ಸೋಮವಾರ, ಫೆಬ್ರವರಿ 17, 2020
17 °C

ಪ್ರಶ್ನೋತ್ತರ: ವಾರ್ಷಿಕ ಪಿಂಚಣಿ ₹3,79,010. ನನಗೆ ತೆರಿಗೆ ರಿಯಾಯ್ತಿ ಇದೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವರಾಜ್ ಗುಳ್ಳಣ್ಣವರ್, ಬಾಗಲಕೋಟೆ

* ನಿವೃತ್ತ ಹಿರಿಯ ನಾಗರಿಕ. ವಾರ್ಷಿಕ ಪಿಂಚಣಿ ₹3,79,010. ನನಗೆ ತೆರಿಗೆ ರಿಯಾಯ್ತಿ ಇದೆಯೇ ಹಾಗೂ ಐ.ಟಿ. ರಿಟರ್ನ್ಸ್‌ ತುಂಬಬೇಕಾಗುತ್ತದೆಯೇ.

ಉತ್ತರ: ನಿಮಗೆ ₹5 ಲಕ್ಷಗಳ ತನಕ ತೆರಿಗೆ ಇಲ್ಲ. ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೆಕ್ಷನ್‌ 16ರಂತೆ ₹50 ಸಾವಿರಗಳನ್ನು ಒಟ್ಟು ಆದಾಯದಲ್ಲಿ ಕಳೆಯಬಹುದು. ಬ್ಯಾಂಕ್‌ ಠೇವಣಿ ಮೇಲೆ ಬಡ್ಡಿ ಬರುತ್ತಿದ್ದರೆ ಅದರಲ್ಲಿಯೂ ಸೆಕ್ಷನ್‌ 80ಟಿಟಿಡಿ ಆಧಾರದ ಮೇಲೆ ಗರಿಷ್ಠ ₹50 ಸಾವಿರ ಒಟ್ಟು ಆದಾಯದಲ್ಲಿ ಕಳೆಯಬಹುದು. ಒಟ್ಟಿನಲ್ಲಿ ನೀವು ತೆರಿಗೆಗೆ ಒಳಗಾಗುವುದಿಲ್ಲ. ಪಿಂಚಣಿ ಆದಾಯ ₹3 ಲಕ್ಷ ದಾಟಿರುವುದರಿಂದ ಐ.ಟಿ ರಿಟರ್ನ್ಸ್‌ ತುಂಬಬೇಕಾಗುತ್ತದೆ. ಪಿಂಚಣಿ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುವುದರಿಂದ ಪ್ರತಿ ವರ್ಷ ಜುಲೈ 31ರೊಳಗೆ ಐ.ಟಿ ರಿಟರ್ನ್ಸ್‌ ತುಂಬಲು ಮರೆಯದಿರಿ.

***

ಶಾಂತಕುಮಾರ್‌, ಕೊಳ್ಳೇಗಾಲ

* ವಯಸ್ಸು 32. ಪ್ರಾಥಮಿಕ ಶಾಲಾ ಶಿಕ್ಷಕ. ಪತ್ನಿ ಗೃಹಿಣಿ. ಇಬ್ಬರು ಮಕ್ಕಳು. ಒಟ್ಟು ವೇತನ ₹33,343. ಕಡಿತ ₹7,523. ತಿಂಗಳ ಖರ್ಚು ₹10 ಸಾವಿರ. ಉಳಿತಾಯ ₹15,000. ಇದುವರೆಗೆ ವಿಮೆ ಮಾಡಿಲ್ಲ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಜ್ಞಾನ ಸಂಪಾದನೆಯ ಮೂಲಕ ಮಕ್ಕಳನ್ನೇ ಆಸ್ತಿ ಮಾಡುವ ಬಯಕೆ ಇದೆ. ನಿವೃತ್ತಿ ಜೀವನ, ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಸಲಹೆ ನೀಡಿ.

ಉತ್ತರ: ಹೆಣ್ಣು ಮಗು ಇದ್ದರೆ ವಾರ್ಷಿಕ ಕನಿಷ್ಠ ₹6 ಸಾವಿರ ತುಂಬುವ ಸುಕನ್ಯಾ ಸಮೃದ್ಧಿ ಯೋಜನೆ ಮಾಡಿ ಹಾಗೂ ಎಲ್‌ಐಸಿ ವಾರ್ಷಿಕ ಕನಿಷ್ಠ ₹6 ಸಾವಿರ ತುಂಬುವ ಜೀವನ ಆನಂದ ಪಾಲಿಸಿ ಮಾಡಿ. ಇನ್ನು ಉಳಿಯುವ ₹14 ಸಾವಿರದಲ್ಲಿ ನಿಮ್ಮ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ₹5 ಸಾವಿರ ಆರ್‌.ಡಿ ಮಾಡಿ. ಅವಧಿ 10 ವರ್ಷಗಳಿರಲಿ. ಈ ಪ್ರಕ್ರಿಯೆ ಮುಂದೆ ಕೂಡಾ ಈ ಕೆಳಗಿನಂತೆ ಮುಂದುವರಿಸಿರಿ.

ನೀವು ₹10 ಸಾವಿರ ಮೇಲಿನಂತೆ 20 ವರ್ಷಗಳ ತನಕ ಉಳಿತಾಯ ಮಾಡುತ್ತಾ ಬಂದಲ್ಲಿ 20 ವರ್ಷಗಳ ಅಂತ್ಯಕ್ಕೆ ₹52.14 ಲಕ್ಷ ಪಡೆಯುವಿರಿ. ಐ.ಆರ್‌.ಡಿ ಎಂದರೆ Re invest Deposit. ಈ ಠೇವಣಿಯಲ್ಲಿ ಹೂಡಿರುವ ಮೊತ್ತ ಚಕ್ರಬಡ್ಡಿಯಲ್ಲಿ ಕಳೆದು ಅವಧಿ ಮುಗಿಯುತ್ತಲೇ ಸಿಗುತ್ತದೆ. ನೀವು ಕ್ರಮವಾಗಿ ಉಳಿತಾಯ ಮಾಡಿ, ಸಕಾಲದಲ್ಲಿ ಮಕ್ಕಳಿಗೆ ಓದಲು ಆರ್ಥಿಕ ನೆರವು ನೀಡಿದಲ್ಲಿ ಮಾತ್ರ ಅವರು ಜ್ಞಾನ ಸಂಪಾದನೆ ಮಾಡಲು ಸಾಧ್ಯ. ಇದಕ್ಕೆ ಪ್ರಾರಂಭದಿಂದಲೇ ಉಳಿತಾಯ ಪ್ರಜ್ಞೆ ಬೇಕೇ ಬೇಕು. ಠೇವಣಿ ಅವಧಿ ಗರಿಷ್ಠ 10 ವರ್ಷಗಳು. ಈ ಕಾರಣದಿಂದ ಮೇಲಿನ ಕೋಷ್ಠಕದಲ್ಲಿ ಆರ್‌.ಡಿ, ಐ.ಆರ್‌.ಡಿ 10 ವರ್ಷಗಳಂತೆ ವಿವರಿಸಲಾಗಿದೆ. ಇಬ್ಬರು ಮಕ್ಕಳ ಹೆಸರಿನಲ್ಲಿಯೂ ₹5 ಸಾವಿರ ಅಂದರೆ ಒಟ್ಟಿನಲ್ಲಿ ₹10 ಸಾವಿರ ಉಳಿತಾಯ ಮಾಡುತ್ತಾ ಬಂದಲ್ಲಿ 20 ವರ್ಷಗಳಲ್ಲಿ ₹52.14 ಲಕ್ಷ ಪಡೆಯುವಿರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು