ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಣಕಾಸು ಸಾಕ್ಷರತೆ: ದುಡ್ಡು ವೇಗವಾಗಿ ಬೆಳೆಸುವುದು ಹೇಗೆ?

Published 10 ಜೂನ್ 2024, 0:00 IST
Last Updated 10 ಜೂನ್ 2024, 0:00 IST
ಅಕ್ಷರ ಗಾತ್ರ

ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತದ ಹಣ ಬೇಕು ಎಂದು ಅನೇಕರು ಭಾವಿಸುತ್ತಾರೆ. ಆದರೆ, ಕೇವಲ ₹100ರಿಂದ ₹500 ಇದ್ದರೂ ಸಾಕು ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಶುರು ಮಾಡಬಹುದು.

ಸಣ್ಣ ಮೊತ್ತದ ಹೂಡಿಕೆಯಿಂದಲೂ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತ ಗಳಿಸಿಕೊಳ್ಳಬಹುದು. ಪ್ರತಿ ತಿಂಗಳು ಬರೀ ₹6 ಸಾವಿರ ಎಸ್‌ಐಪಿ ಮಾಡುವ ಮೂಲಕ ₹10 ಕೋಟಿ ಗಳಿಕೆಯ ಗುರಿ ತಲುಪಬಹುದು. ಇದು ಅಸಾಧ್ಯದ ಮಾತು ಅಂತ ನಿಮಗೆ ಅನಿಸಬಹುದು. ಆದರೆ, ಮ್ಯೂಚುಯಲ್ ಫಂಡ್‌ನಲ್ಲಿ ಬೇಗ ಹೂಡಿಕೆ ಆರಂಭಿಸಿ ಶಿಸ್ತುಬದ್ಧವಾಗಿ ಹೂಡಿಕೆ ಮೊತ್ತವನ್ನು ಪ್ರತಿವರ್ಷ ಹೆಚ್ಚಳ ಮಾಡುತ್ತಾ ಹೋದರೆ ವೇಗವಾಗಿ ದುಡ್ಡನ್ನು ಬೆಳೆಸಲು ಸಾಧ್ಯ.

ಬೇಗ ಹೂಡಿಕೆ ಆರಂಭಿಸಿದರೆ ಆಗುವ ಲಾಭವೇನು?: ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೂಡಿಕೆ ಆರಂಭಿಸುವುದರಿಂದ ಹಣಕಾಸಿನ ಗುರಿಗಳನ್ನು ಸಲೀಸಾಗಿ ತಲುಪುವುದು ಸಾಧ್ಯವಾಗುತ್ತದೆ. ಹೂಡಿಕೆಯನ್ನು ದೀರ್ಘಾವಧಿಗೆ ಮಾಡಿದಾಗ ಹಣದ ಬೆಳವಣಿಗೆಗೆ ಕಾಲಾವಕಾಶ ಸಿಗುವುದರಿಂದ ಕಡಿಮೆ ಮೊತ್ತದ ಹೂಡಿಕೆಯಿಂದಲೂ ದೊಡ್ಡ ಮೊತ್ತ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ಉದಾಹರಣೆಗೆ 25 ವರ್ಷದ ರಾಮ ಎನ್ನುವ ವ್ಯಕ್ತಿ ಹೂಡಿಕೆ ಮಾಡಿ 60ನೇ ವಯಸ್ಸಿನ ಒಳಗಾಗಿ ₹10 ಕೋಟಿ ಗಳಿಸುವ ಗುರಿ ಹೊಂದಿರುತ್ತಾನೆ. ಆತ ಈಕ್ವಿಟಿ ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡಲು ತೀರ್ಮಾನಿಸಿದ್ದು, ಪ್ರತಿ ವಾರ್ಷಿಕ ಶೇ 12ರಷ್ಟು ಗಳಿಕೆ ನಿರೀಕ್ಷಿಸಿದ್ದಾನೆ. ಈ ಲೆಕ್ಕಾಚಾರದಂತೆ ರಾಮ ₹10 ಕೋಟಿ ಗುರಿ ತಲುಪಬೇಕಾದರೆ ಮುಂದಿನ 35 ವರ್ಷಗಳ ಕಾಲ ಪ್ರತಿ ತಿಂಗಳು ₹15,500 ಎಸ್ಐಪಿ ಹೂಡಿಕೆ ಮಾಡಬೇಕಾಗುತ್ತದೆ.

ರಾಮನ ಸ್ನೇಹಿತ ಶ್ಯಾಮ 30 ವರ್ಷದವನಾಗಿದ್ದು, ಆತನೂ ತನ್ನ 60ನೇ ವಯಸ್ಸಿನ ವೇಳೆಗೆ ₹10 ಕೋಟಿ ಗಳಿಸುವ ಗುರಿ ಇಟ್ಟುಕೊಂಡಿದ್ದಾನೆ. ಶ್ಯಾಮ ಸಹ ಈಕ್ವಿಟಿ ಮ್ಯೂಚುಯಲ್ ಫಂಡ್‌ನಲ್ಲಿ ಹೂಡಲು ತೀರ್ಮಾನಿಸಿದ್ದು, ಶೇ 12ರ ಗಳಿಕೆ ಅಂದಾಜಿಸಿದ್ದಾನೆ. ಈ ಪ್ರಕಾರ ಶ್ಯಾಮ ಪ್ರತಿ ತಿಂಗಳು ಮುಂದಿನ 30 ವರ್ಷಗಳ ಕಾಲ ಮ್ಯೂಚುಯಲ್ ಫಂಡ್ ಎಸ್ಐಪಿಗೆ ₹28,613 ತೊಡಗಿಸಬೇಕಾಗುತ್ತದೆ. ಆಗ ಮಾತ್ರ ₹10 ಕೋಟಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ.

ಅರೆ! ರಾಮ ಪ್ರತಿ ತಿಂಗಳು ₹15,500 ಹೂಡಿಕೆ ಮಾಡಿದರೆ ಸಾಕು ₹10 ಕೋಟಿಯ ಗುರಿ ತಲುಪುತ್ತಾನೆ. ಆದರೆ, ಶ್ಯಾಮ ಏಕೆ ಪ್ರತಿ ತಿಂಗಳು ₹28,613 ಹೂಡಿಕೆ ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ಇಲ್ಲಿ ಗಮನಿಸಬೇಕಾದ ಅಂಶ ಹೂಡಿಕೆಯ ಸಮಯ. ರಾಮ 25ನೇ ವಯಸ್ಸಿಗೆ ಹೂಡಿಕೆ ಶುರು ಮಾಡುತ್ತಾನೆ. ಶ್ಯಾಮ 30ನೇ ವಯಸ್ಸಿಗೆ ಹೂಡಿಕೆ ಆರಂಭಿಸುತ್ತಾನೆ. ರಾಮನಿಗೆ ಹೂಡಿಕೆಗೆ 35 ವರ್ಷ ಸಮಯ ಸಿಕ್ಕರೆ ಶ್ಯಾಮನಿಗೆ ಬರೀ 30 ವರ್ಷ ಸಮಯ ಸಿಗುತ್ತದೆ.

ಹೆಚ್ಚು ಹೂಡಿಕೆ ಸಮಯವಿದ್ದಾಗ ಹೂಡಿಕೆ ಮೊತ್ತ ಕಡಿಮೆಯಿದ್ದರೂ ದೊಡ್ಡ ಮೊತ್ತ ಪೇರಿಸಿ ಹೂಡಿಕೆಯ ಗುರಿ ಸೇರಲು ಸಾಧ್ಯವಾಗುತ್ತದೆ. ಆದರೆ, ಹೂಡಿಕೆ ಸಮಯ ಕಡಿಮೆಯಾದರೆ ಹೂಡಿಕೆ ಗುರಿ ತಲುಪಲು ದೊಡ್ಡ ಮೊತ್ತವನ್ನು ತೊಡಗಿಸಬೇಕಾಗುತ್ತದೆ. ಒಟ್ಟಾರೆಯಾಗಿ ಹೂಡಿಕೆ ಮಾಡಿದ ಹಣದ ಬೆಳವಣಿಗೆಗೆ ಎಷ್ಟು ಸಮಯ ಸಿಗುತ್ತದೆ ಎನ್ನುವುದು ಇಲ್ಲಿ ಮುಖ್ಯವಾಗುತ್ತದೆ.

ಹೂಡಿಕೆ ಮಾಡಲು ದೊಡ್ಡ ಮೊತ್ತವಿಲ್ಲದಿದ್ದರೆ ಏನು ಮಾಡಬೇಕು?:

ಮೇಲಿನ ಉದಾಹರಣೆಯಂತೆ 25 ವರ್ಷ ವಯಸ್ಸಿನ ರಾಮ ನಿವೃತ್ತಿ ವೇಳೆಗೆ ₹10 ಕೋಟಿ ಗಳಿಸಲು ಮುಂದಿನ 35 ವರ್ಷಗಳ ಕಾಲ ಪ್ರತಿ ತಿಂಗಳು ₹15,500 ತೊಡಗಿಸಬೇಕಾಗುತ್ತದೆ. 30 ವರ್ಷದ ಶ್ಯಾಮ ನಿವೃತ್ತಿ ಜೀವನಕ್ಕೆ ₹10 ಕೋಟಿ  ಗಳಿಸಲು ಮುಂದಿನ 30 ವರ್ಷಗಳ ಕಾಲ ಪ್ರತಿ ತಿಂಗಳು ₹28,613  ಹೂಡಬೇಕಾಗುತ್ತದೆ. ಆದರೆ, ಎಷ್ಟೋ ಮಂದಿಗೆ ಪ್ರತಿ ತಿಂಗಳು ₹10 ಸಾವಿರ, ₹15 ಸಾವಿರ, ₹20 ಸಾವಿರ ಹೂಡುವುದೂ ಕಷ್ಟವಾಗುತ್ತದೆ. ಅಂತಹವರು ಸಣ್ಣ ಮೊತ್ತದಿಂದ ಮ್ಯೂಚುಯಲ್ ಫಂಡ್ ಹೂಡಿಕೆ ಆರಂಭಿಸಿ ಪ್ರತಿವರ್ಷ ಶೇ 10‌ರಿಂದ ಶೇ 15ರಷ್ಟು ಹೂಡಿಕೆ ಮೊತ್ತವನ್ನು ಹೆಚ್ಚಿಸಿಕೊಳುತ್ತಾ ಹೋಗಬೇಕು. ಹೀಗೆ ಮಾಡುವುದರಿಂದಲೂ ಸಹಿತ ನಿಗದಿತ ಹಣಕಾಸಿನ ಗುರಿ ತಲುಪಲು ಸಾಧ್ಯವಾಗುತ್ತದೆ. ಅದು ಹೇಗೆ ಎನ್ನುವುದನ್ನು ಮುಂದೆ ಓದಿ.

₹6 ಸಾವಿರದಿಂದ ₹10 ಕೋಟಿ ಗಳಿಕೆ ಹೇಗೆ?:

25 ವರ್ಷದ ವ್ಯಕ್ತಿ ಪ್ರತಿ ತಿಂಗಳು ₹6 ಸಾವಿರವನ್ನು ಮ್ಯೂಚುಯಲ್ ಫಂಡ್ ಎಸ್ಐಪಿಯಲ್ಲಿ ತೊಡಗಿಸಲು ಆರಂಭಿಸಿ ಪ್ರತಿವರ್ಷ ಎಸ್ಐಪಿ ಹೂಡಿಕೆ ಮೊತ್ತದಲ್ಲಿ ಶೇ 10ರಷ್ಟು ಹೆಚ್ಚಳ ಮಾಡುತ್ತಾ 60 ವರ್ಷಗಳ ವರೆಗೆ ಹೂಡಿಕೆ ಮಾಡಿದರೆ ₹10 ಕೋಟಿ ಗಳಿಸಲು ಸಾಧ್ಯ.

ಈ ಲೆಕ್ಕಾಚಾರದಂತೆ ಮೊದಲನೇ ವರ್ಷ ಪ್ರತಿ ತಿಂಗಳು ಎಸ್ಐಪಿ ಹೂಡಿಕೆ ಮೊತ್ತ ₹6,000 ಇರುತ್ತದೆ. ಎರಡನೇ ವರ್ಷ ₹6,600, ಮೂರನೇ ವರ್ಷ ₹7,260 ಆಗುತ್ತದೆ. ಎಸ್ಐಪಿ ಹೂಡಿಕೆ ಮೊತ್ತ ಹೆಚ್ಚಳವಾಗುತ್ತಾ ಸಾಗುವುದನ್ನು ಮ್ಯೂಚುಯಲ್ ಫಂಡ್ ಪರಿಭಾಷೆಯಲ್ಲಿ ಸ್ಟೇಪ್ ಅಪ್ ಎಸ್ಐಪಿ ಎನ್ನಲಾಗುತ್ತದೆ. ಎಲ್ಲ ಮ್ಯೂಚುಯಲ್ ಫಂಡ್‌ಗಳು ಸ್ಟೇಪ್ ಅಪ್ ಎಸ್ಐಪಿ ಅನುಕೂಲ ಒದಗಿಸುತ್ತವೆ.

ಏರಿಳಿತ ಕಂಡ ಷೇರು ಸೂಚ್ಯಂಕಗಳು

ಜೂನ್ 7ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಭಾರಿ ಜಿಗಿತ ಕಂಡಿವೆ. 76693 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 3.69ರಷ್ಟು ಗಳಿಕೆ ದಾಖಲಿಸಿದೆ. 23290 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 3.37ರಷ್ಟು ಹೆಚ್ಚಳ ಕಂಡಿದೆ.

ಮತಗಟ್ಟೆ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಲಾಗುತ್ತು. ಆದರೆ ಬಿಜೆಪಿ ಸರಳ ಬಹುಮತ ಕೂಡ ಗಳಿಸದ ಕಾರಣ ಮಾರುಕಟ್ಟೆ ಮಹಾಪತನ ದಾಖಲಿಸಿತ್ತು. ಆದರೆ ಬಿಜೆಪಿಯು ಎನ್‌ಡಿಎ ಕೂಟದ ಇತರೆ ಸದಸ್ಯ ಪಕ್ಷಗಳೊಂದಿಗೆ ಸೇರಿಕೊಂಡು ಸರ್ಕಾರ ರಚಿಸಲಿದೆ ಎನ್ನುವುದು ಖಾತರಿ ಆಗುತ್ತಿದ್ದಂತೆ ಸೂಚ್ಯಂಕಗಳು ಮತ್ತೆ ಪುಟಿದೆದ್ದವು. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.41ರಷ್ಟು ಕುಸಿತ ಕಂಡಿದೆ. ಉಳಿದಂತೆ ಎಲ್ಲಾ ವಲಯಗಳ ಸೂಚ್ಯಂಕಗಳು ಏರಿಕೆ ಕಂಡಿವೆ.

ಮಾಹಿತಿ ತಂತ್ರಜ್ಞಾನ ಶೇ 8.6 ಎಫ್ಎಂಸಿಜಿ ಶೇ 7.11 ವಾಹನ ವಲಯ ಶೇ 6.83 ಮಾಧ್ಯಮ ಶೇ 5.36 ರಿಯಲ್ ಎಸ್ಟೇಟ್ ಶೇ 4.91 ಫಾರ್ಮಾ ಶೇ 4.16 ಫೈನಾನ್ಸ್ ಶೇ 2.06 ಬ್ಯಾಂಕ್ ವಲಯ ಶೇ 1.67 ಮತ್ತು ಲೋಹ ವಲಯ ಶೇ 1.13ರಷ್ಟು ಗಳಿಸಿಕೊಂಡಿವೆ. ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಮಹೀಂದ್ರ ಆ್ಯಂಡ್‌ ಮಹೀಂದ್ರ ಶೇ 13.99 ಟೆಕ್ ಮಹೀಂದ್ರ ಶೇ 12.1 ವಿಪ್ರೊ ಶೇ 10.67 ಹಿಂದುಸ್ತಾನ್ ಯೂನಿಲಿವರ್ ಶೇ 10.65 ಇನ್ಫೊಸಿಸ್ ಶೇ 9.04 ಹೀರೊ ಮೋಟೊಕಾರ್ಪ್ ಶೇ 8.8 ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 8.18 ಬಜಾಜ್ ಫೈನಾನ್ಸ್ ಶೇ 7.28 ಮತ್ತು ಟಾಟಾ ಸ್ಟೀಲ್ ಷೇರಿನ ಮೌಲ್ಯದಲ್ಲಿ ಶೇ 7.06ರಷ್ಟು ಏರಿಕೆಯಾಗಿದೆ. ಅದಾನಿ ಎಂಟರ್ ಪ್ರೈಸಸ್ ಶೇ 5.65 ಬಿಪಿಸಿಎಲ್ ಶೇ 4.38 ಅದಾನಿ ಪೋರ್ಟ್ಸ್ ಶೇ 4.09 ಎಲ್ ಆ್ಯಂಡ್‌ ಟಿ ಶೇ 3.67 ಕೋಲ್ ಇಂಡಿಯಾ ಶೇ 2.48 ಒಎನ್‌ಜಿಸಿ ಶೇ 1.57 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 1.31 ಪವರ್ ಗ್ರಿಡ್ ಶೇ 0.18 ಮತ್ತು ಎಸ್‌ಬಿಐ ಶೇ 0.02ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ಧ್ಯಾನಿ ಟ್ರೇಡ್ ವೆಂಚರ್ಸ್ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಎಎಲ್ ಚಾಂಪ್ ದಾನಿ ಇಂಡಸ್ಚ್ರೀಸ್ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಷೇರುಪೇಟೆಯಲ್ಲಿ ಸಕಾರಾತ್ಮಕ ವಾತಾವರಣವಿದ್ದರೂ ಏರಿಳಿತದ ಅನಿಶ್ಚಿತತೆ ಇದ್ದೇ ಇರುತ್ತದೆ. ಸೂಚ್ಯಂಕಗಳು ಕುಸಿತ ಕಂಡಾಗ ಆಂತರಿಕ ಮೌಲ್ಯ ಹೊಂದಿರುವ ಉತ್ತಮ ಕಂಪನಿಗಳ ಮೇಲೆ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT