ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ| ಎಸ್ಐಪಿಯೋ, ಲಮ್‌ಸಮ್ ಹೂಡಿಕೆಯೋ?

Last Updated 22 ಜನವರಿ 2023, 22:51 IST
ಅಕ್ಷರ ಗಾತ್ರ

ಎಸ್ಐಪಿ ಮೂಲಕ ಹೂಡಿಕೆ ಮಾಡುವುದೋ ಇಲ್ಲ, ಒಂದೇ ಬಾರಿ ಲಮ್‌ಸಮ್ ಹೂಡಿಕೆ ಮೊರೆ ಹೋಗುವುದೋ? ಪ್ರತಿಯೊಬ್ಬ ಮ್ಯೂಚುಯಲ್ ಫಂಡ್ ಹೂಡಿಕೆದಾರನಿಗೂ ಈ ಪ್ರಶ್ನೆ ಕಾಡುತ್ತದೆ. ಬನ್ನಿ ಯಾವುದು ಸರಿಯಾದ ಆಯ್ಕೆ ಎನ್ನುವುದರ ಬಗ್ಗೆ ವಿವರವಾಗಿ ತಿಳಿಯೋಣ.

ಏನಿದು ‘ಎಸ್‌ಐಪಿ’?

ರಾಜೇಶ್ ಕುಮಾರ್ ಟಿ. ಆರ್.
ರಾಜೇಶ್ ಕುಮಾರ್ ಟಿ. ಆರ್.

ಹೂಡಿಕೆ ವಲಯದಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಪದ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (ಎಸ್‌ಐಪಿ). ಕನ್ನಡದಲ್ಲಿ‌ ‘ವ್ಯವಸ್ಥಿತ ಹೂಡಿಕೆ ಯೋಜನೆ’ ಎಂದು ಕರೆಯಬಹುದು. ಮ್ಯೂಚುಯಲ್ ಫಂಡ್‌ನಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ದಿನಾಂಕದಂದು ನಿಗದಿತ ಮೊತ್ತವನ್ನು ಸ್ವಯಂಚಾಲಿತವಾಗಿ ತುಂಬುತ್ತಾ ಹೋಗುವ ವ್ಯವಸ್ಥೆ ಇದಾಗಿದೆ. ಉದಾಹರಣೆಗೆ ಮ್ಯೂಚುಯಲ್ ಫಂಡ್‌ ಒಂದನ್ನು ಆಯ್ಕೆ ಮಾಡಿ ₹ 2 ಸಾವಿರ ಎಸ್‌ಐಪಿ ಹೂಡಿಕೆ ಮಾಡಲು ತೀರ್ಮಾನಿಸಿದರೆ ಪ್ರತಿ ತಿಂಗಳು ₹ 2 ಸಾವಿರ ತೊಡಗಿಸುತ್ತಾ ಹೋಗಬೇಕಾಗುತ್ತದೆ.

ಅನುಕೂಲಗಳು:

ಸರಾಸರಿ ಲೆಕ್ಕಾಚಾರದ ಲಾಭ: ಮಾರುಕಟ್ಟೆ ಏರುಗತಿಯಲ್ಲಿರುವಾಗ ಮತ್ತು ಮಾರುಕಟ್ಟೆ ಇಳಿಕೆ ಹಾದಿಯಲ್ಲಿರುವಾಗ ಎಸ್‌ಐಪಿ ಮುಂದುವರಿ
ಸುವುದರಿಂದ ಏರಿಳಿತದ ಲಾಭ ನಿಮಗೆ ಸಿಗುತ್ತದೆ. ಉದಾಹರಣೆಗೆ ಮ್ಯೂಚುಯಲ್ ಫಂಡ್‌ವೊಂದರಲ್ಲಿ ನೀವು ಮೊದಲ ಸಲ ಹೂಡಿಕೆ ಮಾಡುವಾಗ ಅದರ ಯುನಿಟ್ ಬೆಲೆ (ಎನ್‌ಎವಿ) ₹ 100 ಇರುತ್ತೆ ಎಂದುಕೊಳ್ಳಿ. ಎರಡನೇ ಬಾರಿ ಹೂಡುವಾಗ ಮಾರುಕಟ್ಟೆ ಕುಸಿತದ ಪರಿಣಾಮವಾಗಿ ಯುನಿಟ್‌ನ ಬೆಲೆ ₹ 80 ಆಗುತ್ತದೆ ಎಂದು ಭಾವಿಸಿ. ಇಂತಹ ಸನ್ನಿವೇಷದಲ್ಲಿ. ಸರಾಸರಿ ನಿಮಗೆ ₹ 90ಕ್ಕೆ ಪ್ರತಿ ಯುನಿಟ್ ಸಿಕ್ಕಂತಾಗುತ್ತದೆ. ಸರಳವಾಗಿ ಹೇಳುವುದಾದರೆ ಮಾರುಕಟ್ಟೆಯ ಏರಿಳತದ ಲಾಭ ಎಸ್‌ಐಪಿಯಲ್ಲಿ ಸಿಗುತ್ತದೆ.

ಶಿಸ್ತುಬದ್ಧ ಹೂಡಿಕೆ ಸಾಧ್ಯ: ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಮ್ಯೂಚುಯಲ್ ಫಂಡ್ ಎಸ್‌ಐಪಿಗೆ ಹೋಗುವುದರಿಂದ ಶಿಸ್ತುಬದ್ಧ ಹೂಡಿಕೆ ಸಾಧ್ಯವಾಗುತ್ತದೆ. ಮಾಸಿಕ ಆದಾಯದಲ್ಲಿ ಎಸ್‌ಐಪಿಗಾಗೇ ನಾವು ಒಂದಿಷ್ಟು ಮೊತ್ತವನ್ನು ಎತ್ತಿಡುತ್ತೇವೆ. ದೀರ್ಘಾವಧಿಯಲ್ಲಿ ಇದರಿಂದ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗುತ್ತದೆ.

ಅನುಕೂಲಕ್ಕೆ ತಕ್ಕಂತೆ ಎಸ್‌ಐಪಿ: ಎಸ್‌ಐಪಿಗಳನ್ನು ನಿಮ್ಮ ಅನುಕೂಲಕ್ಕೆ ಮತ್ತು ಆದಾಯಕ್ಕೆ ತಕ್ಕಂತೆ ರೂಪಿಸಿಕೊಳ್ಳಬಹುದು. ಒಂದೊಮ್ಮೆ ಒಂದು ತಿಂಗಳು ಹಣಕಾಸಿನ ಪರಿಸ್ಥಿತಿ ಬಿಗಡಾಯಿಸಿದರೆ ಆ ತಿಂಗಳು ಎಸ್ಐಪಿ ನಿಲ್ಲಿಸಲು ಸಾಧ್ಯವಿದೆ.

ಯಾವಾಗ ಎಸ್‌ಐಪಿ ಆಯ್ಕೆ ಮಾಡಿಕೊಳ್ಳಬೇಕು: ಮಾಸಿಕ ಸಂಬಳದ ಕೆಲಸದಲ್ಲಿರುವವರು ಅಥವಾ ಪ್ರತಿ ತಿಂಗಳು ನಿರ್ದಿಷ್ಟ ಆದಾಯ ಪಡೆಯುವವರು ಮ್ಯೂಚುಯಲ್ ಫಂಡ್ ಹೂಡಿಕೆಗೆ ಎಸ್‌ಐಪಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಕಡಿಮೆ ಮೊತ್ತ ಅಂದ್ರೆ, ₹ 500 ಹೂಡಿಕೆ ಸಹ ಸಾಧ್ಯವಿದೆ. ಕನಿಷ್ಠ 5 ವರ್ಷ ಹೂಡಿಕೆ ಮಾಡುವ ಉದ್ದೇಶವಿದ್ದವರಿಗೆ ಇದು ಮಾರ್ಗ ಸೂಕ್ತ. ಇದನ್ನು ಆರಂಭಿಸಲು ಒಳ್ಳೆಯ ಸಮಯಕ್ಕಾಗಿ ಕಾಯುತ್ತಾ ಕೂರುವ ಅಗತ್ಯವಿಲ್ಲ. ಎಷ್ಟು ಬೇಗ ಆರಂಭಿಸುತ್ತಿರೋ ಅಷ್ಟು ಅನುಕೂಲ. ಷೇರು ಮಾರುಕಟ್ಟೆ ಬೀಳುವ ಸಂದರ್ಭದಲ್ಲಿ ಎಸ್‌ಐಪಿ ಹೂಡಿಕೆಯಿಂದ ಮತ್ತಷ್ಟು ಲಾಭವಾಗುತ್ತದೆ ಎನ್ನುವುದು ಗಮನಿಸಿಕೊಳ್ಳಬೇಕಾದ ಅಂಶ.

ಏನಿದು ಲಮ್‌ಸಮ್ ಹೂಡಿಕೆ?

ಎಸ್‌ಐಪಿಯಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಮ್ಯೂಚುಯಲ್ ಫಂಡ್‌ಗೆ ಹೂಡಿಕೆ ಮಾಡುತ್ತೇವೆ. ಆದರೆ ಲಮ್ ಸಮ್‌ನಲ್ಲಿ ಒಂದೇ ಬಾರಿಗೆ ದೊಡ್ಡ ಮೊತ್ತದ ಹೂಡಿಕೆ ಮಾಡಲಾಗುತ್ತದೆ. ಲಮ್ ಸಮ್‌ನಲ್ಲಿ ನಿರ್ದಿಷ್ಟ ಸಮಯಕ್ಕೆ ನಿರ್ದಿಷ್ಟ ಮೊತ್ತ ಹಾಕಬೇಕು ಎನ್ನುವ ಕಟ್ಟುಪಾಡುಗಳಿಲ್ಲ. ನಮಗೆ ಸಾಧ್ಯ ಎನಿಸಿದಾಗಲೆಲ್ಲಾ ದೊಡ್ಡ ಮೊತ್ತದ ಹೂಡಿಕೆ ಮಾಡುತ್ತಾ ಹೋಗಬಹುದು.

ಅನುಕೂಲಗಳು:

ಅನುಕೂಲಕ್ಕೆ ತಕ್ಕಂತೆ ಹೂಡಿಕೆ ಸಾಧ್ಯ: ಲಮ್ ಸಮ್ ಹೂಡಿಕೆಯಲ್ಲಿ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಹೂಡಿಕೆ ಮಾಡಲೇಬೇಕು ಎಂಬ ಯಾವುದೇ ಒತ್ತಡ ಇರುವುದಿಲ್ಲ. ಸಾಧ್ಯವಾದಾಗ ನಿಮ್ಮ ಅನುಕೂಲ ಮತ್ತು ಅಗತ್ಯಕ್ಕೆ ತಕ್ಕಂತೆ ಹೂಡಿಕೆ ಮಾಡಬಹುದು.

ತಕ್ಕ ಮಟ್ಟಿಗೆ ಮಾರುಕಟ್ಟೆ ಟೈಂ ಮಾಡಬಹುದು: ಲಮ್‌ಸಮ್ ಮ್ಯೂಚುಯಲ್ ಫಂಡ್ ಹೂಡಿಕೆ ಮಾಡುವಾಗ ಮಾರುಕಟ್ಟೆಯನ್ನು ತಕ್ಕಮಟ್ಟಿಗೆ ಟೈಂ ಮಾಡಲು ಸಾಧ್ಯ. ಉದಾಹರಣೆಗೆ ಕೋವಿಡ್ ಸಂದರ್ಭದಲ್ಲಿ ಅಂದ್ರೆ ಮಾರ್ಚ್ 2020 ರ ಸಮಯದಲ್ಲಿ ಷೇರು ಮಾರುಕಟ್ಟೆ ಗಣನೀಯ ಕುಸಿತ ಕಂಡಿತ್ತು. ಆ ಸಂದರ್ಭದಲ್ಲಿ ಯಾರು ಲಮ್‌ಸಮ್ ಮೊತ್ತ ಹಾಕಿದ್ದರೋ ಅವರೆಲ್ಲಾ ಈಗ ಉತ್ತಮ ಲಾಭ ಗಳಿಸಿಕೊಂಡಿದ್ದಾರೆ.

ಯಾವಾಗ ಲಮ್‌ಸಮ್ ಆಯ್ಕೆ ಮಾಡಿಕೊಳ್ಳಬೇಕು: ಬಿಸಿನೆಸ್ ನಲ್ಲಿರುವವರು, ಫ್ರೀಲ್ಯಾನ್ಸಿಂಗ್ ಕೆಲಸ ಮಾಡುವವರು ಮತ್ತು ಪ್ರತಿ ತಿಂಗಳು ನಿರ್ದಿಷ್ಟ ಆದಾಯ ಇಲ್ಲದ ವರು ಈ ಹೂಡಿಕೆ ಆಯ್ಕೆ ಮಾಡುಕೊಳ್ಳುವುದು ಸೂಕ್ತ. ಮಾಸಿಕ ಸಂಬಳ ಪಡೆಯುವವರು ಸಹ ಬೋನಸ್ ಅಥವಾ ಇನ್ಯಾವುದೇ ರೂಪದಲ್ಲಿ ಹೆಚ್ಚುವರಿ ಆದಾಯ ಗಳಿಸಿದರೆ ಇದನ್ನು ಬಳಸಿಕೊಳ್ಳಬಹುದು. ಕನಿಷ್ಠ 5 ವರ್ಷದ ಅವಧಿಗೆ ಈಕ್ವಿಟಿ ಮ್ಯೂಚುಯಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಉದ್ದೇಶವಿದ್ದರೆ ಲಮ್ ಸಮ್ ಸೂಕ್ತ . ಷೇರು ಮಾರುಕಟ್ಟೆ ಏರಿಕೆಯ ಹಾದಿಯಲ್ಲಿರುವಾಗ ಲಮ್‌ಸಮ್ ಹೂಡಿಕೆ ಮಾಡಿದರೆ ಸರಾಸರಿ ಲಾಭ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ.

ಸತತ ಎರಡನೇ ವಾರವೂ ಗಳಿಕೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಏರಿಕೆ ದಾಖಲಿಸಿವೆ. ಜನವರಿ 20ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಅಲ್ಪ ಮೊತ್ತದ ಗಳಿಕೆ ಕಂಡಿವೆ. ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.59 ರಷ್ಟು ಹೆಚ್ಚಳ ಕಂಡಿದೆ. ನಿಫ್ಟಿ ಶೇ 0.39 ರಷ್ಟು ಜಿಗಿದಿದೆ. ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಪನಿಗಳ ಉತ್ತಮ ಸಾಧನೆ, ಚೀನಾದಲ್ಲಿ ಕೋವಿಡ್ ಲಾಕ್‌ಡೌನ್ ಸಡಿಲ ಸೇರಿದಂತೆ ಹಲವು ಅಂಶಗಳು ಷೇರುಪೇಟೆ ಚೇತರಿಕೆಗೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ಬಿಎಸ್‌ಇ ಬಂಡವಾಳ ಸರಕುಗಳ ಸೂಚ್ಯಂಕ ಮತ್ತು ವಿದ್ಯುತ್‌ ಸೂಚ್ಯಂಕ ತಲಾ ಶೇ 2 ರಷ್ಟು ಗಳಿಸಿಕೊಂಡಿವೆ. ಅನಿಲ-ತೈಲ ಸೂಚ್ಯಂಕ ಮತ್ತು ಮಾಹಿತಿ ತಂತ್ರಜ್ಞಾನ ಸೂಚ್ಯಂಕ ತಲಾ ಸುಮಾರು ಶೇ 2 ರಷ್ಟು ಹೆಚ್ಚಳ ದಾಖಲಿಸಿವೆ. ಬಿಎಸ್‌ಇ ಟೆಲಿಕಾಂ ಮತ್ತು ಆಟೊ ವಲಯ ಶೇ 1 ರಿಂದ ಶೇ 2 ರಷ್ಟು ಕುಸಿದಿವೆ.

ಬಿಎಸ್‌ಇ ಲಾರ್ಜ್ ಕ್ಯಾಪ್‌ನಲ್ಲಿ ಅದಾನಿ ಟೋಟಲ್ ಗ್ಯಾಸ್, ಕೋಲ್ ಇಂಡಿಯಾ, ಟೆಕ್ ಮಹೀಂದ್ರ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಲಾರ್ಸನ್ ಅಂಡ್ ಟೂಬ್ರೊ ಮತ್ತು ಡಾಬರ್ ಇಂಡಿಯಾ ಗಳಿಕೆ ಕಂಡಿವೆ. ನೈಕಾ, ಅವೆನ್ಯೂ ಸೂಪರ್ ಮಾರ್ಕೆಟ್ಸ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್, ಅದಾನಿ ಎಂಟರ್ ಪ್ರೈಸಸ್ ಮತ್ತು ಇಂಡಸ್ ಟವರ್ಸ್ ಕುಸಿದಿವೆ.

ಮುನ್ನೋಟ: ಈ ವಾರ ಎಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಐಡಿಬಿಐ, ಟಾಟಾ ಕಮ್ಯೂನಿಕೇಷನ್ಸ್, ಟಿವಿಎಸ್ ಮೋಟರ್ಸ್‌, ಬಜಾಜ್ ಆಟೊ, ಟಾಟಾ ಮೋಟರ್ಸ್‌, ಮಾರುತಿ ಸುಜುಕಿ, ಗೋ ಕಲರ್ಸ್, ಸಿಯೇಟ್ ಲಿ., ಬಜಾಜ್ ಫೈನಾನ್ಸ್, ನಜಾರಾ ಟೆಕ್ನಾಲಜೀಸ್, ಅಪೋಲೊ ಪೈಪ್ಸ್, ಪ್ರೂಡೆಂಟ್, ಶಾಪರ್ಸ್ ಸ್ಟಾಪ್ ಸೇರಿದಂತೆ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಅಮೆರಿಕ ಫೆಡರಲ್ ಬ್ಯಾಂಕ್ ನಿಂದ ಮತ್ತಷ್ಟು ಬಡ್ಡಿ ದರ ಹೆಚ್ಚಳದ ಆತಂಕ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡ ಸೇರಿದಂತೆ ಹಲವು ಅಂಶಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT