ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಒಳ್ಳೆಯ ಸಾಲ, ಕೆಟ್ಟ ಸಾಲ

Last Updated 9 ಅಕ್ಟೋಬರ್ 2020, 2:49 IST
ಅಕ್ಷರ ಗಾತ್ರ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸದನದಲ್ಲಿ ಒಂದು ಸ್ವಾರಸ್ಯಕರ ಚರ್ಚೆ ನಡೆದಿತ್ತು. ರಾಜ್ಯದಲ್ಲಿ ಸಾಲದ ಪ್ರಮಾಣ ಹೆಚ್ಚಾಗಿದೆ ಎಂಬುದು ಆ ಚರ್ಚೆಯ ವಸ್ತು. ವಿರೋಧ ಪಕ್ಷಗಳ ಪ್ರಮುಖರೆಲ್ಲ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ನಂತರ, ತಮ್ಮ ವಾದವನ್ನು ಸದನದ ಮುಂದಿರಿಸಿದ ನಂತರ ಸಿದ್ದರಾಮಯ್ಯ ಅವರು ಉತ್ತರ ನೀಡಲು ಎದ್ದುನಿಂತರು. ‘ಸಾಲವನ್ನು ಯಾವ ಉದ್ದೇಶಕ್ಕಾಗಿ ಮಾಡಲಾಗಿದೆ ಎಂಬುದನ್ನು ಎಲ್ಲರೂ ಗಮನಿಸಬೇಕು. ಆಸ್ತಿ ಸೃಷ್ಟಿಗಾಗಿ ಸಾಲ ಮಾಡುವುದು ತಪ್ಪಲ್ಲ’ ಎಂದು ಅವರು ಉತ್ತರಿಸಿದ್ದರು. ಅವರು ಈ ಮಾತುಗಳನ್ನು ಹೇಳಿದ್ದು ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯನ್ನು, ಸರ್ಕಾರಕ್ಕಾಗಿ ಮಾಡುವ ಆಸ್ತಿಯನ್ನು ಮನಸ್ಸಿನಲ್ಲಿ ಇರಿಸಿಕೊಂಡು. ಆದರೆ, ಅವರ ಮಾತುಗಳಲ್ಲಿ ವೈಯಕ್ತಿಕ ಜೀವನಕ್ಕೂ ಅನ್ವಯವಾಗುವ ದೊಡ್ಡ ಪಾಠವೊಂದು ಇದೆ.

ಜೀವನದಲ್ಲಿ ಸಾಲವನ್ನೇ ಮಾಡದೆ ಇರುವುದು ಎಲ್ಲರಿಂದಲೂ ಸಾಧ್ಯವಾಗಲಿಕ್ಕಿಲ್ಲ. ಹುಟ್ಟುವಾಗಲೇ ಬಾಯಲ್ಲಿ ಬಂಗಾರದ ಚಮಚ ಇಟ್ಟುಕೊಂಡವರಿಂದ ಸಾಲವೇ ಇಲ್ಲದ ಜೀವನ ಸಾಧ್ಯವಾಗಬಹುದು. ಆದರೆ, ಮಧ್ಯಮ ವರ್ಗದವರಿಗೆ ಸಾಲ ಒಂದಲ್ಲ ಒಂದು ಹಂತದಲ್ಲಿ ಅನಿವಾರ್ಯ. ಹೀಗಿದ್ದರೂ, ಸಾಲವನ್ನು ಒಳ್ಳೆಯ ಉದ್ದೇಶಕ್ಕಾಗಿ – ಅಂದರೆ, ಸಿದ್ದರಾಮಯ್ಯ ಅವರು ಹೇಳಿದಂತೆ ಆಸ್ತಿ ಸೃಷ್ಟಿಗಾಗಿ – ಮಾಡಿ, ಆ ಸಾಲದ ಕಾರಣದಿಂದಾಗಿಯೇ ವೈಯಕ್ತಿಕ ಸಂಪತ್ತು ಹೆಚ್ಚುವಂತೆ ನೋಡಿಕೊಳ್ಳಬೇಕು. ಹಾಗೆ ಮಾಡುವ ಸಾಲ ಒಳ್ಳೆಯ ಸಾಲ.

ಶ್ರೀಮಾನ್ ಶ್ರೀಹರಿ ಎಂಬ ವ್ಯಕ್ತಿಗೆ ಬೆಂಗಳೂರಿನ ಹೊರವಲಯದಲ್ಲಿ ಒಂದು ನಿವೇಶನ ಖರೀದಿಸಬೇಕು ಎಂಬ ಮನಸ್ಸಾಯಿತು. ನಿವೇಶನದ ಬೆಲೆ ₹ 20 ಲಕ್ಷ. ಆತ ನಿವೇಶನ ಖರೀದಿಸಲು ಉದ್ದೇಶಿಸಿರುವ ಸ್ಥಳದಲ್ಲಿ ನಿವೇಶನದ ಬೆಲೆಯು ವಾರ್ಷಿಕ ಶೇಕಡ 10ರಷ್ಟು ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಅಂದರೆ, ಈಗ ₹ 20 ಲಕ್ಷ ಇರುವ ನಿವೇಶನದ ಮೌಲ್ಯವು ಹತ್ತು ವರ್ಷಗಳ ನಂತರದಲ್ಲಿ ಸರಿಸುಮಾರು ₹ 51 ಲಕ್ಷ ಅಥವಾ ₹ 52 ಲಕ್ಷ ಆಗಿರುತ್ತದೆ. ಶ್ರೀಮಾನ್ ಶ್ರೀಹರಿ ಬಳಿ ₹ 20 ಲಕ್ಷ ಇಲ್ಲ. ಹೀಗಿದ್ದರೂ ಅಷ್ಟೂ ಮೊತ್ತವನ್ನು ಬ್ಯಾಂಕಿನಿಂದ ಸಾಲವಾಗಿ ಪಡೆದು ಅಲ್ಲಿ ನಿವೇಶನ ಖರೀದಿಸಿದ.

ಆ ಸಾಲವನ್ನು 10 ವರ್ಷಗಳ ಅವಧಿಯಲ್ಲಿ, ವಾರ್ಷಿಕ ಶೇಕಡ 8.99ರಷ್ಟು ಬಡ್ಡಿ ಪಾವತಿಸಿ ತೀರಿಸಬೇಕು. ಸಾಲವನ್ನು ಪೂರ್ತಿಯಾಗಿ ತೀರಿಸಿದ ಹೊತ್ತಿನಲ್ಲಿ ಶ್ರೀಮಾನ್ ಶ್ರೀಹರಿ ಬ್ಯಾಂಕಿಗೆ ಅಸಲು ಮತ್ತು ಬಡ್ಡಿಯನ್ನು ಸೇರಿಸಿ ₹ 30.28 ಲಕ್ಷ ಪಾವತಿಸಿದಂತೆ ಆಗುತ್ತದೆ. ಸರಿಸುಮಾರು ₹ 10.28 ಲಕ್ಷವನ್ನು ಶ್ರೀಮಾನ್ ಶ್ರೀಹರಿ ಬಡ್ಡಿಯ ರೂಪದಲ್ಲಿ ಬ್ಯಾಂಕಿಗೆ ಪಾವತಿಸುತ್ತಾನೆ. ಆದರೆ, ಅದೇ ಹೊತ್ತಿನಲ್ಲಿ ನಿವೇಶನದ ಮೌಲ್ಯವು ₹ 51 ಲಕ್ಷದಿಂದ ₹ 52 ಲಕ್ಷದ ಆಸುಪಾಸಿನಲ್ಲಿ ಇರುತ್ತದೆ! ಅಂದರೆ, ಶ್ರೀಮಾನ್ ಶ್ರೀಹರಿ ₹ 30.28 ಲಕ್ಷ ಬಂಡವಾಳ ಹೂಡಿಕೆ ಮಾಡಿ, ಹತ್ತು ವರ್ಷಗಳ ಅವಧಿಯಲ್ಲಿ ಸರಿಸುಮಾರು ₹ 21 ಲಕ್ಷದಷ್ಟು ಸಂಪತ್ತು ಸೃಷ್ಟಿಸಿಕೊಳ್ಳುತ್ತಾನೆ – ಪ್ರತಿ ವರ್ಷ ₹ 2 ಲಕ್ಷ ಲಾಭ ಮಾಡಿಕೊಂಡಂತೆ ಆಗುತ್ತದೆ! ಶ್ರೀಮಾನ್ ಶ್ರೀಹರಿ ಮಾಡಿದ ಸಾಲ ಸಿದ್ದರಾಮಯ್ಯ ಅವರು ಹೇಳಿದಂತಹ ಒಳ್ಳೆಯ ಸಾಲ – ಆಸ್ತಿ ಸೃಷ್ಟಿಗಾಗಿ ಮಾಡಿದ ಸಾಲ. ಇಂತಹ ಸಾಲವನ್ನು ಮಾಡಬೇಕು. ಆ ಮೂಲಕ ಸಂಪತ್ತು ಸೃಷ್ಟಿಸಬೇಕು.

ಈಗ ಕೆಟ್ಟ ಸಾಲಗಳ ಬಗ್ಗೆ ಗಮನ ನೀಡೋಣ. ಅನುತ್ಪಾದಕ ಆಸ್ತಿಯನ್ನು ಸಂಪಾದಿಸಲು ಅಥವಾ ಯಾವುದೇ ಅನುತ್ಪಾದಕ ಕೆಲಸಗಳಿಗೆ ಮಾಡುವ ಸಾಲ ಕೆಟ್ಟ ಸಾಲ ಎಂಬುದರಲ್ಲಿ ಎರಡು ಮಾತಿಲ್ಲ. ಕೆಲವರು ಸಾಲ ಮಾಡಿ, ಕಾರು ಖರೀದಿಸಿ ‘ಒಂದು ಅಸೆಟ್ ಅಂತ ಆಯಿತು. ಹಾಗಾಗಿ, ಸಾಲ ಮಾಡಿದೆ’ ಎಂದು ಹೇಳುವುದಿದೆ. ಆದರೆ, ವೈಯಕ್ತಿಕ ಉದ್ದೇಶಕ್ಕಾಗಿ ವಾಹನ ಖರೀದಿ ಮಾಡುವಾಗ ಕೆಲವು ಸಂಗತಿಗಳನ್ನು ಗಮನದಲ್ಲಿ ಇರಿಸಿಕೊಳ್ಳುವುದು ಒಳಿತು. ವಾಹನ ಸಾಲದ ಬಡ್ಡಿಯು ಈಗಿನ ಸಂದರ್ಭದಲ್ಲಿ ಶೇಕಡ 7.5ರಷ್ಟರಿಂದ ಶೇಕಡ 8.5ರಷ್ಟರವರೆಗೆ ಇದೆ. ಸಾಲವಾಗಿ ಪಡೆಯುವ ಪ್ರತಿ ₹ 100ಕ್ಕೆ ಸಾಲಗಾರನು ಬ್ಯಾಂಕಿಗೆ ಹೆಚ್ಚುವರಿಯಾಗಿ ಗರಿಷ್ಠ ₹ 8.5ರವರೆಗೆ ಪಾವತಿಸಬೇಕು. ಹಾಗೆ ಖರೀದಿಸುವ ಕಾರು ದುಡ್ಡನ್ನು ದುಡಿದುಕೊಡುವುದಿಲ್ಲ. ಸಾಲ ಮಾಡಿ ಕಾರು ಖರೀದಿಸುವ ಬದಲು, ಅಷ್ಟೇ ಮೊತ್ತವನ್ನು ಒಗ್ಗೂಡಿಸಲು, ಈಕ್ವಿಟಿ ಆಧಾರಿತ ಮ್ಯೂಚುವಲ್‌ ಫಂಡ್‌ಗಳಲ್ಲಿ ವ್ಯವಸ್ಥಿತ ಹೂಡಿಕೆ ಮಾಡಬಹುದು. ಕಾರು ಕೊಳ್ಳಲು ಬೇಕಾದ ಹಣ ಆ ಫಂಡ್‌ನಲ್ಲಿ ಒಗ್ಗೂಡಿದಾಗ, ಫಂಡ್‌ನ ಯೂನಿಟ್‌ಗಳನ್ನು ಮಾರಾಟ ಮಾಡಿ ಕಾರು ಖರೀದಿಸಬಹುದಿಲ್ಲ? ಸಾಲ ಮಾಡುವ ಪ್ರಮೇಯ ಆಗ ಎದುರಾಗದು. ಯಾದೃಚ್ಛಿಕವಾಗಿ ಕೆಲವು ಕಾರುಗಳ ಬೆಲೆಯನ್ನು ಪರಿಶೀಲಿಸಿದರೆ, ಕಾರುಗಳ ಹಣದುಬ್ಬರವು ಸಾಲದ ಬಡ್ಡಿಯ ಪ್ರಮಾಣದಷ್ಟು ಇರುವುದಿಲ್ಲ ಎಂಬುದನ್ನು ಕಂಡುಕೊಳ್ಳಬಹುದು.

ದುಡಿಮೆಗೆ ನೆರವಾಗದ ಸಾಲ ಕೆಟ್ಟ ಸಾಲ ಎಂಬುದು ನೆನಪಿರಲಿ. ಯಾವುದೇ ಸಾಲ ಮಾಡುವಾಗ, ಆ ಸಾಲಕ್ಕೆ ಪ್ರತಿಯಾಗಿ ನಾವು ಪಾವತಿ ಮಾಡಬೇಕಿರುವ ಬಡ್ಡಿಯ ಮೊತ್ತ ಎಷ್ಟು, ಅಷ್ಟೊಂದು ಹಣವನ್ನು ಬಡ್ಡಿಯ ರೂಪದಲ್ಲಿ ಪಾವತಿಸುವುದು ಯುಕ್ತವೇ, ನಾವು ಅಂದುಕೊಂಡಿದ್ದನ್ನು ಸಾಲ ಮಾಡದೆಯೇ ತುಸು ತಡವಾಗಿ ಮಾಡಿದರೆ ನಷ್ಟ ಏನಾದರೂ ಆಗುತ್ತದೆ ಎಂಬ ಬಗ್ಗೆ ಆಲೋಚಿಸುವುದು ಸೂಕ್ತ.

ಸಾಲ ಇಂದು ಬಹಳ ಸುಲಭವಾಗಿ ಸಿಗುತ್ತಿದೆ. ಕಷ್ಟಪಡದೆ, ಸುಲಭವಾಗಿ ಸಿಗುವ ಹಲವು ವಸ್ತುಗಳು, ಸೇವೆಗಳು ನಷ್ಟವನ್ನೂ ತರುತ್ತವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT