ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಗಟು ಹಣದುಬ್ಬರ ಏರಿಕೆ

9 ತಿಂಗಳ ಗರಿಷ್ಠ ಮಟ್ಟದಲ್ಲಿ ದಾಖಲು: ಆಹಾರ ಪದಾರ್ಥಗಳ ಬೆಲೆ ಏರಿಕೆ
Published 15 ಜನವರಿ 2024, 15:12 IST
Last Updated 15 ಜನವರಿ 2024, 15:12 IST
ಅಕ್ಷರ ಗಾತ್ರ

ನವದೆಹಲಿ: 2023ರ ಡಿಸೆಂಬರ್‌ನಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಶೇ 0.73ಕ್ಕೆ ಏರಿಕೆಯಾಗಿದ್ದು, ಒಂಬತ್ತು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.  

ಆಹಾರ ಪದಾರ್ಥಗಳ ದರ ಹೆಚ್ಚಳವಾಗಿರುವುದೇ ಹಣದುಬ್ಬರದ ಏರಿಕೆಗೆ ಕಾರಣವಾಗಿದೆ. ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಸ್ಥಿರವಾಗಿದ್ದ ಹಣದುಬ್ಬರವು ನವೆಂಬರ್‌ನಲ್ಲಿ ಶೇ 0.26ಕ್ಕೆ ಏರಿಕೆಯಾಗುವ ಮೂಲಕ ಎಂಟು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು.

ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ 5.69ರಷ್ಟು ಏರಿಕೆಯಾಗಿದ್ದು, ನಾಲ್ಕು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಹಣದುಬ್ಬರ ಏರಿಕೆಯಾಗುತ್ತಿರುವ ಬೆನ್ನಲ್ಲೇ ಭಾರತೀಯ ರಿಸರ್ವ್‌ ಬ್ಯಾಂಕ್‌, ರೆಪೊ ದರ ಹೆಚ್ಚಿಸಲು ಮುಂದಾಗಬಹುದೇ ಎಂಬ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.  

ಒಂದು ವೇಳೆ ರೆಪೊ ದರ ಹೆಚ್ಚಿಸಿದರೆ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳವಾಗಲಿದೆ. ಈಗಾಗಲೇ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಗೃಹ ಸಾಲದ ಇಎಂಐ ಹೊರೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಆಹಾರ ಪದಾರ್ಥಗಳು, ಯಂತ್ರೋಪಕರಣಗಳು, ಸಾರಿಗೆ ಉಪಕರಣ, ಕಂಪ್ಯೂಟರ್‌, ಎಲೆಕ್ಟ್ರಾನಿಕ್ಸ್‌ ಮತ್ತು ಆಪ್ಟಿಕಲ್‌ ಉಪಕರಣಗಳ ದರ ಹೆಚ್ಚಳವೇ ಹಣದುಬ್ಬರ ಏರಿಕೆಗೆ ಕಾರಣವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. ‌

ಹಣದುಬ್ಬರ ಏರಿಕೆಗೆ ಭತ್ತ, ಬೇಳೆ ಮತ್ತು ತರಕಾರಿಗಳ ಪಾಲು ದೊಡ್ಡದಿದೆ. ಆಗಸ್ಟ್‌ನಿಂದ ಈರುಳ್ಳಿ ಬೆಲೆ ಏರಿಕೆಯು ಎರಡಂಕಿಯಲ್ಲಿಯೇ ಇದೆ. ಆದರೆ, ಆಲೂಗೆಡ್ಡೆ ಬೆಲೆ ಮಾತ್ರ ಇಳಿಕೆಯಾಗಿದೆ.

ಇಂಧನ ಮತ್ತು ವಿದ್ಯುತ್ ಸೂಚ್ಯಂಕದಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ನವೆಂಬರ್‌ನಲ್ಲಿ ಶೇ (–) 4.61ರಷ್ಟು ಇದ್ದಿದ್ದು ಶೇ (–) 2.41ರಷ್ಟು ಇಳಿಕೆ ಆಗಿದೆ. ಆದರೆ, ತಯಾರಿಕಾ ಉತ್ಪನ್ನಗಳ ಬೆಲೆಯು ಶೇ (–)0.64ರಿಂದ ಶೇ (–) 0.71ರಷ್ಟು ಏರಿಕೆ ಆಗಿದೆ.

ಡಿಸೆಂಬರ್‌ನಲ್ಲಿ ನಡೆದ ಆರ್‌ಬಿಐನ ಹಣಕಾಸು ನೀತಿ ಸಭೆಯು (ಎಂಪಿಸಿ) ನವೆಂಬರ್‌ನಲ್ಲಿ ಆಹಾರ ಪದಾರ್ಥಗಳ ದರ ಏರಿಕೆಯಾಗಿದ್ದ ಬಗ್ಗೆ ಚರ್ಚಿಸಿತ್ತು. ಡಿಸೆಂಬರ್‌ನಲ್ಲೂ ಬೆಲೆ ಏರಿಕೆಯಾಗಲಿದೆ ಎಂದು ಅಂದಾಜಿಸಿತ್ತು. ಹಾಗಾಗಿ, ಸಮಿತಿಯು ರೆಪೊ ದರವನ್ನು ಶೇ 6.5ರಲ್ಲಿಯೇ ಉಳಿಸಿಕೊಂಡಿತ್ತು.

‘ಪ್ರಸಕ್ತ ಹಣಕಾಸು ವರ್ಷದಲ್ಲಿ ಸಗಟು ಹಣದುಬ್ಬರ ಶೇ 1ರಷ್ಟು ಮಿತಿಯಲ್ಲಿಯೇ ಇರಲಿದೆ. ಆದಾಗ್ಯೂ, ಖಾರೀಪ್‌ ಅವಧಿಯಲ್ಲಿನ ಕೊಯ್ಲು, ರಾಬಿ ಅವಧಿಯಲ್ಲಿನ ಬಿತ್ತನೆ, ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಮುಂಬರುವ ದಿನಗಳಲ್ಲಿ ಸಗಟು ಹಣದುಬ್ಬರ ಏರಿಕೆ ಕಾಣುವ ಸಂಭವ ಇದೆ’ ಎಂದು ಕೇರ್‌ಎಡ್ಜ್‌ನ ಮುಖ್ಯ ಆರ್ಥಿಕ ತಜ್ಞೆ ರಜನಿ ಸಿನ್ಹಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT