ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ತೆರಿಗೆ ಕಡಿತದ ಬಗ್ಗೆ ನಿಮಗೆಷ್ಟು ಗೊತ್ತು?

Published 28 ಫೆಬ್ರುವರಿ 2024, 1:52 IST
Last Updated 28 ಫೆಬ್ರುವರಿ 2024, 1:52 IST
ಅಕ್ಷರ ಗಾತ್ರ

l ಪ್ರಶ್ನೆ: ನನಗೆ ಕಳೆದ ವಾರ ಆಭರಣ ಮಾರಾಟ ಮಾಡುವ ಸಂಸ್ಥೆಯಿಂದ ಚಿನ್ನ ಖರೀದಿಸುವ ಸಂದರ್ಭದಲ್ಲಿ ಒಂದು ಲಕ್ಕಿ ಡ್ರಾ ಕೂಪನ್ ಸಿಕ್ಕಿತ್ತು. ಇದರ ಡ್ರಾ ಸಂದರ್ಭದಲ್ಲಿ ಒಂದು ವಾಹನ ಬಹುಮಾನವಾಗಿ ನನಗೆ ಸಿಕ್ಕಿದೆ. ಇದಕ್ಕಾಗಿ ನನ್ನಿಂದ ₹30,162 ತೆರಿಗೆ ಪಾವತಿ ಮಾಡಿಸಿಕೊಂಡು, ₹1,09,000 ಬೆಲೆಯ ವಾಹನವನ್ನು ನೀಡಲಿದ್ದಾರೆ. ನಾನು ಒಬ್ಬ ತೆರಿಗೆ ಪಾವತಿದಾರ. ನನ್ನ ಪ್ರಶ್ನೆ ಏನೆಂದರೆ, ಈ ರೀತಿ ಪಾವತಿ ಮಾಡಿದ ತೆರಿಗೆಯನ್ನು ರಿಫಂಡ್ ಪಡೆಯುವುದು ಹೇಗೆ? ನಾನು ಪ್ರಸಕ್ತ ವರ್ಷದ ಜುಲೈನಲ್ಲಿ ರಿಟರ್ನ್ಸ್ ಭರಿಸುವಾಗ ಏನೆಲ್ಲ ಮಾಹಿತಿ ನೀಡಬೇಕು.

-ವೆಂಕಟೇಶ್ ಭಟ್, ಊರು ತಿಳಿಸಿಲ್ಲ.

ಉತ್ತರ: ಆದಾಯ ತೆರಿಗೆಯ ಸೆಕ್ಷನ್ 194ಬಿ ಅಡಿ ಯಾವುದೇ ವ್ಯಕ್ತಿ ಲಾಟರಿ, ಪದಬಂಧ, ಜೂಜಾಟ, ಪಂಥಾಹ್ವಾನ, ಇಸ್ಪೀಟ್, ಟಿ.ವಿ ಶೋ ಇತ್ಯಾದಿ ಕಾರ್ಯಕ್ರಮಗಳಲ್ಲಿ  ಪಾಲ್ಗೊಂಡು ಗಳಿಸುವ ಮೊತ್ತಕ್ಕೆ ಶೇ 30ರಷ್ಟು ವಿಶೇಷ ದರದಲ್ಲಿ ತೆರಿಗೆ ಕಡಿತ ಮಾಡಲಾಗುತ್ತದೆ. ಪ್ರತಿ ಸನ್ನಿವೇಶದಲ್ಲಿ ₹10 ಸಾವಿರಕ್ಕೂ ಅಧಿಕ ಮೊತ್ತ ಪಾವತಿಸಿದಾಗ ಈ ತೆರಿಗೆ ಕಡಿತ ಇರುತ್ತದೆ. ನಿಮ್ಮ ವಿಚಾರದಲ್ಲಿ ನಗದು ಬಹುಮಾನ ಇಲ್ಲದ ಕಾರಣ ಹಾಗೂ ವಿಜೇತರಿಗೆ ವಾಹನವನ್ನೇ ಕೊಡುವ ಕಾರಣ ತೆರಿಗೆ ಕಡಿತದ ಬದಲು ಆ ಮೊತ್ತವನ್ನು ನಿಮ್ಮಿಂದ ಪಡೆದು ತೆರಿಗೆ ಇಲಾಖೆಗೆ ಆಭರಣ ಸಂಸ್ಥೆಯವರು ಕಟ್ಟಬೇಕಾಗುತ್ತದೆ.

ಮೇಲೆ ಉಲ್ಲೇಖಿಸಿದ ಸೆಕ್ಷನ್ ಅಡಿ ತೆರಿಗೆ ಕಟಾವಾದಾಗ ಕೆಲವು ಅಂಶಗಳನ್ನು ಗಮನಿಸಬೇಕು. ಮೊದಲನೆಯದಾಗಿ ಈ ಆದಾಯಕ್ಕೆ ಸಂಬಂಧಿಸಿ ಯಾವುದೇ ವೆಚ್ಚ ಪಡೆಯುವುದಕ್ಕೆ ಅವಕಾಶ ಇರುವುದಿಲ್ಲ. ಇತರೆ ನಷ್ಟಗಳೊಡನೆ ವಜಾ ಮಾಡುವ ಅವಕಾಶವಿಲ್ಲ. ಮಾತ್ರವಲ್ಲ ತೆರಿಗೆದಾರರು ಹಳೆಯ ತೆರಿಗೆ ಪದ್ಧತಿ ಅನುಸರಿಸುವುದಾದರೆ, 80ಸಿ, 80ಡಿ ಇತ್ಯಾದಿ ಸೆಕ್ಷನ್‌ಗಳಡಿ ಯಾವುದೇ ತೆರಿಗೆ ವಿನಾಯಿತಿಗೆ ಅವಕಾಶವಿಲ್ಲ.

ಈ ಮೇಲಿನ ಮಾಹಿತಿಯಂತೆ ನಿಮಗೆ ಬಂದಿರುವ ಆದಾಯವನ್ನು ಇತರೆ ಯಾವುದೇ ತೆರಿಗೆ ಆದಾಯಕ್ಕೆ ಹೊಂದಾಣಿಕೆ ಮಾಡದೆ ಪ್ರತ್ಯೇಕವಾಗಿ ಘೋಷಿಸಬೇಕಾಗುತ್ತದೆ. ಜೊತೆಗೆ, ಒಂದು ವೇಳೆ ನಿಮಗೆ ಇತರೆ ಯಾವುದೇ ತೆರಿಗೆ ಆದಾಯ ಇಲ್ಲದಿದ್ದಾಗಲೂ ಈ ಮೊತ್ತಕ್ಕೆ ವಿನಾಯಿತಿ ಇಲ್ಲ. ಹೀಗಾಗಿ, ರಿಫಂಡ್ ಪಡೆಯುವ ಅವಕಾಶ ಇರುವುದಿಲ್ಲ. 

l ಪ್ರಶ್ನೆ: ನಾನು ಸರ್ಕಾರಿ ನೌಕರನಾಗಿದ್ದು ದಾವಣಗೆರೆ ನಗರದಲ್ಲಿ ನಾಲ್ಕು ವರ್ಷಗಳ ಹಿಂದೆ ₹40 ಲಕ್ಷಕ್ಕೆ ಸೈಟ್ ಖರೀದಿಸಿರುತ್ತೇನೆ. ಸೈಟ್ ಖರೀದಿಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ₹30 ಲಕ್ಷವನ್ನು ನಿವೇಶನ ಸಾಲವಾಗಿ ತೆಗೆದುಕೊಂಡಿರುತ್ತೇನೆ. ಪ್ರಸ್ತುತ ನಾನು ಈ ಸೈಟ್‌ ಅನ್ನು ಮಾರಾಟ ಮಾಡಿ ಬೇರೆ ಸ್ಥಳದಲ್ಲಿ ಸೈಟ್‌ ಖರೀದಿಸಬೇಕೆಂದು ಕೊಂಡಿದ್ದೇನೆ. ಸಾಲದ ಮರುಪಾವತಿಗಾಗಿ ನನ್ನ ವೇತನ ಜಮಾ ಆಗುವ ಉಳಿತಾಯ ಖಾತೆಗೆ ₹25 ಲಕ್ಷ ಮೊತ್ತವನ್ನು ನಗದು ಆಗಿ ಜಮಾ ಮಾಡಿ ಅಲ್ಲಿಂದ ಚೆಕ್ಕನ್ನು ಎಚ್‌ಡಿಎಫ್‌ಸಿ ಬ್ಯಾಂಕಿಗೆ ನೀಡಬೇಕಾಗುತ್ತದೆ. ಈ ವಹಿವಾಟಿಗೆ ನನಗೆ ಆದಾಯ ತೆರಿಗೆ ಇಲಾಖೆಯಿಂದ ದಂಡ ಅಥವಾ ತೆರಿಗೆ ಕಡಿತ ಮಾಡಲಾಗುತ್ತದೆಯೇ? ಹೀಗೆ ಸಾಲದ ಹಣವನ್ನು ಮರುಪಾವತಿ ಮಾಡಬಹುದೇ? ಮಾಡುವುದರಿಂದ ಏನಾದರೂ ಸಮಸ್ಯೆ ಇದೆಯೇ?

- ರಮೇಶ್, ದಾವಣಗೆರೆ.

ಉತ್ತರ: ಯಾವುದೇ ಒಂದು ಬ್ಯಾಂಕಿನ ಉಳಿತಾಯ ಖಾತೆಗೆ ವಾರ್ಷಿಕವಾಗಿ ₹10 ಲಕ್ಷಕ್ಕೂ ಮೀರಿದ ಮೊತ್ತವನ್ನು ನಗದು ರೂಪದಲ್ಲಿ ಜಮಾ ಮಾಡುವಾಗ ಬಹಳ ಜಾಗರೂಕ ರಾಗಿರಬೇಕು. ಈ ಮಾಹಿತಿಯನ್ನು ಪ್ರತಿ ಬ್ಯಾಂಕ್ ಎಲ್ಲಾ ಶಾಖೆಗಳ ಮೊತ್ತವನ್ನು ಒಟ್ಟಾಗಿ ಪರಿಗಣಿಸಿ ವಾರ್ಷಿಕವಾಗಿ ಆದಾಯ ತೆರಿಗೆ ಇಲಾಖೆಗೆ ಪ್ರತ್ಯೇಕವಾದ ರಿಟರ್ನ್ಸ್ ಸಲ್ಲಿಸುವ ಮೂಲಕ ಮಾಹಿತಿ ನೀಡಬೇಕಾಗುತ್ತದೆ. ಹೀಗಾಗಿ ಯಾವುದೇ ತೆರಿಗೆದಾರ ಈ ಮಿತಿಯನ್ನು ದಾಟಿ ಒಂದೇ ಬ್ಯಾಂಕ್ ಖಾತೆಗೆ ನಗದು ಜಮಾ ಮಾಡಿದರೂ ಅವರ ಮಾಹಿತಿ ಪ್ರತ್ಯೇಕವಾಗಿ ವರದಿಯಾಗುತ್ತದೆ.

ಈ ಮಾಹಿತಿಯ ಆಧಾರದ ಮೇಲೆ ಆದಾಯ ತೆರಿಗೆ ಇಲಾಖೆಯೂ ತನ್ನದೇ ಆದ ಮಾಹಿತಿ ಕಲೆ ಹಾಕಿ ಈಗಾಗಲೇ ಘೋಷಿಸಿರುವ ಆದಾಯ ಮೂಲದಿಂದ ಇದನ್ನು ಜಮಾ ಮಾಡಿರಬಹುದೇ ಅಥವಾ ಅಘೋಷಿತ ಮೂಲದಿಂದ ಜಮಾ ಆಗಿರಬಹುದೇ ಎನ್ನುವ ಬಗ್ಗೆ ಅನುಮಾನ
ಇದ್ದಲ್ಲಿ ತೆರಿಗೆದಾರರಿಗೆ ನೋಟಿಸ್ ಜಾರಿ ಮಾಡುವ ಅಧಿಕಾರ ಹೊಂದಿದೆ.  ನೀವು ನೀಡಿರುವ ಮಾಹಿತಿಯಂತೆ, ನಿಮ್ಮ ವೇತನ ಜಮಾ ಆಗುವ ಉಳಿತಾಯ ಖಾತೆಗೆ ₹25 ಲಕ್ಷ ಮೊತ್ತವನ್ನು ನಗದು ರೂಪದಲ್ಲಿ ಜಮಾ ಮಾಡುವ ಬಗ್ಗೆ ಮಾಹಿತಿ ಕೋರಿರುತ್ತೀರಿ. ಆದರೆ, ಈ ಮೊತ್ತ ಈಗಾಗಲೇ ನಿಮ್ಮ ಇತರೆ ಖಾತೆಗಳಿಂದಲೋ ಅಥವಾ ಈಗಾಗಲೇ ನೀವು ಘೋಷಿಸಿರುವ ಆದಾಯ ಮೂಲದಿಂದಲೋ ಸಂಗ್ರಹವಾಗಿದ್ದರೆ ಹಾಗೂ ಅಂತಹ ಆದಾಯಕ್ಕೆ ತೆರಿಗೆ ಪಾವತಿಯಾಗಿದ್ದರೆ ತೊಂದರೆಯಾಗುವುದಿಲ್ಲ. 

ಈ ಕಾರಣದಿಂದ ಮೊದಲಾಗಿ ನೀವು ಈ ದೊಡ್ಡ ಮೊತ್ತದ ಮೂಲದ ಬಗ್ಗೆ ತಿಳಿದುಕೊಳ್ಳಿ. ಒಂದು ವೇಳೆ ನಗದು ಸಾಲ ಪಡೆದು ಈ ರೀತಿ ಪಾವತಿ ಮಾಡುವುದು ಕೂಡ ಸಮಸ್ಯೆಗೆ ಕಾರಣವಾದೀತು. ನಿಮ್ಮ ಉಳಿತಾಯ ಖಾತೆಯಿಂದ ಬ್ಯಾಂಕ್ ಸಾಲ ಪಾವತಿಸುವ ವಿಧಾನದಲ್ಲಿ ಸಮಸ್ಯೆ ಇಲ್ಲ. ಆದರೆ, ನಿಮ್ಮ ಸಾಲ ಮರುಪಾವತಿಗೆ ಅಗತ್ಯವಿರುವ ಮೊತ್ತ ಸಂಗ್ರಹ ಹೇಗಾಗಿದೆ ಎಂಬ ಬಗ್ಗೆ ಸಾಕಷ್ಟು ಕಾಳಜಿ ಹೊಂದಿ ನಿಮ್ಮ ಮುಂದಿನ ನಿರ್ಧಾರ ಕೈಗೊಳ್ಳಿ. ಈ ಮೊತ್ತವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆದಾಯವೆಂದು ಬಂದಿದ್ದರೆ, ಅದನ್ನು ಮುಂದೆ ಸಮಯೋಚಿತ ಗಡುವಿನೊಳಗೆ ತೆರಿಗೆ, ಮುಂಗಡ ತೆರಿಗೆ ಇತ್ಯಾದಿ ಸಮಯೋಚಿತವಾಗಿ ಪಾವತಿಸಿ ಘೋಷಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT