ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಯ ಜತೆಗೆ ಭದ್ರತೆ

Last Updated 7 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಹಣಕಾಸು ಯೋಜನೆ ರೂಪಿಸುವಾಗ ಜೀವವಿಮೆಗೆ ಯಾಕೆ ಪ್ರಾಮುಖ್ಯ ನೀಡಬೇಕು ಎಂಬ ಬಗ್ಗೆ ಸಾಕಷ್ಟು ಮಾಹಿತಿ ನೀಡಲಾಗುತ್ತಿದೆ. ಆದರೂ ವೈಯಕ್ತಿಕ ಹಣಕಾಸು ಯೋಜನೆ ರೂಪಿಸುವಾಗ ಅನೇಕರು ಜೀವವಿಮೆಯನ್ನು ಪರಿಗಣಿಸಲು ಮರೆಯುತ್ತಾರೆ.

ಜೀವನಮಟ್ಟ ಸುಧಾರಿಸುತ್ತಿರುವುದು ಹಾಗೂ ಹಣದುಬ್ಬರವು ನಿಧಾನಕ್ಕೆ ಏರಿಕೆಯಾಗುತ್ತಿರುವುದರಿಂದ, ಪ್ರತಿಯೊಬ್ಬರೂ ಭವಿಷ್ಯಕ್ಕಾಗಿ ಭದ್ರವಾದ ಆರ್ಥಿಕ ಬುನಾದಿಯನ್ನು ಹಾಕುವುದು ಅನಿವಾರ್ಯವಾಗಿದೆ. ಸಂಪಾದನೆ ಮಾಡುವ ವ್ಯಕ್ತಿಯು ಅಚಾನಕಾಗಿ ಅವಘಡಕ್ಕೊಳಗಾಗಿ ಸಾವನ್ನಪ್ಪಿದರೆ ಆತನ ಕುಟುಂಬವು ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ಇಂತಹ ಸ್ಥಿತಿಯಿಂದ ಪ್ರೀತಿಪಾತ್ರರನ್ನು ರಕ್ಷಿಸಲು ಪ್ರತಿಯೊಬ್ಬರೂ ಅಗತ್ಯ ವಿಮೆ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕಾಗಿರುತ್ತದೆ.

ಜೀವವಿಮೆಯ ಉತ್ಪನ್ನಗಳಲ್ಲಿ ‘ಅವಧಿ ಯೋಜನೆ’ಯು (term plan) ಅತಿ ಕಡಿಮೆ ಮೊತ್ತದ ಕಂತಿನಲ್ಲಿ ಹೆಚ್ಚಿನ ವಿಮೆ ಸೌಲಭ್ಯ ಒದಗಿಸುವ ಸರಳ ಯೋಜನೆಯಾಗಿದೆ. ವಿಮೆ ಪಾಲಿಸಿದಾರನು ಆಕಸ್ಮಾತ್ತಾಗಿ ಸಾವಿಗೀಡಾದರೆ, ಇಂತಹ ಯೋಜನೆಗಳು ನಾಮನಿರ್ದೇಶಿತ ವ್ಯಕ್ತಿ ಅಥವಾ ಅವರ ಕುಟುಂಬದವರಿಗೆ ಗರಿಷ್ಠ ಪ್ರಮಾಣದ ಹಣಕಾಸು ನೆರವನ್ನು ಒದಗಿಸುತ್ತವೆ.

ಇದು ಅಪಾಯದಿಂದ ರಕ್ಷಣೆ ಒದಗಿಸುವ ಯೋಜನೆ ಆಗಿರುವುದರಿಂದ, ವಿಮೆ ಪಾಲಿಸಿದಾರರು ಪಾಲಿಸಿಯ ಅವಧಿ ಮುಗಿದ ನಂತರವೂ ಬದುಕಿದ್ದರೆ, ಅವರಿಗೆ ಯಾವುದೇ ಲಾಭ (Survival benefit) ಲಭಿಸುವುದಿಲ್ಲ. ಅಂದರೆ, ವಿಮೆ ಪಾಲಿಸಿ ಅವಧಿ ಪೂರ್ಣಗೊಂಡ ನಂತರ ಪಾಲಿಸಿದಾರನಿಗೆ ಯಾವುದೇ ಮೊತ್ತ ಸಿಗುವುದಿಲ್ಲ. ಈ ಕಾರಣಕ್ಕಾಗಿಯೇ ಜೀವವಿಮೆಯ ಇತರ ಯೋಜನೆಗಳಿಗಿಂತ ಇಲ್ಲಿ ಕಡಿಮೆ ಮೊತ್ತದ ಕಂತಿನಲ್ಲಿ ಅವಧಿ ವಿಮೆಯನ್ನು ಮಾಡಿಸಲು ಸಾಧ್ಯವಾಗುತ್ತದೆ.

ಆದರೆ, ಭಾರತೀಯರು ಮೂಲತಃ ಗಳಿಕೆ ಮತ್ತು ಲಾಭದ ಉದ್ದೇಶ ಇಟ್ಟುಕೊಂಡೇ ಹಣ ಹೂಡಿಕೆ ಮಾಡುವ ಮನಸ್ಥಿತಿ ಹೊಂದಿದವರಾಗಿದ್ದಾರೆ. ಜನರಲ್ಲಿ ಮನೆ ಮಾಡಿರುವ ಈ ಮನೋಭಾವದ ಕಾರಣಕ್ಕಾಗಿಯೇ, ವಿಮೆ ಕಂಪನಿಗಳು ‘ಪ್ರೀಮಿಯಂ ಮರಳಿಕೆ ಅವಧಿ ವಿಮಾ ಯೋಜನೆ’ (Term with Return of Premium –TROP) ಆರಂಭಿಸಿವೆ.

ಅವಧಿ ವಿಮೆಯಲ್ಲೇ ’ಟಿಆರ್‌ಒಪಿ‘ ಎಂಬುದು ಅನನ್ಯವಾದ ಯೋಜನೆಯಾಗಿದೆ. ಇದರಲ್ಲಿ ವಿಮೆಯ ಅವಧಿಯಲ್ಲಿ ಪಾಲಿಸಿಯ ಸಂಪೂರ್ಣ ಲಾಭವನ್ನು ಪಡೆಯುವುದರ ಜತೆಗೆ, ಪಾಲಿಸಿ ಅವಧಿ ಮುಗಿದಾಗ, ಪಾವತಿಸಿದ ಕಂತಿನ ಪೂರ್ತಿ ಮೊತ್ತವನ್ನು ಮರಳಿ ಪಡೆಯಬಹುದಾಗಿದೆ.

ನಿಗದಿತ ಆದಾಯ ಇಲ್ಲದವರಿಗೂ ಈ ಉತ್ಪನ್ನವು ಸೂಕ್ತವಾದುದು. ಯಾಕೆಂದರೆ, ವಿಮೆ ಪಾಲಿಸಿದಾರರು ಒಂದು ವೇಳೆ ಕಂತಿನ ಹಣವನ್ನು ಕಟ್ಟದಿದ್ದರೆ ಅದಕ್ಕೆ ಅನುಗುಣವಾಗಿ ಅವರಿಗೆ ನೀಡಲಾಗುವ ಲಾಭವನ್ನು ಕಡಿಮೆ ಮಾಡಲಾಗುತ್ತದೆ. ಆದರೆ, ಸಾಮಾನ್ಯವಾದ ಅವಧಿ ವಿಮಾ ಯೋಜನೆಯಲ್ಲಿ ಕಂತಿನ ಮೊತ್ತವನ್ನು ಪಾವತಿಸದಿದ್ದರೆ ಯೋಜನೆಯೇ ರದ್ದಾಗುತ್ತದೆ.

ವಯಸ್ಸು ಹೆಚ್ಚಾದಂತೆ ವಿಮಾ ಯೋಜನೆಗಳ ಕಂತಿನ ಪ್ರಮಾಣವೂ ಹೆಚ್ಚುತ್ತದೆ. ಆದ್ದರಿಂದ, ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೂ ಮುನ್ನ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಪಾಲಿಸಿಗಳನ್ನು ಹೋಲಿಕೆ ಮಾಡಿ, ನಿಮ್ಮ ಅಗತ್ಯಕ್ಕೆ ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಿ.

(ಲೇಖಕ: ಎಕ್ಸೈಡ್‌ ಲೈಫ್‌ ಇನ್ಶುರೆನ್ಸ್‌ನ ಗ್ರಾಹಕ ಸೇವಾ ವಿಭಾಗದ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT