ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ವಿಚಾರದ ಪ್ರಶ್ನೋತ್ತರ: ಪ್ರಮೋದ ಶ್ರೀಕಾಂತ ದೈತೋಟ ಅವರ ಅಂಕಣ

Published 12 ಸೆಪ್ಟೆಂಬರ್ 2023, 23:30 IST
Last Updated 12 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಪ್ರಶ್ನೆ: ನಾನು ನಿವೃತ್ತ ಜೀವನ ನಡೆಸುತ್ತಿದ್ದು ಪಿಂಚಣಿ ಆದಾಯವಿದೆ. ಕಳೆದ ವರ್ಷ ನನ್ನ ತೆರಿಗೆ ವಿವರ ಸಕಾಲದಲ್ಲಿ ಸಲ್ಲಿಸಿದ್ದೆ. ಆದರೆ, ಕಾರಣಾಂತರದಿಂದ ನನ್ನ ಟಿಡಿಎಸ್ ಮಾಹಿತಿ ‘26 ಎಎಸ್’ನಲ್ಲಿ ಪ್ರಕಟಗೊಂಡಿರಲಿಲ್ಲ. ನನ್ನ ಆದಾಯಕ್ಕೆ ಸಂಬಂಧಿಸಿ ತೆರಿಗೆ ಇಲ್ಲದ ಕಾರಣ ತೊಂದರೆ ಆಗಲಿಲ್ಲ. ಆದರೆ, ನಂತರದ ದಿನಗಳಲ್ಲಿ ಈ ಬಗ್ಗೆ ನಾನು ಸಂಬಂಧಪಟ್ಟ ಸಂಸ್ಥೆಯೊಡನೆ ವಿಚಾರಿಸಿದಾಗ ಅವರ ಕಡೆಯಿಂದ ತಪ್ಪು ಪ್ಯಾನ್ ಮಾಹಿತಿ ಸಲ್ಲಿಸಿಕೆಯಾದ ವಿಚಾರ ಗೊತ್ತಾಯಿತು. ಬೇರೆ ವ್ಯಕ್ತಿಗಳ ಪ್ಯಾನ್ ಖಾತೆಯಡಿ ನನ್ನ ತೆರಿಗೆ ಕಡಿತ ವಿವರ ಸಲ್ಲಿಸಲಾಗಿತ್ತು. ಈ ಸಮಸ್ಯೆ ಹೇಳಿಕೊಂಡ ನಂತರ ನನ್ನ ಪ್ಯಾನ್ ಖಾತೆಗೆ ತೆರಿಗೆ ವಿವರ ಸರಿ ಮಾಡಿ ಸಲ್ಲಿಸಿರುತ್ತಾರೆ. ಈಗ ನೋಡಿದರೆ ಕಳೆದ ವರ್ಷದ ‘26 ಎ ಎಸ್’ ವಿವರದಲ್ಲಿ ಸರಿಯಾದ ಮಾಹಿತಿ ತೋರಿಸುತ್ತಿದೆ. ಆದಾಯ ತೆರಿಗೆ ಇಲಾಖೆ ನನ್ನ ವಿವರ ಪರಿಶೀಲಿಸಿ ಯಾವುದೇ ಡಿಮಾಂಡ್ ಅಥವಾ ರಿಫಂಡ್ ಇಲ್ಲ ಎನ್ನುವ ಮಾಹಿತಿಯನ್ನು ಈಗಾಗಲೇ ನನಗೆ ಕಳುಹಿಸಿರುತ್ತದೆ. ನನ್ನ ಪ್ರಶ್ನೆ ಏನೆಂದರೆ, ನಾನು ಹಳೆಯ ವರ್ಷದ ತೆರಿಗೆ ವಿವರ ಸರಿ ಮಾಡಲು ಅವಕಾಶವಿದೆಯೇ? ಇದಕ್ಕೆ ಕಾಲಮಿತಿ 31 ಡಿಸೆಂಬರ್ ಎಂದು ತಿಳಿದಿದ್ದೇನೆ. ಆ ಕಾಲಮಿತಿ ಈಗ ಆಗಿಹೋಗಿರುವ ಕಾರಣ ನನಗೆ ಬರಬಹುದಾಗಿದ್ದ ತೆರಿಗೆ ರಿಫಂಡ್ ಈಗ ನಷ್ಟ ಎಂದು ಪರಿಗಣಿಸಿ ಬಿಟ್ಟುಬಿಡಬೇಕಾಗಿದೆಯೇ?

-ಸತೀಶ್ ಕುಮಾರ್, ಬೆಂಗಳೂರು

ಉತ್ತರ: ಆದಾಯ ತೆರಿಗೆಯ ಯಾವುದೇ ವಿವರದಲ್ಲಿನ ಮಾಹಿತಿ ಅವಲೋಕಿಸಿದಾಗ ಮೇಲ್ನೋಟಕ್ಕೆ ದಾಖಲೆಗಳಿಂದ ಗೋಚರಿಸುವ ದೋಷಗಳಿಗೆ ಪರಿಹಾರ ಕಂಡುಕೊಳ್ಳಲು ನಿಮ್ಮ ವಿವರ ಪರಿಷ್ಕರಿಸಬೇಕು. ಆದಾಯ ತೆರಿಗೆಯ ಸೆಕ್ಷನ್ 139(5) ಅಡಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ತೆರಿಗೆ ವಿವರವನ್ನು ಸಲ್ಲಿಸಿದ ನಂತರ, ಯಾವುದೇ ಲೋಪ ಅಥವಾ ತಪ್ಪು ಮಾಹಿತಿ ಸಲ್ಲಿಕೆಯಾಗಿರುವುದು ಆತನಿಗೆ ಕಂಡುಬಂದರೆ ಅದನ್ನು ಆಯಾ ಆರ್ಥಿಕ ವರ್ಷದ ಕೊನೆಯಿಂದ 9 ತಿಂಗಳೊಳಗೆ (31 ಡಿಸೆಂಬರ್) ಪರಿಷ್ಕೃತ ವಿವರ ಸಲ್ಲಿಸುವ ಮೂಲಕ ಸರಿಪಡಿಸಬಹುದು. ಆದರೆ ನಿಜವಾದ ಸಮಸ್ಯೆ ಆರಂಭವಾಗುವುದು ಈ ಕಾಲಮಿತಿ ಕಳೆದ ನಂತರ.

ನೀವು ಕೊಟ್ಟ ಮಾಹಿತಿಯಲ್ಲಿ ಇರುವಂತೆ, ಮೇಲೆ ತಿಳಿಸಿದ ಗಡುವು ಮುಗಿದಿದೆ. ಈಗ ಇಂತಹ ಲೋಪ ಸರಿಪಡಿಸಲು ಆದಾಯ ತೆರಿಗೆ ಇಲಾಖೆ ಪ್ರತ್ಯೇಕವಾದ ಒಂದು ಅವಕಾಶ ಕಲ್ಪಿಸಿದೆ. ಅದೆಂದರೆ, ಸಿಪಿಸಿ ಇಲಾಖೆಯಿಂದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 143(1) ಅಡಿ ನಿಮಗೆ ತೆರಿಗೆ ಅಧಿಕಾರಿಗಳಿಂದ ಬಂದಿರಬಹುದಾದ ಸೂಚನೆ, ಆದೇಶಕ್ಕೆ ಪ್ರತಿಯಾಗಿ ನಿಮ್ಮ ತೆರಿಗೆ ವಿವರದಲ್ಲಿ ತಿದ್ದುಪಡಿ ಕೋರಿ ಸೆಕ್ಷನ್ 154ರ ಅಡಿ ವಿನಂತಿ ಸಲ್ಲಿಸಬೇಕು. ಈ ಕೋರಿಕೆಯನ್ನು ಮೇಲೆ ಉಲ್ಲೇಖಿಸಿದ ಆದೇಶ ಬಂದ ಆರ್ಥಿಕ ವರ್ಷಾಂತ್ಯದಿಂದ ಮುಂದಿನ 4 ವರ್ಷದೊಳಗೆ ಸಲ್ಲಿಸಲು ಅವಕಾಶವಿದೆ. ನಿಮ್ಮ ತೆರಿಗೆ ರಿಫಂಡ್ ಪಡೆಯುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಈಗಾಗಲೇ ‘26 ಎಎಸ್’ನಲ್ಲಿ ತೆರಿಗೆ ಮಾಹಿತಿ ಇರುವ ಕಾರಣ ನಿಮ್ಮ ಸಮಸ್ಯೆಗೆ ಭಾಗಶಃ ಪರಿಹಾರ ಸಿಕ್ಕಂತಾಗಿದೆ. ಆನ್‌ಲೈನ್‌ ಪೋರ್ಟಲ್ ಮೂಲಕವೇ ಈ ಸಮಸ್ಯೆಗೆ ತಿದ್ದುಪಡಿ ಸಲ್ಲಿಸಬೇಕಾಗುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದ ಸಲ್ಲಿಕೆಗಳನ್ನು ತೆರಿಗೆ ಸಲಹೆಗಾರರ ನೆರವು ಪಡೆದು ಮುಂದುವರಿಯಿರಿ.

ಪ್ರಶ್ನೆ: ನಾನು ಬೆಂಗಳೂರಿನಲ್ಲಿ ಒಂದು ಮನೆ ಹೊಂದಿದ್ದೇನೆ. ನಾನು ಉದ್ಯೋಗದಲ್ಲಿದ್ದು ಬರುವ ವೇತನಕ್ಕೆ ಆದಾಯ ತೆರಿಗೆ ಪಾವತಿಸುತ್ತಿದ್ದೇನೆ. ನನ್ನ ಹೆಸರಲ್ಲಿ ಇನ್ನೂ ಒಂದು ಮನೆ ಇದ್ದು ಅದನ್ನು ಬಾಡಿಗೆಗೆ ಕೊಟ್ಟಿರುತ್ತೇನೆ. ತಿಂಗಳ ಬಾಡಿಗೆ ₹40,000 ನನ್ನ ಪತ್ನಿಯ ಹೆಸರಲ್ಲಿ ಆಕೆಯ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ, ಬಾಡಿಗೆ ಕರಾರನ್ನು ಆಕೆಯ ಹೆಸರಲ್ಲೇ ಮಾಡಿದ್ದೇನೆ. ಬಾಡಿಗೆದಾರರು ತಮ್ಮ ಬಾಡಿಗೆಗೆ ಸಂಬಂಧಿತ ತೆರಿಗೆ ವಿನಾಯಿತಿ ಪಡೆಯಲು ಪ್ಯಾನ್ ಕೇಳುತ್ತಿದ್ದಾರೆ. ನನ್ನ ಸಮಸ್ಯೆ, ಈಗ ಯಾರ ಪ್ಯಾನ್ ಕೊಡಬೇಕೆಂಬುದು. ನನ್ನ ಪ್ಯಾನ್ ಕೊಟ್ಟರೆ ನಾನು ಬಾಡಿಗೆ ಆದಾಯ ಘೋಷಿಸಿ ತೆರಿಗೆ ಕಟ್ಟಬೇಕಲ್ಲ? ಬಾಡಿಗೆ ನನ್ನ ಪತ್ನಿಯೇ ಪಡೆಯುತ್ತಿರುವ ಕಾರಣ ಆಕೆಯ ಪ್ಯಾನ್ ಕೊಟ್ಟರೆ ಸೂಕ್ತವೆನ್ನುವುದು ನನ್ನ ನಿರ್ಣಯ. ಆಕೆಗೆ ಅನ್ಯ ಆದಾಯವಿಲ್ಲ. ಈ ಬಾಡಿಗೆ ಮನೆಯನ್ನು ಸಾಲ ತೆಗೆದುಕೊಂಡು ಕಟ್ಟಿಸಿದ್ದೇನೆ. ಬಾಡಿಗೆದಾರರು ಯಾರದೇ ಪ್ಯಾನ್ ಕೊಟ್ಟರೂ ತೊಂದರೆ ಇಲ್ಲವೆಂದು ಹೇಳಿದ್ದಾರೆ. ಈ ಬಗ್ಗೆ ಸಲಹೆ ನೀಡಿ.

-ಹೆಸರು ಬೇಡ, ಬೆಂಗಳೂರು

ಉತ್ತರ: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 22ರಲ್ಲಿ ತಿಳಿಸಿರುವಂತೆ, ಮನೆಯ ಬಾಡಿಗೆಯಿಂದ ಬರುವ ಆದಾಯದ ತೆರಿಗೆಯು ಮನೆಯ ಒಡೆತನ ಇರುವವರಿಗೆ ಅನ್ವಯಿಸುತ್ತದೆ. ಇಲ್ಲಿ ಬಾಡಿಗೆದಾರ ಯಾರಿಗೆ ತೆರಿಗೆ ಕೊಡುತ್ತಾನೆ ಎಂಬುದಕ್ಕಿಂತ ಮನೆಯ ಒಡೆತನ ಯಾರ ಹೆಸರಲ್ಲಿದೆ ಎನ್ನುವುದು ಮುಖ್ಯ. ಬಾಡಿಗೆಗೆ ಕೊಟ್ಟ ಮನೆ ನಿಮ್ಮ ಹೆಸರಲ್ಲಿರುವ ಕಾರಣ, ನೀವೇ ಆ ಆದಾಯ ಘೋಷಿಸುವುದು ಕಾನೂನು ರೀತಿ ಸರಿ. ಯಾವುದೇ ಮನೆಯನ್ನು ಬಾಡಿಗೆಗೆ ಕೊಟ್ಟಾಗ ಅದರ ಮೇಲೆ ಕಟ್ಟುವ ಸಂಪೂರ್ಣ ಬಡ್ಡಿಗೆ ಆದಾಯದಲ್ಲಿ ಕಡಿತ ಸಿಗುತ್ತದೆ. ಹೀಗಾಗಿ ಬಾಡಿಗೆ ಆದಾಯವನ್ನು ಹಾಗೂ ಅದಕ್ಕೆ ಸಂಬಂಧಿಸಿದ ಬಡ್ಡಿಯನ್ನು ನೀವೇ ಘೋಷಿಸಿ ವಿನಾಯಿತಿಯನ್ನು ಪಡೆಯಬಹುದು. ಮನೆಯ ಮಾಲೀಕತ್ವ ನಿಮ್ಮ ಪತ್ನಿಯ ಹೆಸರಲ್ಲಿ ಇಲ್ಲದಿದ್ದರೂ ಅವರ ಹೆಸರಲ್ಲಿ ನೀವು ಕರಾರು ಮಾಡಿಸಿರುತ್ತೀರಿ. ಈ ಹಿನ್ನೆಲೆಯಲ್ಲಿ ಇದನ್ನು ನಿಮ್ಮ ಹೆಸರಲ್ಲೇ ತಿದ್ದುಪಡಿ ಮಾಡಿಕೊಳ್ಳುವುದು ಸೂಕ್ತ ಹಾಗೂ ನಿಮ್ಮದೇ ಪ್ಯಾನ್ ವಿವರ ನೀಡುವುದು ಸಮಂಜಸ.

ಇನ್ನೂ ಒಂದು ವಿಚಾರ ತಿಳಿದಿರಲಿ. ಒಂದು ವೇಳೆ, ನಿಮ್ಮ ಪತ್ನಿಯ ಹೆಸರಲ್ಲಿ ಬಾಡಿಗೆ ಆದಾಯವನ್ನು ಅವರಿಗೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಸಿಗುವಂತೆ ಮಾಡುವುದೇ ಆಗಿದ್ದರೆ, ಅದನ್ನು ಕಾನೂನು ಪ್ರಕ್ರಿಯೆಯ ಮೂಲಕ ಮಾಡುವುದು ಒಳಿತು. ಅದೆಂದರೆ, ನಿಮ್ಮ ಮನೆಯ ಒಡೆತನವನ್ನು ಅವರ ಹೆಸರಿಗೆ ವರ್ಗಾಯಿಸುವುದು. ಇದನ್ನು ಉಡುಗೊರೆಯಾಗಿ (ಗಿಫ್ಟ್ ಡೀಡ್) ನೀಡಿ ಹಾಗೂ ನಂತರ ಅವರ ಹೆಸರಲ್ಲಿ ಖಾತೆ ಮಾಡಿಸುವ ಮೂಲಕ ವರ್ಗಾಯಿಸಬಹುದು. ಇಲ್ಲಿ ಸಂಬಂಧಿಕರೊಳಗೆ ಮಾಲೀಕತ್ವ ವರ್ಗಾವಣೆಯಾಗುತ್ತದೆ, ಕಾನೂನು ಮೂಲಕ ಆಸ್ತಿಯ ಹಕ್ಕು ಹಸ್ತಾಂತರವಾಗುತ್ತದೆ. ತದನಂತರ ಬಾಡಿಗೆ ಅವರ ಹೆಸರಲ್ಲೇ ಪಡೆಯಬಹುದು. ಇದು ನಿಮಗೆ ಅನಿವಾರ್ಯವೇ ಆಗಿದ್ದಲ್ಲಿ ಮಾತ್ರ ಮಾಡಿ. ಹಾಗೂ ಬ್ಯಾಂಕ್ ಸಾಲ ಮುಂದುವರಿಯುತ್ತಿರುವ ಕಾರಣ ಬ್ಯಾಂಕ್ ಒಪ್ಪಿಗೆಯೂ ಇದಕ್ಕೆ ಅನಿವಾರ್ಯ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT