ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಲಿಪ್‌–ಎಂಎಫ್‌ ಆಯ್ಕೆ ಹೇಗೆ?

Last Updated 1 ಜನವರಿ 2019, 19:30 IST
ಅಕ್ಷರ ಗಾತ್ರ

ಮಾರುಕಟ್ಟೆ ಆಧಾರಿತ ಜೀವವಿಮೆ ಯೋಜನೆಯು (ಯುಲಿಪ್‌) ದೀರ್ಘಾವಧಿಯಲ್ಲಿ ಲಾಭದಾಯಕವಾಗುತ್ತದೆ. ಇದರಲ್ಲೂ ಹೂಡಿಕೆದಾರರಿಗೆ ಯೂನಿಟ್‌ಗಳನ್ನು ವಿತರಿಸಲಾಗುತ್ತದೆ ಎಂಬ ಕಾರಣಕ್ಕೆ ಮ್ಯೂಚುವಲ್‌ ಫಂಡ್‌ಗೂ, ಯುಲಿಪ್‌ಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಭಾವನೆ ಹೂಡಿಕೆದಾರರಲ್ಲಿ ಇರಲಿದೆ. ಆದರೆ, ವೈಯಕ್ತಿಕ ಹಣಕಾಸು ನಿರ್ವಹಣೆಗೆ ಸಂಬಂಧಿಸಿ ಹೇಳಬೇಕೆಂದರೆ, ಇವೆರಡರ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ. ಹೂಡಿಕೆದಾರರು ಅದನ್ನು ಅರ್ಥಮಾಡಿಕೊಳ್ಳುವುದು ಅಗತ್ಯ.

ಯುಲಿಪ್‌ ಅಂದರೆ ಹೈಬ್ರಿಡ್‌ ಉತ್ಪನ್ನ

ಯುಲಿಪ್‌ಗಳೆಂದರೆ ಹೂಡಿಕೆ ಮತ್ತು ವಿಮೆಯ ಮಿಶ್ರಣ. ಇವು ಹೂಡಿಕೆದಾರರಿಗೆ ವಿಮೆಯನ್ನಷ್ಟೇ ಅಲ್ಲ, ಹೂಡಿಕೆಗೆ ಸೂಕ್ತ ಫಂಡ್‌ಗಳ ಆಯ್ಕೆಗೂ ಅವಕಾಶ ನೀಡುತ್ತವೆ. ನೀವು ಪಾರಂಪರಿಕ ಶೈಲಿಯ ಹೂಡಿಕೆದಾರರಾಗಿದ್ದು, ಹಣದ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಲ್ಲಿ ಸಾಲ ನಿಧಿಗಳಲ್ಲಿ ಹೂಡಿಕೆ ಮಾಡಲು ಮತ್ತು ಸ್ವಲ್ಪ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಾಗಿರುವವರಾಗಿದ್ದರೆ ಷೇರು ಮಾರುಕಟ್ಟೆ ಆಧಾರಿತ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವ ಆಯ್ಕೆಯನ್ನು ಯುಲಿಪ್‌ಗಳು ನೀಡುತ್ತವೆ.

ಇವೆರಡರ ಮಿಶ್ರಣದ ಆಯ್ಕೆಯೂ ಯುಲಿಪ್‌ಗಳಲ್ಲಿ ಲಭ್ಯ ಇದೆ. ಹೆಚ್ಚುವರಿಯಾಗಿ ಜೀವವಿಮೆಯೂ ಗ್ರಾಹಕರಿಗೆ ಲಭ್ಯವಾಗುತ್ತದೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ಹತ್ತಾರು ಆಯ್ಕೆಗಳು ಲಭ್ಯವಿದ್ದರೂ, ಜೀವ ವಿಮೆ ಇರುವುದಿಲ್ಲ. ಅವು ಶುದ್ಧ ಹೂಡಿಕೆಯ ಉತ್ಪನ್ನಗಳು ಅಷ್ಟೇ.

‌ನಿರ್ವಹಣಾ ವೆಚ್ಚ ಅಧಿಕ

ಯುಲಿಪ್‌ನ ಋಣಾತ್ಮಕ ಅಂಶಗಳಲ್ಲಿ ಇದು ಅತಿ ಮುಖ್ಯವಾದುದು. ಆರಂಭದ ಕೆಲವು ವರ್ಷಗಳಲ್ಲಿ ಯುಲಿಪ್‌ನ ಹೂಡಿಕೆಯ ನಿರ್ವಹಣಾ ವೆಚ್ಚ ದುಬಾರಿಯಾಗಿರುತ್ತದೆ. ಕೊನೆ ಕೊನೆಗೆ ವೆಚ್ಚದ ಪ್ರಮಾಣ ಕಡಿಮೆಯಾಗುವುದಾದರೂ ಆರಂಭದ ಕೆಲವು ವರ್ಷಗಳಲ್ಲಿ ನಿಮ್ಮ ನಿವ್ವಳ ಆಸ್ತಿ ಮೌಲ್ಯದ (ಎನ್‌ಎವಿ) ಶೇ 15 ರಿಂದ 20ರಷ್ಟು ಪ್ರಮಾಣವು ನಿರ್ವಹಣೆಗಾಗಿ ಕಡಿತಗೊಳ್ಳುತ್ತದೆ. ಇದಕ್ಕೆ ಹೋಲಿಸಿದರೆ ಮ್ಯೂಚುವಲ್‌ ಫಂಡ್‌ಗಳ ಒಟ್ಟು ವೆಚ್ಚದ ಅನುಪಾತ (ಟಿಇಆರ್‌) ತೀರ ಕಡಿಮೆ ಇರುತ್ತದೆ. ಉದಾಹರಣೆಗೆ ಈಕ್ವಿಟಿ ಫಂಡ್‌ಗಳ ಟಿಇಆರ್‌ ಶೇ 2ರಿಂದ ಶೇ 2.25 ರಷ್ಟಿರುತ್ತದೆ. ಸಾಲ ನಿಧಿಗಳದ್ದಾದರೆ ಶೇ 1.5, ಲಿಕ್ವಿಡ್‌ ಫಂಡ್‌ಗಳದ್ದಾದರೆ ಇನ್ನೂ ಕಡಿಮೆ ಅಂದರೆ ಶೇ 1ರಷ್ಟಿರುತ್ತದೆ. ಈ ದೃಷ್ಟಿಯಿಂದ ನೋಡಿದರೆ ಮ್ಯೂಚುವಲ್‌ ಫಂಡ್‌ಗಳ ಹೂಡಿಕೆಯು ಯುಲಿಪ್‌ ಹೂಡಿಕೆಗಿಂತ ಉತ್ತಮ ಆಯ್ಕೆ ಎನಿಸುತ್ತದೆ.

ಗಳಿಕೆಗೆ ಬೇಕು ದೀರ್ಘಾವಧಿ

ಯುಲಿಪ್‌ ಹಾಗೂ ಮ್ಯೂಚುವಲ್‌ ಫಂಡ್‌ಗಳ ನಿರ್ವಹಣಾ ವೆಚ್ಚವನ್ನು ಹೋಲಿಸಿ ನೋಡಿದರೆ, ಯುಲಿಪ್‌ನಲ್ಲಿ ಹೂಡಿಕೆ ಮತ್ತು ಗಳಿಕೆಯ ಅನುಪಾತವು ಸರಿದೂಗಲು ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ ಎಂಬುದು ಸಹಜವಾಗಿಯೇ ಅರ್ಥವಾಗುವ ಅಂಶ. ಮಾರುಕಟ್ಟೆಯು ಸಾಮಾನ್ಯ ತೇಜಿ ಕಾಣುತ್ತಿರುವ ಸಂದರ್ಭದಲ್ಲೂ ಯುಲಿಪ್‌ನಲ್ಲಿ ಮಾಡಿರುವ ಹೂಡಿಕೆಯು ಲಾಭ ತಂದುಕೊಡಬೇಕಾದರೆ ಕನಿಷ್ಠ 6 ರಿಂದ 7 ವರ್ಷಗಳು ಬೇಕಾಗುತ್ತವೆ. ಆದರೆ ಉತ್ತಮ ಗಳಿಕೆ ದಾಖಲಿಸಬೇಕಾದರೆ 8 ರಿಂದ 10 ವರ್ಷಗಳು ಬೇಕಾಗುತ್ತವೆ. ಆದ್ದರಿಂದ ಯುಲಿಪ್‌ ಮೂಲಕ ಒಳ್ಳೆಯ ಗಳಿಕೆ ಮಾಡಬೇಕೆಂದಿದ್ದರೆ ನೀವು ದೀರ್ಘ ಸಮಯದವರೆಗೆ ಕಾಯಲು ಸಿದ್ಧರಿರಬೇಕು.

ಮ್ಯೂಚುವಲ್‌ ಫಂಡ್‌ಗಳಲ್ಲಾದರೆ ಇಷ್ಟು ದೀರ್ಘ ಕಾಯುವಿಕೆ ಬೇಕಾಗಿಲ್ಲ. ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ, ಮೂರು ವರ್ಷಗಳಲ್ಲೇ ಲಾಭ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಸರಿಯಾಗಿ ನಿರ್ವಹಣೆ ಮಾಡಿರುವ ಈಕ್ವಿಟಿ ಫಂಡ್‌ಗಳಾಗಿದ್ದರೆ 5 ರಿಂದ ಆರು ವರ್ಷಗಳಲ್ಲಿ ಒಳ್ಳೆಯ ಗಳಿಕೆ ದಾಖಲಿಸುವ ಅವಕಾಶ ಶೇ 99ರಷ್ಟು ಇರುತ್ತದೆ ಎಂಬುದನ್ನು ಅಂಕಿಅಂಶಗಳು ದೃಢಪಡಿಸಿವೆ.

ಪಾರದರ್ಶಕತೆಯ ಕೊರತೆ

ನಿಯಂತ್ರಣಕ್ಕೆ ಒಳಪಟ್ಟ ಉತ್ಪನ್ನಗಳಾಗಿದ್ದರೂ ಯುಲಿಪ್‌ಗಳಲ್ಲಿ ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತದೆ. ಹೂಡಿಕೆಯ ಎಷ್ಟು ಪ್ರಮಾಣ ವಿಮೆ ಕವರೇಜ್‌ ಹೋಗುತ್ತದೆ, ಎಷ್ಟು ಭಾಗ ಹೂಡಿಕೆಗೆ ಹೋಗುತ್ತದೆ ಎಂಬುದು ಹೂಡಿಕೆದಾರರಿಗೆ ತಿಳಿಯುವುದಿಲ್ಲ. ಮ್ಯೂಚುವಲ್‌ ಫಂಡ್‌ಗಳಲ್ಲಾದರೆ ಪಾರದರ್ಶಕತೆ ಹೆಚ್ಚು. ‘ಸೆಬಿ’ ನಿಯಮಾನುಸಾರ, ಇಲ್ಲಿ ಹೂಡಿಕೆದಾರರಿಗೆ ಪ್ರತಿ ತಿಂಗಳೂ ಹೂಡಿಕೆ ಕುರಿತ ವರದಿ ನೀಡುವುದು ಕಡ್ಡಾಯ. ಅದರಲ್ಲಿ ಎಲ್ಲಿ ಎಷ್ಟು ಹೂಡಿಕೆ ಮಾಡಲಾಗಿದೆ. ‘ಎನ್‌ಎವಿ’ ಗಳಿಕೆ ಎಷ್ಟು ಮುಂತಾದ ಸಮಗ್ರ ಮಾಹಿತಿ ಇರಬೇಕಾಗುತ್ತದೆ. ಯುಲಿಪ್‌ನಲ್ಲಿ ಇಂಥ ಒಳನೋಟಗಳು ಹೂಡಿಕೆದಾರರಿಗೆ ಲಭಿಸುವುದಿಲ್ಲ.

ಯುಲಿಪ್‌ನಲ್ಲಿ ತೆರಿಗೆ ಉಳಿತಾಯ ಸಾಧ್ಯವೇ?

2018ರ ಕೇಂದ್ರ ಬಜೆಟ್‌ನಲ್ಲಿ, ಈಕ್ವಿಟಿ ಫಂಡ್‌ಗಳ ದೀರ್ಘಾವಧಿ ಬಂಡವಾಳ ಗಳಿಕೆಯ ಮೇಲೆ ಶೇ 10ರಷ್ಟು ತೆರಿಗೆ ವಿಧಿಸುವ ನಿರ್ಧಾರ ಘೋಷಿಸಿದ ನಂತರ ‘ಯುಲಿಪ್‌ಗಳಿಂದ ತೆರಿಗೆ ಉಳಿತಾಯ ಸಾಧ್ಯವಾಗುತ್ತದೆ’ ಎಂಬ ಚರ್ಚೆ ಆರಂಭವಾಗಿದೆ. ಯುಲಿಪ್‌ಗಳ ದೀರ್ಘಾವಧಿ ಬಂಡವಾಳ ಗಳಿಕೆಗೆ ಈ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂಬುದು ಈ ವಾದಕ್ಕೆ ಕಾರಣ. ನಿಜವಾಗಿಯೂ ಈ ತೆರಿಯಿಂದ ವ್ಯತ್ಯಾಸವಾಗುತ್ತದೆಯೇ? ವಾಸ್ತವ ಬೇರೆಯೇ ಇದೆ. ಈಕ್ವಿಟಿ ಫಂಡ್‌ಗಳ ವಾರ್ಷಿಕ ವೃದ್ಧಿ ದರಕ್ಕೆ (ಸಿಎಜಿಆರ್‌) ಹೋಲಿಸಿ ನೋಡಿದರೆ ಅದರ ದೀರ್ಘಾವಧಿ ಬಂಡವಾಳ ಗಳಿಕೆ ಮೇಲಿನ ತೆರಿಗೆಯಿಂದ ಆಗುವ ವ್ಯತ್ಯಾಸದ ಪ್ರಮಾಣ ಶೇ 1ಕ್ಕಿಂತಲೂ ಕಡಿಮೆ. ಆದ್ದರಿಂದ ಈ ತೆರಿಗೆ ಅಷ್ಟು ಮಹತ್ವದ ಬದಲಾವಣೆಯನ್ನೇನೂ ಮಾಡಲಾರದು. ಯುಲಿಪ್‌ಗೆ ತೆರಿಗೆ ವಿನಾಯಿತಿ ನೀಡಿದ್ದರೂ ಅವುಗಳಿಗೆ ದೀರ್ಘವಾದ ಲಾಕ್‌ ಇನ್‌ ಅವಧಿ ಇರುವುದರಿಂದ ‘80ಸಿ’ ಅಡಿ ತೆರಿಗೆ ವಿನಾಯ್ತಿ ಪಡೆಯಬೇಕಾದರೆ ದೀರ್ಘ ಕಾಲದವರೆಗೆ ಕಾಯಬೇಕಾಗುತ್ತದೆ.

ವಿಮೆ ಮತ್ತು ಹೂಡಿಕೆ ಬೇರೆಬೇರೆ ಇರಲಿ

ಮ್ಯೂಚುವಲ್‌ ಫಂಡ್‌ಗಳ ಪರವಾಗಿ ವಾದಿಸುವವರು ಯಾವತ್ತೂ ‘ವಿಮೆ ಮತ್ತು ಹೂಡಿಕೆಯನ್ನು ಪ್ರತ್ಯೇಕವಾಗಿ ಇಡುವುದೇ ಸೂಕ್ತ’ ಎಂಬ ಸಲಹೆ ನೀಡುತ್ತಾರೆ. ಯುಲಿಪ್‌ನಲ್ಲಿ ಹೂಡಿಕೆ ಮತ್ತು ವಿಮೆಯ ಮಿಶ್ರಣ ಇರುವುದರಿಂದ ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತದೆ. ದೀರ್ಘಾವಧಿಯಲ್ಲಿ ಒಳ್ಳೆಯ ಮೊತ್ತವನ್ನು ಪಡೆಯಬೇಕೆಂಬ ಬಯಕೆ ಇದ್ದವರಿಗೆ ಹೂಡಿಕೆಗೆ ಒಳ್ಳೆಯ ವಿಧಾನವೆಂದರೆ, ಮ್ಯೂಚುವಲ್‌ ಫಂಡ್‌ಗಳನ್ನು ಆಯ್ಕೆ ಮಾಡಿಕೊಂಡು ‘ಎಸ್‌ಐಪಿ’ ಮೂಲಕ ಹೂಡಿಕೆ ಮಾಡುವುದು. ಎಲ್ಲರಿಗೂ ವಿಮೆಯ ಅಗತ್ಯ ಇದ್ದೇ ಇರುತ್ತದೆ ಎಂಬುದೂ ನಿಜ. ಅದಕ್ಕೆ ಪ್ರತ್ಯೇಕವಾದ ವಿಮೆ ಮಾಡಿಸಿಕೊಳ್ಳುವುದು ಒಳ್ಳೆಯ ವಿಧಾನ. ಇದರಿಂದ ಹೂಡಿಕೆಯಲ್ಲಿ ಹೆಚ್ಚಿನ ಪಾರದರ್ಶಕತೆಯೂ ಇರುತ್ತದೆ.

(ಲೇಖಕ: ಏಂಜೆಲ್‌ ಬ್ರೋಕಿಂಗ್‌ನ ಹಿರಿಯ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT