದೆ. ಜೂನ್‌ ಅಂತ್ಯದ ವೇಳೆಗೆ ಕಂಪನಿಯ ಸರಾಸರಿ ಸಾಲದ ಮೊತ್ತ ₹ 1.19 ಲಕ್ಷ ಕೋಟಿಗಳಷ್ಟಿತ್ತು.

ಜಿಯೊ ಸ್ಪರ್ಧೆ: ರಿಲಯನ್ಸ್‌ ಇಂಡಸ್ಟ್ರೀಸ್‌ನ ಜಿಯೊ ಇನ್ಫೊಕಾಮ್‌ 2016ರ ನಂತರ ದೂರಸಂಪರ್ಕ ಸೇವಾ ಕ್ಷೇತ್ರ ಪ್ರವೇಶಿಸಿದ ಬಳಿಕ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಆರಂಭವಾಯಿತು. ಜಿಯೊ ಕಂಪನಿಯು ಉಚಿತ ಕರೆ ಸೇವೆ ಹಾಗೂ ಕಡಿಮೆ ಬೆಲೆಗೆ ಡೇಟಾ ನೀಡಲು ಆರಂಭಿಸಿದ್ದು, ವೊಡಾಫೋನ್‌ ಮತ್ತು ಐಡಿಯಾದಂತಹ ಕಂಪನಿಗಳನ್ನು ಜಂಟಿ ಕಂಪನಿಯಾಗಿ ರೂಪುಗೊಳ್ಳುವಂತೆ ಮಾಡಿತು. ಹೀಗಾದರೂ ಗ್ರಾಹಕರನ್ನು ಕಳೆದುಕೊಳ್ಳುವುದರಿಂದ ಮತ್ತು ನಷ್ಟದಿಂದ ಹೊರಬರಲು ಸಾಧ್ಯವಾಗಲೇ ಇಲ್ಲ.

ಬಾಕಿ ಪಾವತಿ ವಿವರ

ಕಂಪನಿ; ಪಾವತಿ; ಬಾಕಿ ಇರುವುದು

ವೊಡಾಫೋನ್‌ ಐಡಿಯಾ; ₹ 7,854ಕೋಟಿ; ₹ 50,000 ಕೋಟಿ

ಭಾರ್ತಿ ಏರ್‌ಟೆಲ್‌; ₹18,000 ಕೋಟಿ; ₹ 25,976 ಕೋಟಿ

***

3–5% - ತರಂಗಾಂತರ ಬಳಕೆಗೆ ನೀಡಬೇಕಿರುವ ಎಜಿಆರ್‌

8% - ಪರವಾನಗಿ ಶುಲ್ಕ

***

ಷರತ್ತುಗಳೇನು?

* 2021ರ ಮಾರ್ಚ್‌ 31ರ ಒಳಗಾಗಿ ಬಾಕಿ ಮೊತ್ತದ ಶೇ 10ರಷ್ಟನ್ನು ಪಾವತಿಸಬೇಕು

* ನಾಲ್ಕು ವಾರದೊಳಗೆ ವೈಯಕ್ತಿಕ ಖಾತರಿ ನೀಡುವಂತೆ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಅಥವಾ ಸಿಇಒಗೆ ಸೂಚನೆ

* ಕಂತು ಪಾವತಿಸಲು ವಿಫಲವಾದರೆ ದಂಡ, ಬಡ್ಡಿದರ ಪಾವತಿಸಿಬೇಕು. ನ್ಯಾಯಾಂಗ ನಿಂದನೆ ಮೊಕದ್ದಮೆ ಎದುರಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT