ಗುರುವಾರ , ಆಗಸ್ಟ್ 11, 2022
27 °C

ವಾಟ್ಸ್‌ಆ್ಯಪ್‌ ಪಾವತಿ ಬಳಕೆ ಹೆಚ್ಚಿಸಲು ಯತ್ನ: ಮಾರ್ಕ್‌ ಝಕರ್‌ಬರ್ಗ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತವು ವಿಶೇಷ ದೇಶ ಎಂದು ಬಣ್ಣಿಸಿರುವ ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮಾರ್ಕ್‌ ಝಕರ್‌ಬರ್ಗ್‌, ಈಚೆಗೆ ಆರಂಭವಾಗಿರುವ ವಾಟ್ಸ್‌ಆ್ಯಪ್‌ ಪಾವತಿ ಸೌಲಭ್ಯವನ್ನು ಹೆಚ್ಚು ಜನಪ್ರಿಯಗೊಳಿಸುವ ಯತ್ನ ನಡೆಸಿದ್ದಾರೆ.

ಫೇಸ್‌ಬುಕ್‌ ಮಾಲೀಕತ್ವದ ವಾಟ್ಸ್‌ಆ್ಯಪ್‌ ಕಂಪನಿಯು ಪಾವತಿ ವ್ಯವಸ್ಥೆಯನ್ನು ಆರಂಭಿಸಲು ರಾಷ್ಟ್ರೀಯ ಪಾವತಿ ನಿಗಮದಿಂದ (ಎನ್‌ಪಿಸಿಐ) ಒಪ್ಪಿಗೆ ಪಡೆದಿದೆ. ಯುಪಿಐ ಆಧಾರಿತ ಈ ಪಾವತಿ ಸೌಲಭ್ಯವನ್ನು ಆರಂಭಿಸಿದೆ ಕೂಡ. ‘ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಿಗೆ ವಾಟ್ಸ್‌ಆ್ಯಪ್‌ ಮೂಲಕವೇ ಹಣ ಕಳುಹಿಸಲು ಸಾಧ್ಯ. ಇದು ಸಂದೇಶ ರವಾನಿಸಿದಷ್ಟೇ ಸುಲಭ. ಇದು ಸಾಧ್ಯವಾಗಿದ್ದು ಭಾರತದಲ್ಲಿ ಅಭಿವೃದ್ಧಿಪಡಿಸಿದ ಯುಪಿಐ ವ್ಯವಸ್ಥೆಯಿಂದಾಗಿ’ ಎಂದು ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಜೊತೆಗಿನ ಸಂವಾದದ ವೇಳೆ ಝಕರ್‌ಬರ್ಗ್‌ ಹೇಳಿದ್ದಾರೆ.

ರಿಲಯನ್ಸ್ ಮಾಲೀಕತ್ವದ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿ ಫೇಸ್‌ಬುಕ್‌ ಒಟ್ಟು ₹ 43,574 ಕೋಟಿ ಹೂಡಿಕೆ ಮಾಡುವುದಾಗಿ ಏಪ್ರಿಲ್‌ನಲ್ಲಿ ಪ್ರಕಟಿಸಿದೆ. ‘ನೀವು (ಫೇಸ್‌ಬುಕ್‌) ಮಾಡಿದ ಹೂಡಿಕೆಯು ಹೊಸದೊಂದರ ಶುರುವಿಗೆ ಕಾರಣವಾಯಿತು ಎಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಈ ಹೂಡಿಕೆಯು ಜಿಯೊ ಕಂಪನಿಯ ಪಾಲಿಗೆ ಮಾತ್ರವೇ ಅಲ್ಲ, ದೇಶದಲ್ಲಿ ಆಗಿರುವ ಅತಿದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆಯೂ ಹೌದು’ ಎಂದು ಅಂಬಾನಿ ಹೇಳಿದರು.

ಭಾರತವು ಡಿಜಿಟಲ್‌ ತಂತ್ರಜ್ಞಾನದ ವಿಚಾರದಲ್ಲಿ ಕೈಗೊಂಡಿರುವ ಕ್ರಮಗಳು ಸಂಪತ್ತು ಮತ್ತು ಮೌಲ್ಯ ಸೃಷ್ಟಿಯನ್ನು ಸಾರ್ವಜನಿಕರಿಗೆ ಮತ್ತು ಸಣ್ಣ ಉದ್ದಿಮೆಗಳ ಪಾಲಿಗೆ ಹೆಚ್ಚು ಹತ್ತಿರವಾಗಿಸುತ್ತವೆ ಎಂದು ಅಂಬಾನಿ ಪ್ರತಿಪಾದಿಸಿದರು. ‘ಜಿಯೊ ಕಂಪನಿಯು ಡಿಜಿಟಲ್ ಸಂಪರ್ಕವನ್ನು ಸಾಧ್ಯವಾಗಿಸುತ್ತದೆ. ವಾಟ್ಸ್‌ಆ್ಯಪ್‌ ತನ್ನ ಪಾವತಿ ಸೌಲಭ್ಯದೊಂದಿಗೆ ಡಿಜಿಟಲ್‌ ಸಂವಾದವನ್ನು ಸಾಧ್ಯವಾಗಿಸಿದೆ. ಅಷ್ಟೇ ಅಲ್ಲ, ಮೌಲ್ಯ ಸೃಷ್ಟಿಗೂ ಇದು ನೆರವಾಗುತ್ತದೆ. ಜಿಯೊ ಮಾರ್ಟ್‌ ಈಗ ಸಾಟಿಯಿಲ್ಲದ ರಿಟೇಲ್‌ ವ್ಯಾಪಾರದ ಅವಕಾಶವನ್ನು ನೀಡುತ್ತಿದೆ. ಹಳ್ಳಿಗಳಲ್ಲಿ ಹಾಗೂ ಸಣ್ಣ ಪಟ್ಟಣಗಳಲ್ಲಿ ಇರುವ ಅಂಗಡಿಗಳಿಗೆ ಡಿಜಿಟಲ್ ಜಗತ್ತಿನೊಂದಿಗೆ ಬೆಸೆದುಕೊಳ್ಳುವ ಅವಕಾಶ ನೀಡುತ್ತಿದೆ’ ಎಂದು ಅಂಬಾನಿ ವಿವರಿಸಿದರು.

ಜಿಯೊದಿಂದ ಟ್ರಾಯ್‌ಗೆ ದೂರು
ನವದೆಹಲಿ:
‘ಭಾರ್ತಿ ಏರ್‌ಟೆಲ್‌ ಹಾಗೂ ವೊಡಾಫೋನ್‌ ಐಡಿಯಾ ಲಿಮಿಟೆಡ್‌ (ವಿಐಎಲ್‌) ಕಂಪನಿಗಳು ನಮ್ಮನ್ನು ರೈತ ವಿರೋಧಿ ಎಂದು ಬಿಂಬಿಸುವ ಕೀಳುಮಟ್ಟದ ಅಭಿಯಾನ ಕೈಗೊಂಡಿದ್ದಾರೆ. ಮೊಬೈಲ್‌ ಸಂಪರ್ಕವನ್ನು ಜಿಯೊದಿಂದ ತಮ್ಮ ನೆಟ್‌ವರ್ಕ್‌ಗೆ ಪೋರ್ಟ್‌ ಮಾಡಿಕೊಂಡರೆ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿದಂತಾಗುತ್ತದೆ ಎಂದು ಪ್ರಚೋದಿಸುತ್ತಿದ್ದಾರೆ’ ಎಂದು ಜಿಯೊ ಆರೋಪಿಸಿದೆ.

ಈ ವಿಚಾರವಾಗಿ ಜಿಯೊ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ (ಟ್ರಾಯ್‌) ದೂರು ಸಲ್ಲಿಸಿದೆ. ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಏರ್‌ಟೆಲ್‌ ಹಾಗೂ ವೊಡಾಫೋನ್‌ ಐಡಿಯಾ ಕಂಪನಿಗಳು ಜಿಯೊ ಆರೋಪವನ್ನು ಅಲ್ಲಗಳೆದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು