ಮಂಗಳವಾರ, ಆಗಸ್ಟ್ 16, 2022
20 °C

ಶ್ರೀಮಂತರ ಹಣದಿಂದ ಬಡವರಿಗೆ ಕೊಡಬಹುದು ₹ 94 ಸಾವಿರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೋವಿಡ್–19 ಸಾಂಕ್ರಾಮಿಕವು ದೇಶಕ್ಕೆ ಅಪ್ಪಳಿಸಿದ ನಂತರದಲ್ಲಿ, ದೇಶದ ಮೊದಲ 100 ಶತಕೋಟ್ಯಧೀಶರ ಸಂಪತ್ತು ಒಟ್ಟು
₹12.97 ಲಕ್ಷ ಕೋಟಿಯಷ್ಟು ಹೆಚ್ಚಳ ಆಗಿದೆ. ಈ ಮೊತ್ತವನ್ನು ಬಳಸಿ ಭಾರತದ 13.8 ಕೋಟಿ ಕಡುಬಡವರಿಗೆ ತಲಾ
₹ 94 ಸಾವಿರದ ಚೆಕ್ ನೀಡಲು ಸಾಧ್ಯ!

‘ಅಸಮಾನತೆಯ ವೈರಾಣು’ ಹೆಸ ರಿನ ಆಕ್ಸ್‌ಫ್ಯಾಮ್‌ ವರದಿಯಲ್ಲಿ ಈ ವಿವರಗಳು ಇವೆ.

ಉದ್ಯಮಿ ಮುಕೇಶ್ ಅಂಬಾನಿ ಅವರು ಸಾಂಕ್ರಾಮಿಕದ ಅವಧಿಯಲ್ಲಿ ಒಂದು ಗಂಟೆಯಲ್ಲಿ ಸಂಪಾದಿಸಿದಷ್ಟು ಹಣವನ್ನು ಕೌಶಲವಿಲ್ಲದ ಕಾರ್ಮಿಕ ನೊಬ್ಬ ದುಡಿಯಲು 10 ಸಾವಿರ ವರ್ಷ ಗಳು ಬೇಕಾಗುತ್ತವೆ ಎಂದು ವರದಿ ಅಂದಾಜಿಸಿದೆ.

ಮುಕೇಶ್ ಅಂಬಾನಿ ಅವರು ಒಂದು ಸೆಕೆಂಡ್ ಅವಧಿಯಲ್ಲಿ ಸಂಪಾದಿಸುವಷ್ಟು ಹಣವನ್ನು ದುಡಿಯಲು ಅದೇ ಕಾರ್ಮಿಕನಿಗೆ ಮೂರು ವರ್ಷಗಳು ಬೇಕಾಗುತ್ತವೆ ಎಂದೂ ವರದಿ ಹೇಳಿದೆ.

ವಿಶ್ವ ಆರ್ಥಿಕ ವೇದಿಕೆ ಆಯೋಜಿಸಿ ರುವ ‘ದಾವೋಸ್ ಡಯಲಾಗ್ಸ್’ ಕಾರ್ಯಕ್ರಮದ ಮೊದಲ ದಿನ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಕೋವಿಡ್–19 ಸಾಂಕ್ರಾಮಿಕವು ವಿಶ್ವವು ನೂರು ವರ್ಷಗಳಲ್ಲಿ ಕಂಡ ಅತ್ಯಂತ ಕೆಟ್ಟ ಆರೋಗ್ಯ ಬಿಕ್ಕಟ್ಟು ಎಂದು ವರದಿ ವಿವರಿಸಿದೆ.

‘ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದ 11 ಅತ್ಯಂತ ಶ್ರೀಮಂತರ ಸಂಪತ್ತಿನಲ್ಲಿ ಆಗಿರುವ ಹೆಚ್ಚಳಕ್ಕೆ ಶೇಕಡ 1ರಷ್ಟು ತೆರಿಗೆ ವಿಧಿಸಿದರೆ, ಜನೌಷಧಿ ಯೋಜನೆಗೆ ನೀಡುತ್ತಿರುವ ಅನುದಾನ ವನ್ನು 140 ಪಟ್ಟು ಹೆಚ್ಚಿಸಲು ಸಾಧ್ಯವಿದೆ’ ಎಂದು ಆಕ್ಸ್‌ಫ್ಯಾಮ್‌ ಅಂದಾಜಿಸಿದೆ.

‘ಸಾಂಕ್ರಾಮಿಕದ ಕೆಟ್ಟ ಪರಿಣಾಮ ದಿಂದ ಶ್ರೀಮಂತರು ತಪ್ಪಿಸಿಕೊಂಡರು. ಕಚೇರಿಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದವರು, ಮನೆಯಿಂದ ಕೆಲಸ ಮಾಡಲು ಆರಂಭಿಸಿದರು. ಆದರೆ, ಹೆಚ್ಚು ಅದೃಷ್ಟ ಇಲ್ಲದಿದ್ದ ಬಹುತೇಕರು ತಮ್ಮ ಜೀವನೋಪಾಯವನ್ನೇ ಕಳೆದುಕೊಂಡರು’ ಎಂದು ಆಕ್ಸ್‌ಫ್ಯಾಮ್ ಹೇಳಿದೆ.

ತೀವ್ರವಾದ ಆರ್ಥಿಕ ಅಸಮಾನತೆ ಹೋಗಲಾಡಿಸಲು ಸಾಧ್ಯವಾಗದ್ದೇನೂ ಅಲ್ಲ. ಈಗ ಅಸಮಾನತೆಯ ವಿರುದ್ಧದ ಹೋರಾಟವು ಆರ್ಥಿಕ ಪುನಶ್ಚೇತನ ಪ್ರಯತ್ನಗಳ ಮುಖ್ಯ ಭಾಗವಾಗಬೇಕು.

– ಅಮಿತಾಭ್ ಬೆಹರ್, ಆಕ್ಸ್‌ಫ್ಯಾಮ್‌ ಇಂಡಿಯಾದ ಸಿಇಒ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು