ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ- ಪ್ರಮೋದ ದೈತೋಟ ಅವರಿಂದ

ಎಂ. ಗಣೇಶ್ ಮೂರ್ತಿ
l→ಪ್ರಶ್ನೆ: ನಾನು ಎಸ್‌ಬಿಐ ಬ್ಯಾಂಕ್‌ನಲ್ಲಿ ‘ಅಟಲ್ ಪಿಂಚಣಿ ಯೋಜನೆ’ಯಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಇದಕ್ಕಾಗಿ ಕಾಯಂ ನಿವೃತ್ತಿ ಖಾತೆ ಸಂಖ್ಯೆ (ಪಿಆರ್‌ಎಎನ್) ಹೊಂದಿರುತ್ತೇನೆ. ನಾನು ಈಗ ಎನ್‌ಪಿಎಸ್ ಖಾತೆ ತೆರೆಯಲು ಯೋಚಿಸುತ್ತಿದ್ದೇನೆ. ನಾನು ಎನ್‌ಪಿಎಸ್ ಖಾತೆ ತೆರೆಯಬಹುದೇ? ಇದಕ್ಕೆ ಬೇರೆ ಪಿಆರ್‌ಎಎನ್ ಸಂಖ್ಯೆ ನೀಡಿದರೆ ಏನೂ ತೊಂದರೆ ಇಲ್ಲವೇ? ಜೊತೆ ಜೊತೆಗೆ ಅಟಲ್ ಪೆನ್ಷನ್ ಯೋಜನೆ ಹಾಗೂ ಎನ್‌ಪಿಎಸ್ ಖಾತೆ ಹೊಂದಬಹುದೇ?
ಉತ್ತರ: ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಅಟಲ್ ಪಿಂಚಣಿ ಯೋಜನೆ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಇವೆರಡರಲ್ಲೂ ಹೂಡಿಕೆ ಮಾಡಬಹುದು. ಇವೆರಡೂ ಹೂಡಿಕೆಗಳು ಪಿಂಚಣಿ ಯೋಜನೆಗಳಾಗಿದ್ದರೂ, ಪ್ರತ್ಯೇಕ ವಯೋಮಾನ ಹಾಗೂ ಹೂಡಿಕೆಯ ವೈವಿಧ್ಯತೆಯನ್ನು ಹೊಂದಿವೆ. ಇವುಗಳ ನಿಯಮಾವಳಿ, ಲಾಭದ ಪ್ರಮಾಣ ಬೇರೆ ಬೇರೆ.
ಎರಡು ಪಿಆರ್‌ಎಎನ್ ಪಡೆಯುವ ಮೂಲಕ ಒಂದಕ್ಕಿಂತ ಅಧಿಕ ಎನ್‌ಪಿಎಸ್ ಖಾತೆಗಳಲ್ಲಿ ಹೂಡಿಕೆ ಮಾಡುವುದಕ್ಕೆ ನಿರ್ಬಂಧಗಳಿವೆ. ಅಂತಹ ಸಂದರ್ಭದಲ್ಲಿ ಸ್ಥಳೀಯ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಯಾವುದಾದರೂ ಒಂದನ್ನು ರದ್ದುಗೊಳಿಸಬೇಕಾಗುತ್ತದೆ. ಅದಕ್ಕೂ ಮೊದಲು, ರದ್ದು ಮಾಡಲಾಗುವ ಖಾತೆಯಲ್ಲಿನ ಮೊತ್ತವನ್ನು ವರ್ಗಾಯಿಸಿಕೊಳ್ಳಬೇಕು.
ಆದರೆ, ನಿಮ್ಮ ಪ್ರಶ್ನೆಯಂತೆ, ಹೂಡಿಕೆದಾರ ಎರಡು ಪ್ರತ್ಯೇಕ ಯೋಜನೆಗಳಲ್ಲಿ ಹೂಡಿಕೆ ಮಾಡುವ ಕಾರಣ ಹೊಸ ಪಿಆರ್‌ಎಎನ್ ಸಂಖ್ಯೆ ಹೊಂದುವುದರಲ್ಲಿ ತೊಂದರೆ ಇರಬಾರದು. ಇದನ್ನು ಎನ್‌ಪಿಎಸ್‌ಗೆ ಸಂಬಂಧಿಸಿದ ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಯವರ ಪ್ರಶ್ನೋತ್ತರ ಮಾಲಿಕೆಯಲ್ಲೂ ವಿವರಿಸಲಾಗಿದೆ. ಹಾಗಿದ್ದರೂ ಇದಕ್ಕೆ ಸಂಬಧಿಸಿದ ನಿಖರ ಮಾಹಿತಿಗೆ ನಿಮ್ಮಲ್ಲಿರುವ ಪ್ರಸ್ತುತ ಪಿಆರ್‌ಎಎನ್ ಸಂಖ್ಯೆಯನ್ನು ಎಲ್ಲಿ ಎನ್‌ಪಿಎಸ್ ಖಾತೆ ತೆರೆಯಬೇಕೆಂದಿದ್ದೀರೊ ಆ ಬ್ಯಾಂಕ್ ಶಾಖೆಯಲ್ಲಿ ಮೊದಲೇ ಪ್ರಸ್ತಾಪಿಸುವ ಮೂಲಕ ಸುಲಭವಾಗಿ ಬಗೆಹರಿಸಿಕೊಳ್ಳಬಹುದು.
ಎನ್.ಕೆ. ಉದಯ್, ಬೆಂಗಳೂರು
l→ಪ್ರಶ್ನೆ: ನಾನು ಇನ್ನು ಐದು ವರ್ಷಗಳಲ್ಲಿ ವೃತ್ತಿಯಿಂದ ನಿವೃತ್ತನಾಗಲಿದ್ದೇನೆ. ಇದುವರೆಗೆ ನಾನು ಹತ್ತು ಲಕ್ಷ ರೂಪಾಯಿ ಉಳಿತಾಯ ಮಾಡಿದ್ದೇನೆ. ನನ್ನ ಈಗಿನ ವೇತನ ತಿಂಗಳಿಗೆ ಎಂಭತ್ತು ಸಾವಿರ ರೂಪಾಯಿ. ನನಗೆ ಪಿಂಚಣಿ ಸೌಲಭ್ಯ ಇಲ್ಲ. ನಿವೃತ್ತಿಯ ನಂತರದ ಬದುಕಿಗೆ ಒಂದಿಷ್ಟು ಪಿಂಚಣಿ ಮಾದರಿಯ ಹಣ ಸಿಗುವಂತೆ ಆಗಲು ಏನು ಮಾಡಬೇಕು? ವಿವರವಾಗಿ ತಿಳಿಸಿಕೊಡಿ.
ಉತ್ತರ: ನಿಮ್ಮ ನಿವೃತ್ತಿ ಬದುಕಿನ ನಂತರ ನಿಮ್ಮ ಭವಿಷ್ಯದ ಆದಾಯದ ಮೇಲೆ ಎಷ್ಟು ಮಂದಿಯ ಬದುಕು ಸಾಗಬೇಕು ಎಂಬುದನ್ನು ಮೊದಲು ನಿರ್ಧರಿಸಿ. ಪ್ರಸ್ತುತ ನಿಮಗೆ ಯಾವುದೇ ಆರ್ಥಿಕ ಜವಾಬ್ದಾರಿ, ಸಾಲ ಇತ್ಯಾದಿ ಇಲ್ಲವೆಂದು ತಿಳಿದುಕೊಳ್ಳೋಣ. ನಿಮ್ಮ ಮಕ್ಕಳು ಆರ್ಥಿಕವಾಗಿ ಸ್ವತಂತ್ರರಾಗಿದ್ದಾರೆಂದು ಭಾವಿಸಿದರೆ, ತಿಂಗಳ ಅರ್ಧದಷ್ಟು ಮೊತ್ತವನ್ನು ಉಳಿತಾಯ ಮಾಡುವ ಬಗ್ಗೆ ಯೋಜನೆ ಮಾಡಿ. ಇದಕ್ಕಾಗಿ ಅನಗತ್ಯ ಖರ್ಚು ತಗ್ಗಿಸಿ. ನೀವು ನಿವೃತ್ತಿ ಜೀವನದ ಕೊನೆಯ ಐದು ವರ್ಷಗಳ ಹಂತದಲ್ಲಿ ಇರುವುದರಿಂದ ಪ್ರತಿ ತಿಂಗಳಿಗೆ ₹ 40,000 ಉಳಿತಾಯ ಮಾಡುವುದರಿಂದ ವರ್ಷಕ್ಕೆ ಸುಮಾರು ₹ 5 ಲಕ್ಷ ಸಂಗ್ರಹವಾಗುತ್ತದೆ. ಮುಂದಿನ ವರ್ಷಗಳಲ್ಲಿ ಆದಾಯ ಹೆಚ್ಚಿದಂತೆ ಉಳಿತಾಯದ ಪ್ರಮಾಣವನ್ನು ಹೆಚ್ಚಿಸುವತ್ತ ಗಮನಹರಿಸಿ. ಇದು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಹೆಚ್ಚುವರಿ ಇಪ್ಪತ್ತೈದರಿಂದ ಮೂವತ್ತು ಲಕ್ಷ ಹೂಡಿಕೆಯಾಗಿ ಸಂಗ್ರಹವಾಗಲಿದೆ.
ನೀವು ನಿವೃತ್ತಿ ಬದುಕಿಗೆ ಹತ್ತಿರ ಇರುವುದರಿಂದ ನಿಮ್ಮ ಹೂಡಿಕೆಯು ಸಾಧ್ಯವಾದಷ್ಟು ಮೂಲಧನ ನಷ್ಟವಾಗದ ರೀತಿಯಲ್ಲಿ ಇರುವುದು ಅಗತ್ಯ. ನೇರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಬೇಡ. ಉಳಿತಾಯಕ್ಕೆ ಲಭ್ಯವಿರುವ ಮೊತ್ತದಲ್ಲಿ ಶೇಕಡ 25ರಷ್ಟನ್ನು ತೆರಿಗೆ ಉಳಿತಾಯದ ಲಾಭ ಕೊಡುವ ಗುಣಮಟ್ಟದ ಮ್ಯೂಚುವಲ್ ಫಂಡ್‌ಗಳಲ್ಲಿ ಮಾಸಿಕ ಕಂತುಗಳಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಮಾರುಕಟ್ಟೆಯ ಕ್ರಮಾಗತ ಏರಿಳಿತದ ಲಾಭ ಮುಂದಿನ ನಾಲ್ಕೈದು ವರ್ಷ ಸಿಗುವುದು. ಆದಾಯ ತೆರಿಗೆಯ 80ಸಿ ಸೆಕ್ಷನ್ ಅಡಿ ₹ 1.50 ಲಕ್ಷ ವಿನಾಯಿತಿ ಸಿಗುವ ಹೂಡಿಕೆಗೆ ಮೊದಲ ಆದ್ಯತೆ ನೀಡಿ. ಉಳಿದ ಮೊತ್ತವನ್ನು ನಿಖರ ಆದಾಯ ತರುವ 60 ತಿಂಗಳ ಕಂತಿನ ನಿಕ್ಷೇಪ ಯೋಜನೆಯಲ್ಲೂ ಹೂಡಿಕೆ ಮಾಡಿ. ಇದಕ್ಕಾಗಿ ಸ್ಥಳೀಯ ಅಂಚೆ ಕಚೇರಿ ಅಥವಾ ಬ್ಯಾಂಕ್ ಸಂಪರ್ಕಿಸಿ. ನಿಮ್ಮಲ್ಲಿರುವ ₹ 10 ಲಕ್ಷವನ್ನು ಅಂಚೆ ಕಚೇರಿಯಲ್ಲಿ ನಿಶ್ಚಿತ ಠೇವಣಿ ಇಡಿ. ಇದು ನಿಮಗೆ ನಿವೃತ್ತಿಯ ಸಮಯದಲ್ಲಿ ಒಟ್ಟಾಗಿ ಬಡ್ಡಿ ಸಹಿತ ಸಿಗುತ್ತದೆ.
ನಿಮ್ಮ ನಿವೃತ್ತಿಯ ಬಳಿಕ ಅಂಚೆ ಕಚೇರಿಯಲ್ಲಿ ಈ ಮೊತ್ತವನ್ನು ಹಿರಿಯ ನಾಗರಿಕರಿಗಾಗಿ ಇರುವ ಉಳಿತಾಯ ಯೋಜನೆಯಲ್ಲಿ ₹ 15 ಲಕ್ಷವನ್ನು ತ್ರೈಮಾಸಿಕ ಬಡ್ಡಿಗಾಗಿ ಹಾಗೂ ತಿಂಗಳ ಬಡ್ಡಿ ಆದಾಯ ಯೋಜನೆಯಲ್ಲಿ ತಲಾ ₹ 4.5 ಲಕ್ಷ (ಜಂಟಿ ಖಾತೆಯಾದರೆ ₹ 9 ಲಕ್ಷ) ಹೂಡಿಕೆ ಮಾಡಿ ಆದಾಯ ಪಡೆಯಬಹುದು. ಉಳಿದ ಮೊತ್ತವನ್ನು ಯಾವುದೇ ಬ್ಯಾಂಕ್‌ನಲ್ಲಿ ಉತ್ತಮ ಬಡ್ಡಿ ದರ ನೋಡಿ ಹೂಡಿಕೆ ಮಾಡಿ. ಸುಮಾರು ₹ 45 ಲಕ್ಷ ಒಟ್ಟಾರೆ ಹೂಡಿಕೆಯು ಶೇ 6.5ರ ಬಡ್ಡಿ ದರದಲ್ಲಿ ನಿಮಗೆ ಕನಿಷ್ಠ
₹ 24,000 ತಿಂಗಳ ಆದಾಯ ನೀಡಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.