ವಿಷ್ಣು, ಬೆತ್ತಗೇರಿ.
ನಾನು ಸುಮಾರು 35 ವರ್ಷ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸೇವೆ ಸಲ್ಲಿಸಿ 2002ರ ಡಿಸೆಂಬರ್‌ನಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದೇನೆ. ನನಗೆ 77 ವರ್ಷ. ಆ ಸಂದರ್ಭದಲ್ಲಿ ನನಗೆ ಒಟ್ಟು ₹ 7 ಲಕ್ಷ ನೀಡಲಾಗಿತ್ತು. ಶೇ 20ರಷ್ಟು ಅಂಚೆಯಲ್ಲಿ, ಶೇ 20ರಷ್ಟು ಕಂಪನಿ ಷೇರುಗಳಲ್ಲಿ (ಈಕ್ವಿಟಿ) ಮತ್ತು ಶೇ 20ರಷ್ಟು ಅಟಲ್ ಪ್ರಧಾನ ಮಂತ್ರಿ ಯೋಜನೆಯಲ್ಲಿ ತೊಡಗಿಸಿದ್ದೆ. ಕಾಲಕ್ರಮೇಣ ಅಂಚೆಯಲ್ಲಿರುವ ಹೂಡಿಕೆಯನ್ನು ಎಲ್‌ಐಸಿಯಲ್ಲಿ (ಈಗಿನ ಪ್ರಧಾನಮಂತ್ರಿ ವಯೋವಂದನ) ತೊಡಗಿಸಿ ಪ್ರತಿ ತಿಂಗಳು ₹5,184 ಪಡೆಯುತ್ತಿದ್ದೇನೆ. ಷೇರುಗಳಲ್ಲಿ ಹೂಡಿಕೆ ಮಾಡಿದ ಹಣವು ಗಣನೀಯವಾಗಿ ಏರಿಕೆಯಾಗಿದೆ. ಆದ್ದರಿಂದ ಅದರಲ್ಲಿರುವ ಶೇ 20ರಷ್ಟು (ಅಂದರೆ ₹6 ಲಕ್ಷ) ಹಣವನ್ನು ಅಂಚೆ ಇಲಾಖೆಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ (ಶೇ 8.2 ಬಡ್ಡಿ) ತೊಡಗಿಸಬೇಕೆಂದು ಆಲೋಚಿಸಿದ್ದೇನೆ. ಅದರಿಂದ ತಿಂಗಳಿಗೆ ₹4,100 ಹೆಚ್ಚುವರಿಯಾಗಿ ಆದಾಯ ಬರುತ್ತದೆ.
ನನ್ನ ಪ್ರಶ್ನೆ ಏನೆಂದರೆ ಷೇರುಗಳಿಂದ ಅಂಚೆ ಇಲಾಖೆಯ ಉಳಿತಾಯ ಖಾತೆಯಲ್ಲಿ ಹಣ ತೊಡಗಿಸಿದಾಗ ₹6 ಲಕ್ಷಕ್ಕೆ ತೆರಿಗೆ ಅನ್ವಯಿಸುತ್ತದೆಯೇ? ಪ್ರಸ್ತುತ ನನ್ನ ಆದಾಯ ₹6,223. ಸಿಗುವ ಹೆಚ್ಚುವರಿ ಬಡ್ಡಿ ಸೇರಿಸಿದರೆ ನನ್ನ ಆದಾಯ ₹10,323 ಆಗಿರಲಿದೆ. ನಾನು ಮೇಲಿನ ಯೋಜನೆಯಂತೆ ಮುಂದುವರಿಯಬಹುದೇ? ಈ ವಿಚಾರದಲ್ಲಿ ಅನ್ವಯವಾಗುವ ತೆರಿಗೆ ಬಗ್ಗೆ ಮಾಹಿತಿ ನೀಡಿ.
ಉತ್ತರ: ಷೇರುಗಳಲ್ಲಿನ ನಿಮ್ಮ ಹೂಡಿಕೆ ದೀರ್ಘಾವಧಿ (12 ತಿಂಗಳಿಗೂ ಮೇಲ್ಪಟ್ಟು) ಹೂಡಿಕೆ. ಹೀಗಾಗಿ ಪ್ರಸ್ತುತ ಬಜೆಟ್ ಬದಲಾವಣೆಯ ನಂತರ ನೀವು ವಾರ್ಷಿಕವಾಗಿ ₹1.25 ಲಕ್ಷಕ್ಕಿಂತ ಅಧಿಕ ಲಾಭ ಗಳಿಸಿದಾಗ ಹೆಚ್ಚುವರಿ ಲಾಭದ ಮೊತ್ತಕ್ಕೆ ಶೇ 12.5ರಷ್ಟು ತೆರಿಗೆ ಅನ್ವಯವಾಗುತ್ತದೆ. ನಿಮ್ಮ ಅಸಲು ಮೊತ್ತವು ಪ್ರಶ್ನೆಯಲ್ಲಿ ತಿಳಿಸಿದಂತೆ ₹7 ಲಕ್ಷದ ಶೇ 20ರಷ್ಟಿದೆ. ಅಂದರೆ ₹1.40 ಲಕ್ಷ.
ಈ ಮೊತ್ತ ಪ್ರಸ್ತುತ ₹6 ಲಕ್ಷ ಆಗಿದ್ದರೆ ಖಂಡಿತ ಲಾಭದ ಮೇಲೆ ವಿನಾಯಿತಿ ಕಳೆದು ಉಳಿದ ಮೊತ್ತಕ್ಕೆ ದೀರ್ಘಾವಧಿ ಲಾಭದ ತೆರಿಗೆ ಇದೆ. ಆದರೆ ಈಗಿನ ಆದಾಯ, ನಿಮ್ಮ ವಯಸ್ಸು ಹಾಗೂ ಗರಿಷ್ಠ ತೆರಿಗೆ ವಿನಾಯಿತಿ ಮಿತಿ ಇತ್ಯಾದಿ ಪರಿಗಣಿಸಿ ಒಟ್ಟಾರೆ ತೆರಿಗೆ ಬರದಿರುವ ಸಾಧ್ಯತೆಯೇ ಅಧಿಕ. ನಿಮ್ಮ ನಿಖರ ಮಾಹಿತಿಯನ್ನು ಯಾವುದೇ ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ಲೆಕ್ಕ ಹಾಕಿಸಿಕೊಳ್ಳಿ.
ನೀವು ಮುಖ್ಯ ಪ್ರಶ್ನೆಯಲ್ಲಿ ಕೇಳಿರುವಂತೆ ವಿವಿಧ ಹೂಡಿಕೆಗಳಲ್ಲಿ ನಿಮ್ಮ ಹಣ ಈಗಾಗಲೇ ಇದ್ದು ಹೊಸ ಹೂಡಿಕೆಗೆ ವರ್ಗಾಯಿಸುವ ಉದ್ದೇಶ ಹೊಂದಿದ್ದೀರಿ. ಇದು ನಿಮ್ಮ ಅಗತ್ಯಕ್ಕೆ ಸಂಬಂಧಿಸಿ ನಿರ್ಧಾರವಾಗುತ್ತದೆ. ನಿಮ್ಮ ಉದ್ದೇಶ ಯಾವುದೇ ಆರ್ಥಿಕ ಅಪಾಯಗಳಿಗೆ ಈಡಾಗದೆ ಕೇವಲ ತಿಂಗಳ ಬಡ್ಡಿ ಮಾತ್ರ ಪಡೆಯುವುದಾಗಿದ್ದರೆ, ಸಂಪೂರ್ಣ ಮೊತ್ತವನ್ನು ನೀವು ಅಂದುಕೊಂಡಂತೆ ಅಂಚೆ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸಮಂಜಸ.
ಅದರ ಬದಲು ಅಷ್ಟೇ ಅವಧಿಯಲ್ಲಿ ಮಾರುಕಟ್ಟೆ ಅಪಾಯಗಳನ್ನು ಗ್ರಹಿಸಿ, ಉತ್ತಮ ಲಾಭ ಗಳಿಸುವುದಾಗಿದ್ದರೆ ನೀವು ಕೇವಲ ನಿಶ್ಚಿತ ಬಡ್ಡಿ ಬರುವ ಅಂಚೆ ಇಲಾಖೆಯ ಹಿರಿಯ ನಾಗರಿಕರ ಠೇವಣಿಗಳಲ್ಲಿ ಮಾತ್ರವಲ್ಲದೆ ಪರ್ಯಾಯವಾಗಿ ಅದೇ ಮೊತ್ತವನ್ನು ಮ್ಯೂಚುವಲ್ ಫಂಡ್‌ಗಳಲ್ಲೂ ಪ್ರತಿ ತಿಂಗಳು ಹೂಡಿಕೆ ಮಾಡಬಹುದು. ಒಂದು ಹಂತದ ಹೂಡಿಕೆ ಮಾಡಿದ ತರುವಾಯ ಆ ಸಂಚಿತ ಹೂಡಿಕೆಯನ್ನು ಲಾಭ ಸಹಿತ ಪ್ರತಿ ತಿಂಗಳ ನಿಗದಿತ ದಿನಾಂಕದಂದು ಕಂತಿನಲ್ಲಿ ಹಿಂಪಡೆಯಬಹುದು.
ಉದಾಹರಣೆಗೆ ಸತತ ತಿಂಗಳಿಗೆ ₹10 ಸಾವಿರದಂತೆ ಮುಂದಿನ 3 ವರ್ಷ ಹೂಡಿಕೆ ಮಾಡಿ ತದನಂತರ ಅಸಲು ಲಾಭ ಸೇರಿ ವೃದ್ಧಿಯಾದ ಮೊತ್ತ ಶೂನ್ಯ ಆಗುವ ತನಕ ನಗದೀಕರಿಸುವ ಅವಕಾಶ ಇದೆ. ಈ ಮೊತ್ತವನ್ನು ಉತ್ತಮವಾದ ಐದು ಪ್ರತ್ಯೇಕ ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಮಾಡಿ. ಹೂಡಬಹುದಾದ ಮೊತ್ತವನ್ನು ನೀವೇ ನಿಮ್ಮ ಅನುಕೂಲಕ್ಕೆ ಸರಿಹೊಂದುವಂತೆ ನಿರ್ಧರಿಸಿ ದೀರ್ಘಾವಧಿಯಲ್ಲಿ ನಿರಂತರ ಲಾಭಗಳಿಸಬಹುದು.
ಎಂ. ದೊಡ್ಡಸಿದ್ದಯ್ಯ, ಮೈಸೂರು.
ನಾನು ನಿವೃತ್ತಿ ಹೊಂದಿದ್ದು, ನನಗೆ 79 ವರ್ಷ. ಆರ್ಥಿಕ ವರ್ಷ 2023-24ರ ಸಾಲಿಗೆ ಸಂಬಂಧಿಸಿ ನನ್ನ ಆದಾಯ ಈ ರೀತಿ ಇದೆ. ನಿವೃತ್ತಿ ವೇತನ ₹5.24 ಲಕ್ಷ, ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ₹3.70 ಲಕ್ಷ, ಎನ್‌ಎಸ್‌ಸಿ ಬಡ್ಡಿ ₹1.30 ಲಕ್ಷ, ವ್ಯವಸಾಯದಿಂದ ಖರ್ಚು ಕಳೆದು ಬಂದ ಆದಾಯ ₹3.22 ಲಕ್ಷ, ಷೇರು ಡಿವಿಡೆಂಡ್ ಇತ್ಯಾದಿಗಳಿಂದ ₹680. ಹೀಗೆ ಒಟ್ಟಾರೆ ₹13.46 ಲಕ್ಷ ಆದಾಯವಿದೆ. ಹೂಡಿಕೆಯಾಗಿ ₹1.50 ಲಕ್ಷ ಎನ್‌ಎಸ್‌ಸಿಯಲ್ಲಿ ಠೇವಣಿ ಮಾಡಿರುತ್ತೇನೆ.
ಈ ಮೊತ್ತಕ್ಕೆ ಟಿಡಿಎಸ್ ಆಗಿರುವುದಿಲ್ಲ. ಮೇಲ್ಕಂಡ ಆದಾಯಕ್ಕೆ ತೆರಿಗೆ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ತಿಳಿಯಬೇಕಿತ್ತು. ವ್ಯವಸಾಯದಿಂದ ಬಂದ ಆದಾಯಕ್ಕೆ ತೆರಿಗೆ ಇಲ್ಲ ಎಂಬುದನ್ನು ನಾನು ಕೇಳಿರುತ್ತೇನೆ. ಈ ಮೊತ್ತಕ್ಕೆ ಏನಾದರೂ ಮಿತಿ ಇದೆಯೇ ಹಾಗೂ ಇದಕ್ಕೆ ತೆರಿಗೆ ಕಟ್ಟಬೇಕಾಗುತ್ತದೆಯೇ? ನಾನು ಯಾವ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಳ್ಳಬೇಕು?
ಆದಾಯ ತೆರಿಗೆ ನಿಯಮದಡಿ ಕೃಷಿಯಿಂದ ಬಂದ ಆದಾಯಕ್ಕೆ ತೆರಿಗೆ ಇಲ್ಲ ಎಂಬುದನ್ನು ಆದಾಯ ತೆರಿಗೆಯ ಸೆಕ್ಷನ್ 10(1) ಅಡಿ ಉಲ್ಲೇಖಿಸಲಾಗಿದೆ. ಆದರೆ, ಈ ಆದಾಯ ಇರುವವರು ಇತರೆ ಆದಾಯವನ್ನೂ ಹೊಂದಿದ್ದಾಗ, ಪಾವತಿಸಬೇಕಾದ ತೆರಿಗೆ ಲೆಕ್ಕ ಹಾಕಲು ಕೃಷಿಯೇತರ ಆದಾಯಗಳೊಡನೆ ಕೃಷಿ ಆದಾಯ ಸಹಿತವಾಗಿ ಹಾಗೂ ಕೇವಲ ಕೃಷಿ ಆದಾಯದೊಡನೆ ಗರಿಷ್ಠ ಆದಾಯ ವಿನಾಯಿತಿ ಮೊತ್ತ ಸೇರಿಸಿ ಪ್ರತ್ಯೇಕವಾಗಿ ತೆರಿಗೆ ಲೆಕ್ಕ ಹಾಕಬೇಕಾಗಿರುತ್ತದೆ. ಇವುಗಳ ನಡುವಣ ವ್ಯತ್ಯಾಸವನ್ನಷ್ಟೇ ತೆರಿಗೆಗೊಳಪಡಿಸಲಾಗುತ್ತದೆ.
ವರ್ಷದಲ್ಲಿ ₹5,000ಕ್ಕಿಂತ ಅಧಿಕ ಕೃಷಿ ಆದಾಯ ಇದ್ದಾಗ ಈ ವಿಧಾನ ಅನುಸರಿಸಬೇಕಾಗುತ್ತದೆ. ಈ ಮೊತ್ತಕ್ಕಿಂತ ಅಧಿಕ ಕೃಷಿ ಆದಾಯ ಇದ್ದಾಗ ತೆರಿಗೆ ನಿಯಮಗಳ ಅನ್ವಯ ಅದನ್ನು ರಿಟರ್ನ್ಸ್‌ಗಳಲ್ಲಿ ಉಲ್ಲೇಖಿಸಬೇಕಿದೆ.
ನೀವು ನೀಡಿರುವ ಮಾಹಿತಿಯಂತೆ ಈಗಾಗಲೇ ಆರ್ಥಿಕ ವರ್ಷ 2023-24ರ ಆದಾಯಕ್ಕೆ ಸಂಬಂಧಿಸಿ ಐಟಿಆರ್ ಸಲ್ಲಿಸುವ ಉದ್ದೇಶ ಹೊಂದಿ ಈ ವಿಚಾರವಾಗಿ ಪ್ರಶ್ನೆ ಕೇಳಿರುತ್ತೀರಿ ಎಂದು ಊಹಿಸಲಾಗಿದೆ. ಒಂದು ವೇಳೆ ನೀವು ಐಟಿಆರ್ ಸಲ್ಲಿಸದೆ ಇದ್ದರೆ ಈ ಕೂಡಲೇ ಸಲ್ಲಿಸಿ. ತೆರಿಗೆ ಅಲ್ಲದೆ ಹೆಚ್ಚುವರಿ ಶುಲ್ಕ ₹5 ಸಾವಿರ ಪಾವತಿಸಿ ತಡವಾಗಿಯಾದರೂ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31ರ ತನಕ ಅವಕಾಶವಿದೆ. ತೆರಿಗೆ ಈ ಹಿಂದೆ ಕಡಿತ ಆಗದಿದ್ದರೆ ಎಲ್ಲಾ ಮೊತ್ತವನ್ನು ರಿಟರ್ನ್ಸ್ ಸಲ್ಲಿಸುವಾಗ ಪಾವತಿ ಮಾಡಬೇಕಾಗುತ್ತದೆ. ನಿಮ್ಮ ರಿಟರ್ನ್ಸ್ ಸಲ್ಲಿಸಲು ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.