ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Personal Finance: ಬಂಡವಾಳ ವೃದ್ಧಿ ತೆರಿಗೆ ವಿನಾಯಿತಿ ಎಷ್ಟು ವರ್ಷ?

Last Updated 15 ಫೆಬ್ರವರಿ 2023, 6:26 IST
ಅಕ್ಷರ ಗಾತ್ರ

ಸಾವಂತ್, ಊರು ತಿಳಿಸಿಲ್ಲ

ಪ್ರಶ್ನೆ: ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದ ನಾನು ಈಗ ನಿವೃತ್ತಿ ಹೊಂದಿದ್ದೇನೆ. ನನ್ನ ವಯಸ್ಸು 64 ವರ್ಷ. ಹೊಸ ಮನೆ ಕಟ್ಟುವ ಸಲುವಾಗಿ ಒಂದು ನಿವೇಶನ ಮಾರಿರುತ್ತೇನೆ, ಬಂದ ಹಣವನ್ನು ಉಳಿತಾಯ ಖಾತೆಗೆ ಜಮಾ ಮಾಡಿರುತ್ತೇನೆ. ಕಾರಣಾಂತರದಿಂದ ಮಹಾನಗರ ಪಾಲಿಕೆಯಿಂದ ಮನೆಯ ಯೋಜನೆಗೆ ಅನುಮತಿ ಸಿಗದೆ, ಒಂದು ವರ್ಷದಿಂದ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ.
ಬಂಡವಾಳ ವೃದ್ಧಿ ತೆರಿಗೆ ವಿನಾಯಿತಿ ಎಷ್ಟು ವರ್ಷ ಸಿಗಬಹುದು?

ಉತ್ತರ: ವ್ಯಕ್ತಿಯೊಬ್ಬ ಮನೆಯ ಹೊರತಾಗಿ ಇತರ ಯಾವುದೇ ಆಸ್ತಿಯನ್ನು ಮಾರಾಟ ಮಾಡುವ ಸಂದರ್ಭದಲ್ಲಿ ದೀರ್ಘಾವಧಿ ಬಂಡವಾಳ ಆಸ್ತಿಯಿಂದ ಲಾಭ ಗಳಿಸಿದ್ದರೆ, ಅಂತಹ ಲಾಭಕ್ಕೆ ತೆರಿಗೆ ವಿನಾಯಿತಿ ನೀಡುವ ಸೌಲಭ್ಯವನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54 ಎಫ್ ಅಡಿ ಕಲ್ಪಿಸಲಾಗಿದೆ. ಇದರಂತೆ, ತೆರಿಗೆ ವಿನಾಯಿತಿ ಪಡೆಯಲು ಹೊಸ ಮನೆಯನ್ನು ಮಾರಾಟದ ಒಂದು ವರ್ಷ ಮೊದಲು ಕೊಂಡುಕೊಂಡಿರಬೇಕು ಅಥವಾ ಮಾರಾಟದ ನಂತರ ಎರಡು ವರ್ಷದೊಳಗೆ ಹೊಸ ಮನೆ ಖರೀದಿಸಬೇಕು. ಇವೆರಡೂ ಆಗಿರದ ಪಕ್ಷದಲ್ಲಿ, ಹೊಸ ಮನೆಯನ್ನು ಮೂರು ವರ್ಷದೊಳಗೆ ಕಟ್ಟಿಸಬೇಕು.

‘ಬಂಡವಾಳ ವೃದ್ಧಿ ಖಾತೆ ಯೋಜನೆ 1988’ ಅಡಿ ಮಾನ್ಯ ಮಾಡಲಾದ ಠೇವಣಿ ‘ಎ’ ಅಥವಾ ‘ಬಿ’ ಖಾತೆ
ಗಳಲ್ಲಷ್ಟೇ ಹೂಡಿಕೆ ಮಾಡಿದರೆ ತೆರಿಗೆ ವಿನಾಯಿತಿ ಸಿಗುತ್ತದೆ. ನಿಮ್ಮ ಆ ವರ್ಷಕ್ಕೆ ಸಂಬಂಧಿಸಿದ ತೆರಿಗೆ ವಿವರ ಸಲ್ಲಿಸುವ ಮೊದಲು ಇಂತಹ ಖಾತೆಯಲ್ಲಿ ಹೂಡಿಕೆ ಮಾಡಿರಬೇಕು. ಒಂದು ವೇಳೆ ಬಂದ ಮೊತ್ತವನ್ನು ಇಂತಹ ಯೋಜನೆಯಲ್ಲಿ ಹೂಡಿಕೆ ಮಾಡಲಿಲ್ಲ ಎಂದಾದರೆ, ಲಾಭಾಂಶದ ಮೇಲೆ ಸಹಜವಾಗಿ ಶೇ 20.8ರಷ್ಟು (ಸೆಸ್ ಸೇರಿಸಿ) ತೆರಿಗೆ ಇರುತ್ತದೆ. ಅದೇ ರೀತಿ, ಸಂಪೂರ್ಣ ಹಣ ಉಪಯೋಗಿಸದೆ, ಉಳಿದ ಮೊತ್ತವನ್ನು ಹಿಂಪಡೆದಿದ್ದಲ್ಲಿ ಅಥವಾ ಯೋಜನೆಯ ನಿಯಮಗಳಂತೆ ನಿಗದಿತ ಅವಧಿಯೊಳಗೆ ಹೂಡಿಕೆ ಮಾಡದಿದ್ದಲ್ಲಿ, ಅಂತಹ ಮೊತ್ತಕ್ಕೆ ತೆರಿಗೆ ಅನ್ವಯವಾಗುತ್ತದೆ. ಆಗ ಹೆಚ್ಚುವರಿಯಾಗಿ ಪಡೆದ ವಿನಾಯಿತಿಗೆ ತೆರಿಗೆ
ಕಟ್ಟಬೇಕಾಗುತ್ತದೆ.

ನೀವು ಮಾರಾಟದಿಂದ ಬಂದ ಮೊತ್ತವನ್ನು ಉಳಿತಾಯ ಖಾತೆಯಲ್ಲಿ ಜಮಾ ಮಾಡಿರುವುದಾಗಿ ತಿಳಿಸಿದ್ದೀರಿ. ಇದು ಸಾದಾ ಉಳಿತಾಯ ಖಾತೆಯಾಗಿದ್ದಲ್ಲಿ ವಿನಾಯಿತಿ ಸಿಗಲಾರದು. ಮೇಲೆ ಉಲ್ಲೇಖಿಸಿರುವ ನಿರ್ದಿಷ್ಟ ಖಾತೆಯಲ್ಲಿ ಹೂಡಿಕೆ ಮಾಡಿದ್ದರಷ್ಟೇ ವಿನಾಯಿತಿ ಸಿಗುತ್ತದೆ. ಮನೆ ಕಟ್ಟಲು ಪರವಾನಗಿ ಪಡೆಯುವಲ್ಲಿ ಈಗಾಗಲೇ ಒಂದು ವರ್ಷ ವಿಳಂಬವಾಗಿದ್ದರೂ, ಮನೆಯ ನಿರ್ಮಾಣ ಮೂರು ವರ್ಷದೊಳಗೆ ಪೂರೈಸುವ ಅವಕಾಶವಿದೆ. ಅಷ್ಟರಲ್ಲಿ ಮನೆ ಕಟ್ಟಿಸಿ. ನಿಮ್ಮದಲ್ಲದ ಕಾರಣಕ್ಕೆ ಮನೆ ನಿರ್ಮಾಣ ತಡವಾದರೆ, ಅದಕ್ಕೆ ಅಗತ್ಯ ದಾಖಲೆಗಳಿರಲಿ. ಇದು ಮುಂದೆ ನೆರವಾದೀತು.

ಪ್ರದ್ಯುಮ್ನ, ಬೆಂಗಳೂರು

ಪ್ರಶ್ನೆ: ನನ್ನ ಅಣ್ಣನವರು ಮೃತರಾದ ಬಳಿಕ, ಅವರು ಸಹಕಾರಿ ಬ್ಯಾಂಕಿನಲ್ಲಿ ಇಟ್ಟಿದ್ದ ಸುಮಾರು ₹ 10 ಲಕ್ಷ ಠೇವಣಿ ಅತ್ತಿಗೆಯ ಹೆಸರಿಗಾಯಿತು. ಅವರು ಯಾರನ್ನೂ ನಾಮನಿರ್ದೇಶನ ಮಾಡದೆ ಮೃತರಾದರು. ಮಕ್ಕಳಿಲ್ಲದ ಅವರ ಈ ಹಣ ಪಡೆಯಲು ನಾನು ನ್ಯಾಯಾಲಯದ ಮೂಲಕ ವಾರಸುದಾರಿಕೆ ಆದೇಶ ಪಡೆದೆನು. ಆದರೆ ಬ್ಯಾಂಕಿನವರು ಕೋವಿಡ್ ಕಾರಣ ಹೇಳಿ ಇಂದು–ನಾಳೆ ಎಂದು ಸತಾಯಿಸಿದರು. ವಕೀಲರು ನೀಡಿದ ನೋಟಿಸ್ ಪಡೆದರೇ ಹೊರತು ಅದಕ್ಕೆ ಉತ್ತರವನ್ನಾಗಲೀ ಹಣವನ್ನಾಗಲೀ ನೀಡಲಿಲ್ಲ. ಈಗ ಮತ್ತೆ ರಿಕವರಿ ಸೂಟ್ ಹಾಕಬೇಕೆಂದರೆ ಸುಮಾರು ₹ 1 ಲಕ್ಷದವರೆಗೆ ಖರ್ಚು ಬರುವುದೆಂದು ತಿಳಿದಿರುವೆ. ಬ್ಯಾಂಕಿನವರಿಂದ ಹಣ ಪಡೆಯಲು ನಾನೇನು ಮಾಡಬೇಕೆಂದು ತಿಳಿಸಿ.

ಉತ್ತರ: ನೀವು ಉಲ್ಲೇಖಿಸಿರುವ ಪ್ರಶ್ನೆ ಎರಡು ಮೂರು ಗಂಭೀರ ವಿಚಾರಗಳೊಂದಿಗೆ ಸಿಲುಕಿಕೊಂಡಿದೆ. ಮೊದಲನೆಯದಾಗಿ, ನೀವು ಹಣ ಇರಿಸಿದ ಬ್ಯಾಂಕ್ ನಿಜವಾಗಿಯೂ ಆಡಳಿತಾತ್ಮಕವಾಗಿ ಕ್ರಿಯಾಶೀಲವಾಗಿದೆಯೇ ಹಾಗೂ ಆರ್ಥಿಕವಾಗಿ ಸಬಲವಾಗಿದೆಯೇ ಎನ್ನುವುದು. ಎರಡನೆಯದು, ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಸಿದಾಗಲೂ ಸಂಭವನೀಯ ಪರಿಣಾಮಗಳ ಬಗ್ಗೆ ತೋರಿರುವ ಅಸಡ್ಡೆ. ಮೂರನೆಯದು, ಗ್ರಾಹಕರ ಅಥವಾ ಅವರ ವಾರಸುದಾರರ ಅಹವಾಲುಗಳನ್ನು ಬ್ಯಾಂಕ್ ಗಂಭೀರವಾಗಿ ಪರಿಗಣಿಸದೆ ಅದಕ್ಷತೆ ತೋರಿದ್ದು. ಇವೆಲ್ಲ ನಿಮ್ಮ ಸಮಸ್ಯೆಗೆ ಕಾರಣವಾಗಿವೆ.

ನಿಮ್ಮ ಪ್ರಶ್ನೆಯನ್ನು ಅವಲೋಕಿಸಿದ್ದೇನೆ. ಕಾನೂನಿನ ಪ್ರಕಾರ, ಎದುರು ಪಕ್ಷದವರ ನೋಟಿಸ್ ಸಿಕ್ಕೊಡನೆ ಉತ್ತರಿಸ
ಲೇಬೇಕೆಂಬ ಯಾವ ನಿಯಮವೂ ಇಲ್ಲ. ಕಾರಣ, ಇದು ಅನ್ಯಾಯಕ್ಕೊಳಪಟ್ಟ ವ್ಯಕ್ತಿ ತನ್ನ ಸಮಸ್ಯೆಯನ್ನು ಅನ್ಯಾಯ ಮಾಡಿದ ವ್ಯಕ್ತಿಗೆ ತನ್ನ ವಕೀಲರ ಮೂಲಕ ಲಿಖಿತ ರೂಪದಲ್ಲಿ ತಿಳಿಸುವ ಒಂದು ಕಾನೂನಾತ್ಮಕ ಪ್ರಕ್ರಿಯೆ. ನಿಜವಾದ ಹಂತ ನ್ಯಾಯಾಲಯದಲ್ಲಿ ದಾವೆ ಹೂಡಿದಾಗಲೇ ಆರಂಭವಾಗುತ್ತದೆ. ನಿಮಗೆ ಬ್ಯಾಂಕಿನ ಆಡಳಿತ ವರ್ಗದೊಂದಿಗೆ ಮಾತುಕತೆ ನಡೆಸಿ, ಸಮಸ್ಯೆ ತಿಳಿಸಿ ಬಗೆಹರಿಸಿಕೊಳ್ಳಲಾಗದಿದ್ದರೆ, ಪರಿಹಾರಕ್ಕೆ ಅವರೂ ಉತ್ಸುಕರಲ್ಲದಿದ್ದರೆ ಕಾನೂನು ಕ್ರಮವೇ ಸೂಕ್ತ. ಆದರೆ, ನಿಮಗೆ ಸಿಗಬೇಕಾದ ಮೊತ್ತ ಸಿಗಲು ಕೆಲವೊಮ್ಮೆ ದೀರ್ಘಕಾಲ ದಾವೆ ಮುಂದುವರಿಸಬೇಕಾಗಬಹುದು. ವ್ಯಾಜ್ಯ ನಿಮ್ಮ ಪರವಾಗಿ ಬಂದರೆ ಕೋರ್ಟ್ ಖರ್ಚು ನಿಮಗೆ ಸಿಗಬಹುದಾದರೂ ಹೆಚ್ಚಿನ ಶ್ರಮ-ಸಮಯ ವ್ಯರ್ಥ.

ಇದಕ್ಕೂ ಮೊದಲು ನೀವು ಆರ್‌ಬಿಐ ರೂಪಿಸಿರುವ ‘ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಸ್ಕೀಮ್, 2021’ ಅಡಿ ಸಮಸ್ಯೆ ಪರಿಹರಿಸಿಕೊಳ್ಳುವ ಬಗ್ಗೆ ಯೋಚಿಸಿ. ಅಗತ್ಯವಿರುವ ಮಾಹಿತಿ ಹೊಂದಿ ನಿಮ್ಮ ಅರ್ಜಿಯನ್ನು ಸೂಕ್ತ ಅಧಿಕಾರಿಗಳಿಗೆ ಕೊಡಿ. ಪ್ರಸ್ತುತ ಇರುವ ಸುತ್ತೋಲೆಗಳ ಪ್ರಕಾರ, ಇದು ಸಹಕಾರಿ ಬ್ಯಾಂಕ್‌ಗಳಲ್ಲಿ ಮರುಪಾವತಿ ಮಾಡದೆ ಬಾಕಿ ಉಳಿಸಿರುವ ಠೇವಣಿಗಳಿಗೂ ಅನ್ವಯಿಸುತ್ತದೆ. ನೀವು ಬ್ಯಾಂಕಿಗೆ ಈಗಾಗಲೇ ಕೋರಿಕೆ ರೂಪದಲ್ಲಿ ಸಲ್ಲಿಸಿದ್ದ ಪತ್ರಕ್ಕೆ ಅವರು ಸ್ಪಂದಿಸಿಲ್ಲ ಎನ್ನುವ ದಾಖಲೆಯನ್ನು ಸಮರ್ಪಕವಾಗಿ ಇಟ್ಟುಕೊಳ್ಳಿ. ಅನಂತರ ನಿಮ್ಮ ಅಹವಾಲನ್ನು ಅಲ್ಲಿ ದಾಖಲಿಸಲು ಸಾಧ್ಯ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001

ಇ–ಮೇಲ್‌:businessdesk@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT