ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಬದಲಿಸಿದ ವೀಲ್‌ಚೇರ್‌

Last Updated 12 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಅಪಘಾತವೊಂದರಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಉಮೇಶ್ ಅವರಿಗೆ ಬೆನ್ನುಮೂಳೆ ಮುರಿಯಿತು. ಅವರ ಸಂಸಾರಕ್ಕೆ ದಿಕ್ಕೇ ತೋಚದಂತಾಯಿತು. ಪತ್ನಿ, ಮಕ್ಕಳು ಬೀದಿಗೆ ಬೀಳುವಂತೆ ಆಯಿತು. ಈ ಕೊರಗಿನಲ್ಲೇ ಉಮೇಶ್‌ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಹೋದರು.

ವಿಜಯಪುರದ ಜಮಾಲ್‌ ಹುಟ್ಟಿನಿಂದಲೇ ಅಂಗವಿಕಲರು. ಬದುಕಿನಲ್ಲಿ ಭರವಸೆ ಕಳೆದುಕೊಂಡಿದ್ದರು. ಕೇರಳದ ಕೊಚ್ಚಿನ್‌ ನಗರದ ಸತ್ಯ ಅವರಿಗೆ ಕೈ–ಕಾಲು ಇಲ್ಲದೆ ಜೀವನ ಇನ್ನೊಬ್ಬರ ಮೇಲೆ ಅವಲಂಬಿತವಾಗಿತ್ತು. ಈ ಎಲ್ಲ ಬಿಡಿ ಘಟನೆಗಳಿಗೂ ‍ಪೂರಕ ಸಂಬಂಧವಿದೆ. ಈ ಆಪತ್ಕಾಲದಲ್ಲಿ ಇವರ ನೆರವಿಗೆ ಬಂದಿದ್ದು ನೆಂಟರಿಷ್ಟರು, ಸ್ನೇಹಿತರು ಅಲ್ಲ. ಬ್ಯಾಟರಿಚಾಲಿತ ವೀಲ್‌ಚೇರ್‌ ! ಹೌದು; ಇವರ ಬದುಕು ಮಾಮೂಲು ಹಳಿಗೆ ಮರಳಲು ಈ ವೀಲ್‌ಚೇರ್‌ ನೆರವಾಗಿದೆ. ಜೀವನೋಪಾಯಕ್ಕೆ ದಾರಿ ತೋರಿಸಿದೆ. ಆರ್ಥಿಕ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ.

ಬೆನ್ನಮೂಳೆ ಮುರಿತದಿಂದ ಶಾಶ್ವತ ಊನಕ್ಕೆ ಒಳಗಾಗಿರುವ ಬೆಂಗಳೂರಿನ ಉಮೇಶ್‌, ಎಲೆಕ್ಟ್ರಿಕಲ್ ಬ್ಯಾಟರಿಚಾಲಿತ ವೀಲ್‌ಚೇರ್‌ ಮೇಲೆ ಕುಳಿತು ಕಾಫಿ–ಟೀ, ಬಿಸ್ಕತ್ ಮಾರುತ್ತಾರೆ. ಸಣ್ಣ ಪ್ರಮಾಣದ ಉಳಿತಾಯ ಅವರ ಕುಟುಂಬಕ್ಕೆ ನೆರವಾಗಿದೆ. ಈ ವೀಲ್‌ಚೇರ್‌ ನೆರವಿನಿಂದ ವಿಜಯಪುರದ ಜಮಾಲ್‌ ಬೀದಿ ಬದಿ ಚಹಾ ಮಾರಿ ಬದುಕು ಕಟ್ಟಿಕೊಂಡಿದ್ದಾರೆ. ಕುಟುಂಬಕ್ಕೆ ಹೊರೆ ಎನ್ನುವ ಆಪಾದನೆಯಿಂದ ಅವರು ಮುಕ್ತರಾಗಿದ್ದಾರೆ.

ಕೇರಳದ ಕೊಚ್ಚಿನ್ ನಗರದ ಸತ್ಯ ಅವರು ಎಳೆನೀರು, ಸಿಮ್‌ ಕಾರ್ಡ್‌ ಮಾರಾಟ ಮಾಡುತ್ತಾರೆ. ಲಾಟರಿ ಮಾರಾಟಕ್ಕೂ ಈ ವೀಲ್‌ಚೇರ್‌ ಅವರಿಗೆ ಆಸರೆಯಾಗಿದೆ. ಈಗ ಅವರದ್ದು ಅರ್ಥಪೂರ್ಣ ಜೀವನ. ಈ ಆರ್ಥಿಕ ಸಬಲೀಕರಣದ ಕಥೆಗಳ ಹಿಂದೆ ಆಸ್ಟ್ರಿಚ್‌ (OSTRICH) ಕಂಪನಿ ಮಾರುಕಟ್ಟೆ ವಿಭಾಗದ ಮುಖ್ಯ ನಿರ್ದೇಶಕ ಕೃಷ್ಣ ರೇವಣಕರ್‌, ನಿರ್ದೇಶಕರಾದ ವೇಣುಕೃಷ್ಣ ಉನ್ನಿಕೃಷ್ಣನ್‌, ಹರ್ಷ ಮತ್ತು ಬೀನು ಅವರ ಪರಿಶ್ರಮವಿದೆ. ಸಮಾಜದಲ್ಲಿ ಅಂಗವಿಕಲರು, ದುರ್ಬಲರು, ಹಿರಿಯ ನಾಗರಿಕರು ಆರ್ಥಿಕ ಸಬಲತೆ ಸಾಧಿಸಬೇಕೆಂಬುದೇ ಇವರಿಗಿರುವ ಸಾಮಾಜಿಕ ಕಾಳಜಿ.

ಈ ತಂಡದ ನಿರ್ದೇಶಕರು ಎಂಜಿನಿಯರ್‌ ಪದವೀಧರರು ಮತ್ತು ಕಾಲೇಜು ಸ್ನೇಹಿತರು. ಐಬಿಎಂ ಸೇರಿದಂತೆ ಕೆಲ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದವರು. ಕಾಲೇಜಿನಲ್ಲಿದ್ದಾಗ ಪ್ರಾಜೆಕ್ಟ್‌ಯೊಂದರ ಸಲುವಾಗಿ ಅಂಗವಿಕಲರಿಗೆ ವೀಲ್‌ಚೇರ್ ತಯಾರಿಸಿದರು. ಇದರಿಂದ ಎಷ್ಟೋ ಮಂದಿಗೆ ನೆರವಾಯಿತು. ಇದುವೇ ಉದ್ಯಮವಾಗಿ ಇವರ ಕೈಹಿಡಿದಿದೆ. ಕಳೆದ 12 ವರ್ಷಗಳಿಂದ ಆಸ್ಟ್ರಿಚ್‌ ಕಂಪನಿಯಡಿ ವಿವಿಧ ನಮೂನೆಯ ವೀಲ್‌ಚೇರ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಎಷ್ಟೋ ಮಂದಿಗೆ ಉದ್ಯೋಗದಾತರೂ ಹೌದು.

ಬೊಮ್ಮನಹಳ್ಳಿ ಕೈಗಾರಿಕೆ ಪ್ರದೇಶದಲ್ಲಿ ತಯಾರಿಕಾ ಘಟಕ ಇದೆ. ವೀಲ್‌ಚೇರ್‌ಗಳ ಉನ್ನತೀಕರಣ, ಸಂಶೋಧನೆ, ಅಭಿವೃದ್ಧಿಗಾಗಿ 200 ಮಂದಿ ಯುವ ವಿಜ್ಞಾನಿಗಳು ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಪರೋಕ್ಷವಾಗಿ 100 ಮಂದಿ ಈ ಉದ್ಯಮವನ್ನು ಅವಲಂಬಿಸಿದ್ದಾರೆ. ಹೈದರಾಬಾದ್‌, ಚೆನ್ನೈ, ದೆಹಲಿ, ಕೋಲ್ಕತ್ತಗಳಲ್ಲಿ ಮಾರಾಟ ಕೇಂದ್ರಗಳಿವೆ. ಬೆಂಗಳೂರಿನ ಬಸವೇಶ್ವರನಗರದಲ್ಲೂ ಪ್ರಮುಖ ಮಾರಾಟ ಕೇಂದ್ರ ಇದೆ.

‘ಹಳ್ಳಿಗಾಡಿನ ವಯೋವೃದ್ಧರು ಹೊಲ–ಗದ್ದೆಗಳಿಗೆ ಹೋಗಿ ಬರಲೂ ಇದನ್ನು ಬಳಸಬಹುದು. ನಡಿಗೆ ಮೂಲಕ ವಾಯುವಿಹಾರ ನಡೆಸಲು ಸಾಧ್ಯವಾಗದವರು ಕೂಡ ಇದನ್ನು ಅಲವಂಬಿಸಬಹುದು. ಗ್ರಾಹಕರ ಇಷ್ಟಕ್ಕೆ ತಕ್ಕಂತೆ ನಿರ್ಮಿಸಿಕೊಡಲಾಗುವುದು. ಆರಾಮದಾಯಕವಾಗಿ ಬಳಸುವ ಈ ವೀಲ್‌ಚೇರ್‌ಗಳು ಗ್ರಾಹಕ ಸ್ನೇಹಿಯಾಗಿವೆ’ ಎಂದು ಹೇಳುತ್ತಾರೆ ಕೃಷ್ಣ ರೇವಣಕರ್.

ಬಡವರು, ಕೆಳಮಧ್ಯಮ ವರ್ಗದ ಜನರ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿಯೇ ಬೆಲೆ ನಿಗದಿಪಡಿಸಲಾಗಿದೆ. ಮನೆ – ಅಂಗಳದಲ್ಲಿ ಸಂಚರಿಸಲು ಬಳಸುವ ವೀಲ್‌ಚೇರ್‌ಗಳ ಬೆಲೆ ₹ 60 ರಿಂದ ₹ 70ಸಾವಿರ ಇದೆ. 10–15 ಕಿ.ಮೀ ಸಂಚರಿಸುವ ಸಾಮರ್ಥ್ಯ ಇರುವ ವೀಲ್‌ಚೇರ್‌ಗಳ ಖರೀದಿಗೆ ₹ 1 ಲಕ್ಷದವರೆಗೂ ವ್ಯಯವಾಗಲಿದೆ.

ಇದಕ್ಕೆ ಬಳಕೆ ಮಾಡುವ ಉಪಕರಣಗಳಿಗೆ ವಿಪರೀತ ತೆರಿಗೆ ಹೊರೆಯೂ ಇದೆ. ದೇಶದ ಬಹುತೇಕ ಅಂಗವಿಕಲರು, ದೈಹಿಕ ಅಸಮರ್ಥರು ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆಗೆ ಸೇರಿದವರು. ಈಗಾಗಲೇ ಸರ್ಕಾರ ಮತ್ತು ಕೆಲ ಸಂಘ – ಸಂಸ್ಥೆಗಳು ಇವರ ನೆರವಿಗೆ ನಿಂತಿವೆ. ಇದಕ್ಕೂ ಒಂದು ಹೆಜ್ಜೆ ಮುಂದಡಿ ಇಟ್ಟಿರುವ ಆಸ್ಟ್ರಿಚ್‌ ಕಂ‍ಪನಿ, ಉದ್ಯಮದ ಲಾಭ – ನಷ್ಟದ ನಡುವೆಯೂ ಸಾಮಾಜಿಕ ಜವಾಬ್ದಾರಿ ಹೊತ್ತಿದೆ ಎನ್ನುತ್ತಾರೆ ನಿರ್ದೇಶಕ ವೇಣುಕೃಷ್ಣ ಉನ್ನಿಕೃಷ್ಣನ್‌.

ಕಾರಿನಲ್ಲಿ ಪೋಲ್ಡ್‌ ಮಾಡಿ ಇಡುವಷ್ಟು ಇವುಗಳ ಸಾಗಣೆಯೂ ಆರಾಮದಾಯಕ. ‌ಮೊಬೈಲ್ ರೀತಿಯಲ್ಲೇ ಚಾರ್ಚ್‌ ಮಾಡುವ ವ್ಯವಸ್ಥೆ ಇದೆ. ಮಾಲಿನ್ಯರಹಿತ ಬ್ಯಾಟರಿಚಾಲಿತ ಈ ವೀಲ್‌ ಚೇರ್‌ಗಳು ದೈಹಿಕ ನ್ಯೂನ್ಯತೆವುಳ್ಳವರ ಪಾಲಿಗೆ ಭರವಸೆ ಹೊಂಗಿರಣ ಎಂದರೆ ತಪ್ಪಾಗಲಾರದು.

ಮಾಹಿತಿಗೆ: 7625087536

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT