ಶನಿವಾರ, ಏಪ್ರಿಲ್ 4, 2020
19 °C

ತಪ್ಪಿನ ಫಲ ಉಣ್ಣುತ್ತಿದೆ ಯೆಸ್ ಬ್ಯಾಂಕ್

ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ Updated:

ಅಕ್ಷರ ಗಾತ್ರ : | |

ಖಾಸಗಿ ವಲಯದ ಯೆಸ್ ಬ್ಯಾಂಕ್‌ನ ವೈಫಲ್ಯದಲ್ಲಿ ಹಲವಾರು ಪಾಠಗಳಿವೆ. ಪ್ರವರ್ತಕರು  ಕಂಪನಿಗಳನ್ನು ತಮ್ಮ ಕುಟುಂಬದ ಆಸ್ತಿ ಎಂಬಂತೆ ಪರಿಗಣಿಸಿದ್ದರಿಂದ ಕಂಪನಿಗಳೇ ಪತನ ಕಂಡ ಉದಾಹರಣೆಗಳ ಸಾಲಿಗೆ ಇದು ಕೂಡ ಸೇರುತ್ತದೆ. ಕಂಪನಿಗಳ ಸ್ವಾಯತ್ತೆ ಕಾಪಾಡಲು ಅಗತ್ಯವಿರುವ ಸುಧಾರಣೆ  ತರಲು ಕಾಲ ಮಿಂಚಿಹೋಗಿಲ್ಲ ಎನ್ನುವುದನ್ನೂ ಈ ಪ್ರಕರಣ ನೆನಪಿಸಿದೆ.

***

ಸಾರ್ವಜನಿಕರೂ ಮಾಲೀಕರಾಗಿರುವ (ಲಿಸ್ಟೆಡ್‌) ಬ್ಯಾಂಕಿನ ಪ್ರವರ್ತಕರೊಬ್ಬರು ಅನಿಯಂತ್ರಿತವಾಗಿ ವರ್ತಿಸಿ, ಬ್ಯಾಂಕನ್ನು ತಮ್ಮ ಖಾಸಗಿ ಕಂಪನಿಯಂತೆ ಬಳಸಿಕೊಂಡ ದಾರುಣ ಕಥೆ ಯೆಸ್‌ ಬ್ಯಾಂಕ್‌ನದ್ದು. ಕೇವಲ ಒಂದೂವರೆ ದಶಕದ ಹಿಂದೆ ಆರಂಭವಾದ ಈ ಬ್ಯಾಂಕ್‌ನ ಕೆಟ್ಟ ಸ್ಥಿತಿಗೆ, ಇದರ ಹಠಾತ್ ಬೆಳವಣಿಗೆ ಹಾಗೂ ಕುಸಿತಕ್ಕೆ ಕಾರಣರಾದವರು ಸಂಸ್ಥಾಪಕರಲ್ಲಿ ಒಬ್ಬರಾದ ರಾಣಾ ಕಪೂರ್ ಎಂದು ಹೇಳಬಹುದು. 2017ರಲ್ಲಿ ಆರ್‌ಬಿಐ ಮತ್ತು ಬ್ಯಾಂಕ್‌ನ ಆಡಳಿತ ಮಂಡಳಿಯ ಒತ್ತಾಯಕ್ಕೆ ಮಣಿದು ಬ್ಯಾಂಕಿನ ಸಿಇಒ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು ರಾಣಾ.

ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕೆಲವು ಬೃಹತ್ ಕಂಪನಿಗಳ ಪ್ರವರ್ತಕರು ಆ ಕಂಪನಿಗಳನ್ನು ತಮ್ಮ ಕುಟುಂಬದ ಆಸ್ತಿ ಎಂಬಂತೆ ಪರಿಗಣಿಸಿದ್ದರ ಪರಿಣಾಮವಾಗಿ ಕಂಪನಿಗಳೇ ಪತನ ಕಂಡ ಉದಾಹರಣೆಗಳ ಸಾಲಿಗೆ ಯೆಸ್ ಬ್ಯಾಂಕ್‌ ಕೂಡ ಸೇರುತ್ತದೆ. ಇಲ್ಲಿ ಕೆಲವು ಕಂಪನಿಗಳು ಹಾಗೂ ಪ್ರವರ್ತಕರ ಹೆಸರು ಜನಜನಿತವೂ ಹೌದು. ಯೆಸ್‌ ಬ್ಯಾಂಕ್‌ ಪ್ರಕರಣದಲ್ಲಿ ಅತ್ಯಂತ ಆಶ್ಚರ್ಯಕ್ಕೆ ಕಾರಣವಾಗುವ ವಿಚಾರವೊಂದು ಇದೆ. ಕಂಪನಿ ಕಾಯ್ದೆ ಅಡಿಯಲ್ಲಿ, ‘ಸೆಬಿ’ (ಭಾರತೀಯ ಷೇರು‍ಪೇಟೆ ನಿಯಂತ್ರಣ ಮಂಡಳಿ) ನಿರ್ದೇಶನದ ಅನುಸಾರ ಪಾಲಿಸಬೇಕಾದ ಕಾನೂನುಗಳು, ನಿಯಮಗಳು ಜಾರಿಯಲ್ಲಿದ್ದವು. ಇವೆರಡರ ಜೊತೆಯಲ್ಲೇ, ಆರ್‌ಬಿಐ (ಭಾರತೀಯ ರಿಸರ್ವ್ ಬ್ಯಾಂಕ್) ನಿಗಾ ಕೂಡ ಇತ್ತು. ಹೀಗಿದ್ದರೂ ಈ ಬ್ಯಾಂಕ್‌ ಕುಸಿಯಿತು.

ಪ್ರವರ್ತಕರೇ ಮುನ್ನಡೆಸುವ ಕಂಪನಿಗಳು ವೈಫಲ್ಯ ಕಾಣುವುದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಪತ್ತೇದಾರ ಶೆರ್ಲಾಕ್‌ ಹೋಮ್ಸ್‌ನ ಸಹಾಯ ಬೇಕಿಲ್ಲ. ಷೇರುಗಳನ್ನು ಸಾರ್ವಜನಿಕರು ಖರೀದಿಸುವ ಅವಕಾಶ ಇರುವ ಕಂಪನಿಗಳನ್ನು ಆಡಳಿತ ಮಂಡಳಿಗಳು ನಡೆಸುತ್ತಿರುತ್ತವೆ. ಅಲ್ಲಿ ಒಬ್ಬ ಸಿಇಒ, ವ್ಯವಸ್ಥಾಪಕ ನಿರ್ದೇಶಕ ಇರುತ್ತಾರೆ. ಇವರು ಆಡಳಿತ ಮಂಡಳಿಗೆ ಉತ್ತರದಾಯಿ ಆಗಿರುತ್ತಾರೆ. ಆದರೆ, ಆಡಳಿತ ಮಂಡಳಿಗೆ ಕೆಲಸದಲ್ಲಿ ಆಸಕ್ತಿ ಇಲ್ಲ ಎಂದಿಟ್ಟುಕೊಳ್ಳಿ. ನಿಜವಾದ ಸಮಸ್ಯೆ ಅಲ್ಲಿರುತ್ತದೆ.

ಕಾನೂನಿನ ಕಟ್ಟಪ್ಪಣೆಯ ಕಾರಣದಿಂದಾಗಿ ಮಂಡಳಿಯಲ್ಲಿ ‘ಸ್ವತಂತ್ರ ನಿರ್ದೇಶಕರು’ ಇರುತ್ತಾರೆ. ಅವರನ್ನು ಇಟ್ಟುಕೊಳ್ಳುವುದರಿಂದ ಪ್ರವರ್ತಕರ ಪ್ರತಿಷ್ಠೆಯೂ ಹೆಚ್ಚುತ್ತದೆ. ನಿವೃತ್ತ ಅಧಿಕಾರಿಗಳು, ಸಾರ್ವಜನಿಕ ವಲಯದ ಉದ್ದಿಮೆಗಳ ನಿವೃತ್ತ ಮುಖ್ಯಸ್ಥರು, ಮಾಜಿ ರಾಜತಾಂತ್ರಿಕರು... ಇಂಥವರೆಲ್ಲ ಸ್ವತಂತ್ರ ನಿರ್ದೇಶಕರಾಗಿ ಇರುತ್ತಾರೆ. ಇವರು, ಪ್ರವರ್ತಕರ ಪಾಲಿಗೆ ಅಧಿಕಾರಸ್ಥರ ಮನೆಯ ಬಾಗಿಲು ತೆರೆದುಕೊಡುತ್ತಾರೆ. ಇಂದಿಗೂ, ಬಹುತೇಕ ಕಡತಗಳು ವಿಲೇವಾರಿ ಆಗುವುದು, ಪರವಾನಗಿಗಳು ಸಿಗುವುದು ಅಧಿಕಾರಸ್ಥರ ವಲಯದಲ್ಲಿ ಯಾರು ಪರಿಚಯ ಇದ್ದಾರೆ ಎಂಬುದನ್ನು ಆಧರಿಸಿ. ಸಿಇಒ ತೀರ್ಮಾನವನ್ನು ಪ್ರಶ್ನಿಸುವ, ಪ್ರಾಮಾಣಿಕತೆಯನ್ನು ಎತ್ತಿಹಿಡಿಯುವ ಹಾಗೂ ತೀರಾ ಸಣ್ಣ ಪ್ರಮಾಣದಲ್ಲಿ ಷೇರು ಹೊಂದಿರುವವರ ಹಿತ ಕಾಯುವ ಕೆಲಸವನ್ನು ಸ್ವತಂತ್ರ ನಿರ್ದೇಶಕರು ನಿಭಾಯಿಸುವುದು ಬಹಳ ಅಪರೂಪ.

ಸ್ವತಂತ್ರ ನಿರ್ದೇಶಕರು ತುಸು ಪ್ರಮಾಣದಲ್ಲಿ ಸ್ವತಂತ್ರವಾಗಿ ವರ್ತಿಸಲು ಆರಂಭಿಸಿದರೆ, ಅಪ್ರಾಮಾಣಿಕ ನಡೆ ಎಂದು ಅನಿಸಿದ್ದರ ವಿಚಾರವಾಗಿ ದನಿ ಎತ್ತಿದರೆ ಅವರು ಮಂಡಳಿಯಲ್ಲಿ ಮುಂದುವರಿಯದಂತೆ ಮಾಡಲಾಗುತ್ತದೆ. ಇದು ಭಾರತದಲ್ಲಿ ಅಸಹಜವೇನೂ ಅಲ್ಲ. ಪ್ರವರ್ತಕರು ತಾವು ಹೇಳಿದಂತೆ ಕೇಳುವವರನ್ನೇ ನಿರ್ದೇಶಕರನ್ನಾಗಿ ನೇಮಿಸಿಕೊಳ್ಳುತ್ತಾರೆ. ಇದಕ್ಕೆ ಯೆಸ್ ಬ್ಯಾಂಕ್ ಕೂಡ ಹೊರತಾಗಿರಲಿಲ್ಲ. ಕುಟುಂಬದ ನಿಯಂತ್ರಣದಲ್ಲಿ ಇರುವ ಅಥವಾ ಪ್ರವರ್ತಕರ ಮೂಲಕ ನಡೆಯುವ ಕಂಪನಿಗಳು ತಮಗೆ ಬೇಕಾದಾಗಲೆಲ್ಲ ಕಂಪನಿಯ ಖಜಾನೆಗೆ ಕೈಹಾಕಿದವು, ಪ್ರವರ್ತಕರ ಮಾಲೀಕತ್ವದ ಇತರ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿಕೊಂಡವು ಎಂದು ಭಾವಿಸಿ. ಅಲ್ಪ ಪ್ರಮಾಣದಲ್ಲಿ ಷೇರು ಹೊಂದಿರುವವರು, ಷೇರುಗಳನ್ನು ಹೊಂದಿರುವ ಸಾರ್ವಜನಿಕರು ತಮಗೆ ಆಕರ್ಷಕ ಪ್ರಮಾಣದಲ್ಲಿ ಲಾಭ ಸಿಗುತ್ತಿರುವವರೆಗೆ ಈ ವಿಚಾರಗಳ ಕುರಿತು ದನಿಯೆತ್ತುವುದಿಲ್ಲ. ಅಕ್ರಮಗಳ ಮೂಲಕ ಕೆಲವು ಅನುಮತಿಗಳನ್ನು ಪಡೆಯುವಲ್ಲಿ, ನೀತಿಗಳನ್ನು ಕಂಪನಿ ಪರವಾಗಿ ಇರುವಂತೆ ಮಾಡುವಲ್ಲಿ ಅಥವಾ ಕೆಲವು ಅಡೆತಡೆಗಳನ್ನು ನಿವಾರಿಸುವಲ್ಲಿ ಪ್ರವರ್ತಕರು ಯಶಸ್ವಿಯಾದಾಗ, ಸಾಮಾನ್ಯ ಷೇರುದಾರರು ಕೂಡ ಈ ಅಕ್ರಮಗಳನ್ನು ಆಕ್ಷೇಪಾರ್ಹವಾಗಿ ಕಾಣುವುದಿಲ್ಲ. ಇವೆಲ್ಲವೂ ಒಂದು ಬಗೆಯಲ್ಲಿ ಒಳ ಒಪ್ಪಂದಗಳು.


ಬ್ಯಾಂಕ್‌ನ ಸ್ಥಾಪಕ ರಾಣಾ ಕಪೂರ್‌

ಮಾರುಕಟ್ಟೆ ನಿಯಂತ್ರಕರು, ಆರ್‌ಬಿಐ ಮತ್ತು ಇತರ ಶಾಸನಾತ್ಮಕ ಪ್ರಾಧಿಕಾರಗಳು ಆತ್ಮಾವಲೋಕನ ಮಾಡಿಕೊಂಡು, ಒಂದಿಷ್ಟು ಪ್ರಶ್ನೆಗಳು ಕೇಳಿಕೊಳ್ಳಬಹುದೇ? ಆಡಳಿತ ಮಂಡಳಿಗಳು ಷೇರುದಾರರಿಗೆ ಉತ್ತರದಾಯಿ. ಅದರಲ್ಲೂ, ಸಿಇಒಗಳು ಹಾಗೂ ಪ್ರವರ್ತಕರಲ್ಲಿ ಹಲವರು ತಪ್ಪು ಮಾಡುತ್ತಿರುವುದು ಹೆಚ್ಚುತ್ತಿರುವಾಗ, ಕಡಿಮೆ ಪ್ರಮಾಣದಲ್ಲಿ ಷೇರು ಹೊಂದಿರುವವರ ಹಿತ ಕಾಯಬೇಕಿರುವುದು ಮಂಡಳಿಯ ಕೆಲಸ. ಮಂಡಳಿಗಳು ಶಾಸನಾತ್ಮಕ ಪ್ರಾಧಿಕಾರಗಳಿಗೆ ಕೂಡ ಉತ್ತರದಾಯಿ. ನಿಯಂತ್ರಣ ಇಲ್ಲದಂತೆ ವರ್ತಿಸುವ ಪ್ರವರ್ತಕರಿಗೆ ‘ಸ್ವತಂತ್ರ ನಿರ್ದೇಶಕ’ರನ್ನು ನೇಮಿಸುವ ಅಧಿಕಾರ ಇರಬೇಕೇ? ನಿರ್ದೇಶಕರು ಸ್ವತಂತ್ರರಾಗಿ ಕೆಲಸ ಮಾಡುತ್ತಾರೆ ಎಂದು ನಿರೀಕ್ಷಿಸಬಹುದೇ? ಪ್ರವರ್ತಕರು ಯಶಸ್ಸು ಕಾಣುತ್ತಿರುವಷ್ಟು ಕಾಲ, ಅವರನ್ನು ಮಾಧ್ಯಮಗಳು ದೇವತೆಗಳಂತೆ ಬಿಂಬಿಸುತ್ತಿರುವಷ್ಟು ಕಾಲ ಅವರು ಮಾಡುವ ತಪ್ಪುಗಳನ್ನೆಲ್ಲ ನಿರ್ಲಕ್ಷಿಸಬೇಕೇ?

ಕಂಪನಿಗಳ ಸ್ಥಿತಿಯಲ್ಲಿ ಏರಿಳಿತಗಳು ಇದ್ದೇ ಇರುವ ಕಾರಣಕ್ಕೆ, ಒಂದೊಂದು ಸಂದರ್ಭಕ್ಕೆ ಒಂದೊಂದು ನಿಯಮ ಅನ್ವಯಿಸಲು ಸಾಧ್ಯವಿಲ್ಲ. ಈ ರೀತಿಯ ವಿದ್ಯಮಾನಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ನಡೆಯುತ್ತವೆ. ಆದರೆ, ಪ್ರವರ್ತಕರು ಅದೆಷ್ಟೇ ದೊಡ್ಡವರಾದರೂ ಅಲ್ಲಿನ ಕಾನೂನು ಅವರ ತಪ್ಪುಗಳನ್ನು ಮನ್ನಿಸುವುದಿಲ್ಲ. ಮೈಕ್ರೊಸಾಫ್ಟ್‌ ಮತ್ತು ಬಿಲ್ ಗೇಟ್ಸ್‌, ಫೇಸ್‌ಬುಕ್‌ ಮತ್ತು ಮಾರ್ಕ್‌ ಝಕರ್‌ಬರ್ಗ್‌ ಕೂಡ ತನಿಖೆ ಎದುರಿಸಿದ್ದಿದೆ. ಭಾರಿ ಮೊತ್ತದ ದಂಡ ಪಾವತಿಸಿದ್ದೂ ಇದೆ. ನಾವು ಇವುಗಳಿಂದ ಪಾಠ ಕಲಿತುಕೊಳ್ಳಬಹುದೇ?

ರಾಜಕಾರಣಿಗಳು ಹಾಗೂ ಅಧಿಕಾರಿಗಳು ಬ್ಯಾಂಕ್‌ಗಳ ಕೆಲಸಗಳಲ್ಲಿ ಹಸ್ತಕ್ಷೇಪ ನಡೆಸದಂತೆ ಮಾಡುವುದು ಹೇಗೆ? ದೊಡ್ಡ ಕುಟುಂಬಗಳ ಒಡೆತನದ ವಾಣಿಜ್ಯೋದ್ಯಮಗಳು ಹಾಗೂ ರಾಜಕಾರಣಿಗಳ ನಡುವೆ ಒಳ್ಳೆಯ ಬಾಂಧವ್ಯವೊಂದು ಇದೆ. ಇದು ಎಲ್ಲ ಸಮಸ್ಯೆಗಳ ಮೂಲ. ಇಲ್ಲಿ ಒಂದೆರಡು ಪಾಠಗಳನ್ನು ಕಲಿಯಬಹುದು. ಪ್ರವರ್ತಕರ ತಪ್ಪುಗಳಿಗೆ ಕಂಪನಿಯನ್ನು ಶಿಕ್ಷಿಸಬಾರದು. ನಿಜ ಸಮಸ್ಯೆಯ ಮೇಲಿನ ಗಮನ ಬೇರೆಡೆ ತಿರುಗಲು ಬಿಡಬಾರದು. ಯೆಸ್ ಬ್ಯಾಂಕ್‌ ಪ್ರಕರಣದಲ್ಲಿ ಆಗುತ್ತಿರುವಂತೆ, ಕಂಪನಿಯನ್ನು ಹಾಗೂ ಉದ್ಯೋಗಿಗಳನ್ನು ರಕ್ಷಿಸಲು ಎಲ್ಲ ಪ್ರಯತ್ನಗಳು ನಡೆಯಬೇಕು. ಅದು ಸರಿಯಾದ ಕ್ರಮವೂ ಹೌದು.

ಯೆಸ್ ಬ್ಯಾಂಕ್‌ನ ವೈಫಲ್ಯವು ಆಡಳಿತದ ಚುಕ್ಕಾಣಿ ಹಿಡಿದವರಿಗೆ ಕೆಲವು ಪಾಠಗಳನ್ನು ಹೇಳಬೇಕು. ನಮ್ಮ ಹಲವು ಸಂಸ್ಥೆಗಳ ಸ್ವಾಯತ್ತೆಯನ್ನು ಕಾಪಾಡಲು ಅಗತ್ಯವಿರುವ ಸುಧಾರಣೆಗಳನ್ನು ತರಲು ಕಾಲ ಮಿಂಚಿಹೋಗಿಲ್ಲ. ಆದರೆ, ಆ ಕೆಲಸವನ್ನು ಈಗ ಮಾಡಬೇಕು.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು