ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಅಕ್ಷರ ಗಾತ್ರ

ಮಹೇಶ್ ಎಲ್.,ಕುಮ್ಮೂರು, ಬ್ಯಾಡಗಿ

lಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಬಹಳ ಬೇಗ ಹಣ ವೃದ್ಧಿಯಾಗುತ್ತದೆ ಎಂದು ಬರೆದಿದ್ದೀರಿ. ಆದರೆ ಇದರಲ್ಲಿ ಹೇಗೆ, ಯಾವ ತರಹ ಹೂಡಿಕೆ ಮಾಡಬೇಕು? ನಾನು ಸರ್ಕಾರಿ ನೌಕರ. ತಿಂಗಳಿಗೆ ಸುಮಾರು ₹ 1,000ದಿಂದ ₹ 2,000ವರೆಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು. ಸುಮಾರು 15 ವರ್ಷ ಹೂಡಿಕೆ ಮಾಡಬಹುದೇ? ಎಸ್ಐಪಿ ಒಳ್ಳೆಯದೇ?

ಉತ್ತರ: ನೀವು ದೀರ್ಘಕಾಲದ ಹೂಡಿಕೆಯ ಉದ್ದೇಶ ಹೊಂದಿರುವುದು ಶ್ಲಾಘನೀಯ. ನಿಮ್ಮ ತಿಂಗಳ ಹೂಡಿಕೆ ₹ 2,000 ಆಗಿದ್ದಲ್ಲಿ, ಈ ಮೊತ್ತವನ್ನು ಬ್ಯಾಂಕ್‌ಗಳಲ್ಲಿ ಆರ್‌.ಡಿ. ರೂಪದಲ್ಲಿ ಹೂಡಿಕೆ ಮಾಡಿದರೆ ಗರಿಷ್ಠ ವಾರ್ಷಿಕ ಸರಾಸರಿ ಬಡ್ಡಿ ದರದಂತೆ (ಶೇಕಡ 8) ಲೆಕ್ಕ ಹಾಕಿದರೂ 15 ವರ್ಷಗಳಲ್ಲಿ ಸಂಗ್ರಹವಾಗುವ ಅಸಲು ಮೊತ್ತ ₹ 3.60 ಲಕ್ಷ ಹಾಗೂ ಬಡ್ಡಿ ಮೊತ್ತ ₹ 2.91 ಲಕ್ಷ.

ಆದರೆ ಮ್ಯೂಚುವಲ್ ಫಂಡ್‌ನಲ್ಲಿ ಇದೇ ಮೊತ್ತ ಹೂಡಿಕೆ ಮಾಡಿದರೆ (ಇದುವರೆಗಿನ ಲಾಭದ ಲೆಕ್ಕದಲ್ಲಿ ಹೇಳುವುದಾದರೆ) ವಾರ್ಷಿಕ ಸರಾಸರಿ ಶೇ 10ರಿಂದ ಶೇ 14ರಷ್ಟು ಗಳಿಕೆ ಬರುವ ಸಾಧ್ಯತೆ ಇದೆ. ಪ್ರತಿ ನಾಲ್ಕೈದು ವರ್ಷಗಳಿಗೊಮ್ಮೆ ಆರ್ಥಿಕತೆ ಮುಗ್ಗರಿಸುವ ಸಾಧ್ಯತೆ ಇಲ್ಲದ್ದಿಲ್ಲ. ಇಂತಹ ಸಂದರ್ಭಗಳು ಹೊಸ ಹೂಡಿಕೆಗೆ ಉತ್ತಮ ಅವಕಾಶವನ್ನು ಕೊಡುತ್ತವೆ. ಇತ್ತೀಚಿನ ಆರೇಳು ತಿಂಗಳ ಅವಧಿಯಲ್ಲಿ ಮಾರುಕಟ್ಟೆ ಒಂದಿಷ್ಟು ಕುಸಿತ ಕಂಡಿದ್ದರೂ ದೀರ್ಘಾವಧಿ ಹೂಡಿಕೆಗೆ ಇದು ಸಕಾಲ. ಕೆಲವೊಮ್ಮೆ ಮಾರುಕಟ್ಟೆಯನ್ನು ಅವಲೋಕಿಸಿದಾಗ ವರ್ಷದಿಂದ ವರ್ಷಕ್ಕೆ ಹೂಡಿಕೆಯ ಮೊತ್ತ ದ್ವಿಗುಣಗೊಂಡಿದ್ದೂ ಇದೆ.

ನೀವು ಹೂಡಿಕೆ ಮಾಡುವ ಮುನ್ನ ನಿಮ್ಮ ಕೆವೈಸಿ ದಾಖಲೆಗಳನ್ನು ಮೊದಲು ಸಂಗ್ರಹಿಸಿ. ಸಮೀಪದ ಜಿಲ್ಲಾ ಕೇಂದ್ರದ ಯಾವುದೇ ಮ್ಯೂಚುವಲ್ ಫಂಡ್ ಹೌಸ್‌ನಲ್ಲಿ ನಿಮ್ಮ ಖಾತೆಯನ್ನು ನೇರವಾಗಿ ತೆರೆಯಬಹುದು. ನಿಮ್ಮ ಬ್ಯಾಂಕ್ ಖಾತೆ ವಿವರ, ಕ್ಯಾನ್ಸಲ್‌ ಮಾಡಿದ ಚೆಕ್ ಪ್ರತಿ ಅಗತ್ಯ. ನೋಂದಾಯಿತ ಬ್ರೋಕಿಂಗ್ ಏಜೆಂಟ್‌ಗಳ ಮೂಲಕವೂ ಖಾತೆ ತೆರೆಯಬಹುದು. ನೀವು ಆನ್ಲೈನ್ ಅರ್ಜಿಗಳನ್ನು ಭರ್ತಿ ಮಾಡುವುದರಲ್ಲಿ ಪರಿಣತರಿದ್ದರೆ ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ ಮೂಲಕವೇ ಖಾತೆ ತೆರೆಯಬಹುದು.

ಎಸ್ಐಪಿಗೂ ಇಲ್ಲಿ ಅವಕಾಶವಿದೆ. ತಿಂಗಳ ನಿರ್ದಿಷ್ಟ ದಿನ ಮ್ಯೂಚುವಲ್ ಫಂಡ್ ಖಾತೆಗೆ ಹಣ ವರ್ಗಾವಣೆಯಾಗಲು ಅಗತ್ಯವಿರುವ ಹಣ ನಿಮ್ಮ ಬ್ಯಾಂಕ್‌ ಖಾತೆಯಲ್ಲಿ ಇರುವಂತೆ ನೋಡಿಕೊಳ್ಳಿ. ಆದಾಯ ವೃದ್ಧಿಯಾದಂತೆ ನಿಮ್ಮ ಹೂಡಿಕೆಯ ಮೊತ್ತವನ್ನೂ ಹೆಚ್ಚಿಸುವ ಗುರಿ ಹೊಂದಿರಿ. ಗಳಿಸಿದ ಡಿವಿಡೆಂಡ್, ಲಾಭಾಂಶದ ಮೇಲೆ ತೆರಿಗೆ ಇದೆ ಎನ್ನುವುದೂ ಗಮನದಲ್ಲಿರಲಿ. ನಿರ್ದಿಷ್ಟ ಹೂಡಿಕೆಯ ಬಗೆಗಿನ ಹೆಚ್ಚಿನ ಮಾಹಿತಿಗೆ ಸಮೀಪದ ಫಂಡ್ ಹೌಸ್ ಅಥವಾ ನೋಂದಾಯಿತ ಏಜೆಂಟರನ್ನು ಸಂಪರ್ಕಿಸಿ.

ನಾಗೇಶ ಎಂ.ಆರ್,ಹೆಗ್ಗನಹಳ್ಳಿ, ಬೆಂಗಳೂರು

ನಾನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕೆಂದಿರುವೆ. ಆದರೆ ಅದರಲ್ಲಿ ಈಕ್ವಿಟಿ, ಡೆಟ್‌, ಲಿಕ್ವಿಡ್ ಇತ್ಯಾದಿ ಅನೇಕ ವಿಧಗಳಿವೆ ಎಂದು ತಿಳಿದಿದ್ದೇನೆ. ಇವುಗಳಲ್ಲಿ ನಾವು ಹೇಗೆ ಆಯ್ಕೆ ಮಾಡಬೇಕು ಎಂದು ತಿಳಿಸಿ. ಯಾವ ಸಂದರ್ಭಗಳಲ್ಲಿ ನಾವು ‘ಸ್ವಿಚ್’ ಮಾಡಬಹುದು ಎಂದೂ ತಿಳಿಸಿ.

ಉತ್ತರ: ಹೂಡಿಕೆಯ ಉದ್ದೇಶ ಹಾಗೂ ಹೂಡಿಕೆದಾರರು ತಾಳಿಕೊಳ್ಳಬಹುದಾದ ರಿಸ್ಕ್‌ಗೆ ತಕ್ಕಂತೆ ಮ್ಯೂಚುವಲ್ ಫಂಡ್ ಹೌಸ್‌ಗಳು ವಿವಿಧ ಯೋಜನೆಗಳನ್ನು ರೂಪಿಸುತ್ತವೆ. ನಮಗೆ ಅನುಕೂಲವಾಗುವ ಯೋಜನೆ ಆಯ್ಕೆ ಹೇಗೆ ಮಾಡಬೇಕೆನ್ನುವುದು ಸಹಜ ಪ್ರಶ್ನೆ. ಮೊದಲು ನಮ್ಮ ಹೂಡಿಕೆಯ ಅವಧಿ, ಹೂಡಿಕೆಗೆ ಹೊಂದಿಸಬಹುದಾದ ಮೊತ್ತ, ನಮ್ಮ ನಿರೀಕ್ಷೆಗಳನ್ನು ನಿರ್ಧರಿಸಬೇಕು. ನಿರೀಕ್ಷೆಯು ಲಾಭಗಳಿಸುವುದೇ ಆದರೂ ಮಾರುಕಟ್ಟೆ ತಿರುಗಿಬಿದ್ದಾಗ ಸಂಭವಿಸಬಹುದಾದ ನಷ್ಟವನ್ನು ಯಾವ ಹಂತದವರೆಗೆ ತಡೆದುಕೊಳ್ಳುವ ಶಕ್ತಿ ನಮಗಿದೆ, ಅನಿರೀಕ್ಷಿತವಾಗಿ ಹಣಕಾಸು ಬಿಕ್ಕಟ್ಟು ಉಂಟಾದಾಗ ಹೂಡಿಕೆಯ ಹಣವನ್ನು ನಷ್ಟದಲ್ಲಿ ಹಿಂಪಡೆಯದೆ ಇರಲು ಸಾಧ್ಯವೇ ಎಂಬುದನ್ನು ಗಮನಿಸಬೇಕು. ಹೂಡಿಕೆಯಲ್ಲಿ ಹೆಚ್ಚು ಲಾಭದ ನಿರೀಕ್ಷೆ ಹೊಂದಿದವರು ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳಲು ತಯಾರಿರಬೇಕು. ಅದೇ ರೀತಿ ಮಾರುಕಟ್ಟೆ ಅಪಾಯ ಎದುರಿಸುವ ಮನಸ್ಸು ತೋರದವರು ಅತಿ ಕಡಿಮೆ ಪ್ರಮಾಣದ ಲಾಭದಲ್ಲಿ ತೃಪ್ತಿ ಹೊಂದಲು ಸಿದ್ದರಿರಬೇಕು.

ಈಕ್ವಿಟಿ ಯೋಜನೆಗಳು ಹೆಚ್ಚು ಲಾಭವನ್ನೂ ಮಾರುಕಟ್ಟೆ ಅಪಾಯವನ್ನೂ ಹೊಂದಿವೆ. ಕಾರಣ ಇಲ್ಲಿ ಸಂಗ್ರಹವಾಗುವ ಹೆಚ್ಚಿನ ಮೊತ್ತವನ್ನು ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಡೆಟ್‌ ಫಂಡ್‌ಗಳು ಹೆಚ್ಚಾಗಿ ಕಾರ್ಪೊರೇಟ್ ಬಾಂಡ್‌, ಸರ್ಕಾರಿ ಬಾಂಡ್, ನಿಖರ ಆದಾಯ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತವೆ. ಹೀಗಾಗಿ ಅಪಾಯ ಹಾಗೂ ಲಾಭಾಂಶ ಇಲ್ಲಿ ಕಡಿಮೆ. ಲಿಕ್ವಿಡ್ ಫಂಡ್‌ಗಳು ನಿಯಮಿತ ಆದಾಯ ನೀಡುವ, ತಕ್ಷಣಕ್ಕೆ ಹಿಂಪಡೆಯಬಹುದಾದ ಹೂಡಿಕೆಗಳು. ಸಮತೋಲಿತ ಯೋಜನೆಯ (ಬ್ಯಾಲೆನ್ಸ್ಡ್‌) ಹೂಡಿಕೆಗಳು ಈ ಮೇಲಿನ ಹೂಡಿಕೆಗಳ ಮಿಶ್ರಣ. ಮಧ್ಯಮ ಅಥವಾ ದೀರ್ಘಾವಧಿಯಲ್ಲಿ ಒಂದಿಷ್ಟು ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರುವವರಿಗೆ ಇವು ಉತ್ತಮ ಆಯ್ಕೆ.

ಸ್ವಿಚಿಂಗ್ ಆಯ್ಕೆ ನಿಮಗೆ ಅನೇಕ ಲಾಭ ಕೊಡುತ್ತದೆ. ಆದರೆ ಇದಕ್ಕೆ ತುಸು ವಿಶ್ಲೇಷಣೆ ಮಾಡಬೇಕು ಹಾಗೂ ಸಮಯ ಕೊಡಬೇಕು. ಮಧ್ಯಂತರ ಅವಧಿಗೆ ಮಾರುಕಟ್ಟೆ ಕುಸಿಯುವ ನಿರೀಕ್ಷೆಯಲ್ಲಿದ್ದರೆ ಅಥವಾ ಒಂದು ಹಂತದ ನಂತರ ಫಂಡ್‌ಗಳಲ್ಲಿನ ವೃದ್ಧಿಯು ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲವೆಂದು ಕಂಡುಬಂದಲ್ಲಿ ಸ್ವಿಚಿಂಗ್ ಆಯ್ಕೆ ಪರಿಗಣಿಸಬಹುದು. ನೀವು ತೀರಾ ರಿಸ್ಕ್‌ ಇರುವ ಯೋಜನೆಗಳಿಂದ ಒಂದು ಹಂತ ಕೆಳಕ್ಕೆ, ತುಸು ಕಡಿಮೆ ರಿಸ್ಕ್‌ ಇರುವ ಯೋಜನೆಗೆ ನಿಮ್ಮ ಹೂಡಿಕೆಯನ್ನು ವರ್ಗಾಯಿಸಬಹುದು. ಮಾರುಕಟ್ಟೆಯಲ್ಲಾಗುವ ಭಾರೀ ಕುಸಿತದ ಪರಿಣಾಮಗಳನ್ನು ತುಸು ನಿವಾರಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT