ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಡಿಪಿ ಶೇ 6.9ರಷ್ಟು ಪ್ರಗತಿ: ವಿಶ್ವಸಂಸ್ಥೆ

Published 17 ಮೇ 2024, 15:54 IST
Last Updated 17 ಮೇ 2024, 15:54 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಸಾರ್ವಜನಿಕ ವಲಯದಲ್ಲಿ ಹೂಡಿಕೆ ಹೆಚ್ಚಳ ಸೇರಿದಂತೆ ಸರಕು ಮತ್ತು ಸೇವೆಯಲ್ಲಿನ ಸದೃಢ ಬೆಳವಣಿಗೆಯಿಂದಾಗಿ 2024ರಲ್ಲಿ ಭಾರತದ ಜಿಡಿಪಿಯು ಶೇ 6.9ರಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. 

2025ರಲ್ಲಿ ಶೇ 6.6ರಷ್ಟು ಪ್ರಗತಿ ಕಾಣಲಿದೆ ಎಂದು ಗುರುವಾರ ಬಿಡುಗಡೆಗೊಳಿಸಿರುವ ‘ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯದ ವರದಿ’ಯಲ್ಲಿ ಹೇಳಿದೆ.

ಸರಕು ರಫ್ತು ಪ್ರಮಾಣವು ಹೆಚ್ಚಳವಾಗಲಿದೆ. ಅದರಲ್ಲೂ ಔಷಧ ಮತ್ತು ರಾಸಾಯನಿಕ ವಸ್ತುಗಳ ರಫ್ತು ಸದೃಢವಾಗಿರಲಿದೆ. ಇದು ಆರ್ಥಿಕತೆಯ ಬೆಳವಣಿಗೆಗೆ ನೆರವಾಗಲಿದೆ ಎಂದು ‌ತಿಳಿಸಿದೆ.

ಜನವರಿಯಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಜಿಡಿಪಿಯು ಶೇ 6.2ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಿತ್ತು. ದೇಶೀಯ ಬೇಡಿಕೆ ಹೆಚ್ಚಳ ಸೇರಿದಂತೆ ತಯಾರಿಕಾ ಮತ್ತು ಸೇವಾ ವಲಯದಲ್ಲಿನ ಸದೃಢ ಬೆಳವಣಿಗೆಯಿಂದ ಇದು ಸಾಧ್ಯವಾಗಲಿದೆ ಎಂದು ಹೇಳಿತ್ತು.  

‘2023ರಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು ಶೇ 5.6ರಷ್ಟು ದಾಖಲಾಗಲಿದೆ. 2024ರಲ್ಲಿ ಶೇ 4.5ರಷ್ಟು ಇರಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್ ಅಂದಾಜಿಸಿರುವ ಶೇ 2ರಿಂದ 6ರ ತಾಳಿಕೆಯ ನಡುವೆಯೇ ಇರಲಿದೆ’ ಎಂದು ಹೇಳಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೂ ಹಣದುಬ್ಬರದ ವೇಗವು ತಗ್ಗಲಿದೆ. ಮಾಲ್ದೀವ್ಸ್‌ನಲ್ಲಿ ಶೇ 2.2ರಷ್ಟು ದಾಖಲಾದರೆ, ಇರಾನ್‌ನಲ್ಲಿ ಶೇ 33.6ರಷ್ಟು ಇರಲಿದೆ ಎಂದು ಹೇಳಿದೆ.

ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರ ಇಳಿಕೆಯಾದರೂ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT