ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕವು ಭಾರತದ ಅಗ್ರ ವ್ಯಾಪಾರ ಪಾಲುದಾರ ರಾಷ್ಟ್ರ: ಜಿಟಿಆರ್‌ಐ

ಚೀನಾದೊಂದಿಗೆ ಭಾರತದ ವ್ಯಾಪಾರ ಕೊರತೆ ₹3.49 ಲಕ್ಷ ಕೋಟಿ
Published : 23 ಆಗಸ್ಟ್ 2024, 14:19 IST
Last Updated : 23 ಆಗಸ್ಟ್ 2024, 14:19 IST
ಫಾಲೋ ಮಾಡಿ
Comments

ನವದೆಹಲಿ: ಪ್ರಸಕ್ತ ವರ್ಷದ ಜನವರಿ–ಜೂನ್‌ ಅವಧಿಯಲ್ಲಿ ಅಮೆರಿಕವು ಭಾರತದ ಅಗ್ರ ವ್ಯಾಪಾರ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್‌ ಇನಿಷಿಯೇಟಿವ್ (ಜಿಟಿಆರ್‌ಐ) ಶುಕ್ರವಾರ ಹೇಳಿದೆ.

ಇದೇ ಅವಧಿಯಲ್ಲಿ ಚೀನಾದೊಂದಿಗೆ ದೇಶದ ವ್ಯಾಪಾರ ಕೊರತೆ ದಾಖಲೆಯ ₹3.49 ಲಕ್ಷ ಕೋಟಿಯಷ್ಟಾಗಿದೆ. ದೇಶದ ಸರಕುಗಳ ರಫ್ತು ಶೇ 5ರಷ್ಟು ಏರಿಕೆಯಾಗಿದ್ದು, ₹19.34 ಲಕ್ಷ ಕೋಟಿಗೆ ಮುಟ್ಟಿದೆ ಎಂದು ಹೇಳಿದೆ.

ವ್ಯಾಪಾರ ಕೊರತೆಯ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ ಮುಂಚೂಣಿಯಲ್ಲಿದೆ. ಚೀನಾಕ್ಕೆ ದೇಶದ ರಫ್ತು ಪ್ರಮಾಣ ₹71,318 ಕೋಟಿಯಷ್ಟಿದ್ದರೆ, ಆಮದು ಪ್ರಮಾಣ ₹4.20 ಲಕ್ಷ ಕೋಟಿ ಇದೆ. 

ಈ ವರ್ಷದ ಮೊದಲ ಭಾಗದಲ್ಲಿ ದತ್ತಾಂಶವನ್ನು ಜಿಟಿಆರ್‌ಐ ವಿಶ್ಲೇಷಣೆ ಮಾಡಿದೆ. ಭಾರತವು 239 ದೇಶಗಳಿಗೆ ಸರಕುಗಳನ್ನು ರಫ್ತು ಮಾಡುತ್ತಿದ್ದು, ಈ ಪೈಕಿ 126 ದೇಶಗಳಿಗೆ ರಫ್ತು ಪ್ರಮಾಣ ಸಕಾರಾತ್ಮಕವಾಗಿ ಬೆಳವಣಿಗೆ ದಾಖಲಿಸಿದೆ. ಈ ರಾಷ್ಟ್ರಗಳು ಭಾರತದ ಒಟ್ಟು ರಫ್ತಿನಲ್ಲಿ ಶೇ 75ರಷ್ಟು ಪಾಲು ಹೊಂದಿವೆ.

ಅಮೆರಿಕಾ, ಯುಎಇ, ನೆದರ್ಲೆಂಡ್ಸ್‌, ಸಿಂಗಪುರ ಮತ್ತು ಚೀನಾ ಪ್ರಮುಖ ರಫ್ತು ರಾಷ್ಟ್ರಗಳಾಗಿವೆ. ಆದಾಗ್ಯೂ, ಇಟಲಿ, ಬೆಲ್ಜಿಯಂ, ನೇಪಾಳ, ಹಾಂಗ್‌ಕಾಂಗ್‌ ಸೇರಿದಂತೆ 98 ದೇಶಗಳಿಗೆ ರಫ್ತು ಪ್ರಮಾಣ ಇಳಿಕೆಯಾಗಿದೆ. ಈ ದೇಶಗಳಿಗೆ ಮಾಡುವ ರಫ್ತು ಪ್ರಮಾಣ ಶೇ 24ರಷ್ಟಿದೆ.

2023ರ ಜನವರಿ–ಜೂನ್‌ ಅವಧಿಯಲ್ಲಿ ಅಮೆರಿಕಕ್ಕೆ ರಫ್ತು ಮೌಲ್ಯ ₹3.16 ಲಕ್ಷ ಕೋಟಿಯಷ್ಟಿತ್ತು. ಇದು ಪ್ರಸಕ್ತ ವರ್ಷದ ಇದೇ ಅವಧಿಯಲ್ಲಿ ₹3.49 ಲಕ್ಷ ಕೋಟಿಯಾಗಿದ್ದು, ಶೇ 10ರಷ್ಟು ಏರಿಕೆಯಾಗಿದೆ. ಅರಬ್‌ ಸಂಯುಕ್ತ ಸಂಸ್ಥಾನಕ್ಕೆ (ಯುಎಇ) ರಫ್ತು ₹1.65 ಲಕ್ಷ ಕೋಟಿ ಆಗಿದ್ದು, ಶೇ 24ರಷ್ಟು ಬೆಳವಣಿಗೆ ದಾಖಲಿಸಿದೆ.

ಚೀನಾವು ಅತಿದೊಡ್ಡ ಆಮದು ರಾಷ್ಟ್ರವಾಗಿದ್ದು, ₹4.20 ಲಕ್ಷ ಕೋಟಿಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹3.87 ಲಕ್ಷ ಕೋಟಿಯಷ್ಟಿತ್ತು.

‘2023–24ರ ಹಣಕಾಸು ವರ್ಷದಲ್ಲಿ ಅಮೆರಿಕಕ್ಕಿಂತ ಚೀನಾ, ಭಾರತದ ಅಗ್ರ ವ್ಯಾಪಾರ ಪಾಲುದಾರ ರಾಷ್ಟ್ರವಾಗಿತ್ತು. ಆದಾಗ್ಯೂ, 2024ರ ಜನವರಿ–ಜೂನ್‌ ಅವಧಿಯಲ್ಲಿ ಅಮೆರಿಕವು ಭಾರತದ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ಒಟ್ಟು ವ್ಯಾಪಾರ ಮೌಲ್ಯವು ₹5.24 ಲಕ್ಷ ಕೋಟಿಯಾಗಿದ್ದು, ಶೇ 5ರಷ್ಟು ಏರಿಕೆ ಆಗಿದೆ’ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್‌ ಶ್ರೀವಾಸ್ತವ ಹೇಳಿದ್ದಾರೆ. 

ಚೀನಾವು ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದ್ದು, ಒಟ್ಟು ವ್ಯಾಪಾರ ಮೌಲ್ಯವು ₹4.91 ಲಕ್ಷ ಕೋಟಿ ಆಗಿದ್ದು, ಹಿಂದಿನ ಇದೇ ಅವಧಿಯಲ್ಲಿ ₹4.56 ಲಕ್ಷ ಕೋಟಿಯಾಗಿತ್ತು. 

ಕಬ್ಬಿಣದ ಅದಿರು, ಔಷಧಗಳು, ಬಾಸ್ಮತಿ ಅಕ್ಕಿ, ರಾಸಾಯನಿಕಗಳು ಮತ್ತು ಸ್ಮಾರ್ಟ್‌ಫೋನ್‌ಗಳು ರಫ್ತಿನಿದಾಗಿ ಭಾರತದ ರಫ್ತು ಮೌಲ್ಯ ಹೆಚ್ಚಳವಾಗಿದೆ. 

ಸೇವಾ ವಲಯದ ರಫ್ತು ಶೇ 6.9ರಷ್ಟು ಪ್ರಗತಿಯಾಗಿದ್ದು, ₹14.95 ಲಕ್ಷ ಕೋಟಿಯಾಗಿದೆ. ಆಮದು ₹7.97 ಲಕ್ಷ ಕೋಟಿಯಾಗಿದ್ದು, ಶೇ 5ರಷ್ಟು ಏರಿಕೆಯಾಗಿದೆ. ಸರಕುಗಳ ರಫ್ತು ಮೌಲ್ಯ ₹28.97 ಲಕ್ಷ ಕೋಟಿಗೆ ಮುಟ್ಟಿದೆ.

ಸರಕು ಮತ್ತು ಸೇವೆಗಳೆರಡನ್ನೂ ಒಳಗೊಂಡಂತೆ ಭಾರತದ ವಿದೇಶಿ ವ್ಯಾಪಾರ ಮೌಲ್ಯವು (ರಫ್ತು ಮತ್ತು ಆಮದು) ₹71.23 ಲಕ್ಷ ಕೋಟಿಯಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 5.8ರಷ್ಟು ಏರಿಕೆ ಆಗಿದೆ ಎಂದು ಹೇಳಿದೆ.

ರಫ್ತು ಪ್ರಮಾಣದಲ್ಲಿ ಕೈಗಾರಿಕಾ ವಲಯದ ಪಾಲು ಶೇ 61ರಷ್ಟಿದ್ದು, ₹11.81 ಲಕ್ಷ ಕೋಟಿಯಾಗಿದೆ. ಕೃಷಿ, ಮಾಂಸ ಮತ್ತು ಸಂಸ್ಕರಿಸಿದ ಆಹಾರ ಸಾಗಣೆ ₹2.18 ಲಕ್ಷ ಕೋಟಿಯಾಗಿದ್ದು, ಶೇ 2ರಷ್ಟು ಇಳಿಕೆಯಾಗಿದೆ.

ಬಾಸ್ಮತ್ತಿ ಅಕ್ಕಿ ರಫ್ತು ಶೇ 24ರಷ್ಟು ಏರಿಕೆಯಾಗಿದ್ದು, ಅದರ ಮೌಲ್ಯ ₹28,694 ಕೋಟಿಯಾಗಿದೆ. ₹20,304 ಕೋಟಿ ಮೌಲ್ಯದ ಮಸಾಲೆ ಪದಾರ್ಥಗಳು ರಫ್ತಾಗಿದ್ದು, ಶೇ 13ರಷ್ಟು ಪ್ರಗತಿ ದಾಖಲಿಸಿದೆ. ಸಕ್ಕರೆ ರಫ್ತು ಪ್ರಮಾಣ ಶೇ 40ರಷ್ಟು ಕುಸಿದಿದ್ದು, ₹12,417 ಕೋಟಿಯಾಗಿದೆ. ಟೆಲಿಕಾಂ, ಕಂಪ್ಯೂಟರ್‌, ಎಲೆಕ್ಟ್ರಾನಿಕ್ಸ್‌, ಸ್ಮಾರ್ಟ್‌ಫೋನ್‌ ರಫ್ತು ₹83,903 ಕೋಟಿಯಾಗಿದೆ. 

ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಸ್ಥಿರವಾಗಿದ್ದು, ₹3.59 ಲಕ್ಷ ಕೋಟಿಯಾಗಿದೆ. ಗಾರ್ಮೆಂಟ್ಸ್‌ ರಫ್ತು ಪ್ರಮಾಣ ₹69,217 ಕೋಟಿಯಾಗಿದ್ದು, ಶೇ 2ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.

ಕೈಗಾರಿಕಾ ವಲಯದ ಆಮದು ಪ್ರಮಾಣ ಶೇ 48ರಷ್ಟು ಏರಿಕೆಯಾಗಿದ್ದು, ₹13.97 ಲಕ್ಷ ಕೋಟಿಗೆ ತಲುಪಿದೆ. ಕಚ್ಚಾ ತಾಳೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದು ಕ್ರಮವಾಗಿ ₹23,996 ಕೋಟಿ ಮತ್ತು ₹16,445 ಕೋಟಿಯಷ್ಟಾಗಿದೆ. 

ಅದಿರು, ಖನಿಜಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ರಫ್ತು ₹10.49 ಲಕ್ಷ ಕೋಟಿಯಾಗಿದ್ದು, ಶೇ 36ರಷ್ಟು ಪ್ರಗತಿ ಕಂಡಿದೆ. ವಜ್ರಗಳು, ಚಿನ್ನ ಮತ್ತು ಸಂಬಂಧಿಸಿದ ಉತ್ಪನ್ನಗಳ ರಫ್ತು ಶೇ 10ರಷ್ಟು ಏರಿಕೆ ಆಗಿದ್ದು, ₹3.10 ಲಕ್ಷ ಕೋಟಿಯಾಗಿದೆ.

ಮುಖ್ಯಾಂಶಗಳು

ಅಮೆರಿಕದೊಂದಿಗೆ ಭಾರತದ ಒಟ್ಟು ವ್ಯಾಪಾರ ಮೌಲ್ಯವು ₹5.24 ಲಕ್ಷ ಕೋಟಿ

ಚೀನಾದೊಂದಿಗೆ ಭಾರತದ ಒಟ್ಟು ವ್ಯಾಪಾರ ಮೌಲ್ಯವು ₹4.91 ಲಕ್ಷ ಕೋಟಿ

ಜನವರಿ–ಜೂನ್‌ ದತ್ತಾಂಶವನ್ನು ವಿಶ್ಲೇಷಣೆ ಮಾಡಿದ ಜಿಟಿಆರ್‌ಐ

Cut-off box -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT