ಸೋಮವಾರ, ಜುಲೈ 4, 2022
24 °C

ಗೃಹಸಾಲಕ್ಕೆ ಒಳ್ಳೆಯ ಕ್ರೆಡಿಟ್ ಸ್ಕೋರ್ ಏಕೆ ಬೇಕು?

ನೀರಜ್ ಧವನ್ Updated:

ಅಕ್ಷರ ಗಾತ್ರ : | |

Prajavani

ಸಾಲ ಬಯಸುವವರು ಸಾಲ ಪಡೆಯಲು ಎಷ್ಟರ ಮಟ್ಟಿಗೆ ಅರ್ಹತೆ ಹೊಂದಿದ್ದಾರೆ ಎಂಬುದನ್ನು ನಿರ್ಧರಿಸುತ್ತದೆ ಕ್ರೆಡಿಟ್ ಸ್ಕೋರ್. ಸಾಲ ಕೊಡುವ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಯು (ಎನ್‌ಬಿಎಫ್‌ಸಿ) ಸಾಲ ಕೊಡಲು ಒಪ್ಪುವ ಮುನ್ನ, ಸಾಲ ಬಯಸಿದ ವ್ಯಕ್ತಿ ಅದನ್ನು ಹಿಂದಿರುಗಿಸುವ ಸಾಮರ್ಥ್ಯವನ್ನು ಎಷ್ಟರಮಟ್ಟಿಗೆ ಹೊಂದಿದ್ದಾನೆ ಎಂಬುದನ್ನು ಪರಿಶೀಲಿಸುತ್ತದೆ.

ಹೀಗೆ ಮಾಡುವಾಗ ಬ್ಯಾಂಕ್‌ ಅಥವಾ ಎನ್‌ಬಿಎಫ್‌ಸಿಗಳು ಕ್ರೆಡಿಟ್ ಸ್ಕೋರ್ ಪರಿಶೀಲನೆಯ ಮಾರ್ಗ ಹಿಡಿಯುತ್ತವೆ. ಕ್ರೆಡಿಟ್ ಸ್ಕೋರ್ 300ರಿಂದ 900ರವರೆಗೆ ಇರುತ್ತದೆ. 900 ಗರಿಷ್ಠ ಅಂಕ. ಕ್ರೆಡಿಟ್ ಸ್ಕೋರ್ ಹೆಚ್ಚು ಇದ್ದಷ್ಟೂ ಗ್ರಾಹಕರಿಗೆ, ಸಾಲ ಸಿಗುವ ಸಾಧ್ಯತೆಗಳು ಹೆಚ್ಚು. ಗ್ರಾಹಕರು ಅತಿ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಅವರ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಸಾಲದಾತರು ತಾವು ನೀಡಿದ ಹಣವನ್ನು ಕಳೆದುಕೊಳ್ಳುವ ಅಪಾಯ ಕೂಡ ಕಡಿಮೆ ಇರುತ್ತದೆ; ಅಪಾಯ ಕಡಿಮೆ ಇದೆ ಎಂದಾದರೆ ಬಡ್ಡಿ ದರ ಕೂಡ ಕಡಿಮೆಯಾಗುತ್ತದೆ.

ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವುದರಿಂದ ಅತ್ಯುತ್ತಮ ಮಟ್ಟದ ಕ್ರೆಡಿಟ್ ಸ್ಕೋರ್ ಪಡೆಯಲು ಸಾಧ್ಯವಾಗುತ್ತದೆ. ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರು ತಮ್ಮ ಹಣಕಾಸಿನ ಅಗತ್ಯಗಳಿಗೆ ದೊಡ್ಡ ಬ್ಯಾಂಕ್‌ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ನೆರವು ಪಡೆಯುವ ಶಕ್ತಿ ಹೊಂದುತ್ತಾರೆ.

ಸಾಲ ಮರುಪಾವತಿಯ ಇತಿಹಾಸ, ಕ್ರೆಡಿಟ್ ಕಾರ್ಡ್‌ನಲ್ಲಿ ಲಭ್ಯವಿರುವ ಮೊತ್ತದ ಪರಿಣಾಮಕಾರಿ ಬಳಕೆ, ವ್ಯಕ್ತಿ ಎಷ್ಟು ವರ್ಷದಿಂದ ಸಾಲ ಪಡೆಯುತ್ತ ಅದನ್ನು ಸರಿಯಾಗಿ ತೀರಿಸುತ್ತಿದ್ದಾನೆ ಎಂಬ ಅಂಶ, ಗ್ರಾಹಕ ಹೊಂದಿರುವ ಸಾಲದ ಒಟ್ಟು ಖಾತೆಗಳ ಸಂಖ್ಯೆ ಸೇರಿ ಹಲವು ಅಂಶಗಳನ್ನು ಆಧರಿಸಿ ಕ್ರೆಡಿಟ್ ಸ್ಕೋರ್ ಲೆಕ್ಕ ಹಾಕಲಾಗುತ್ತದೆ. ಸಾಲ ಪಡೆಯಲು ಯಾವುದೇ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟಿದೆ ಎಂಬುದನ್ನು ನೀವೇ ಪರಿಶೀಲಿಸಿಕೊಳ್ಳಬಹುದು. ಗೃಹ ಸಾಲ ಪಡೆಯುವುದನ್ನು ಸುಲಭವಾಗಿಸಲು ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಿರಬೇಕು. 

ಒಳ್ಳೆಯ ಕ್ರೆಡಿಟ್ ಸ್ಕೋರ್ ಏಕೆ ಬೇಕು ಎನ್ನುವುದಕ್ಕೆ ಐದು ಕಾರಣಗಳು ಇಲ್ಲಿವೆ:

ನಿಮ್ಮ ಕ್ರೆಡಿಟ್ ಸ್ಕೋರ್ 750ಕ್ಕಿಂತ ಅಧಿಕವಾಗಿದ್ದರೆ ನಿಮಗೆ ಒಳ್ಳೆಯ ಗೃಹಸಾಲ ಯೋಜನೆಯ ಪ್ರಯೋಜನ ದೊರೆಯಬಹುದು. ಇದರೊಂದಿಗೆ ಒಳ್ಳೆಯ ಬ್ಯಾಂಕ್‍ನಲ್ಲಿ ಗೃಹಸಾಲಕ್ಕಾಗಿ ಅರ್ಜಿ ಸಲ್ಲಿಸಲು ಕೂಡ ಈ ಸ್ಕೋರ್ ನೆರವಾಗುತ್ತದೆ. ಸಾಲ ಮಂಜೂರು ಮಾಡಬೇಕೋ ಬೇಡವೋ ಎಂದು ನಿರ್ಧರಿಸುವ ಮೊದಲು ಬ್ಯಾಂಕ್‌ ಅಥವಾ ಎನ್‌ಬಿಎಫ್‌ಸಿಗಳು ಸಾಲಗಾರರ ಆರ್ಥಿಕ ಸಾಮರ್ಥ್ಯವನ್ನು ಪರಿಶೀಲಿಸುತ್ತವೆ. ತೀರಾ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರು, ಕಳಪೆ ಮರುಪಾವತಿ ಇತಿಹಾಸ ಹೊಂದಿರುವವರು ಒಳ್ಳೆಯ ಯೋಜನೆಗಳ ಅಡಿಯಲ್ಲಿ ಗೃಹಸಾಲ ಪಡೆಯಲು ಸಾಧ್ಯವಾಗುವುದಿಲ್ಲ.

1. ಸಾಲ ಪಡೆಯಲು ನಿಮ್ಮನ್ನು ಅರ್ಹರನ್ನಾಗಿಸಿಕೊಳ್ಳಿ:
750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇದ್ದರೆ ಅದನ್ನು ಆರೋಗ್ಯಕರ ಕ್ರೆಡಿಟ್ ಸ್ಕೋರ್ ಎಂದು ಹೇಳಲಾಗುತ್ತದೆ. ಸಾಲ ಪಡೆಯುವ ವ್ಯಕ್ತಿಯು ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸಾಲ ನೀಡುವವರು ಅತ್ಯುತ್ತಮ ಬಡ್ಡಿ ದರವನ್ನು ನಿಗದಿ ಮಾಡಲು ಮುಂದೆ ಬರುತ್ತಾರೆ. ಇದು ಸುಲಭವಾಗಿ ಸಾಲ ಪಡೆಯಲು ನೆರವಾಗುವುದಷ್ಟೇ ಅಲ್ಲದೆ, ಬಡ್ಡಿ ದರದಲ್ಲಿ ರಿಯಾಯಿತಿ, ಪ್ರೊಸೆಸಿಂಗ್ ಶುಲ್ಕಗಳಲ್ಲಿ ಕಡಿತದ ರೀತಿಯ ಕೊಡುಗೆಗಳನ್ನು ಪಡೆಯಲು ಕೂಡ ನೆರವಿಗೆ ಬರುತ್ತದೆ.

2. ಕಡಿಮೆ ಬಡ್ಡಿ ದರ:
ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಅತ್ಯುತ್ತಮ ಕ್ರೆಡಿಟ್ ಸ್ಕೋರ್ ನೆರವಾಗುತ್ತದೆ.

3. ದೀರ್ಘಾವಧಿ ಸಾಲ:
ನಿಮ್ಮ ಕ್ರೆಡಿಟ್ ಸ್ಕೋರ್ ಎಷ್ಟು ಉತ್ತಮ ಆಗಿರುತ್ತದೆ ಎಂಬುದನ್ನು ಆಧರಿಸಿ ದೊಡ್ಡ ಮೊತ್ತದ ಸಾಲ ಮತ್ತು ಆ ಸಾಲ ಮರುಪಾವತಿಸಲು ಹೆಚ್ಚಿನ ಅವಧಿ ನಿಮಗೆ ಸಿಗುತ್ತದೆ.

4. ತ್ವರಿತ ಅನುಮೋದನೆ:
ಅತಿ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿರುವ ವ್ಯಕ್ತಿ ಸಲ್ಲಿಸುವ ಅರ್ಜಿಯನ್ನು ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳು ತ್ವರಿತ ಗತಿಯಲ್ಲಿ ಇತ್ಯರ್ಥಪಡಿಸುತ್ತವೆ. ಏಕೆಂದರೆ ಸಾಲ ಪಡೆದ ವ್ಯಕ್ತಿಗೆ ಅದನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಸಾಮರ್ಥ್ಯ ಇದೆ ಎಂಬುದು ಅದಾಗಲೇ ಸಾಬೀತಾಗಿರುತ್ತದೆ.

5. ಶುಲ್ಕ ರಿಯಾಯಿತಿ:
ಅತ್ಯುತ್ತಮ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ಸಾಲ ನೀಡಲು ಬ್ಯಾಂಕ್‌ ನಿರ್ಧರಿಸಿದರೆ, ಸಾಲ ಪಡೆಯುವ ವ್ಯಕ್ತಿಗೆ ಕೆಲವು ಶುಲ್ಕಗಳಲ್ಲಿ ರಿಯಾಯಿತಿ ಕೇಳಲು ಅವಕಾಶ ದೊರೆಯುತ್ತದೆ.

(ಲೇಖಕ ಎಕ್ಸ್‌ಪೀರಿಯನ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು