ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಕೈತಪ್ಪುವುದೇ ಪೆಗಟ್ರಾನ್‌ ಘಟಕ?

Last Updated 24 ಡಿಸೆಂಬರ್ 2020, 21:02 IST
ಅಕ್ಷರ ಗಾತ್ರ

ಚೆನ್ನೈ: ಪೆಗಟ್ರಾನ್‌ ಕಾರ್ಪೊರೇಷನ್‌ನ ಐಫೋನ್‌ ತಯಾರಿಕಾ ಘಟಕವನ್ನು ಹೊಂದುವ ಅವಕಾಶವು ಕರ್ನಾಟಕ ರಾಜ್ಯದ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ.

ಆ್ಯಪಲ್‌ ಕಂಪನಿಯ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಲ್ಲಿ ಒಂದಾಗಿರುವ ಪೆಗಟ್ರಾನ್‌, ಭಾರತದಲ್ಲಿ ತನ್ನ ಮೊದಲ ತಯಾರಿಕಾ ಘಟಕ ಸ್ಥಾಪನೆಗೆ ಕರ್ನಾಟಕ, ತಮಿಳುನಾಡನ್ನೂ ಒಳಗೊಂಡು ಹಲವು ರಾಜ್ಯಗಳೊಂದಿಗೆ ಮಾತುಕತೆ ನಡೆಸಿತ್ತು. ಅಂತಿಮವಾಗಿ ತಮಿಳುನಾಡನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ಹೇಳಿವೆ.

ಕಂಪನಿಯ ಉನ್ನತ ಮಟ್ಟದ ನಿಯೋಗವು ನವೆಂಬರ್‌ನಲ್ಲಿ ಕರ್ನಾಟಕ ರಾಜ್ಯದ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ರಾಜ್ಯದಲ್ಲಿ ಘಟಕ ಸ್ಥಾಪಿಸಿದರೆ ಸಿಗಲಿರುವ ಸೌಲಭ್ಯಗಳು ಮತ್ತು ಉತ್ತೇಜನಗಳ ಕುರಿತು ವಿವರವಾಗಿ ಮಾತುಕತೆ ನಡೆದಿತ್ತು. ಹೀಗಿದ್ದರೂ ಚೆನ್ನೈನಲ್ಲಿ ಮೂರು ಬಂದರು ಪ್ರದೇಶಗಳು ಇವೆ ಎನ್ನುವ ಕಾರಣಕ್ಕಾಗಿ ತಮಿಳುನಾಡಿನ ಬಗ್ಗೆ ಒಲವು ವ್ಯಕ್ತಪಡಿಸುವ ಸಾಧ್ಯತೆ ಇದೆ ಎಂದು ತಿಳಿಸಿವೆ.

ಬೆಂಗಳೂರು ಹೊರವಲಯದಲ್ಲಿ ಇರುವ ವಿಸ್ಟ್ರಾನ್‌ ಕಂಪನಿಯಲ್ಲಿ ಈಚೆಗೆ ಕಾರ್ಮಿಕರು ನಡೆಸಿದ ಗಲಭೆಯು ಜಾಗತಿಕ ಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಈ ಘಟನೆಯ ಬಳಿಕ ವಿಸ್ಟ್ರಾನ್‌ಗೆ ಯಾವುದೇ ಹೊಸ ವಾಣಿಜ್ಯ ಗುತ್ತಿಗೆಗಳನ್ನು ನೀಡುವುದಿಲ್ಲ ಎಂದು ಆ್ಯಪಲ್‌ ಹೇಳಿದೆ.

ತಮಿಳುನಾಡು ಸರ್ಕಾರ ಮತ್ತು ಪೆಗಟ್ರಾನ್‌ ಕಂಪನಿಯ ಮಧ್ಯೆ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದೆ. ಶೀಘ್ರದಲ್ಲೇ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ಕಂಪನಿಯು ಅಂತಿಮ ನಿರ್ಧಾರಕ್ಕೆ ಬರಲಿದೆ ಎಂದು ಮೂಲಗಳು ಹೇಳಿವೆ.

ಈ ಬೆಳವಣಿಗೆಗಳ ಕುರಿತು ಇ–ಮೇಲ್‌ ಮೂಲಕ ಕೇಳಿದ ಪ್ರಶ್ನೆಗಳಿಗೆ ಕಂಪನಿಯು ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಒಪ್ಪಂದ ಏರ್ಪಟ್ಟರೆ,ಫಾಕ್ಸ್‌ಕಾನ್‌ ಬಳಿಕ ತಮಿಳುನಾಡಿನಲ್ಲಿ ಐಫೋನ್‌ ತಯಾರಿಸಲು ಒಪ್ಪಿಗೆ ಪಡೆದ ಎರಡನೇ ಕಂಪನಿಯಾಗಲಿದೆ ಪೆಗಟ್ರಾನ್. ಫಾಕ್ಸ್‌ಕಾನ್‌ ಕಂಪನಿಯು ಶ್ರೀಪೆರಂಬದೂರು ಬಳಿ ಇರುವ ಐಫೋನ್‌ ತಯಾರಿಕಾ ಘಟಕದ ಸಾಮರ್ಥ್ಯ ವೃದ್ಧಿಗೆ ₹ 7,000 ಕೋಟಿ ತೆಗೆದಿರಿಸಿದೆ. ಚೆನ್ನೈನ ಹೊರಭಾಗದಲ್ಲಿರುವ ಕಾಂಚಿಪುರ ಜಿಲ್ಲೆಯ ವಲ್ಲಕೊಟ್ಟೈ ಬಳಿ ಪೆಗಟ್ರಾನ್‌ ಕಂಪನಿಯ ತಯಾರಿಕಾ ಘಟಕ ಸ್ಥಾಪನೆಗಾಗಿ ಸ್ಥಳೀಯ ಆಡಳಿತವು ಭೂಮಿಯನ್ನು ಗುರುತಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT