ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಬೇಳೆ ಬೆಲೆ ಏರಿಕೆ ಸಂಭವ

ಜಿಲ್ಲೆಯಲ್ಲೇ ₹1,100 ಕೋಟಿ ಮೊತ್ತದ ಬೆಳೆಹಾನಿ; ಇಳುವರಿಯೂ ಕಡಿಮೆ
Last Updated 24 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಕಲಬುರ್ಗಿ: ಬರದಿಂದ ತೊಗರಿ ಉತ್ಪಾದನೆ ಗಣನೀಯವಾಗಿ ಕುಂಠಿತವಾಗಲಿದ್ದು, ತೊಗರಿಬೇಳೆಯ ಬೆಲೆ ಗಗನಮುಖಿಯಾಗುವ ಸಾಧ್ಯತೆ ಹೆಚ್ಚಿದೆ.

ರಾಜ್ಯದಲ್ಲಿ ತೊಗರಿ ಬೆಳೆಯ ಪ್ರದೇಶ 9 ಲಕ್ಷ ಹೆಕ್ಟೇರ್‌ ಇದ್ದು, ‘ತೊಗರಿ ಕಣಜ’ ಎಂದೇ ಪ್ರಸಿದ್ಧಿ ಹೊಂದಿರುವ ಕಲಬುರ್ಗಿ ಜಿಲ್ಲೆ ಒಂದರಲ್ಲಿಯೇ 4.53 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ಹಾನಿಯಾಗಿದೆ.

‘ಜಿಲ್ಲೆಯಲ್ಲಿ ಸರಾಸರಿ ತೊಗರಿ ಉತ್ಪಾದನೆಯ ಪ್ರಮಾಣ ಎಕರೆಗೆ ನಾಲ್ಕುವರೆ ಕ್ವಿಂಟಲ್‌ ಇದ್ದು, ಈ ವರ್ಷ 5.04 ಲಕ್ಷ ಟನ್‌ ಇಳುವರಿ ನಿರೀಕ್ಷಿಸಲಾಗಿತ್ತು. ಶೇ 50ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಉತ್ಪಾದನೆಯೂ ಗಣನೀಯವಾಗಿ ಕುಂಠಿತವಾಗಲಿದೆ’ ಎನ್ನುವುದು ಜಂಟಿ ಕೃಷಿ ನಿರ್ದೇಶಕ ಡಾ.ರಿತೇಂದ್ರನಾಥ ಸುಗೂರ ಅವರ ವಿವರಣೆ.

‘ಬೆಳೆ ಹಾನಿ ಒಂದೆಡೆಯಾದರೆ, ತೇವಾಂಶದ ಕೊರತೆಯಿಂದ ಬಹುತೇಕ ತೊಗರಿ ಬೆಳೆಯ ಬೆಳವಣಿಗೆ ಕುಂಠಿತಗೊಂಡಿದೆ. ಹೂವು ಉದುರಿದ್ದು, ಕೆಲವೆಡೆ ಕಾಯಿಕಟ್ಟಿದ್ದರೂ ಅವು ಹುಲುಸಾಗಿಲ್ಲ’ ಎನ್ನುತ್ತಾರೆ ಅವರು.

‘ಹೂವಾಡುವ ಹಂತದಲ್ಲಿ ಮಳೆಯಾಗಿದ್ದರೆ ತೇವಾಂಶ ಹೆಚ್ಚಿ ಉತ್ತಮ ಬೆಳೆ ಬರುತ್ತಿತ್ತು. ಈಗ ರಾಶಿ ಮಾಡಿದ್ದು, ಇಳುವರಿ ಅತ್ಯಂತ ಕಡಿಮೆ ಬಂದಿದೆ. ಬಿತ್ತನೆಗೆ ಮಾಡಿರುವ ಖರ್ಚೂ ಸಹ ಬರುವುದಿಲ್ಲ’ ಎಂದು ತಾಲ್ಲೂಕಿನ ಕೆರೆಭೋಸಗಾ ಗ್ರಾಮದ ರೈತ ಸೋಮಶೇಖರ ಮುಗಳಿ ಅಳಲು ತೋಡಿಕೊಂಡರು.

‘ಮಾರುಕಟ್ಟೆಯಲ್ಲಿ ಸದ್ಯ ತೊಗರಿ ಧಾರಣೆ ಪ್ರತಿ ಕ್ವಿಂಟಲ್‌ಗೆ ₹4,500 ಇದೆ. ಇದೇ ದರದಲ್ಲಿ ಲೆಕ್ಕ ಹಾಕಿದರೆ ಕಲಬುರ್ಗಿ ಜಿಲ್ಲೆಯಲ್ಲೇ ₹1,100 ಕೋಟಿಗೂ ಅಧಿಕ ಮೊತ್ತದ ತೊಗರಿ ಬೆಳೆ ನಷ್ಟವಾಗಿದೆ’ ಎನ್ನುವುದು ಅಧಿಕಾರಿಗಳ ಅಂದಾಜು.

ಈಗ ತೊಗರಿಯ ರಾಶಿ ಆರಂಭಗೊಂಡಿದೆ. ಎಪಿಎಂಸಿಗಳಿಗೆ ನವೆಂಬರ್‌ನಿಂದ ಏಪ್ರಿಲ್‌ ತಿಂಗಳ ಅವಧಿಯಲ್ಲಿ ಆವಕವಾಗುತ್ತಿದ್ದು, ಡಿಸೆಂಬರ್‌ನಿಂದ ಮಾರ್ಚ್‌ ತಿಂಗಳ ಅವಧಿಯಲ್ಲಿ ಆವಕದ ಪ್ರಮಾಣ ಹೆಚ್ಚಿರುತ್ತದೆ.

ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ತೊಗರಿ ಉತ್ಪಾದನೆಯೂ ಹೆಚ್ಚಾಗಿತ್ತು. ಹೀಗಾಗಿ ರೈತರಿಂದ ₹6 ಸಾವಿರ ಬೆಂಬಲ ಬೆಲೆಯಡಿ ರಾಜ್ಯದಲ್ಲಿ 17 ಲಕ್ಷ ಕ್ವಿಂಟಲ್‌ ತೊಗರಿಯನ್ನು ಸರ್ಕಾರ ಖರೀದಿಸಿತ್ತು.

ಆದರೆ, 2015ರಲ್ಲಿ ತೀವ್ರ ಬರ ಆವರಿಸಿ ತೊಗರಿ ಉತ್ಪಾದನೆ ಕಡಿಮೆಯಾಗಿತ್ತು. ತೊಗರಿ ದರ ಪ್ರತಿ ಕ್ವಿಂಟಲ್‌ಗೆ ₹11,760 ಹಾಗೂ ತೊಗರಿ ಬೇಳೆಯ ದರ ಕೆ.ಜಿಗೆ ₹170 ತಲುಪಿತ್ತು. ಈ ವರ್ಷವೂ ಅಂಥದ್ದೇ ಸ್ಥಿತಿ ಮರುಕಳಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎನ್ನುತ್ತಾರೆ ವರ್ತಕರು.

***

ಆರು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೆ. 25 ಚೀಲ ಇಳುವರಿ ಬರಬೇಕಿತ್ತು. ಕೇವಲ ಆರು ಚೀಲ ಬಂದಿದೆ.

–ಸೋಮಶೇಖರ ಮುಗಳಿ, ಕೆರಿಭೋಸಗಾ ರೈತ

ಎಂಟು ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದೇನೆ. ಬೆಳವಣಿಗೆ ಕುಂಠಿತಗೊಂಡಿದ್ದು, ಹೂವು ಉದುರಿವೆ. ಕಾಯಿಯೂ ಕಟ್ಟಿಲ್ಲ. ಈಗ ಬೆಳೆ ಒಣಗುತ್ತಿದೆ.

–ಬಾಬಾಮಿಯಾ, ಕಲಬುರ್ಗಿ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT