ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಗ್ರಹ ತರಂಗಾಂತರ: ಹರಾಜು ಬೇಡ ಎನ್ನುತ್ತಿರುವ ಎಲಾನ್ ಮಸ್ಕ್

Published 26 ಜೂನ್ 2023, 0:02 IST
Last Updated 26 ಜೂನ್ 2023, 0:02 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಮಿ ಎಲಾನ್ ಮಸ್ಕ್ ಅವರು ಭಾರತದಲ್ಲಿ ಸ್ಟಾರ್‌ಲಿಂಕ್ ಮೂಲಕ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಉತ್ಸುಕರಾಗಿದ್ದಾರೆ. ಆದರೆ, ಈಗ ಜಾರಿಯಲ್ಲಿ ಇರುವ ಪರವಾನಗಿ ವ್ಯವಸ್ಥೆಯು ಮಸ್ಕ್ ಮತ್ತು ಮುಕೇಶ್ ಅಂಬಾನಿ ಅವರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕದಲ್ಲಿ ಕಳೆದ ವಾರ ಭೇಟಿಯಾದ ನಂತರ ಮಸ್ಕ್ ಅವರು ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆ ಆರಂಭಿಸಲು ಉತ್ಸುಕರಾಗಿರುವುದಾಗಿ ಹೇಳಿದರು. ಈ ಸೇವೆಯು ದೇಶದ ಕುಗ್ರಾಮಗಳಲ್ಲಿಯೂ ಇಂಟರ್ನೆಟ್ ಸೇವೆ ಲಭ್ಯವಾಗುವಂತೆ ಮಾಡಬಲ್ಲದು.

ಆದರೆ, ಈ ಸೇವೆ ಒದಗಿಸಲು ಕೇಂದ್ರವು ಒಂದು ಪರವಾನಗಿ ನೀಡಬೇಕು; ಇಂಟರ್ನೆಟ್ ಸಿಗ್ನಲ್ ಹೊತ್ತೊಯ್ಯುವ ತರಂಗಾಂತರಗಳನ್ನು ಹರಾಜಿನ ಮೂಲಕವೇ ಖರೀದಿಸಬೇಕು ಎಂದು ಒತ್ತಾಯಿಸಬಾರದು ಎಂಬುದು ಸ್ಟಾರ್‌ಲಿಂಕ್ ಬಯಕೆ. ಟಾಟಾ ಸಮೂಹ, ಏರ್‌ಟೆಲ್‌, ಅಮೆಜಾನ್ ಕಂಪನಿಗಳ ನಿಲುವು ಕೂಡ ಇದೇ ಆಗಿದೆ. ಆದರೆ, ಅಂಬಾನಿ ಒಡೆತನದ ರಿಲಯನ್ಸ್ ಕಂಪನಿಯು ಸಾಂಪ್ರದಾಯಿಕ ದೂರಸಂಪರ್ಕ ಸೇವೆ ಒದಗಿಸುವ ಕಂಪನಿಗಳಿಗೆ ಸಮಾನ ಅವಕಾಶ ಸಿಗಬೇಕು ಎಂದಾದರೆ, ಉಪಗ್ರಹ ಆಧಾರಿತ ಸೇವೆ ಒದಗಿಸುವ ವಿದೇಶಿ ಕಂಪನಿಗಳಿಗೆ ತರಂಗಾಂತರಗಳ ಹಂಚಿಕೆಗೆ ಹರಾಜು ಪ್ರಕ್ರಿಯೆಯೇ ನಡೆಯಬೇಕು ಎಂದು ಪ್ರತಿಪಾದಿಸುತ್ತಿದೆ.

‘ಭಾರತವು ಬಾಹ್ಯಾಕಾಶ ಆಧಾರಿತ ಸಂವಹನ ಸೇವೆಗಳ (ಎಸ್‌ಎಸ್‌) ತರಂಗಾಂತರ ವಿಚಾರದಲ್ಲಿ ಕೈಗೊಳ್ಳುವ ನಿರ್ಧಾರವು ಪ್ರಮುಖವಾಗುತ್ತದೆ. 2010ರಿಂದ ಮೊಬೈಲ್‌ ತರಂಗಾಂತರಗಳನ್ನು ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತಿದೆ. ಈಗ ಹಲವು ಕಂಪನಿಗಳು ಎಸ್‌ಎಸ್‌ ವಿಚಾರವಾಗಿ ಆಸಕ್ತಿ ತಾಳಿವೆ’ ಎಂದು ಬ್ರೋಕರೇಜ್ ಸಂಸ್ಥೆ ಸಿಎಲ್‌ಎಸ್‌ಎ ಹೇಳಿದೆ.

ಅಮೆಜಾನ್, ಟಾಟಾ, ಭಾರ್ತಿ ಏರ್‌ಟೆಲ್‌ ಬೆಂಬಲಿತ ಒನ್‌ವೆಬ್‌, ಲಾರ್ಸನ್ ಆ್ಯಂಡ್ ಟೂಬ್ರೊ ಕಂಪನಿಗಳು ಹರಾಜಿಗೆ ವಿರುದ್ಧವಾಗಿವೆ. ಆದರೆ ರಿಲಯನ್ಸ್ ಜಿಯೊ ಮತ್ತು ವೊಡಾಫೋನ್ ಐಡಿಯಾ ಹರಾಜಿನ ಪರ ಇವೆ ಎಂದು ಸಂಸ್ಥೆ ಹೇಳಿದೆ.

ಸರ್ಕಾರದ ಕೆಲವು ಅಧಿಕಾರಿಗಳು ತರಂಗಾಂತರ ಹಂಚಿಕೆಗೆ ಹರಾಜು ಪ್ರಕ್ರಿಯೆಯೇ ಅತ್ಯುತ್ತಮ ಎಂದು ಭಾವಿಸಿದ್ದಾರೆ ಎಂದು ಮೂಲಗಳು ಹೇಳುತ್ತವೆ. ಹೀಗೆ ಮಾಡುವುದರಿಂದ ಒಟಿಟಿ ಮೂಲಕ ಎಂತಹ ಕಾರ್ಯಕ್ರಮ ಪ್ರಸಾರ ಮಾಡಬಹುದು ಎಂಬ ವಿಚಾರವಾಗಿ ಒಂದಿಷ್ಟು ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಅವರು ಭಾವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT