ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ | ಹಣ ಸುರಕ್ಷಿತವಾಗಿರಿಸುವುದು ಹೇಗೆ?

Last Updated 11 ಆಗಸ್ಟ್ 2020, 21:47 IST
ಅಕ್ಷರ ಗಾತ್ರ

ಪ್ರಶ್ನೆ: ಡಯಾಲಿಸಿಸ್‌ ಹಾಗೂ ಕಿಡ್ನಿಗೆ ಸಂಬಂಧಿಸಿದಂತೆ, ವೈದ್ಯರಿಂದ ತಪಾಸಣೆಗೆ... ಹೀಗೆ ನಾನು ನನ್ನ ಹೆಂಡತಿಗೆ ಬಹಳಷ್ಟು ಹಣ ಖರ್ಚು ಮಾಡುತ್ತಿದ್ದೇನೆ. ತಿಂಗಳಿಗೆ ಸುಮಾರು ₹ 25 ಸಾವಿರವೂ ಸಾಕಾಗುತ್ತಿಲ್ಲ. ಈ ಖರ್ಚನ್ನು ನನ್ನ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದೇ ಹಾಗೂ ವಿನಾಯಿತಿ ಇರುವುದಾದಲ್ಲಿ ಯಾವ ಸೆಕ್ಷನ್‌ ಅಡಿಯಲ್ಲಿ ಎಂದು ತಿಳಿಸಿ.
-ಪ್ರಶಾಂತ ಕೃಷ್ಣಮೂರ್ತಿ, ಮೈಸೂರು

ಉತ್ತರ: ಆದಾಯ ತೆರಿಗೆ ಸೆಕ್ಷನ್‌ 80ಡಿಡಿಬಿ ಆಧಾರದ ಮೇಲೆ

ಅ) ಕ್ಯಾನ್ಸರ್, ಏಡ್ಸ್‌, ಕಿಡ್ನಿ ವೈಫಲ್ಯದಂತಹ ಸಮಸ್ಯೆಗಳಿಂದ ಬಳಲುತ್ತಿರುವ ಅವಲಂಬಿತರಿಗಾಗಿ, ಹಿಂದೂ ಅವಿಭಕ್ತ ಕುಟುಂಬದ ಸದಸ್ಯರಿಗಾಗಿ ಅಥವಾ ತಮಗಾಗಿ ₹ 40 ಸಾವಿರದವರೆಗೆ ವೈದ್ಯಕೀಯ ಚಿಕಿತ್ಸೆಗಳಿಗೆ ಮಾಡಿದ ವೈದ್ಯಕೀಯ ವೆಚ್ಚ.

ಆ) ಹಿರಿಯ ನಾಗರಿಕರು ತಮಗಾಗಿ ಅಥವಾ ಅವಲಂಬಿತರಿಗಾಗಿ ಮಾಡಿದ ವೈದ್ಯಕೀಯ ವೆಚ್ಚಗಳಿಗೆ₹ 1 ಲಕ್ಷದವರೆಗೆ ವಿನಾಯಿತಿ ಸಿಗಲಿದೆ.

ಮೇಲೆ ನಮೂದಿಸಿದ ಮಿತಿಯಲ್ಲಿ, ಗಂಭಿರ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ವಾರ್ಷಿಕವಾಗಿ ಮಾಡಿದ ಖರ್ಚನ್ನು ಒಟ್ಟು ಆದಾಯದಿಂದ ಕಳೆದು, ತೆರಿಗೆ ಸಲ್ಲಿಸಬಹುದು. ಮೂತ್ರಕೋಶ ವೈಫಲ್ಯದ ಸಮಸ್ಯೆ ಆಗಿರುವ ಕಾರಣ, ನೀವು ಸೆಕ್ಷನ್‌ 80ಡಿಡಿಬಿ ಆಧಾರದ ಮೇಲೆ ವಿನಾಯಿತಿ ಪಡೆಯಿರಿ.

ಓದುಗರಿಗೆ ಸಲಹೆ: ಪ್ರತಿ ಕುಟುಂಬವೂ ಕನಿಷ್ಠ ₹ 5 ಲಕ್ಷದ್ದಾದರೂ ಆರೋಗ್ಯ ವಿಮೆ ಪಡೆದಿರಬೇಕು. ಕುಟುಂಬದ ಎಲ್ಲರನ್ನೂ ಸೇರಿಸಿ ಆರೋಗ್ಯ ವಿಮೆ ಪಡೆಯಬಹುದು. ಇದನ್ನು ಫ್ಲೋಟರ್ ಪಾಲಿಸಿ ಅನ್ನುತ್ತಾರೆ. ಕುಟುಂಬದ ಯಾವುದೇ ವ್ಯಕ್ತಿ ಕಾಯಿಲೆಗೆ ತುತ್ತಾದಾಗ ಪಡೆದಿರುವ ವಿಮಾ ಮೊತ್ತದ ಮಿತಿಯಲ್ಲಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು. ಒಟ್ಟು ವಿಮೆಯ ಮಿತಿಯಲ್ಲಿ ಎಲ್ಲರೂ ಸವಲತ್ತು ಪಡೆಯಬಹುದು. ಪ್ರತಿ ವ್ಯಕ್ತಿಯ ಹೆಸರಿನಲ್ಲಿಯೂ ಪ್ರತ್ಯೇಕವಾಗಿ ಆರೋಗ್ಯ ವಿಮೆ ಮಾಡಿಸುವ ಅವಶ್ಯಕತೆ ಇಲ್ಲ.

**

ಪ್ರಶ್ನೆ: ನಾನು ಆದಾಯದಲ್ಲಿ ಶೇಕಡ 30ರಷ್ಟನ್ನು ತೆರಿಗೆ ರೂಪದಲ್ಲಿ ಪಾವತಿ ಮಾಡುತ್ತಿದ್ದೇನೆ. ನೀವು ಬಹಳಷ್ಟು ಜನರಿಗೆ ದೀರ್ಘಾವಧಿ ಆರ್‌.ಡಿ. ಮಾಡಲು ತಿಳಿಸುತ್ತಿದ್ದೀರಿ. ನಾನು ₹ 10 ಸಾವಿರ ಹಣವನ್ನು, 10 ವರ್ಷಗಳ ಅವಧಿಗೆ ಆರ್‌.ಡಿ ಮಾಡಿದರೆ, 10 ವರ್ಷಗಳ ನಂತರ ಒಮ್ಮೆಲೆ ಬರುವ ಬಡ್ಡಿಗೆ ಬ್ಯಾಂಕಿನಲ್ಲಿ ಟಿಡಿಎಸ್‌ ಮಾಡಿ ಹಣಕೊಡುವುದರಿಂದ ಈ ಠೇವಣಿಯಿಂದ ನನಗಾಗಲಿ, ಜನರಿಗಾಗಲಿ ಏನು ಉಪಯೋಗ?
-ಹೆಸರು, ಊರು ಬೇಡ

ಉತ್ತರ: ಆರ್‌.ಡಿ ಹಾಗೂ ನಗದು ಸರ್ಟಿಫಿಕೇಟುಗಳಲ್ಲಿ ಠೇವಣಿ ಅವಧಿ ಮುಗಿಯುತ್ತಲೇ ಬಡ್ಡಿಯನ್ನು ಅಸಲಿಗೆ ಸೇರಿಸಿ ಕೊಡುತ್ತಾರೆ. ಆದರೆ ಠೇವಣಿದಾರರು ಠೇವಣಿ ಇರಿಸಿದ ವರ್ಷದಿಂದಲೇ ಠೇವಣಿಯ ಮೇಲೆ ಬರಬಹುದಾದ ಬಡ್ಡಿಗೆ ಬ್ಯಾಂಕ್‌ನಿಂದ ಫಾರಂ ನಂಬರ್‌ 16ಎ ಪಡೆದು ಹಾಗೆ ಬಂದಿರುವ ಬಡ್ಡಿಯನ್ನು ಆಯಾ ವರ್ಷದ ಆದಾಯಕ್ಕೆ ಸೇರಿಸಿ ತೆರಿಗೆ ಸಲ್ಲಿಸಬಹುದು. ಇದರಿಂದ ಠೇವಣಿ ಮುಗಿದು ಕೊನೆಯಲ್ಲಿ ಬರುವ ಹೆಚ್ಚಿನ ಬಡ್ಡಿ ಮೊತ್ತಕ್ಕೆ ಪ್ರತ್ಯೇಕವಾಗಿ ತೆರಿಗೆ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಬ್ಯಾಂಕ್‌ಗಳಲ್ಲಿ ಇಂತಹ ಠೇವಣಿಗೆ ಪ್ರತಿ ವರ್ಷ ಬಡ್ಡಿ ಲೆಕ್ಕಾಚಾರ ಮಾಡಿ, ಅಸಲಿಗೆ ಸೇರಿಸುತ್ತಿರುತ್ತಾರೆ. ಹೀಗಾಗಿ ನೀವು ಕೊನೆಯಲ್ಲಿ ಹೆಚ್ಚಿನ ತೆರಿಗೆ ಕೊಡಬೇಕು ಎನ್ನುವ ಭಯ ಅಥವಾ ಸಂಶಯದಿಂದ ಹೊರಬನ್ನಿ, ಆರ್‌.ಡಿ ಮಾಡುವುದನ್ನು ನಿಲ್ಲಿಸಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT