ಬುಧವಾರ, ಮಾರ್ಚ್ 29, 2023
23 °C

ಕೋವಿಡ್–19 ಬದಲಾದ ಶಾಪಿಂಗ್‌ ಒಲವು

ಪ್ರಜಾವಾಣಿ ಫೀಚರ್ ಡೆಸ್ಕ್ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕು ಶುರುವಾದ ದಿನದಿಂದ ಜನರ ಜೀವನಶೈಲಿಯೇ ಬದಲಾಗಿದೆ. ಕಚೇರಿ, ಕೆಲಸ ಎಂದು ಸ್ವಚ್ಛಂದವಾಗಿ ತಿರುಗಾಡಿಕೊಂಡಿದ್ದ ಜನ ಈಗ ಮನೆಯೊಳಗೇ ಬಂಧಿಯಾಗಿದ್ದು, ದಿನಚರಿಯಲ್ಲೂ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ವಾರಾಂತ್ಯ ಬಂದರೆ ಶಾಪಿಂಗ್ ಎಂದು ಸುತ್ತುತ್ತಿದ್ದ ಮಂದಿ ಈಗ ಅದಕ್ಕೂ ಬ್ರೇಕ್ ಹಾಕಿದ್ದಾರೆ. ಅದರಲ್ಲೂ ಶಾಪಿಂಗ್ ವಿಚಾರಕ್ಕೆ ಬಂದರೆ ಜನರ ಆಯ್ಕೆಯಲ್ಲಿ ಮಹತ್ತರದ ಬದಲಾವಣೆಗಳಾಗಿವೆ ಎನ್ನುತ್ತವೆ ವರದಿಗಳು.

ಮೊದಲೆಲ್ಲಾ ಬ್ರ್ಯಾಂಡೆಡ್ ಉಡುಪುಗಳು, ಶೂ, ದುಬಾರಿ ಬೆಲೆಯ ಸೌಂದರ್ಯವರ್ಧಕಗಳು ಹಾಗೂ ಐಷಾರಾಮಿ ವಸ್ತುಗಳನ್ನು ಖರೀದಿಸುತ್ತಿದ್ದ ಮಂದಿ ಈಗ ಅಗತ್ಯವಿರುವ ಸಾಮಗ್ರಿಗಳು ಹಾಗೂ ಗೃಹೋತ್ಪನ್ನಗಳ ಖರೀದಿಯತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಆನ್‌ಲೈನ್ ಶಾಪಿಂಗ್‌ನಲ್ಲೂ ಗೃಹೋತ್ಪನ್ನಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿದ್ದಾರೆ ಎನ್ನುತ್ತವೆ ಇ–ಕಾರ್ಮಸ್‌ ವೇದಿಕೆಗಳು.

ಗೃಹ ಬಳಕೆ ಉತ್ಪನ್ನದತ್ತ ಒಲವು

ಕೋವಿಡ್‌ – 19 ಕಾರಣದಿಂದ ಮನೆಯಿಂದಲೇ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಆ ಕಾರಣಕ್ಕೆ ಕೆಲವರು ಮನೆ ನವೀಕರಣದತ್ತ ಮನಸ್ಸು ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಕಚೇರಿ ಕೆಲಸ ಮಾಡಲು ಅನುವಾಗುವಂತಹ ಕುರ್ಚಿ, ಕಂಪ್ಯೂಟರ್‌ ಟೇಬಲ್, ಟೇಬಲ್ ಲ್ಯಾಂಪ್‌ ‌ಹಾಗೂ ಮಂಚದಂತಹ ವಸ್ತುಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಮನೆಯಲ್ಲೇ ಒಂದು ಕೋಣೆಯನ್ನು ಕಚೇರಿಯಂತೆ ಸಿದ್ಧಪಡಿಸಿಕೊಂಡು ಆ ಕೊಠಡಿಗೆ ಬೇಕಾಗುವ ವಸ್ತುಗಳನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳುತ್ತಿದ್ದಾರೆ. 

ಈ ಹಿಂದೆ ಮನೆಯಲ್ಲಿ ಅಡುಗೆ ಮಾಡಲು ಬೇಸರ ಬಂದಾಗಲೆಲ್ಲಾ ಸ್ವಿಗ್ಗಿ, ಜೊಮೆಟೊದಂತಹ ಫುಡ್ ಡೆಲಿವರಿ ಆ್ಯಪ್‌ಗಳಲ್ಲಿ ಆರ್ಡರ್ ಮಾಡಿ ತಿನ್ನುತ್ತಿದ್ದರು. ಆದರೆ ಈಗ ಹೊರಗಡೆ ತಿನ್ನುವುದಕ್ಕೆ ಭಯ. ಆ ಕಾರಣಕ್ಕೆ ಮನೆಯಲ್ಲೇ ತಮಗೆ ಬೇಕಾದ ಅಡುಗೆ ಮಾಡಿ ತಿನ್ನುವುದು ಅನಿವಾರ್ಯವಾಗಿದೆ. ಹೀಗಾಗಿ ಒವೆನ್‌, ನಾನ್‌ ಸ್ಟಿಕ್‌ ತವಾಗಳು, ಬ್ರೆಡ್‌ ಮೇಕರ್‌ಗಳು ಮುಂತಾದ ಅಡುಗೆಮನೆಗೆ ಅಗತ್ಯವಿರುವ ವಸ್ತುಗಳನ್ನು ಹೆಚ್ಚು ಹೆಚ್ಚು ಖರೀದಿಸುತ್ತಿದ್ದಾರೆ. ಜೊತೆಗೆ ತರಕಾರಿ, ಹಿಟ್ಟು, ನೂಡಲ್ಸ್‌, ಸಾಸ್‌, ಜಾಮ್‌ನಂತಹ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ. 

ನೈಸರ್ಗಿಕ ಸೌಂದರ್ಯವರ್ಧಕಗಳ ಖರೀದಿ

ಮೊದಲೆಲ್ಲಾ ಡ್ರೈ ಶ್ಯಾಂಪೂ, ಸನ್‌ಸ್ಕ್ರೀನ್‌ ಲೋಷನ್‌ಗಳತ್ತ ಹೆಚ್ಚು ಒಲವು ತೋರುತ್ತಿದ್ದ ಜನರು ಈಗ ಬದಲಾಗಿದ್ದಾರೆ. ನೈಸರ್ಗಿಕವಾಗಿ ಸಿಗುವ ಎಣ್ಣೆ, ಶ್ಯಾಂಪೂ ಹಾಗೂ ಕಂಡೀಷನರ್‌ಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಅಲ್ಲದೇ ತಲೆಹೊಟ್ಟು, ಕೂದಲು ಉದುರುವ ಸಮಸ್ಯೆಗಳ ಬಗ್ಗೆ ಜನ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿದ್ದು ಅದನ್ನು ನಿವಾರಿಸುವ ನೈಸರ್ಗಿಕ ಉತ್ಪನ್ನಗಳತ್ತ ಆಸಕ್ತಿ ತೋರುತ್ತಿದ್ದಾರೆ. ಮೊದಲೆಲ್ಲಾ ಗಡಿಬಿಡಿ ಜೀವನದ ನಡುವೆ ಇಂತಹ ವಸ್ತುಗಳನ್ನು ಬಳಸಲು ಹೆಚ್ಚು ಸಮಯವಿರಲಿಲ್ಲ. ಈಗ ಹೊರಗಡೆ ಹೋಗದೇ ಮನೆಯಿಂದಲೇ ಕಚೇರಿ ಕೆಲಸ ಮಾಡುವ ಕಾರಣ ಮೇಕಪ್‌ ಸಾಮಗ್ರಿಗಳ ಮೇಲೆ ಜನರು ಆಸಕ್ತಿ ಕಳೆದುಕೊಂಡಿದ್ದಾರೆ.

ವೆಲ್‌ನೆಸ್‌ ಉತ್ಪನ್ನಗಳು

ಸದಾ ಲಿಪ್‌ಸ್ಟಿಕ್‌, ನೈಲ್‌ಪಾಲಿಶ್‌, ಫೌಂಡೇಶನ್‌ ಖರೀದಿಸುತ್ತಿದ್ದ ಮಂದಿ ಈಗ ಮಾಸ್ಕ್‌, ಸ್ಯಾನಿಟೈಸರ್‌ನಂತಹ ವಸ್ತುಗಳ ಖರೀದಿ ಮಾಡುತ್ತಿದ್ದಾರೆ. ಅದು ಅನಿವಾರ್ಯವೂ ಹೌದು. ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಚ್ಯವನಪ್ರಾಶ್, ವಿಟಮಿನ್ ಸಿ ಅಂಶ ಇರುವ ಉತ್ಪನ್ನಗಳ ಖರೀದಿಯೂ ಜೋರಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು