ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Personal Finance: ಹಣಕಾಸು ವಿಚಾರ– ಪ್ರಶ್ನೋತ್ತರ

Published : 4 ಏಪ್ರಿಲ್ 2023, 21:12 IST
ಫಾಲೋ ಮಾಡಿ
Comments

ಮಲ್ಲಪ್ಪ ಎನ್, ಊರು ಬೇಡ

l ಪ್ರಶ್ನೆ: ನನ್ನ ಮಗ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾನೆ. ಪ್ರತಿ ತಿಂಗಳು ₹ 40 ಸಾವಿರವನ್ನು ನನ್ನ ಹೆಂಡತಿಯ ಹೆಸರಲ್ಲಿ ಮ್ಯೂಚುವಲ್ ಫಂಡ್ ಹಾಗೂ ಷೇರು ಖರೀದಿಗೆ ಬಳಸುತ್ತಿದ್ದಾನೆ. ಈ ವ್ಯವಹಾರಕ್ಕೆ ಸಂಬಂಧಿಸಿ ನನ್ನ ಹೆಂಡತಿ ಆದಾಯ ತೆರಿಗೆ ವಿವರ ಸಲ್ಲಿಸಬೇಕೇ?

ಉತ್ತರ: ಅನ್ಯ ವ್ಯಕ್ತಿಗಳ ಖಾತೆಯಿಂದ ಮ್ಯೂಚುವಲ್ ಫಂಡ್ ವಹಿವಾಟುಗಳಿಗೆ ಅನುಮತಿಸದೆ ಇರುವುದು ಹಣದ ಅಕ್ರಮ ವರ್ಗಾವಣೆ ಕಾಯ್ದೆಗೆ ಅನುಗುಣವಾಗಿ, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ ಹೊರಡಿಸಿರುವ ಮಾರ್ಗಸೂಚಿಗಳ ಒಂದು ಭಾಗ. ಗ್ರಾಹಕರು ನಿಯಮಗಳಿಗೆ ಅನುಗುಣವಾಗಿ ಕೆವೈಸಿ ದಾಖಲೆಗಳನ್ನು ಸಲ್ಲಿಸಬೇಕು.

ನಿಮ್ಮ ಮಗ, ತಾಯಿಯ ಹೆಸರಲ್ಲಿರುವ ಖಾತೆಗೆ ಹಣ ವರ್ಗಾಯಿಸಿ, ಅಲ್ಲಿಂದ ಅವರ ಹೆಸರಲ್ಲಿ ಹೂಡಿಕೆ ಮಾಡುತ್ತಿ ದ್ದಾರೆ. ಯಾರ ಹೆಸರಲ್ಲಿ ಹೂಡಿಕೆ ಮಾಡಲಾಗಿದೆಯೋ ಅವರೇ ತೆರಿಗೆ ಪಾವತಿಸಲು ಬಾಧ್ಯಸ್ಥರು. ಇದು ಡಿವಿಡೆಂಡ್ ಆದಾಯಕ್ಕೂ ಅನ್ವಯವಾಗುತ್ತದೆ, ಯೂನಿಟ್‌ಗಳನ್ನು ಮಾರಾಟ ಮಾಡಿ ಗಳಿಸಿದ ಲಾಭಾಂಶಕ್ಕೂ ಅನ್ವಯ ಆಗುತ್ತದೆ. ನಿಮ್ಮ ಮಾಹಿತಿಯಂತೆ ವರ್ಷದಲ್ಲಿ ಈ ಹೂಡಿಕೆಯ ಮೊತ್ತ ₹ 4.80 ಲಕ್ಷ ಆಗುತ್ತದೆ. ಆದಾಯ ತೆರಿಗೆ ನಿಯಮಗಳ ಪ್ರಕಾರ ಯಾವುದೇ ಆಸ್ತಿ/ಹಣ ಇತ್ಯಾದಿ ಯನ್ನು ಅದರ ಸರಿಯಾದ ಮೌಲ್ಯಕ್ಕೆ ವರ್ಗಾಯಿಸದೆ, ಉಚಿತವಾಗಿ ಅಥವಾ ಅಲ್ಪ ಬೆಲೆಗೆ ಹಸ್ತಾಂತರಿಸಿದಾಗ ಅಂತಹ ವ್ಯತ್ಯಾಸವು ಪಡೆದವರ ಪಾಲಿಗೆ ಆದಾಯವಾಗುತ್ತದೆ. ನಿಮ್ಮ ವಿಚಾರದಲ್ಲಿ, ಹಣವನ್ನು ಮಗ ನೀಡುತ್ತಿರುವ ಕಾರಣ ಅದನ್ನು ವಿನಾಯಿತಿ ವರ್ಗದಲ್ಲಿ ಪರಿಗಣಿಸಲಾಗುತ್ತದೆ. ಆದರೂ ಅದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳು ನಿಮ್ಮಲ್ಲಿ ಇರಲಿ. ಗಿಫ್ಟ್ ಡೀಡ್ (ದಾನಪತ್ರ) ದಾಖಲೆ ಇರಿಸಿಕೊಂಡಾಗ ವರ್ಗಾಯಿಸಿದವರಿಗೂ, ಸ್ವೀಕರಿಸಿದವರಿಗೂ ಹೆಚ್ಚು ಭದ್ರತೆ.

ಆದಾಯ ತೆರಿಗೆ ವಿಚಾರವಾಗಿ ಹೇಳುವುದಾದರೆ, ಪ್ರಸ್ತುತ ಆರ್ಥಿಕ ವರ್ಷದಿಂದ (2023-24) ಹೊಸ ಆದಾಯ ತೆರಿಗೆ ಪದ್ದತಿಯಂತೆ ₹ 7.00 ಲಕ್ಷ ವಾರ್ಷಿಕ ಆದಾಯದವರೆಗೆ ವಿನಾಯಿತಿ ಇರುವ ಕಾರಣ ತೆರಿಗೆ ಬರುವುದಿಲ್ಲ. ಹಾಗೂ ಆದಾಯವು ₹ 3 ಲಕ್ಷಕ್ಕಿಂತ ಅಧಿಕ ವಿದ್ದಾಗ ವಿವರ ಸಲ್ಲಿಸಿ, ಸಿಗುವ ತೆರಿಗೆ ವಿನಾಯಿತಿಗಳನ್ನು ಸರಿಯಾಗಿ ಭರ್ತಿಮಾಡಿ ಪಡೆದುಕೊಳ್ಳಬೇಕು. ನೀವು ಕೊಟ್ಟ ಮಾಹಿತಿಯಂತೆ ಅವರಿಗೆ ಬೇರಾವ ಆದಾಯವಿಲ್ಲದಿದ್ದರೆ ಏನೂ ತೆರಿಗೆ ಬರಲಾರದು.

ಕೆ. ಜಮುನ, ಮೈಸೂರು

l ಪ್ರಶ್ನೆ: ನಾನು ಮೈಸೂರು ತಾಲ್ಲೂಕಿನ ಹಳ್ಳಿಯೊಂದರಲ್ಲಿ 19 ಗುಂಟೆ ಕೃಷಿ ಜಮೀನನ್ನು 1993ರಲ್ಲಿ ₹ 28 ಸಾವಿರಕ್ಕೆ ಖರೀದಿಸಿದ್ದೆ. ಅದನ್ನು 1998ರಲ್ಲಿ ಮುಡಾ (MUDA) ವತಿಯಿಂದ ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡರು. ಆದರೆ, 2001ರಲ್ಲಿ ಅದು ಡಿನೋಟಿಫೈ ಆಯಿತು. ‘ಮುಡಾ’ 2022 ಜುಲೈನಲ್ಲಿ 19 ಗುಂಟೆಗೆ ಬದಲಾಗಿ ಅಭಿವೃದ್ಧಿಪಡಿಸಿದ 30X40 ಅಡಿ ಅಳತೆಯ 5 ನಿವೇಶನಗಳನ್ನು ನನ್ನ ಹೆಸರಿಗೆ ಮಂಜೂರು ಮಾಡಿತ್ತು. ಈ 5 ನಿವೇಶನಗಳನ್ನು ನಾನು ಡಿಸೆಂಬರ್ 2022ರಲ್ಲಿ ಒಟ್ಟು ₹ 90 ಲಕ್ಷಕ್ಕೆ ಮಾರಾಟ ಮಾಡಿರುತ್ತೇನೆ. ಈಗ ನಾನು ಈ ಹಣಕ್ಕೆ ಲಾಭ ಹೇಗೆ ಲೆಕ್ಕ ಮಾಡಬೇಕು? ಆದಾಯ ತೆರಿಗೆ ಎಷ್ಟು ಕಟ್ಟಬೇಕು? ತೆರಿಗೆ ಉಳಿಸಲು ಹೊಸ ಮನೆ ಖರೀದಿಸಬಹುದೇ? ನಾನು ಇದುವರೆಗೆ ಆದಾಯ ತೆರಿಗೆ ಪಾವತಿದಾರ ಅಲ್ಲ.

ಉತ್ತರ: ಯಾವುದೇ ಬಂಡವಾಳ ಆಸ್ತಿಯ ಮಾರಾಟದ ಸಂದರ್ಭದಲ್ಲಿ ಬಂದ ಆದಾಯ ತೆರಿಗೆಗೊಳಪಡುತ್ತದೆ. ಸ್ಥಿರ ಆಸ್ತಿಯನ್ನು 2 ವರ್ಷಕ್ಕಿಂತ ಅಧಿಕ ಸಮಯ ಖರೀದಿದಾರರ ಹೆಸರಲ್ಲಿ ಹೊಂದಿದಾಗ ಅಂತಹ ಆಸ್ತಿ ‘ದೀರ್ಘಾವಧಿ ಬಂಡವಾಳ ಆಸ್ತಿ’ಯಾಗಿ ಪರಿಗಣಿತವಾಗುತ್ತದೆ. ಈ ಅವಧಿಯನ್ನು ಲೆಕ್ಕ ಹಾಕುವಾಗ ಮೂಲ ಆಸ್ತಿಯ ಖರೀದಿಯ ಸಮಯ ಪರಿಗಣಿಸಿ ಲೆಕ್ಕ ಹಾಕಬೇಕು. ನೀವು ಜಮೀನು ಖರೀದಿಸಿದಾಗ ಅದು 19 ಗುಂಟೆ ಕೃಷಿ ಜಮೀನಾಗಿತ್ತು. ಮಾರಾಟದ ಸಂದರ್ಭದಲ್ಲಿ ಅದು ಕೃಷಿ ಜಮೀನಾಗಿದ್ದರೆ ಮಾತ್ರ ಅದಕ್ಕೆ ತೆರಿಗೆ ವಿನಾಯಿತಿ ಇರುತ್ತದೆ.

ಜಮೀನನ್ನು ನಿಮ್ಮಿಂದ ಪಡೆದು ಭೂಪರಿವರ್ತನೆ ಹಾಗೂ ಅಭಿವೃದ್ದಿ ಮಾಡಿ ಡಿನೋಟಿಫಿಕೇಷನ್ ಕಾರಣ ದಿಂದ ಮತ್ತೆ ಬದಲಿ ನಿವೇಶನಗಳನ್ನು ನಿಮಗೆ ನೀಡಲಾಗಿದೆ. ಅದೇ ವರ್ಷ ನೀವು ಜಮೀನನ್ನು ಮಾರಾಟ ಮಾಡಿದ್ದೀರಿ. ನಿಮ್ಮ ಮೂಲ ಜಮೀನು 2001ಕ್ಕಿಂತ ಹಿಂದೆ ಖರೀದಿಸಿದ್ದ ಕಾರಣ, ಹಾಗೂ ಆ ವರ್ಷದಿಂದ ಆದಾಯ ತೆರಿಗೆಗೆ ಸಂಬಂಧಿಸಿ ಹಣದುಬ್ಬರ ಸೂಚ್ಯಂಕ ಮರು ಮೌಲ್ಯೀಕರಣ ಆಗಿದ್ದರಿಂದ ನಿಮ್ಮ ಜಮೀನಿಗೆ ಆ ಸಮಯದಲ್ಲಿ ನ್ಯಾಯೋಚಿತ ಮಾರುಕಟ್ಟೆ ಮೌಲ್ಯ (ಸರ್ಕಾರಿ ಬೆಲೆ) ಎಷ್ಟಿತ್ತು ಎನ್ನುವುದನ್ನು ಗುರುತಿಸಿ. ಇದು ನಿಮ್ಮ ಖರೀದಿ ಬೆಲೆಗಿಂತ ಅಧಿಕ ಇರುತ್ತದೆ. ಈ ಬೆಲೆಗೆ ಮಾರಾಟವಾದ ವರ್ಷದ ಹಣದುಬ್ಬರ ಸೂಚ್ಯಂಕ (331) ಹಾಗೂ 2001ನೇ ಸಾಲಿನ ಸೂಚ್ಯಂಕ (100) ಬಳಸಿ ಪ್ರಸ್ತುತ ಮೌಲ್ಯ ನಿರ್ಧರಿಸಬೇಕು. ಉದಾಹರಣೆಗೆ, ಅಂದಿನ ಮೌಲ್ಯ ₹ 10 ಲಕ್ಷವಾಗಿದ್ದರೆ, ಜಮೀನಿನ ಪ್ರಸಕ್ತ ಬೆಲೆ ₹ 33.10 ಲಕ್ಷ. ಮಾರಾಟ ಮೌಲ್ಯ ಇದಕ್ಕಿಂತ ಎಷ್ಟು ಅಧಿಕ ಇದೆಯೋ ಅದುವೇ ನಿಮ್ಮ ಲಾಭಾಂಶ. ಬಂದ ಲಾಭಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 112ಎ ಅಡಿ ಶೇಕಡ 20.8ರ ಸೆಸ್ ಸಹಿತ ತೆರಿಗೆ ಇರುತ್ತದೆ.

ತೆರಿಗೆ ಉಳಿತಾಯದ ವಿಚಾರವಾಗಿ ಹೊಸ ಮನೆ ಖರೀದಿ, ಮನೆ ನಿರ್ಮಾಣ ಅಥವಾ ಬಂಡವಾಳ ವೃದ್ಧಿ ಖಾತೆ ಯೋಜನೆಯಲ್ಲಿ ಬ್ಯಾಂಕಿನಲ್ಲಿ ಠೇವಣಿ ಮಾಡಿ ಮುಂದೆ ಮನೆ ಖರೀದಿಗೆ ಉಪಯೋಗಿಸುವುದು ಅಥವಾ ಬಾಂಡ್‌ಗಳಲ್ಲಿ ಐದು ವರ್ಷಗಳ ಅವಧಿಗೆ ಗರಿಷ್ಠ ₹ 50 ಲಕ್ಷದವರೆಗೆ, ಆಸ್ತಿ ಮಾರಾಟವಾದ 6 ತಿಂಗಳೊಳಗೆ ಹೂಡಿಕೆ ಮಾಡುವ ಮೂಲಕ ತೆರಿಗೆ ವಿನಾಯಿತಿ ಪಡೆಯ ಬಹುದು. ನಿಮ್ಮ ವಿಚಾರದಲ್ಲಿ ಹೆಚ್ಚಿನ ದಾಖಲೆ ಹಾಗೂ ವಿವರಗಳೊಂದಿಗೆ ಸಮೀಪದ ತೆರಿಗೆ ಸಲಹೆಗಾರರನ್ನು ಖುದ್ದಾಗಿ ಸಂಪರ್ಕಿಸಿ.

---

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ,
ಬೆಂಗಳೂರು–560001 ಇ–ಮೇಲ್‌: businessdesk@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT