ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ– ಪ್ರಮೋದ್ ಬಿ.ಪಿ: ಎಕ್ಸಿಟ್ ಲೋಡ್, ಎನ್‌ಎಫ್‌ಒ, ಇಂಡೆಕ್ಸ್ ಫಂಡ್

Last Updated 6 ಫೆಬ್ರುವರಿ 2022, 21:34 IST
ಅಕ್ಷರ ಗಾತ್ರ

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಎಕ್ಸಿಟ್ ಲೋಡ್, ಎನ್‌ಎಫ್ಒ ಮತ್ತು ಇಂಡೆಕ್ಸ್ ಫಂಡ್ ಬಗ್ಗೆ ತಿಳಿಯುವುದು ಬಹಳ ಮುಖ್ಯ. ಈ ಮೂರು ಪರಿಕಲ್ಪನೆಗಳ ಬಗ್ಗೆ ಹೆಚ್ಚು ಕಲಿತುಕೊಳ್ಳೋಣ.

ಮ್ಯೂಚುವಲ್ ಫಂಡ್ ಎಕ್ಸಿಟ್ ಲೋಡ್: ಅವಧಿಗೆ ಮುನ್ನ ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಹಿಂಪಡೆದರೆ ಸ್ವತ್ತು ನಿರ್ವಹಣಾ ಕಂಪನಿಗಳು (ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳು) ಹೂಡಿಕೆದಾರರಿಗೆ ವಿಧಿಸುವ ಶುಲ್ಕ ಎಕ್ಸಿಟ್ ಲೋಡ್.

ಹೂಡಿಕೆದಾರರು ಅವಧಿಗೆ ಮುನ್ನ ಹೂಡಿಕೆ ಮೊತ್ತ ಹಿಂಪಡೆದುಕೊಳ್ಳುವುದನ್ನು ತಡೆಯಲು ಎಕ್ಸಿಟ್ ಲೋಡ್ ಶುಲ್ಕವನ್ನು ಸ್ವತ್ತು ನಿರ್ವಹಣಾ ಕಂಪನಿಗಳು ವಿಧಿಸುತ್ತವೆ. ಮ್ಯೂಚುವಲ್ ಫಂಡ್‌ಗಳಿಂದ ನಿರ್ಗಮಿಸಲು ಹೂಡಿಕೆದಾರ ತೆರುವ ಶುಲ್ಕ ಎಂದು ಸರಳವಾಗಿ ಇದನ್ನು ಕರೆಯಬಹುದು. ಒಂದು ಫಂಡ್‌ನಿಂದ ಮತ್ತೊಂದು ಫಂಡ್‌ಗೆ ಹೂಡಿಕೆ ವರ್ಗಾಯಿಸುವ ಸಂದರ್ಭದಲ್ಲಿಯೂ ಎಕ್ಸಿಟ್ ಲೋಡ್ ಅನ್ವಯಿಸುತ್ತದೆ. ಹಾಗಾಗಿ ಯಾವುದೇ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಕ್ಸಿಟ್ ಲೋಡ್ ಎಷ್ಟು ಎಂದು ತಿಳಿದು ಮುಂದುವರಿಯುವುದು ಒಳ್ಳೆಯದು. ನಿರ್ದಿಷ್ಟ ಅವಧಿಗಿಂತ ಹೆಚ್ಚಿನ ಅವಧಿಗೆ ನೀವು ಹೂಡಿಕೆ ಮಾಡಿದರೆ ಎಕ್ಸಿಟ್ ಲೋಡ್ ಶುಲ್ಕ ಇರುವುದಿಲ್ಲ.

ಮ್ಯೂಚುವಲ್ ಫಂಡ್ ‘ಎನ್ಎಫ್ಒ’: ನ್ಯೂ ಫಂಡ್ ಆಫರ್ ಎನ್ನುವುದು ‘ಎನ್ಎಫ್ಒ’ದ ವಿಸ್ತೃತ ರೂಪ. ಮ್ಯೂಚುವಲ್ಫಂಡ್ ಹೌಸ್‌ಗಳು ಹೊಸದಾಗಿ ಮ್ಯೂಚುವಲ್ ಫಂಡ್ ಒಂದನ್ನು ಆರಂಭಿಸುವ ಸಲುವಾಗಿ ಹೂಡಿಕೆದಾರರಿಂದ ಪಡೆಯುವ ಹೂಡಿಕೆಯನ್ನು ಸರಳವಾಗಿ ನ್ಯೂ ಫಂಡ್ ಆಫರ್ ಎಂದು ಕರೆಯಬಹುದು. ಮ್ಯೂಚುಯಲ್ ಫಂಡ್ ಹೌಸ್‌ಗಳು ನ್ಯೂ ಫಂಡ್ ಆಫರ್ಆರಂಭಿಸುವಾಗ ಹಣ ತೊಡಗಿಸಲು ಹೂಡಿಕೆದಾರರಿಗೆ ಕೆಲವು ದಿನಗಳ (ಸಾಮಾನ್ಯವಾಗಿ 15 ದಿನಗಳು) ಕಾಲಾವಕಾಶ ನೀಡುತ್ತವೆ. ಈ ಕಾಲಾವಕಾಶ ಮುಗಿದ ಮೇಲೆ ಬಹುತೇಕ ಮ್ಯೂಚುವಲ್ ಫಂಡ್‌ಗಳು ಓಪನ್ ಎಂಡೆಡ್ ಫಂಡ್‌ಗಳಾಗುತ್ತವೆ. ಓಪನ್ ಎಂಡೆಡ್ಫಂಡ್‌ಗಳಾದ ಮೇಲೆ ಮತ್ತೆ ಹೊಸ ಹೂಡಿಕೆಗಳನ್ನು ಆ ಫಂಡ್‌ಗೆ ಪಡೆಯಬಹುದು. ಅಂದರೆ ಮತ್ತೆ ಯಾರು ಬೇಕಾದರೂ ಅದರಲ್ಲಿ ಹೂಡಿಕೆ ಮಾಡುವ ಅವಕಾಶ ಸಿಗುತ್ತದೆ.

ಇಂಡೆಕ್ಸ್ ಫಂಡ್ : ಭಾರತದಲ್ಲಿ ಪ್ರಮುಖವಾಗಿ ಎರಡು ಸೂಚ್ಯಂಕಗಳು (ಇಂಡೆಕ್ಸ್) ಇವೆ. ಮುಂಬೈ ಷೇರುಪೇಟೆಯನ್ನು ಪ್ರತಿನಿಧಿಸುವ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆಯನ್ನು ಪ್ರತಿನಿಧಿಸುವ ನಿಫ್ಟಿ. ಈ ಸೂಚ್ಯಂಕಗಳನ್ನು ಯಥಾವತ್ತಾಗಿ ಅನುಕರಿಸಿ ಕೆಲ ಮ್ಯೂಚುಯಲ್ ಫಂಡ್‌ಗಳು ರೂಪುಗೊಂಡಿವೆ. ಷೇರು ಮಾರುಕಟ್ಟೆಯ ಭಾಷೆಯಲ್ಲಿ ಈ ರೀತಿಯ ಫಂಡ್‌ಗಳನ್ನು ಇಂಡೆಕ್ಸ್ ಮ್ಯೂಚುವಲ್ ಫಂಡ್ ಎಂದು ಕರೆಯುತ್ತಾರೆ. ಉದಾಹರಣೆಗೆ, ನಿಫ್ಟಿ ಸೂಚ್ಯಂಕದಲ್ಲಿ ರಿಲಯನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೊಸಿಸ್, ಹಿಂದೂಸ್ಥಾನ್ ಯುನಿಲಿವರ್, ಐಸಿಐಸಿಐ ಬ್ಯಾಂಕ್ ಸೇರಿ ಪ್ರಮುಖ 50 ಕಂಪನಿಗಳಿವೆ.

ಈ ಸೂಚ್ಯಂಕದಲ್ಲಿರುವ ಎಲ್ಲಾ 50 ಕಂಪನಿಗಳನ್ನು ಯಥಾವತ್ತಾಗಿ ಒಳಗೊಂಡ ಒಂದು ಮ್ಯೂಚುಯಲ್ ಫಂಡ್ ರೂಪಿಸಿ ಹೂಡಿಕೆ ಮಾಡುವ ವ್ಯವಸ್ಥೆಯೇ ಇಂಡೆಕ್ಸ್ ಮ್ಯೂಚುಯಲ್ ಫಂಡ್. ಇಂಡೆಕ್ಸ್ ಫಂಡ್‌ನಲ್ಲಿ ಫಂಡ್ ಮ್ಯಾನೇಜರ್ ಇಲ್ಲದ ಕಾರಣ ವೆಚ್ಚ ಅನುಪಾತ ಅಂದರೆ, ನಿರ್ವಹಣಾ ಶುಲ್ಕ ಕಡಿಮೆ. ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳ ವೆಚ್ಚ ಅನುಪಾತ ಶೇ 1.5ರಷ್ಟಿದ್ದರೆ ಇಂಡೆಕ್ಸ್ ಫಂಡ್‌ಗಳಲ್ಲಿ ವೆಚ್ಚ ಅನುಪಾತ ಶೇ 0.2ರಷ್ಟು ಮಾತ್ರ. ವೆಚ್ಚ ಅನುಪಾತ ಶುಲ್ಕ ಕಡಿಮೆ ಇರುವುದರಿಂದ ಇಲ್ಲಿ ಹೂಡಿಕೆದಾರನಿಗೆ ಹೆಚ್ಚು ಉಳಿತಾಯ ಸಾಧ್ಯವಾಗುತ್ತದೆ. ಷೇರು ಮಾರುಕಟ್ಟೆ ಎಷ್ಟು ಪ್ರಮಾಣದಲ್ಲಿ ಏರಿಕೆ ಕಾಣುವುದೋ ಅಷ್ಟು ಲಾಭ ಸಿಕ್ಕರೆ ಸಾಕು, ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎನ್ನುವವರಿಗೆ ಇಂಡೆಕ್ಸ್ ಫಂಡ್ ಒಳ್ಳೆಯ ಆಯ್ಕೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ. ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

---

ಬಜೆಟ್ ವಾರದಲ್ಲಿ ಷೇರುಪೇಟೆ ಉತ್ತಮ ಗಳಿಕೆ

ಫೆಬ್ರುವರಿ 4ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿವೆ. 58,644 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.52ರಷ್ಟು ಗಳಿಕೆ ಕಂಡಿದೆ. 17,516 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.42ರಷ್ಟು ಗಳಿಸಿಕೊಂಡಿದೆ. ಬೆಳವಣಿಗೆ ಆಧಾರಿತ ಬಜೆಟ್ ಘೋಷಣೆಯಾದ ಕಾರಣ ಷೇರು ಸೂಚ್ಯಂಕಗಳು ವಾರದ ಆರಂಭದಲ್ಲಿ ಏರಿಕೆ ಕಂಡವು. ಆದರೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡ, ಬಾಂಡ್ಗಳಿಕೆಯಲ್ಲಿ ಹೆಚ್ಚಳ, ತೈಲ ಬೆಲೆ ಹೆಚ್ಚಳ ಸೇರಿ ಹಲವು ಅಂಶಗಳು ಸೂಚ್ಯಂಕಗಳ ಓಟಕ್ಕೆ ತಡೆ ಒಡ್ಡಿದವು.

ನಿಫ್ಟಿ ಲೋಹ ಸೂಚ್ಯಂಕ ಶೇ 6.6ರಷ್ಟು ಗಳಿಸಿಕೊಂಡಿದೆ. ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 4.6ರಷ್ಟು ಜಿಗಿದಿದ್ದು ಎಫ್‌ಎಂಸಿಜಿ ಸೂಚ್ಯಂಕ ಶೇ 3.6ರಷ್ಟು ಹೆಚ್ಚಳವಾಗಿದೆ. ಇನ್ನು, ನಿಫ್ಟಿ ಮಿಡ್ ಕ್ಯಾಪ್ ಶೇ 2.2ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇ 1ರಷ್ಟು ಸುಧಾರಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 7,695.27 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 5,923.71 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಏರಿಕೆ–ಇಳಿಕೆ: ಡಿವೀಸ್ ಲ್ಯಾಬ್ಸ್ ಶೇ 11ರಷ್ಟು, ಟಾಟಾ ಸ್ಟೀಲ್ ಶೇ 9ರಷ್ಟು, ಸನ್ ಫಾರ್ಮಾ ಶೇ 9ರಷ್ಟು, ಎಚ್‌ಸಿಎಲ್ ಟೆಕ್ ಶೇ 8ರಷ್ಟು ಮತ್ತು ಐಟಿಸಿ ಶೇ 8ರಷ್ಟು ಜಿಗಿದಿವೆ. ಎನ್‌ಟಿಪಿಸಿ ಶೇ 4ರಷ್ಟು, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 3ರಷ್ಟು, ಎಸ್‌ಬಿಐ ಲೈಫ್ ಶೇ 3ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಬಡ್ಡಿ ದರದ ವಿಚಾರವಾಗಿ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಫೆಬ್ರುವರಿ 9ರಂದು ಭಾರತೀಯ ರಿಸರ್ವ್ ಬ್ಯಾಂಕ್ಯಾವ ನಿಲುವು ತಳೆಯಲಿದೆ ಎನ್ನುವುದರ ಮೇಲೆ ಹೂಡಿಕೆದಾರರ ದೃಷ್ಟಿ ನೆಟ್ಟಿದೆ. ಬಡ್ಡಿ ದರದಲ್ಲಿ ಹೆಚ್ಚಳವಾದರೆ ಅದರ ನೇರ ಪರಿಣಾಮ ಷೇರುಪೇಟೆ ಸೂಚ್ಯಂಕಗಳ ಮೇಲೆ ಆಗಲಿದೆ. ಈ ವಾರ ಇಂಡಿಯನ್ ಬ್ಯಾಂಕ್, ಐಆರ್‌ಸಿಟಿಸಿ, ಎಚ್‌ಸಿಜಿ, ಹಿಂಡಾಲ್ಕೊ, ಎನ್‌ಎಂಡಿಸಿ, ಜಿಂದಾಲ್ ಸ್ಟೀಲ್, ಅಮೃತಾಂಜನ್, ಎಂಡೂರೆನ್ಸ್ ಟೆಕ್ನಾಲಜೀಸ್, ರೈಟ್ಸ್, ಸೇಲ್, ಟಾಟಾ ಪವರ್, ಬಿಇಎಂಎಲ್, ಡೆಲ್ಟಾ, ಬಜಾಜ್ ಎಲೆಕ್ಟ್ರಿಕಲ್ಸ್, ಬಾಟಾ ಇಂಡಿಯಾ, ಟಿವಿಎಸ್ ಮೋಟಾರ್, ಯೂನಿಯನ್ ಬ್ಯಾಂಕ್, ಪಾಲಿಸಿಬಜಾರ್, ಬಾಷ್, ಡಿಸಿಬಿ ಬ್ಯಾಂಕ್, ಎನ್‌ಡಿಟಿವಿ, ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT