ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ದೀಪಾವಳಿ ಬೋನಸ್ ಸದ್ಬಳಕೆ ಹೇಗೆ?

Last Updated 23 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಹೊಸ ಉಡುಗೆ ತೊಟ್ಟು, ಸಿಹಿ ಹಂಚಿ ಸಂಭ್ರಮಿಸುವುದು, ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ಕೊಡುವುದು, ಮನೆಗೆ ದೀಪಾಲಂಕಾರ ಮಾಡಿ ಪಟಾಕಿ ಸಿಡಿಸಿ ಖುಷಿಪಡುವುದು... ಹೀಗೆ ದೀಪಗಳ ಹಬ್ಬ ದೀಪಾವಳಿ ಮನೆಯ ಎಲ್ಲರ ಮನಸ್ಸನ್ನು ಒಂದಲ್ಲ ಒಂದು ರೀತಿಯಲ್ಲಿ ಖುಷಿಪಡಿಸುತ್ತದೆ. ಇವೆಲ್ಲಕ್ಕಿಂತ ಸಂತೋಷ ಕೊಡುವ ಮತ್ತೊಂದು ವಿಚಾರ ಅಂದರೆ ದೀಪಾವಳಿ ಸಮಯದಲ್ಲಿ ಕೆಲವರಿಗೆ ಸಿಗುವ ಬೋನಸ್!

ದೀಪಾವಳಿ ಬೋನಸ್ ಮೊತ್ತವನ್ನು ಯಾವೆಲ್ಲ ರೀತಿಯಲ್ಲಿ ಸದ್ಬಳಕೆ ಮಾಡಬಹುದು ಎನ್ನುವುದರ ಬಗ್ಗೆ ಒಂದು ನೋಟ ಹರಿಸೋಣ.

1. ಜಾಸ್ತಿ ಬಡ್ಡಿಯ ಸಾಲ ತೀರಿಸಲು ಬಳಸಿ: ಹೆಚ್ಚು ಬಡ್ಡಿ ದರದ ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಸಾಲ ಪಡೆದಿದ್ದರೆ ಬೋನಸ್ ಹಣ ಬಳಸಿ ಆ ಸಾಲ ಮರುಪಾವತಿ ಮಾಡಿ. ಅದು ಸಾಧ್ಯವಾಗದಿದ್ದರೆ ಸಾಲದ ಒಂದಿಷ್ಟು ಹೊರೆಯನ್ನಾದರೂ ತಗ್ಗಿಸಿಕೊಳ್ಳಿ. ಹೀಗೆ ಮಾಡುವುದರಿಂದ ಅನಗತ್ಯವಾಗಿ ಹೆಚ್ಚು ಬಡ್ಡಿ ಕಟ್ಟುವುದರಿಂದ ಪಾರಾಗಬಹುದು. ಒಂದೊಮ್ಮೆ ಗೃಹ ಸಾಲ ಪಡೆದಿದ್ದರೆ ಬೋನಸ್ ಹಣವನ್ನು ಹೆಚ್ಚುವರಿ ಪಾವತಿಗೆ (ಪಾರ್ಟ್ ಪೇಮೆಂಟ್) ಬಳಸಿಕೊಳ್ಳಿ. ಇದರಿಂದ ಬಡ್ಡಿ ಹೊರೆ ತಗ್ಗುವ ಜೊತೆಗೆ ಸಾಲದ ಒಟ್ಟಾರೆ ಅವಧಿ ಕೂಡ ಕಡಿಮೆಯಾಗುತ್ತದೆ.

2. ತುರ್ತು ನಿಧಿಗೆ ಒಂದಿಷ್ಟು ಹಣ ಇಡಿ: ಧುತ್ತೆಂದು ಬರುವ ಅನಿರೀಕ್ಷಿತ ಸಂದರ್ಭಗಳಿಗೆ ಹಣ ಬೇಕಾಗುತ್ತದೆ. ಅದಕ್ಕಾಗಿ ಪ್ರತಿ ವ್ಯಕ್ತಿಯೂ ಒಂದು ತುರ್ತು ನಿಧಿ (ಎಮರ್ಜೆನ್ಸಿ ಫಂಡ್) ಇಟ್ಟುಕೊಳ್ಳಬೇಕು. ತುರ್ತು ನಿಧಿ ಇಟ್ಟುಕೊಂಡಿಲ್ಲ ಎಂದಾದರೆ, ಬೋನಸ್ ಹಣವನ್ನು ಅದಕ್ಕೆಂದು ಬಳಸಿ. ತುರ್ತು ನಿಧಿಯಲ್ಲಿ ನಿಮ್ಮ ಮಾಸಿಕ ಆದಾಯದ ಕನಿಷ್ಠ 3ರಿಂದ 6 ಪಟ್ಟು ಮೊತ್ತ ಇರಬೇಕು. ವೈದ್ಯಕೀಯ ತುರ್ತು, ಆರ್ಥಿಕ ತುರ್ತುಗಳು ಬಂದಾಗ ಮಾತ್ರ ಆ ಹಣ ಬಳಸಬೇಕು. ತುರ್ತು ನಿಧಿಯ ಹಣವನ್ನುನಿಶ್ಚಿತ ಠೇವಣಿ (ಎಫ್.ಡಿ) ಅಥವಾ ಲಿಕ್ವಿಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳಿತು. ಏಕೆಂದರೆ, ಅಗತ್ಯ ಎದುರಾದಾಗ ಈ ಹೂಡಿಕೆಗಳಲ್ಲಿನ ಹಣವನ್ನು ನಗದೀಕರಿಸುವುದು ಸುಲಭ.

3. ವಿಮೆ ಪಡೆಯಿರಿ, ವಿಮೆ ಹೆಚ್ಚಿಸಿಕೊಳ್ಳಿ: ಪ್ರತಿ ವ್ಯಕ್ತಿಗೂ ಟರ್ಮ್ ಲೈಫ್ ಇನ್ಶೂರೆನ್ಸ್ (ಅವಧಿ ವಿಮೆ) ಮತ್ತು ಆರೋಗ್ಯ ವಿಮೆ ಬಹಳ ಮುಖ್ಯ. ಒಂದೊಮ್ಮೆ ಈ ಎರಡು ಪ್ರಮುಖ ವಿಮೆಗಳನ್ನು ಪಡೆದಿಲ್ಲ ಎಂದಾದಲ್ಲಿ ಕೂಡಲೇ ಪಡೆಯಿರಿ. ಈಗಾಗಲೇ ವಿಮೆ ಪೆಡೆದಿದ್ದರೆ ಬೋನಸ್ ಹಣ ಬಳಸಿ ಆದಾಯಕ್ಕೆ ತಕ್ಕಂತೆ ವಿಮೆ ರಕ್ಷಣೆಯ (ಕವರೇಜ್) ಮೊತ್ತ ಹೆಚ್ಚಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಿ. ಆರೋಗ್ಯ ಸೇವೆಗಳ ಶುಲ್ಕ ಹೆಚ್ಚಳ (ಅಂದರೆ, ಆಸ್ಪತ್ರೆ ಖರ್ಚುಗಳ ಏರಿಕೆ) ಪ್ರಮಾಣ ವಾರ್ಷಿಕ ಶೇಕಡ 14ರಷ್ಟು ಇರುವುದರಿಂದ ವಿಮೆ ರಕ್ಷಣೆಯ ಮೊತ್ತ ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ.

ಇಂತಹ ವಿಮೆಗಳಿಂದ ಏನು ಸಿಗುತ್ತದೆ ಎಂದು ಅನೇಕರು ಲಘುವಾಗಿ ಮಾತನಾಡುತ್ತಾರೆ. ಆದರೆ, ನೆನಪಿಟ್ಟುಕೊಳ್ಳಿ, ಇಂತಹ ವಿಮೆಗಳು ನೀವು ಬಡವರಾಗುವುದನ್ನು ತಡೆಯುತ್ತವೆ. ವಿಮೆಯ ರಕ್ಷಣೆ ಪಡೆಯುವುದರಿಂದ ತುರ್ತು ಸಂದರ್ಭಗಳಲ್ಲಿ ಅನಗತ್ಯ ಆರ್ಥಿಕ ಹೊರೆ ತಪ್ಪಿಸಿಕೊಳ್ಳಬಹುದು.

4. ತೆರಿಗೆ ಉಳಿಸುವ ಹೂಡಿಕೆ ಮಾಡಿ: ಬೋನಸ್ ಹಣವನ್ನು ಆದಾಯ ತೆರಿಗೆ ಉಳಿಸುವ ಪಿಪಿಎಫ್, ಸುಕನ್ಯಾ ಸಮೃದ್ಧಿ, ಎನ್‌ಪಿಎಸ್, ವಿಮೆ, ಎನ್‌ಎಸ್‌ಸಿ ಮುಂತಾದ ಹೂಡಿಕೆಗಳಲ್ಲಿ ತೊಡಗಿಸುವುದರಿಂದ ಸೆಕ್ಷನ್ 80ಸಿ, 80ಡಿ, 80ಸಿಸಿಡಿ 1ಬಿ ಅಡಿಯಲ್ಲಿ ತೆರಿಗೆ ಲಾಭಗಳನ್ನು ಪಡೆಯಲು ಸಾಧ್ಯವಾಗುತ್ತದೆ.

5. ಮ್ಯೂಚುವಲ್ ಫಂಡ್ ಹೂಡಿಕೆ: ಕೊಂಚ ರಿಸ್ಕ್ ತೆಗೆದುಕೊಂಡು ದೀರ್ಘಾವಧಿಗೆ ಹೂಡಿಕೆ ಮಾಡುವ ಆಲೋಚನೆ ಇದ್ದರೆ ಬೋನಸ್ ಹಣವನ್ನು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆಯಿಂದ ದೀರ್ಘಾವಧಿಯಲ್ಲಿ ಸರಾಸರಿ ಶೇ 16ರವರೆಗೂ ಲಾಭಗಳಿಸುವ ಅವಕಾಶವಿದೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT