ಬುಧವಾರ, ಜೂಲೈ 8, 2020
28 °C

ನಗದು ಬಳಕೆಗೆ ದಿಗಿಲು ಬೇಡ

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಇದುವರೆಗೂ ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಬಂದಿದ್ದರೂ ಅದರಿಂದ ಕಾಗದ ರೂಪದ ಕರೆನ್ಸಿ ಬಳಕೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿರಲಿಲ್ಲ. ಆದರೆ, ಇದೀಗ ಕೊರೊನಾ ಮಹಾಮಾರಿಯಿಂದಾಗಿ ನಗದು ರೂಪದ ಕರೆನ್ಸಿಗೂ ದಿಗಿಲು ಉಂಟಾಗಿದೆ!

ಸಂಕಷ್ಟದ ಸಂದರ್ಭದಲ್ಲಿ ಜನರು ಮನೆಯಲ್ಲಿ ಕೂಡಿಟ್ಟ ಹಣವನ್ನು ಹೊರತೆಗೆಯುವುದು ರೂಢಿ. ಅದರಲ್ಲಿಯೂ ಕುಟುಂಬದ ಉಳಿತಾಯದ ಚುಕ್ಕಾಣಿ ಹಿಡಿದಿರುವ ಮಹಿಳೆಯರು ಬೇಳೆಕಾಳು, ಸಾಂಬಾರ ಡಬ್ಬಿಗಳಲ್ಲಿ ಕಷ್ಟಕಾಲಕ್ಕೆಂದು ದುಡ್ಡನ್ನು ಸಂಗ್ರಹಿಸಿ ಇಟ್ಟಿರುತ್ತಾರೆ. ಅವೆಲ್ಲ ಈಗ ಬಳಕೆಗೆ ಬಂದಿವೆ. ಇಂತಹ ಸಂದರ್ಭದಲ್ಲಿ ನೋಟುಗಳ ಮೂಲಕವೂ ಸೋಂಕು ಹರಡುವ ಸಾಧ್ಯತೆ ಇದೆ ಎನ್ನುವ ವದಂತಿ ಹರಡಿದೆ. ಇದಕ್ಕೆ ಯಾವುದೇ ಆಧಾರಗಳಿಲ್ಲ. ಜಾಗತಿಕ ಆರ್ಥಿಕತೆಯ ಭೌತಿಕ ಜೀವಾಳವಾಗಿರುವ ಕಾಗದ ರೂಪದ ಹಣ ಮತ್ತು ನಾಣ್ಯಗಳ ಅಸ್ತಿತ್ವದ ಕುರಿತ ಚರ್ಚೆ  ಮುನ್ನಲೆಗೆ ಬಂದಿದೆ.

ನಗದು ಬಳಕೆಯಿಂದ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ವರ್ಗಾವಣೆ ಆಗುವ ಸಾಧ್ಯತೆ ತೀರಾ ಕಡಿಮೆ ಎಂದು ಆರೋಗ್ಯ ವಲಯದ ತಜ್ಞರ ದೃಢ ಅಭಿಪ್ರಾಯವಾಗಿದೆ. ಹೀಗಿದ್ದರೂ ಜನರು ಮತ್ತು ಉದ್ದಿಮೆಗಳಲ್ಲಿ ನೋಟುಗಳ ಬಳಕೆ ಬಗ್ಗೆ ವೃಥಾ ಆತಂಕ ಕಂಡು ಬರುತ್ತಿದೆ.

ನಗದು ಬಳಕೆ ಸಂಪೂರ್ಣವಾಗಿ ಕೈಬಿಡುವುದು ಕಷ್ಟವೇನಲ್ಲ. ಭೌತಿಕ ಸ್ವರೂಪದ ಹಣದೊಂದಿಗೆ ಜನರು ದಶಕಗಳಿಂದಲೂ ಭಾವನಾತ್ಮಕ ಸಂಬಂಧ ಹೊಂದಿರುವುದರಿಂದ ಅದನ್ನು ಅಳಿಸಿಹಾಕುವುದು ಕಷ್ಟವಾಗಿದೆಯಷ್ಟೆ ಎಂದು ತಜ್ಞರು ಹೇಳುತ್ತಾರೆ.

ಕರೆನ್ಸಿ ನೋಟುಗಳ ಮುದ್ರಣಕ್ಕೆ ತಗಲುವ ವೆಚ್ಚ, ಅದರ ನಿರ್ವಹಣೆ, ಬಾಳಿಕ ಅವಧಿಯ ಬಗ್ಗೆ ಸಾಕಷ್ಟು ಚರ್ಚೆ, ಪರಾಮರ್ಶೆ ನಡೆಸಿ, ಡಿಜಿಟಲ್‌ ಕರೆನ್ಸಿಗಳ ಬಳಕೆಯತ್ತ ಹಲವು ದೇಶಗಳು ಮುಂದಡಿ ಇಟ್ಟಿವೆ.

ಭಾರತದಲ್ಲಿಯೂ ಡಿಜಿಟಲ್‌ ಆರ್ಥಿಕತೆಯ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಜನರು ಡಿಜಿಟಲ್‌ ಪಾವತಿ ಆಯ್ಕೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಹೀಗಾಗಿ ಡಿಜಿಟಲ್‌ ಆರ್ಥಿಕತೆಯಾಗುವತ್ತ ಇದೂ ಒಂದು ಕಾರಣ ಆಗಬಹುದು.‌

ಅಮೆರಿಕ, ಜಪಾನ್‌, ಆಫ್ರಿಕಾದ ಸೂಪರ್‌ ಮಾರ್ಕೇಟ್‌ಗಳಲ್ಲಿ, ಟೆಹರಾನ್ ಗ್ಯಾಸ್‌ ಸ್ಟೇಷನ್‌ಗಳಲ್ಲಿ ನಗದು ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಆರ್‌ಬಿಐ ಪ್ರಚಾರ ಅಭಿಯಾನ

ಗ್ರಾಹಕರು ಬ್ಯಾಂಕಿಂಗ್‌ ವಹಿವಾಟನ್ನು ಡಿಜಿಟಲ್‌ ಪಾವತಿ ಮೂಲಕವೇ ನಿರ್ವಹಿಸುವುದರ ಪ್ರಯೋಜನಗಳ ಕುರಿತು ಆರ್‌ಬಿಐ ಪ್ರಚಾರ ಅಭಿಯಾನ ಆರಂಭಿಸಿದೆ.

‘ಮನೆಯಲ್ಲಿ ಸುರಕ್ಷಿತವಾಗಿ ಇದ್ದುಕೊಂಡು ಸುರಕ್ಷಿತ ನಗದುರಹಿತ (ಡಿಜಿಟಲ್‌) ವಹಿವಾಟು ನಡೆಸಿ’– ಇದು ಆರ್‌ಬಿಐನ ಪ್ರಚಾರ ಮಂತ್ರವಾಗಿದೆ. ಈಗ ಎನ್‌ಇಎಫ್‌ಟಿ, ಐಎಂಪಿಎಸ್‌ ಮತ್ತು ಯುಪಿಐ– ದಿನದ 24 ಗಂಟೆಗಳೂ ಲಭ್ಯ ಇರಲಿವೆ. ಅಂತರ ಕಾಯ್ದುಕೊಳ್ಳಲು ಡಿಜಿಟಲ್‌ ಬ್ಯಾಂಕಿಂಗ್‌ ನೆರವಾಗಲಿದೆ. ಇಂತಹ ವಹಿವಾಟು ನಡೆಸುವಾಗ ಗ್ರಾಹಕರು ಮುಂಜಾಗ್ರತೆ ವಹಿಸಬೇಕು. ಯಾವುದೇ ಬಗೆಯ ವಂಚನೆ ನಡೆದರೆ ತಕ್ಷಣ ಅದನ್ನು ಬ್ಯಾಂಕ್‌ ಗಮನಕ್ಕೆ ತರಬೇಕು ಎಂದೂ ಎಚ್ಚರಿಸಿದೆ.

ಡಿಜಿಟಲ್‌ ಪಾವತಿ

ಲಾಕ್‌ಡೌನ್‌ನಿಂದ ಡಿಜಿಟಲ್‌ ಪಾವತಿ ಆಯ್ಕೆಗಳ ಬಳಕೆ ಹೆಚ್ಚಾಗುತ್ತಿದೆ ಎನ್ನುತ್ತಿವೆ ಸಮೀಕ್ಷಾ ವರದಿಗಳು. ಜನರು ರಿಟೇಲ್‌ ಮಳಿಗೆಗಳಲ್ಲಿ, ದಿನಸಿ ಖರೀದಿಸಲೂ ಹೆಚ್ಚಾಗಿ ಡಿಜಿಟಲ್‌ ಪಾವತಿ ಆಯ್ಕೆ ಬಳಸುತ್ತಿದ್ದಾರೆ. ಇ–ಕಾಮರ್ಸ್‌ನಲ್ಲಿ ಅಗತ್ಯ ವಸ್ತುಗಳ ಖರೀದಿಯೂ ಇದೇ ರೂಪದಲ್ಲಿ ನಡೆಯುತ್ತಿದೆ.

ಜನರು ತೆಗೆದುಕೊಳ್ಳುತ್ತಿರುವ ಮುನ್ನೆಚ್ಚರಿಕೆ

l ಸೋಂಕು ನಿರೋಧಕ ದ್ರಾವಣ ಸಿಂಪಡಣೆ

l ವೈರಸ್‌ ನಾಶವಾಗಲಿ ಎಂದು ಮೈಕ್ರೊವೋವನ್‌ನಲ್ಲಿ ಇಡುವುದು

l ಚೀನಾ ಬ್ಯಾಂಕ್‌ಗಳಲ್ಲಿ ಅಲ್ಟ್ರಾವೈಲೆಟ್‌ ಲೈಟ್‌ ಅಥವಾ ಹೀಟ್‌ ಬಳಸಿ ನೋಟುಗಳನ್ನು ಸ್ವಚ್ಛಗೊಳಿಸಿ ಕನಿಷ್ಠ ಒಂದು ವಾರದವರೆಗೆ ಸಂಗ್ರಹಿಸಿಟ್ಟು ಬಳಿಕ ಚಲಾವಣೆಗೆ ಬಿಡಲಾಗುತ್ತಿದೆ

l ಸ್ವೀಡನ್‌, ಫಿನ್ಲೆಂಡ್‌, ನಾರ್ವೆ, ಕೆನಡಾ ಮತ್ತು ಇನ್ನೂ ಕೆಲವು ದೇಶಗಳಲ್ಲಿ ಹಂತ ಹಂತವಾಗಿ ನಗದು ಬಳಕೆ ಪ್ರಮಾಣ ತಗ್ಗಿಸಲಾಗುತ್ತಿದೆ

l ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ದೇಶಗಳು ನಗದುರಹಿತ ಸಮಾಜವಾಗುವ ನಿಟ್ಟಿನಲ್ಲಿವೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು