ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಜೀರೊ ಕಾಸ್ಟ್ ಇಎಂಐ ಅನುಕೂಲವೇ?

Last Updated 11 ಡಿಸೆಂಬರ್ 2022, 20:16 IST
ಅಕ್ಷರ ಗಾತ್ರ
ADVERTISEMENT

ಸ್ಮಾರ್ಟ್‌ಫೋನ್‌, ಬಟ್ಟೆ, ಶೂ, ಫ್ರಿಜ್‌, ವಾಷಿಂಗ್ ಮೆಷಿನ್... ಹೀಗೆ ಯಾವುದಾದರೊಂದು ಹೊಸ ವಸ್ತು ಖರೀದಿಸುವಾಗ ಪೂರ್ತಿ ಹಣ ಪಾವತಿ ಮಾಡಿ ಖರೀದಿಸಬೇಕೋ, ಅಥವಾ ಅದನ್ನು ಇಎಂಐಗೆ (ಸುಲಭ ಮಾಸಿಕ ಕಂತುಗಳ) ಪರಿವರ್ತಿಸಿಕೊಳ್ಳಬೇಕೋ ಎನ್ನುವ ಪ್ರಶ್ನೆ ಎದುರಾಗುತ್ತದೆ. ಬಹಳ ಹಿಂದೆ, ವಸ್ತುಗಳನ್ನು ಖರೀದಿಸುವಾಗ ಸಾಲದ ಅಗತ್ಯವಿದ್ದರೆ ಅದಕ್ಕೆ ಅರ್ಜಿ ಸಲ್ಲಿಸಬೇಕಿತ್ತು, ಸಾಲಕ್ಕೆ ಅನುಮೋದನೆ ಸಿಕ್ಕ ಬಳಿಕವಷ್ಟೇ ಹಣ ಸಿಗುತ್ತಿತ್ತು. ಆದರೆ ಇದು ತಕ್ಷಣಕ್ಕೆ ಸಿಗುವ ‘ಜೀರೊ ಕಾಸ್ಟ್ ಇಎಂಐ’ ಕಾಲ. ಜೀರೊ ಕಾಸ್ಟ್ ಇಎಂಐ ಅಂದರೆ ಏನು? ನಿಜಕ್ಕೂ ಇದರಲ್ಲಿ ಯಾವುದೇ ಬಡ್ಡಿ ಅಥವಾ ಗೋಪ್ಯ ಶುಲ್ಕಗಳ ಹೊರೆ ಇಲ್ಲವೇ? ಇದನ್ನು ಅರ್ಥ ಮಾಡಿಕೊಳ್ಳಲು ಯತ್ನಿಸೋಣ.

ಯಾವುದೇ ಉತ್ಪನ್ನ ಖರೀದಿಸಿದಾಗ ಅದರ ಮೌಲ್ಯವನ್ನು ಸುಲಭ ಕಂತುಗಳಲ್ಲಿ ಪ್ರತಿ ತಿಂಗಳು ಪಾವತಿಸುವ ಅನೂಕಲವನ್ನು ಒದಗಿಸುತ್ತದೆ ‘ಜೀರೊ ಕಾಸ್ಟ್ ಇಎಂಐ’ ಸೌಲಭ್ಯ.

ಉದಾಹರಣೆಗೆ, ಜೀರೊ ಕಾಸ್ಟ್ ಇಎಂಐ ಯೋಜನೆಯ ಅಡಿ, ₹ 18 ಸಾವಿರ ಮೌಲ್ಯದ ಒಂದು ಫ್ರಿಜ್‌ ಕೊಳ್ಳುತ್ತೀರಿ ಎಂದು ಭಾವಿಸಿ. ಹೀಗಿದ್ದಾಗ ಪ್ರತಿ ತಿಂಗಳು ₹ 3 ಸಾವಿರದಂತೆ ಪಾವತಿಸಿ ಮುಂದಿನ 6 ತಿಂಗಳಲ್ಲಿ ಫ್ರಿಜ್‌ ಸಾಲ ತೀರಿಸಲು ಜೀರೊ ಕಾಸ್ಟ್ ಇಎಂಐ ಅನುಕೂಲ ಮಾಡಿಕೊಡುತ್ತದೆ.

ಬಹುಪಾಲು ಸಂದರ್ಭಗಳಲ್ಲಿ ಜೀರೊ ಕಾಸ್ಟ್ ಇಎಂಐ ಹೆಸರಿಗಷ್ಟೇ ‘ಜೀರೊ ಕಾಸ್ಟ್‌’ ಆಗಿರುತ್ತದೆ. ಕೆಲವು ಜೀರೊ ಕಾಸ್ಟ್ ಇಎಂಐಗಳಲ್ಲಿ ಗೋಪ್ಯ ಶುಲ್ಕಗಳಿರುತ್ತವೆ. ಇನ್ನು ಕೆಲವು ಯೋಜನೆಗಳಲ್ಲಿ ವಸ್ತುವಿನ ಎಂಆರ್‌ಪಿ ಬೆಲೆಯ ಜೊತೆ ಇಎಂಐನ ಬಡ್ಡಿ ಸೇರಿಕೊಂಡಿರುತ್ತದೆ! ಮತ್ತೊಂದಷ್ಟರಲ್ಲಿ ಕಂಪನಿಯವರು ವ್ಯಾಪಾರ ಹೆಚ್ಚಿಸಿಕೊಳ್ಳಲು ಜೀರೊ ಕಾಸ್ಟ್ ಇಎಂಐ ಬಡ್ಡಿಯ ಮೊತ್ತವನ್ನು ನಮ್ಮ ಪರವಾಗಿ ತಾವು ತುಂಬುತ್ತಾರೆ. ಹಾಗಾದರೆ, ಜೀರೊ ಕಾಸ್ಟ್ ಇಎಂಐ ಹೆಸರಲ್ಲಿ ನಾಜೂಕಿನ ಮಾರಾಟ ಹೇಗೆ ನಡೆಯುತ್ತದೆ?

1. ವಸ್ತುವಿನ ದರದಲ್ಲೇ ಬಡ್ಡಿ ಸೇರ್ಪಡೆ: ₹ 60 ಸಾವಿರದ ವಾಷಿಂಗ್ ಮೆಶಿನ್ ಖರೀದಿಗೆ ಮುಂದಾಗುತ್ತೀರಿ ಎಂದು ಭಾವಿಸಿ. ಆಗ ಅಂಗಡಿಯವರು, ಇದರ ಖರೀದಿಗೆ ಜೀರೊ ಕಾಸ್ಟ್ ಇಎಂಐ ಇದೆ ಎಂದು ಹೇಳುತ್ತಾರೆ. ₹ 10 ಸಾವಿರದಂತೆ ಆರು ಕಂತುಗಳಲ್ಲಿ ಪಾವತಿಸಬಹುದು ಎಂದು ವಿವರಿಸುತ್ತಾರೆ. ಆಗ ನೀವು ಜೀರೊ ಕಾಸ್ಟ್ ಇಎಂಐ ತೆಗೆದುಕೊಳ್ಳುವುದೋ ಇಲ್ಲ ಒಂದೇ ಬಾರಿ ಪಾವತಿ ಮಾಡಿ ಖರೀದಿಸುವುದೋ ಎನ್ನುವ ಗೊಂದಲಕ್ಕೆ ಬೀಳುತ್ತೀರಿ. ಹೀಗೆ ಗೊಂದಲಕ್ಕೆ ಸಿಲುಕಿ ಒಂದೇ ಬಾರಿ ಪಾವತಿಸಿ ಖರೀದಿಸಿದರೆ ವಾಷಿಂಗ್ ಮೆಷಿನ್ ಬೆಲೆ ಎಷ್ಟು ಎಂದು ಕೇಳುತ್ತೀರಿ. ಒಮ್ಮೆಗೇ ಪಾವತಿಸಿದರೆ ಬೆಲೆ ₹ 57 ಸಾವಿರ, ಜೀರೊ ಕಾಸ್ಟ್ ಇಎಂಐ ಅಡಿಯಲ್ಲಿ ₹ 60 ಸಾವಿರ ಎಂದು ವಿವರಿಸುತ್ತಾರೆ. ಅಂದರೆ ವಾಷಿಂಗ್ ಮೆಷಿನ್‌ನ ಅಸಲಿ ಬೆಲೆ ₹ 57 ಸಾವಿರವಾಗಿದ್ದು, ₹ 3 ಸಾವಿರ ಬಡ್ಡಿ ಬೆಲೆಯಲ್ಲೇ ಅಡಕವಾಗಿದೆ ಎಂದಾಯಿತು. ಹೀಗೆ ವಸ್ತುವಿನ ಬೆಲೆಯಲ್ಲೇ ಬಡ್ಡಿ ಸೇರಿಸುವ ಜಾಣ್ಮೆ ಕೆಲವು ಜೀರೊ ಕಾಸ್ಟ್‌ ಇಎಂಐಗಳಲ್ಲಿರುತ್ತದೆ.

2. ನಿರ್ವಹಣಾ ಶುಲ್ಕ ಪಡೆಯುವುದು: ಸ್ಮಾರ್ಟ್‌ಫೋನ್‌ ಖರೀದಿಗೆ ಮುಂದಾಗುತ್ತೀರಿ ಎಂದು ಭಾವಿಸಿ. ಅಂಗಡಿಯವರರು ನಿಮಗೆ ಸ್ಮಾರ್ಟ್‌ಫೋನ್‌ ಮಾದರಿಗಳನ್ನು ತೋರಿಸುವಾಗ, ‘ಸರ್, ನೋಡಿ ಈ ₹ 30 ಸಾವಿರದ ಸ್ಮಾರ್ಟ್‌ಫೋನ್‌ ತಗೊಂಡ್ರೆ ಆರು ತಿಂಗಳಿಗೆ ಜೀರೊ ಕಾಸ್ಟ್‌ ಇಎಂಐ ಸಿಗುತ್ತೆ. ಆದ್ರೆ ಬರೀ ₹ 1 ಸಾವಿರ ನಿರ್ವಹಣಾ ಶುಲ್ಕ ಕಟ್ಟಬೇಕು’ ಎಂದು ಹೇಳುತ್ತಾರೆ.

ಇಲ್ಲಿ ಸಾಲಕ್ಕೆ ಬಡ್ಡಿ ನೇರವಾಗಿ ಕೇಳುತ್ತಿಲ್ಲ, ಬದಲಿಗೆ ನಿರ್ವಹಣಾ ಶುಲ್ಕದ ರೂಪದಲ್ಲಿ ₹ 1 ಸಾವಿರ ಪಡೆಯುತ್ತಿದ್ದಾರೆ. ಅಂದರೆ ಪರೋಕ್ಷವಾಗಿ ₹ 1 ಸಾವಿರ ಬಡ್ಡಿ ಕಟ್ಟಿದಂತೆ ಆಯಿತು. ಅದಕ್ಕೇ ಹೇಳುವುದು ಜೀವನದಲ್ಲಿ ಯಾವುದೂ ಉಚಿತವಾಗಿ ಸಿಗದು ಎಂದು!

3. ಇಎಂಐ ಕನ್ವರ್ಶನ್ ಬೇಡ: ಬಹಳಷ್ಟು ಮಂದಿ ಕ್ರೆಡಿಟ್ ಕಾರ್ಡ್ ಬಳಸಿ ವಸ್ತು ಖರೀದಿಸಿದ ಮೇಲೆ ಅದನ್ನು ಇಎಂಐ ಆಗಿ ಪರಿವರ್ತಿಸಿಕೊಳ್ಳುತ್ತಾರೆ. ಇದು ಬಹಳ ದೊಡ್ಡ ತಪ್ಪು. ಕ್ರೆಡಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಖರೀದಿಸಿದ ಮೇಲೆ ನಿರ್ದಿಷ್ಟ ಮೊತ್ತವನ್ನು ಇಎಂಐ ಆಗಿ ಪರಿವರ್ತಿಸಿಕೊಂಡರೆ ದೊಡ್ಡ ಮೊತ್ತದ ಬಡ್ಡಿ ಹೊರೆ ಹೊರಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಸಾಲಕ್ಕೆ ಶೇ 30ರಿಂದ ಶೇ 45ರವರೆಗೆ ಬಡ್ಡಿ ಕಟ್ಟಬೇಕಾಗುತ್ತದೆ. ಹಾಗಾಗಿ ಯಾರೂ ಈ ತಪ್ಪನ್ನು ಮಾಡಬಾರದು.

4. ನೈಜ ಜೀರೊ ಕಾಸ್ಟ್ ಇಎಂಐ: ಕೆಲವು ಖರೀದಿಗಳಲ್ಲಿ ವಾಸ್ತವದಲ್ಲಿ ಜೀರೊ ಕಾಸ್ಟ್‌ ಇಎಂಐ ಲಾಭ ಸಿಗುತ್ತದೆ. ಉದಾಹರಣೆಗೆ, ಕೆಲವು ಆನ್‌ಲೈನ್ ಮಾರಾಟ ಕಂಪನಿಗಳು ಹಬ್ಬದ ಸಂದರ್ಭಗಳಲ್ಲಿ ಖರೀದಿಸುವ ಗ್ರಾಹಕರಿಗೆ ಜೀರೊ ಕಾಸ್ಟ್‌ ಇಎಂಐ ಸೌಲಭ್ಯ ಕಲ್ಪಿಸುತ್ತವೆ. ಜೀರೊ ಕಾಸ್ಟ್‌ನ ನಿರ್ವಹಣಾ ಶುಲ್ಕ ಅಥವಾ ಬಡ್ಡಿ ಪಾವತಿಗೆ ಬ್ಯಾಂಕ್‌ಗಳೊಂದಿಗೆ ಕಂಪನಿಯವರು ಒಡಂಬಡಿಕೆ ಮಾಡಿಕೊಂಡಿರುತ್ತಾರೆ. ತಮಗೆ ಹೆಚ್ಚು ವ್ಯಾಪಾರ ಆಗಬೇಕು ಎನ್ನುವ ದೃಷ್ಟಿಯಿಂದ ಕೆಲವು ಖರೀದಿಗಳಿಗೆ ಮಾತ್ರ ಸಂಪೂರ್ಣ ಜೀರೊ ಕಾಸ್ಟ್ ಇಎಂಐಗಳನ್ನು ಕಂಪನಿಗಳು ಕೊಡುತ್ತವೆ. ಇಲ್ಲಿ ಗ್ರಾಹಕರಿಗೆ ಲಾಭವಾಗುತ್ತದೆ.

ಕುಸಿದ ಷೇರುಪೇಟೆ ಸೂಚ್ಯಂಕಗಳು

ಸತತ ಎರಡು ವಾರ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಮತ್ತೆ ಕುಸಿತದ ಹಾದಿ ತುಳಿದಿವೆ. ಡಿಸೆಂಬರ್ 9ಕ್ಕೆ ಕೊನೆಗಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಇಳಿಕೆಯಾಗಿವೆ. 62,181 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.09ರಷ್ಟು ತಗ್ಗಿದೆ. 18,496 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.06ರಷ್ಟು ಇಳಿಕೆ ದಾಖಲಿಸಿದೆ.

ಆರ್‌ಬಿಐ ರೆಪೊ ದರ ಹೆಚ್ಚಳ ಮಾಡಿದ್ದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡ ಸೇರಿದಂತೆ ಹಲವು ಅಂಶಗಳು ಸೂಚ್ಯಂಕಗಳ ಮೇಲೆ ಪ್ರಭಾವ ಬೀರಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂತ ಶೇ 6ರಷ್ಟು ಕುಸಿದಿದೆ. ನಿಫ್ಟಿ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 3.4ರಷ್ಟು, ನಿಫ್ಟಿ ಎನರ್ಜಿ, ಫಾರ್ಮಾ ಮತ್ತು ಮಾಧ್ಯಮ ಸೂಚ್ಯಂಕಗಳು ತಲಾ ಶೇ 2ರಷ್ಟು ತಗ್ಗಿವೆ. ಮತ್ತೊಂದೆಡೆ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ 4.7ರಷ್ಟು ಮತ್ತು ಎಫ್‌ಎಂಸಿಜಿ ಸೂಚ್ಯಂಕ ಶೇ 2.2ರಷ್ಟು ಹೆಚ್ಚಳ
ಕಂಡಿವೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 4,305.97 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ₹ 3,712.08 ಕೋಟಿ ಮೌಲ್ಯದ ಷೇರುಗಳನ್ನು ದೇಶಿ ಸಾಂಸ್ಥಿಕ ಹೂಡಿಕೆದಾರರು ಖರೀದಿಸಿದ್ದಾರೆ. ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಮೈಂಡ್ ಟ್ರೀ, ಎಚ್‌ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರ, ಜೊಮಾಟೊ, ಐಸಿಐಸಿಐ ಪ್ರೂಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿ ಮತ್ತು ಟಾಟಾ ಮೋಟರ್ಸ್ ಕುಸಿತ ಕಂಡಿವೆ. ಬ್ಯಾಂಕ್ ಆಫ್ ಬರೋಡ, ಸೀಮನ್ಸ್, ಗೋದ್ರೆಜ್ ಕನ್ಸೂಮರ್ ಪ್ರಾಡಕ್ಟ್ಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಹಿಂದೂಸ್ಥಾನ್ ಯುನಿಲಿವರ್ ಮತ್ತು ಇಂಟರ್‌ಗ್ಲೋಬ್ ಏವಿಯೇಷನ್ ಶೇ 4ರಿಂದ ಶೇ 10ರಷ್ಟು ಗಳಿಕೆ ಕಂಡಿವೆ.

ಮುನ್ನೋಟ: ಈ ವಾರ ಭಾರತ, ಅಮೆರಿಕ ಮತ್ತು ಬ್ರಿಟನ್ನಿನ ಹಣದುಬ್ಬರದ ದತ್ತಾಂಶಗಳು ಹೊರಬೀಳಲಿವೆ. ಹೂಡಿಕೆದಾರರು ಈ ಅಂಕಿ-ಅಂಶಗಳನ್ನು ಗಮನಿಸಲಿದ್ದಾರೆ. ಇದಲ್ಲದೆ ಅಮೆರಿಕ ಮತ್ತು ಬ್ರಿಟನ್‌ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಪ್ರಕಟಿಸಲಿವೆ. ಈ ಬೆಳವಣಿಗೆಗಳ ಜೊತೆಗೆ ದೇಶಿಯ ವಿದ್ಯಮಾನಗಳು ಸಹಿತ ಷೇರು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT