ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಗೃಹ ಸಾಲದ ಹೊರೆ ಇಳಿಸಲು 4 ಮಾರ್ಗಗಳು

Published 14 ಮೇ 2023, 21:22 IST
Last Updated 14 ಮೇ 2023, 21:22 IST
ಅಕ್ಷರ ಗಾತ್ರ

ಕಳೆದ ಒಂದು ವರ್ಷದಲ್ಲಿ ಬ್ಯಾಂಕುಗಳು ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಗಣನೀಯವಾಗಿ ಹೆಚ್ಚಳ ಮಾಡಿವೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರ, ಅಂದರೆ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವನ್ನು, ಶೇಕಡ 6.5ಕ್ಕೆ ಹೆಚ್ಚಳ ಮಾಡಿರುವುದರಿಂದ ಬ್ಯಾಂಕ್ ಸಾಲಗಳ ಬಡ್ಡಿ ಕೂಡ ತುಟ್ಟಿಯಾಗಿದೆ. ಬ್ಯಾಂಕ್ ಸಾಲಗಳ ಬಡ್ಡಿ ಹೆಚ್ಚಳದಿಂದ ಮಾಸಿಕ ಮರುಪಾವತಿ ಕಂತು (ಇಎಂಐ) ಜಾಸ್ತಿಯಾಗಿದೆ. ಕೆಲವು ಸಾಲಗಳ ಮರುಪಾವತಿ ಅವಧಿ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಗೃಹ ಸಾಲದ ಹೊರೆ ಇಳಿಸಿಕೊಳ್ಳುವುದು ಹೇಗೆ?

1. ಡೌನ್ ಪೇಮೆಂಟ್ ಜಾಸ್ತಿ ಮಾಡುವುದು: ಬ್ಯಾಂಕುಗಳು ಸಾಮಾನ್ಯವಾಗಿ ಮನೆಯ ಮೌಲ್ಯದ ಆಧಾರದಲ್ಲಿ ಶೇ 80ರಿಂದ ಶೇ 90ರಷ್ಟು ಸಾಲ ಕೊಡಲು ತಯಾರಿರುತ್ತವೆ. ಆದರೆ ನೀವು ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಮೊತ್ತವನ್ನು ಡೌನ್‌ಪೇಮೆಂಟ್ ಮಾಡುವುದು ಒಳಿತು. ಹೀಗೆ ಮಾಡಿದಾಗ ಬ್ಯಾಂಕಿನಿಂದ ಪಡೆದುಕೊಳ್ಳುವ ಸಾಲದ ಮೊತ್ತ ತಗ್ಗುತ್ತದೆ. ಕಡಿಮೆ ಮೊತ್ತದ ಸಾಲ ಪಡೆದಾಗ ಮಾಸಿಕ ಕಂತಿನ (ಇಎಂಐ) ಮೊತ್ತ ಕಡಿಮೆಯಾಗುತ್ತದೆ, ದೀರ್ಘಾವಧಿಯಲ್ಲಿ ಬಡ್ಡಿ ರೂಪದಲ್ಲಿ ಬ್ಯಾಂಕಿಗೆ ಪಾವತಿಸುವ ದೊಡ್ಡ ಮೊತ್ತದ ಹಣ ಉಳಿತಾಯವಾಗುತ್ತದೆ. ಡೌನ್‌ಪೇಮೆಂಟ್ ಹೆಚ್ಚಿಗೆ ಮಾಡುವುದರಿಂದ ಪಡೆದುಕೊಳ್ಳುವ ಸಾಲಕ್ಕೆ ಬದ್ಧರಾಗಿರುತ್ತೀರಿ ಎಂದು ಬ್ಯಾಂಕಿನವರಿಗೆ ವಿಶ್ವಾಸ ಮೂಡುತ್ತದೆ.

ಆದ್ದರಿಂದ ಅವರು ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲ ಕೊಡುವ ಸಾಧ್ಯತೆ ಹೆಚ್ಚಾಗುತ್ತದೆ.

2. ಅವಧಿಗೆ ಮುನ್ನ ಮರುಪಾವತಿ ಮಾಡಿ: ಗೃಹ ಸಾಲವನ್ನು ಅವಧಿಗೆ ಮೊದಲೇ ತೀರಿಸಲು ಯತ್ನಿಸಿ. ಅಂದರೆ, ಸಾಲದ ಅಸಲಿನ ಮೊತ್ತಕ್ಕೆ ಮಾಸಿಕ ಕಂತು (ಇಎಂಐ) ಹೊರತುಪಡಿಸಿ ಹೆಚ್ಚುವರಿ ಮೊತ್ತವನ್ನು ಪಾವತಿ ಮಾಡಿ. ಸರಳವಾಗಿ ಹೇಳುವುದಾದರೆ ಸಾಲದ ಕಂತಿನ ಜೊತೆ ಎಷ್ಟು ಸಾಧ್ಯವೋ ಅಷ್ಟು ಹೆಚ್ಚುವರಿ ಮೊತ್ತವನ್ನ ಸಾಲಕ್ಕೆ ಪಾವತಿ ಮಾಡುತ್ತಾ ಹೋಗಿ. ಬ್ಯಾಂಕಿನವರು ಗೃಹ ಸಾಲದ ಅಸಲಿನ ಮೊತ್ತ ಎಷ್ಟು ಬಾಕಿ ಇದೆ ಎನ್ನುವುದನ್ನು ಆಧರಿಸಿ ಬಡ್ಡಿಯ ಮೊತ್ತ ಲೆಕ್ಕ ಹಾಕುವ ಕಾರಣ, ಎಷ್ಟು ಬೇಗ ಅಸಲು ತೀರಿಸುತ್ತೀರೋ ಅಷ್ಟು ಅನುಕೂಲ ನಿಮಗಾಗುತ್ತದೆ. ಉದಾಹರಣೆಗೆ ನೀವು 20 ವರ್ಷಗಳ ಅವಧಿಗೆ ಶೇ 8ರ ಬಡ್ಡಿ ದರದಲ್ಲಿ ₹50 ಲಕ್ಷ ಸಾಲ ಪಡೆದಿದ್ದರೆ ಮಾಸಿಕ ಕಂತು (ಇಎಂಐ) ₹43 ಸಾವಿರ ಆಗುತ್ತದೆ. ನೀವು ₹5 ಲಕ್ಷವನ್ನು ಮೊದಲೇ ತೀರಿಸಿದರೆ, ಮಾಸಿಕ ಕಂತಿನ ಮೊತ್ತ ₹38,500 ಆಗುತ್ತದೆ. ಫ್ಲೋಟಿಂಗ್ ಬಡ್ಡಿ ದರದಲ್ಲಿ ಸಾಲ ಪಡೆದಿದ್ದರೆ ಬಹುತೇಕ ಬ್ಯಾಂಕುಗಳು ಯುವುದೇ ದಂಡ ವಿಧಿಸದೆ, ಗೃಹ ಸಾಲ ಪಡೆದ 6 ತಿಂಗಳ ಬಳಿಕ ಪ್ರೀಪೇಮೆಂಟ್‌ಗೆ ಅವಕಾಶ ಕಲ್ಪಿಸುತ್ತವೆ.

ಒಂದೊಮ್ಮೆ ನಿಶ್ಚಿತ ಬಡ್ಡಿ ದರದಲ್ಲಿ ಸಾಲ ಪಡೆದಿದ್ದರೆ ಕೆಲವು ಬ್ಯಾಂಕುಗಳು ಪ್ರೀಪೇಮೆಂಟ್ ಶುಲ್ಕ ಹಾಕುತ್ತವೆ. ಸಾಲ ಪಡೆಯುವಾಗ ಪ್ರೀಪೇಮೆಂಟ್‌ ನಿಬಂಧನೆಗಳು ಏನಿವೆ ಎಂದು ಅರಿತು ಮುನ್ನಡೆಯುವುದು ಮುಖ್ಯ.

3. ಫ್ಲೋಟಿಂಗ್ ಬಡ್ಡಿ ಆಯ್ಕೆ ಮಾಡಿಕೊಳ್ಳಿ: ಫಿಕ್ಸೆಡ್ ಬಡ್ಡಿ ದರದಲ್ಲಿ ಸಾಲ ಪಡೆಯುವುದಕ್ಕಿಂತ ಫ್ಲೋಟಿಂಗ್ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದರೆ ಹೆಚ್ಚು ಅನುಕೂಲ. ಫ್ಲೋಟಿಂಗ್ ಬಡ್ಡಿ ದರದಲ್ಲಿ ಗೃಹ ಸಾಲ ಪಡೆದಾಗ ಬಡ್ಡಿ ದರ ಒಂದೇ ರೀತಿಯಲ್ಲಿ ನಿಗದಿಯಾಗಿರುವುದಿಲ್ಲ, ಮಾರುಕಟ್ಟೆಯಲ್ಲಿರುವ ಬಡ್ಡಿ ದರಕ್ಕೆ ಅನುಗುಣವಾಗಿ ಏರಿಳಿತ ಕಾಣುತ್ತಿರುತ್ತದೆ.

ಫ್ಲೋಟಿಂಗ್ ಸಾಲದ ಮೇಲಿನ ಬಡ್ಡಿ ದರಗಳು ಮಾರುಕಟ್ಟೆಯಲ್ಲಿ ಕಡಿಮೆ ಆದಾಗ ಅದರ ಲಾಭ ನಿಮಗೂ ಸಿಗುತ್ತದೆ. ನಿಮ್ಮ ಮಾಸಿಕ ಕಂತಿನ ಮೊತ್ತ ಕಡಿಮೆ ಆಗುತ್ತದೆ. ಉದಾಹರಣೆಗೆ ಶೇ 8.5ರ ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ₹50 ಲಕ್ಷ ಸಾಲ ಪಡೆದಿದ್ದೀರಿ ಎಂದಿಟ್ಟುಕೊಳ್ಳಿ. ಇಂತಹ ಸನ್ನಿವೇಶದಲ್ಲಿ ಮಾಸಿಕ ₹43,391 ಇಎಂಐ ಪಾವತಿಸಬೇಕಾಗುತ್ತದೆ. ಬಡ್ಡಿ ದರ ಶೇ 7.5ಕ್ಕೆ ಇಳಿದರೆ ಮಾಸಿಕ ಕಂತು ₹40,881 ಆಗುತ್ತದೆ. ಈ ರೀತಿ ಫ್ಲೋಟಿಂಗ್ ಬಡ್ಡಿ ದರದಿಂದ ಸಹಾಯವಾಗುತ್ತದೆ. ಆದರೆ ಫ್ಲೋಟಿಂಗ್ ಬಡ್ಡಿ ದರದಲ್ಲಿ ಬಡ್ಡಿ ದರ ಹೆಚ್ಚಳವಾಗುವ ಸಾಧ್ಯತೆಯೂ ಇರುತ್ತದೆ. ಅದನ್ನು ಅರಿತು ಮುನ್ನಡೆಯಬೇಕಾಗುತ್ತದೆ.

4. ಹೋಮ್ ಲೋನ್ ಸ್ವಿಚ್: ನೀವು ₹50 ಲಕ್ಷ ಸಾಲ ಪಡೆದಿದ್ದು ಸದ್ಯ ಬ್ಯಾಂಕಿನಲ್ಲಿ ಶೇ 9.5ರಷ್ಟು ಬಡ್ಡಿ ನಿಗದಿ ಮಾಡಿದ್ದಾರೆ ಎಂದು ಭಾವಿಸೋಣ. ಮತ್ತೊಂದು ಬ್ಯಾಂಕಿನಲ್ಲಿ ನಿಮಗೆ ಶೇ 8.5ರ ಬಡ್ಡಿ ದರದಲ್ಲಿ ಸಾಲ ಸಿಕ್ಕರೆ ಹೋಮ್ ಲೋನ್ ಸ್ವಿಚ್ ಮಾಡಿಕೊಂಡು ಆ ಸಾಲವನ್ನು ಅದೇ ಬ್ಯಾಂಕಿಗೆ ವರ್ಗಾವಣೆ ಮಾಡಿಕೊಳ್ಳಬಹುದು. ಹೀಗೆ ಸಾಲ ವರ್ಗಾವಣೆ ಮಾಡಲು ಮುಂದಾಗುವಾಗ ನಿಮಗೆ ಯಾವ ಬ್ಯಾಂಕಿನಿಂದ ಹೆಚ್ಚು ಅನುಕೂಲ ಸಿಗುತ್ತದೆ ಎಂದು ಮನಗಂಡು ಮುಂದುವರಿಯಬೇಕು. ಹೆಚ್ಚು ಶುಲ್ಕ ವಿಧಿಸದ, ಪ್ರೀಪೇಮೆಂಟ್ ನಿಬಂಧನೆಗಳನ್ನು ಹೇರದ ಬ್ಯಾಂಕಿಗೆ ಗೃಹ ಸಾಲ ವರ್ಗಾವಣೆ ಮಾಡಿಕೊಂಡರೆ ಹೆಚ್ಚು ಅನುಕೂಲ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT