ಭಾನುವಾರ, ನವೆಂಬರ್ 29, 2020
21 °C

ಹಣ ಉಳಿಸಿ, ಹಣ ನಿಮ್ಮನ್ನು ಉಳಿಸುತ್ತದೆ!

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌–19 ಸಾಂಕ್ರಾಮಿಕ ಸೃಷ್ಟಿಸಿದ ಆರ್ಥಿಕ ಅನಿಶ್ಚಿತ ಸ್ಥಿತಿಯು ಉಳಿತಾಯದ ವಿಚಾರವಾಗಿ ದೊಡ್ಡ ಪಾಠ ಕಲಿಸಿದೆ. ಕೆಲಸ ಕಳೆದುಕೊಂಡವರು, ಭವಿಷ್ಯಕ್ಕಾಗಿ ಕೂಡಿಟ್ಟಿದ್ದ ಹಣ ಬಳಸಿಕೊಂಡು ಹಾಗೂ ಹೀಗೂ ಜೀವನ ನಡೆಸುತ್ತಿದ್ದಾರೆ. ಏನೂ ಕೂಡಿಡದೇ ಎಲ್ಲವನ್ನೂ ಖರ್ಚು ಮಾಡುತ್ತಿದ್ದವರಲ್ಲಿ ‘ಅಲ್ಪಸ್ವಲ್ಪವಾದರೂ ಉಳಿಸಬೇಕಿತ್ತು’ ಎನ್ನುವ ಪಶ್ಚಾತ್ತಾಪವನ್ನು ಮೂಡಿಸಿದೆ.

ಕುಟುಂಬದಲ್ಲಿ ಉಳಿತಾಯಕ್ಕೆ ಹೆಚ್ಚಿನ ಗಮನ ನೀಡುವುದು ಮಹಿಳೆ ಯರು ಎಂಬ ನಂಬಿಕೆಯಿದೆ. ಸಾಸಿವೆ ಡಬ್ಬದಲ್ಲಿ ಕಾಸು ಕೂಡಿಡುವುದರಿಂದ ಆರಂಭವಾದ ಅವರಲ್ಲಿನ ಉಳಿತಾಯ ಪ್ರವೃತ್ತಿ ಇಂದು ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರೆಗೂ ಸಾಗಿ ಬಂದಿದೆ. ಕೌಟುಂಬಿಕ ಉಳಿತಾಯದ ಚುಕ್ಕಾಣಿ ಹಿಡಿದಿರುವ ಇಂತಹ ಮಹಿಳೆಯರಿಗೂ ‘ಈಗ ಉಳಿತಾಯ ಮಾಡುತ್ತಿರುವುದು ಕಡಿಮೆ’ ಎಂದು ಅನ್ನಿಸುವಂತೆ ಮಾಡಿದೆ ‌ಲಾಕ್‌ಡೌನ್‌.

‘ಪತಿ ಐ.ಟಿ. ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ ನಂತರ ಅವರ ಕೆಲಸ ಹೋಯಿತು. ಸ್ವಭಾವತಃ ಅವರು ದುಡಿ–ತಿನ್ನು ಎನ್ನುವವರು. ಹಾಗಾಗಿ ಅವರು ಏನನ್ನೂ ಉಳಿಸಿರಲಿಲ್ಲ. ಮನೆ ಖರ್ಚಿಗೆಂದು ಕೊಟ್ಟಿದ್ದ ಹಣದಲ್ಲಿ ₹ 1 ಲಕ್ಷ ಉಳಿಸಿ ಎಫ್‌.ಡಿ. ಮಾಡಿದ್ದೆ. ಅದಲ್ಲದೆ, ಸ್ವಲ್ಪ ಹಣವನ್ನು ಮನೆಯಲ್ಲಿಯೂ ಇಟ್ಟಿದ್ದೆ. ಅವೆಲ್ಲ ಈ ಹೊತ್ತಿನಲ್ಲಿ ನೆರವಿಗೆ ಬಂದವು. ಉಳಿತಾಯ ಮಾಡಬೇಕು ಎನ್ನುವುದು ಈಗ ಪತಿಗೂ ಮನವರಿಕೆ ಆಗಿದೆ. ಮತ್ತೆ ಕೆಲಸ ಸಿಕ್ಕ ನಂತರ ಉಳಿತಾಯಕ್ಕೆಂದೇ ಒಂದಿಷ್ಟು ಕೊಡ್ತೀನಿ, ನೀನು ಅದ್ಕೆ ಹೆಚ್ಚು ಗಮನ ಕೊಡು ಅಂತ ಹೇಳಿದ್ರು’ ಎಂದು ವರಲಕ್ಷ್ಮಿ (ಹೆಸರು ಬದಲಿಸಲಾಗಿದೆ) ತಮ್ಮ ಅನುಭವ ಹಂಚಿಕೊಂಡರು.

ರಮೇಶ್‌ ಮತ್ತು ವಿಜಯಾ (ಹೆಸರು ಬದಲಿಸಲಾಗಿದೆ) ಅವರು 10 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಮೇಶ್‌ ಅವರು ಅಡುಗೆ ಕೆಲಸ ಮಾಡುತ್ತಾರೆ, ವಿಜಯಾ ಗೃಹಿಣಿಯಾಗಿದ್ದಾರೆ. ಲಾಕ್‌ಡೌನ್‌ ನಿಂದಾಗಿ ಕೆಲಸವೇ ಇಲ್ಲವಾದಾಗ ಅವರ ನಿತ್ಯದ ಖರ್ಚಿಗೆ ಕೈಹಿಡಿದಿದ್ದು ಆರ್‌.ಡಿ.ಯಲ್ಲಿ ಕೂಡಿಟ್ಟ ಹಣ.

‘ನಮಗೆ ಮಕ್ಕಳಿಲ್ಲ. ಹಾಗಾಗಿ ಉಳಿಸಿ ಮಾಡುವುದಾದರೂ ಏನು ಅನ್ನೋದು ಪತಿಯ ವಾದ. ಆದರೆ, ನಾನು ಮೊದಲಿನಿಂದಲೂ ಬಂದ ದುಡ್ಡಿನಲ್ಲಿ ಒಂದಷ್ಟನ್ನು ಆರ್‌.ಡಿ ಮಾಡುತ್ತಿದ್ದೆ. ಆರಂಭದಲ್ಲಿ ತಿಂಗಳಿಗೆ ₹ 500ರ ಆರ್‌.ಡಿ. ಮಾಡುತ್ತಿದ್ದೆ. ಆರ್ಥಿಕ ಸ್ಥಿತಿ ಉತ್ತಮವಾದಾಗ ಅದನ್ನು ತಿಂಗಳಿಗೆ ₹ 1,000ಕ್ಕೆ ಹೆಚ್ಚಿಸಿದೆ. ಇದನ್ನು ಅವರಿಗೆ (ಪತಿ) ಹೇಳಿರಲಿಲ್ಲ. ಆದರೆ, ಯಾವೊಂದೂ ಕಾರ್ಯಕ್ರಮ ನಡೆಯದೆ, ದುಡಿಮೆಯೇ ಇಲ್ಲವಾದಾಗ ಅವರು ಪರದಾಡುತ್ತಿದ್ದದ್ದು ನೋಡಿ, ಆರ್‌.ಡಿ. ವಿಚಾರ ಅವರಲ್ಲಿ ಹೇಳಿದೆ. ನಿತ್ಯದ ಖರ್ಚಿಗೇನೂ ಸಮಸ್ಯೆ ಆಗು ವುದಿಲ್ಲ ಎಂದು ಸಮಾಧಾನ ಮಾಡಿದೆ. ನನ್ನ ನಂಬ್ಕೊಂಡಿದ್ರೆ ನೀನೂ ಉಪವಾಸ ಬೀಳ್ತಿದ್ದಿ ಅಂತ ಅವರು ಬೇಸರದಿಂದ ಹೇಳಿದ್ರು. ನಿನ್ನ ಉಳಿತಾಯ ಮುಂದು ವರಿಸು ಅಂತನೂ ಹೇಳಿದ್ರು. ಕೊರೊನಾ ಕಾಲದ ಸರಿಸುಮಾರು ಆರೇಳು ತಿಂಗಳ ಈ ಜೀವನ ಕಂಡ ನಂತರ, ತಿಂಗಳಿಗೆ ₹ 1,000 ಉಳಿ ತಾಯ ಏನಕ್ಕೂ ಸಾಕಾಗುವುದಿಲ್ಲ ಅನ್ನಿಸುತ್ತಿದೆ. ಖರ್ಚನ್ನು ಇನ್ನಷ್ಟು ಕಡಿಮೆ ಮಾಡಿ, ಉಳಿತಾಯಕ್ಕೆ ಹೆಚ್ಚು ಗಮನ ಹರಿಸುತ್ತೇನೆ’ ಎಂದು ವಿಜಯಾ ಹೇಳಿದರು.

‘ಪ್ರತಿ ಕುಟುಂಬವೂ ಉಳಿತಾ ಯಕ್ಕಾಗಿ ಒಂದು ಯೋಜನೆ ರೂಪಿಸಿಕೊಳ್ಳಬೇಕು. ಹಾಗಾದರೆ ಮಾತ್ರವೇ ಕೋವಿಡ್‌–19 ಅಥವಾ ಇನ್ಯಾವುದೇ ಅನಿರೀಕ್ಷಿತ ಸಂದರ್ಭಗಳಿಂದ ಕುಟುಂಬದ ರಕ್ಷಣೆ ಸಾಧ್ಯವಾಗಲಿದೆ. ನೀವು ಹಣ ಉಳಿಸಿದರೆ, ಅದು ನಿಮ್ಮನ್ನು ಉಳಿಸುತ್ತದೆ ಎನ್ನುವುದು ಕೊರೊನಾದಿಂದ ಹಲವರಿಗೆ ಮನವರಿಕೆಯಾಗಿದೆ’ ಎನ್ನುತ್ತಾರೆ ಬ್ಯಾಂಕಿಂಗ್‌ ಕ್ಷೇತ್ರದ ತಜ್ಞರೊಬ್ಬರು.

‘ಆದಾಯದಲ್ಲಿ ಉಳಿತಾಯಕ್ಕೆ ಆದ್ಯತೆ ಇರಲೇಬೇಕು. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ, ತಿಂಗಳಿಗೆ ಒಂದು ನಿರ್ದಿಷ್ಟ ಮೊತ್ತ ಉಳಿಸುವ ನಿರ್ಧಾರ ಮಾಡಬೇಕು. ಎಫ್‌.ಡಿ., ಆರ್‌.ಡಿ., ಚಿನ್ನ ಖರೀದಿ, ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಹೀಗೆ ಉಳಿತಾಯ/ಹೂಡಿಕೆಗೆ ಹಲವು ಮಾರ್ಗಗಳಿವೆ’ ಎನ್ನುತ್ತಾರೆ ಬ್ಯಾಂಕ್‌ ಅಧಿಕಾರಿ ಯೊಬ್ಬರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು