ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನುಗುತಿದೆ ಪಾರಂಪರಿಕ ಆಭರಣ

ಇದು ಬಂಗಾರದ ಹಬ್ಬ
Last Updated 6 ಮೇ 2019, 6:11 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ಚಿನ್ನದ ಅವಲಕ್ಕಿ ಸರ ಕೊರಳಲ್ಲಿ ಬಿತ್ತು ಎಂದರೆ ಜನ್ಮ ಸಾರ್ಥಕ ಎನ್ನುವ ಮನೋಭಾವ ಮೈಸೂರಿನ ಮಹಿಳೆಯರದಾಗಿತ್ತು. ಆದರೆ ಅವಲಕ್ಕಿ ಸರ, ಮುಡಿ ಸರ, ಪವಿತ್ರ ಸರಗಳೆಲ್ಲವೂ ಈಗ ಔಟ್‌ ಆಫ್‌ ಫ್ಯಾಷನ್‌. ಈಗ ಏನಿದ್ದರೂ ಹಗುರ (ಲೈಟ್‌ವೇಟ್) ಆಭರಣಗಳ ಯುಗ. ಚಿನ್ನದ ಆಭರಣಗಳಲ್ಲಿ ಹೊಸ ವಿನ್ಯಾಸಗಳು ಅವತರಿಸಿವೆ. ಜನರನ್ನು ಮೋಡಿ ಮಾಡಿವೆ. ಹಾಗೆಂದು ಎಲ್ಲ ಪಾರಂಪರಿಕ ಆಭರಣಗಳ ಹೊಳಪು ಮಾಸಿಲ್ಲ. ಕೆಲವು ‘ಆ್ಯಂಟಿಕ್‌ ಜುವೆಲ್ಲರಿ’ ಹೆಸರಿನಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ.

ಇಲ್ಲಿಯ ಪಾರಂಪರಿಕ ಆಭರಣಗಳಲ್ಲಿ ಮುಂಚೂಣಿಯಲ್ಲಿರುವುದು ಗಂಡಭೇರುಂಡ ವಿನ್ಯಾಸ. ಮೈಸೂರು ರಾಜರ ಲಾಂಛನವಾಗಿರುವುದರಿಂದ ಅದಕ್ಕೆ ಅಷ್ಟು ಮಹತ್ವ. ಅದರಲ್ಲೂ ಕೆಂಪು ಮಾಣಿಕ್ಯದಿಂದ ಮಾಡಿದ ಆಭರಣವೇ ಎಲ್ಲರಿಗೂ ಅಚ್ಚುಮೆಚ್ಚು. ನೆಕ್ಲೇಸ್‌, ಪದಕ, ಡಾಬು, ಕಿವಿಯೋಲೆಯಿಂದ ಹಿಡಿದು ಎಲ್ಲ ಆಭರಣಗಳಲ್ಲೂ ಇದರ ಚಿತ್ರಣ ಕಾಣಬಹುದು.

ಕಡಗದಂತಿರುವ ಬಳೆ ಧರಿಸುವುದು ಮೊದಲಿನಿಂದಲೂ ಮೈಸೂರು ಭಾಗದಲ್ಲಿ ಪುರುಷರ ಫ್ಯಾಷನ್‌. ‘ಸಿಂಹದ ಲಾಟದ ಕಡ’ ಎಂದು ಕರೆಯಲಾಗುವ ಇದನ್ನು ಈಗಲೂ ಮದುವೆ ಗಂಡಿಗಾಗಿ ಮಾಡಿಸುತ್ತಾರೆ.

ರಾಜರ ಕಾಲದಲ್ಲಿ ಹುಲಿಯುಗುರು ಪೆಂಡೆಂಟ್‌ ಮಾಡಿಸುವ ರೂಢಿ ಇತ್ತು. ಈಗ ಹುಲಿಯುಗುರು ತೆಗೆಯುವುದನ್ನು ನಿಷೇಧಿಸಿರುವುದರಿಂದ ಅಂತಹ ಆಭರಣವೂ ಇಲ್ಲವಾಗಿದೆ. ನೂರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ಪಟ್ಟಿ ಬಳೆಗಳು, ಗಟ್ಟಿ ಗೊಲ್ಸು, ಮೆಣಸು ಬಳೆಗಳಂಥ ವಿಧಗಳು ಈಗಲೂ ಜನಪ್ರಿಯವಾಗಿವೆ. ಚಿಕ್ಕಚಿಕ್ಕ ಪಟ್ಟಿಗಳನ್ನ ಕೂಡಿಸಿಟ್ಟಂತೆ ಕಾಣುವ ಬಳೆಗಳನ್ನು ಪಟ್ಟಿ ಬಳೆಗಳೆಂದೂ, ಕರಿಮೆಣಸುಗಳನ್ನು ಪೋಣಿಸಿಟ್ಟಂತೆ ಕಾಣುವ ಶೈಲಿ ಮೆಣಸು ಬಳೆ ಎಂದೇ ಜನಜನಿತವಾಗಿವೆ.

ಈ ಭಾಗದಲ್ಲಿ ಜಡೆಬಿಲ್ಲೆ, ಚೌರಿ ಕುಪ್ಪಿಗೆ, ಚೌರಿ ಕುಚ್ಚುಗಳ ಸೆಟ್‌ ಜನಪ್ರಿಯವಾದರೂ ಬಂಗಾರದಲ್ಲಿ ಅದನ್ನು ಮಾಡಿಸುವವರು ತುಂಬಾ ಅಪರೂಪ. ಡಾಬುಗಳಲ್ಲಿ ಲಕ್ಷ್ಮಿ, ಗಣೇಶ, ಗಂಡಭೇರುಂಡ ಹಾಗೂ ನವಿಲಿನ ಮಾದರಿಯ ವಿನ್ಯಾಸಗಳಿಗೆ ಹೆಚ್ಚಿನ ಬೇಡಿಕೆ ಇವೆ. ತೋಳಿಗೆ ಹಾಕಿಕೊಳ್ಳುವ ವಂಕಿಗಳು ಆಭರಣಗಳಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಸ್ಥಿತಿವಂತರು ಮದುವೆ ಸಂದರ್ಭಗಳಲ್ಲಿ ಇದನ್ನು ಮಾಡಿಸುವುದು ಸಾಮಾನ್ಯ.

ನೆಕ್ಲೇಸ್‌ಗಳಲ್ಲಿ ಲಕ್ಷ್ಮಿ ಕಾಸಿನ ಸರ ಮೈಸೂರಿಗರ ಗುರುತು ಇದ್ದಂತೆ. ಡಾಬಿನಲ್ಲಿ ದಶಾವತಾರದ ವಿನ್ಯಾಸಗಳನ್ನು ಶ್ರೀಮಂತರು ಇಷ್ಟಪಡುತ್ತಿದ್ದಾರೆ. ಇದಕ್ಕೆ ಕನಿಷ್ಠ 200–300 ಗ್ರಾಂ ಚಿನ್ನ ಬೇಕು. ಒಂದೆಳೆ ಚೈನ್‌ ಹಾಕಿ ಅದಕ್ಕೆ ಅಲ್ಲೊಂದು–ಇಲ್ಲೊಂದು ಕರಿಮಣಿ ಹಾಕಿಸುವ ರೂಢಿ ಮೊದಲಿನಿಂದಲೂ ಇದೆ. ಅದರಲ್ಲಿ ಈಗ ಥರಾವರಿ ವಿನ್ಯಾಸಗಳು ಬಂದಿವೆ. ಜುಮುಕಿಗಳಲ್ಲಿ ಲಕ್ಷ್ಮಿ ವಿನ್ಯಾಸ ಹೆಚ್ಚು ಪ್ರಚಲಿತ. ಬೆಳ್ಳಿಯ ಕಾಲಿನ ಕಡಗ ಹಾಕುವ ಪದ್ಧತಿ ಮೈಸೂರಿನಲ್ಲಿ ಮೊದಲು ಇತ್ತು. ಕೆಲಕಾಲದಿಂದ ಅದು ಹಿಂದೆ ಬಿದ್ದರೂ ಈಗ ಮತ್ತೆ ಆ ಫ್ಯಾಷನ್‌ ಬಂದಿದೆ.

‘ಮೈಸೂರಿನ ಪಾರಂಪರಿಕ ವಿನ್ಯಾಸವನ್ನು ಬಂಗಾರ ಹಾಗೂ ಬೆಳ್ಳಿಯಲ್ಲಿ ಪಡಿಮೂಡಿಸುವವರು ಕಡಿಮೆಯಾಗುತ್ತಿದ್ದಾರೆ. ಅಂಥ ಕಲಾವಿದರನ್ನು ಗುರುತಿಸಿ ಅವರ ಕುಟುಂಬದವರಿಂದಲೇ ಮಾಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಮೈಸೂರಿನ ಕೆಲ ಪಾರಂಪರಿಕ ವಿನ್ಯಾಸಗಳು ಈಗ ಕಾಣುತ್ತಿಲ್ಲ. ಕೆಲ ವಿನ್ಯಾಸಗಳು ಮಾತ್ರ ‘ಆ್ಯಂಟಿಕ್‌’ ಹೆಸರಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿವೆ. ಹೊಸ ಫ್ಯಾಷನ್‌ ಆಗಿಯೂ ಟ್ರೆಂಡ್‌ ಸೃಷ್ಟಿಸುತ್ತಿವೆ’ ಎನ್ನುತ್ತಾರೆ ಎ.ಶಂಕರ ಚೆಟ್ಟಿ ಜುವೆಲ್ಲರ್ಸ್‌ನ ಪಾಲುದಾರರಾದ ಧ್ರುಮದಾ ನಂದ್‌.

‘ನವರತ್ನ ಉಂಗುರ ಧರಿಸುವ ಪರಂಪರೆ ಮೈಸೂರಿನಲ್ಲಿ ಇಂದಿಗೂ ಉಳಿದಿದೆ. ಅದನ್ನು ಶಾಸ್ತ್ರವೆಂಬಂತೆ ಜನ ಅನುಸರಿಸುತ್ತಾರೆ. ಮಾಣಿಕ್ಯ, ಪಚ್ಚೆ ಉಂಗುರಗಳನ್ನು ಧರಿಸುವ ಪದ್ಧತಿ ರಾಜರ ಕಾಲದಿಂದಲೂ ಇದ್ದು ಈಗಲೂ ಜನಕ್ಕೆ ಅದೇ ಇಷ್ಟ. ಆ್ಯಂಟಿಕ್‌ ಜುವೆಲರಿಗಳಿಗೆ ಈಗ ಮಹತ್ವ ಹೆಚ್ಚಿದೆ. ಇವು ಯಾವುದೇ ಸಮಾರಂಭಗಳಿಗೂ ಮೆರುಗು ನೀಡುತ್ತವೆ’ ಎಂದು ಎ.ಶಂಕರ ಚೆಟ್ಟಿ ಜುವೆಲರ್ಸ್‌ನ ಮಾಲೀಕ ನಂದಕುಮಾರ್‌ ವಿವರಿಸುತ್ತಾರೆ.

ನೂರಾರು ವರ್ಷಗಳಿಂದ ಬೇಡಿಕೆ
ಮಲ್ಲಿಗೆ ಮೊಗ್ಗು ನೆಕ್ಲೇಸ್‌, ಮಾವಿನಕಾಯಿ ನೆಕ್ಲೇಸ್‌ಗಳು ನೂರಾರು ವರ್ಷಗಳಿಂದ ಈ ಭಾಗದಲ್ಲಿ ಬೇಡಿಕೆ ಹೊಂದಿವೆ. ಬ್ರಾಹ್ಮಣರು ಜಾಗಟೆ ತಾಳಿ ಮಾಡಿಸಿದರೆ, ತಮಿಳರು ಶಂಖ–ಚಕ್ರ ಇರುವಂಥ ವಿನ್ಯಾಸಗಳನ್ನು ತಾಳಿಗಳಲ್ಲಿ ಮಾಡಿಸುತ್ತಾರೆ. ಓಲೆಗಳಲ್ಲಿ ಬಾತುಕೋಳಿ ವಿನ್ಯಾಸದ್ದು, ಎರಡು ಸುತ್ತಿನ ಹರಳು ಇರುವಂಥ ವಿನ್ಯಾಸಗಳೂ ಪಾರಂಪರಿಕ`ವಾಗಿ ಬಂದಿವೆ. ಗುಂಡಿನ ಸರಗಳೂ ಇಲ್ಲಿಯ ಜನರ ಮೆಚ್ಚಿನವು. ಆದರೆ ಈಗ ಬಂಗಾರದ ದರ ಹೆಚ್ಚಾಗಿರುವುದರಿಂದ ಎರಡೆಳೆ, ಐದೆಳೆ ಗುಂಡಿನ ಸರಗಳನ್ನು ಮಾಡಿಸುವವರು ಕಡಿಮೆಯಾಗಿದ್ದಾರೆ.

ಹಳೆಯ ಕಾಲದಲ್ಲಿ ಜನಸಾಮಾನ್ಯರಲ್ಲಿ ‘ಟಿವಿ ಟೈಪ್‌’ ಉಂಗುರ ಖ್ಯಾತವಾಗಿತ್ತು. ಅದರ ನಂತರ ಹಗುರವಾಗಿದ್ದ ಕಪಾಲಿ ಉಂಗುರವೂ ಜನಪ್ರಿಯವಾಗಿತ್ತು. ಈಗ ಅವು ಕಾಣಲಿಕ್ಕೂ ಸಿಗುವುದಿಲ್ಲ. ಮುಸ್ಲಿಂ ಮಹಿಳೆಯರು ಹೆಚ್ಚಾಗಿ ಇಷ್ಟಪಡುತ್ತಿದ್ದ ‘ಗೆಜ್ಜೆ ಅಡ್ಡಿಕೆ’ ಎಂಬ ಕುತ್ತಿಗೆಗೆ ಸುತ್ತಿಕೊಂಡಂತೆ ಕಾಣುವ ಆಭರಣ ಈಗ ಎಲ್ಲ ಮಹಿಳೆಯರಿಗೂ ಇಷ್ಟವಾಗುತ್ತಿದೆ. ಲಕ್ಷ್ಮಿ, ಗಣಪತಿ ಡಾಲರ್‌ಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ.
-ನಾಗಪ್ಪ ಶೆಟ್ಟಿ, ಮೈಸೂರಿನ ಎನ್‌. ನಾಗರಾಜ ಶೆಟ್ಟಿ ಆ್ಯಂಡ್‌ ಸನ್ಸ್‌ ಆಭರಣ ಅಂಗಡಿಯ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT