ನಾನು ಪ್ರಸ್ತುತ ಮೂರು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಹೊಂದಿದ್ದೇನೆ. ಇದನ್ನು ಪ್ರತಿ ಹತ್ತು ದಿನದ ಅವಧಿಯಲ್ಲಿ ಪರ್ಯಾಯವಾಗಿ ಬಳಸುತ್ತಾ ನನ್ನ ಕಾರ್ಡ್ ಪಾವತಿ ಅವಧಿಯನ್ನು 40ರಿಂದ 50 ದಿನಕ್ಕೆ ಸರಿದೂಗುವಂತೆ ನಾನು ಮಾಡುವ ವ್ಯವಹಾರಗಳನ್ನು ಹೊಂದಿಸಿಕೊಳ್ಳುತ್ತಿದ್ದೇನೆ. ಈ ರೀತಿ ಮಾಡುವುದರಿಂದ ನನ್ನ ಬ್ಯಾಂಕ್ ಬ್ಯಾಲೆನ್ಸ್ ಸರಿಯಾಗಿ ನಿಭಾಯಿಸಿ ತುಸು ಪ್ರಮಾಣದಲ್ಲಿ ಬಡ್ಡಿ ಲಾಭ ಮಾಡಬಹುದೆಂದು ನನ್ನ ಅಂದಾಜು. ಈ ರೀತಿ ಬಹು ಬ್ಯಾಂಕ್‌ಗಳ ಕಾರ್ಡ್ ವ್ಯವಹಾರದಿಂದ ಏನಾದರೂ ಸಮಸ್ಯೆ ಇದೆಯೆ?
-ಪ್ರಸನ್ನ ಕುಮಾರ್ ಆರ್.ಎಸ್, ನವನಗರ, ಹುಬ್ಬಳ್ಳಿ
ವ್ಯಕ್ತಿಯೊಬ್ಬನ ಆರ್ಥಿಕ ಕ್ಷಮತೆ ಹಾಗೂ ಪಾವತಿ ಸಾಮರ್ಥ್ಯಕ್ಕೆ ಸಂಬಂಧಿಸಿ, ಪಡೆಯಬಹುದಾದ ಅನೇಕ ಆರ್ಥಿಕ ಉತ್ಪನ್ನಗಳಲ್ಲಿ ಕ್ರೆಡಿಟ್ ಕಾರ್ಡ್ ಕೂಡ ಒಂದು. ಸರಿಯಾದ ರೀತಿಯಲ್ಲಿ ಇದನ್ನು ಬಳಸಿದರೆ ನಮಗೆ ಅನುಕೂಲಗಳೇ ಹೆಚ್ಚು. ಕೆಲವರು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದುವುದು ಉತ್ತಮವೇ ಎಂಬ ಪ್ರಶ್ನೆಯನ್ನು ಸಹಜವಾಗಿ ಕೇಳುವುದಿದೆ. ಇದರ ಗುಣಾವಗುಣಗಳನ್ನು ಇಲ್ಲಿ ಗಮನಿಸಿ ನಿಮಗೆ ಸರಿಯಾದುದನ್ನು ಅಳವಡಿಸಿಕೊಳ್ಳಿ.
ಬಹು ಕ್ರೆಡಿಟ್ ಕಾರ್ಡ್ ಹೊಂದುವ ಸದುಪಾಯಗಳು ಏನೇನೆಂದು ನೋಡುವುದಾದರೆ, ಪ್ರತಿ ಕ್ರೆಡಿಟ್ ಕಾರ್ಡ್ ಪಡೆಯುವಾಗಲೂ ಅದರ ಮಿತಿಯನ್ನು ಮೊದಲು ನಿರ್ಣಯಿಸಲಾಗುತ್ತದೆ. ಈ ಮಿತಿಗೆ ನಮ್ಮ ಬಳಕೆ ಹತ್ತಿರವಾದಂತೆಲ್ಲ, ಬಳಕೆಯ ದರ ಹೆಚ್ಚುತ್ತದೆ. ಇದು ಶೇಕಡಾ 80-90ಕ್ಕೂ ಅಧಿಕ ಆದಂತೆ, ಕಾರ್ಡ್ ಬಳಕೆದಾರರ ಸಾಲ ಬಳಕೆಯ ಅನುಪಾತ (ಕ್ರೆಡಿಟ್ ಯೂಟಿಲೈಜೇಶನ್ ರೇಷಿಯೋ) ಕ್ಷೀಣವಾಗುತ್ತದೆ. ಇದು ಒಂದೇ ಕಾರ್ಡ್ ಹೆಚ್ಚಾಗಿ ಬಳಸುವ ಕಾರಣದಿಂದಲೂ ಆಗಿರಬಹುದು. ಹೀಗಾಗಿ ಒಂದಕ್ಕಿಂತ ಅಧಿಕ ಕಾರ್ಡ್‌ಗಳನ್ನು ನಮ್ಮ ಅಗತ್ಯದ ಬಳಕೆಗೆ ಉಪಯೋಗಿಸಿದಂತೆ ಈ ರೇಷಿಯೋ ಉತ್ತಮವಾಗುತ್ತದೆ.
ಪ್ರಸ್ತುತ ದಿನಗಳಲ್ಲಿ ಬಹುತೇಕ ಹೆಚ್ಚುವರಿ ಪ್ರಯೋಜನಗಳು ಲಭ್ಯವಿರುವ ಹಾಗೂ ಬಳಕೆದಾರರನ್ನು ಖರೀದಿಗೆ ಒತ್ತಾಯಿಸುವ ಅನೇಕ ಕಾರ್ಡ್‌ಗಳು, ಉಡುಗೊರೆಗಳು, ಡಿಸ್ಕೌಂಟ್ ಕಾರ್ಡ್ ಇತ್ಯಾದಿಗಳು ಇವೆ. ಪ್ರತಿ ಕ್ರೆಡಿಟ್ ಕಾರ್ಡ್ ವಿಭಿನ್ನ ಅಂಶಗಳನ್ನು ಹೊಂದಿವೆ. ಇವೆಲ್ಲವನ್ನು ಸಮರ್ಪಕವಾಗಿ ಯೋಚಿಸಿ ಅವನ್ನು ಬಳಸಿಕೊಳ್ಳುವುದು ಸೂಕ್ತ. ಇದಕ್ಕೆ ತಗಲುವ ಯಾವುದೇ ವೆಚ್ಚ ಇದ್ದರೂ ಅದನ್ನು ಮೊದಲೇ ತಿಳಿದುಕೊಳ್ಳಿ.
ಇನ್ನು ಬಹು ಬ್ಯಾಂಕ್‌ಗಳ ಕಾರ್ಡ್ ಬಳಸಿ ಬಡ್ಡಿ ರಹಿತ ಅವಧಿಯಿಂದ ಲಾಭ ಪಡೆಯುವುದು ಪರೋಕ್ಷವಾಗಿ ಹೆಚ್ಚು ಲಾಭದಾಯಕವಾಗಿದ್ದರೂ ಚಾಕಚಕ್ಯವಾಗಿ ಬಳಸಿದರೆ ಮಾತ್ರ ಇದು ಪ್ರಯೋಜನಕಾರಿ. ಯಾವುದೇ ಸಮಯ ಕಾರ್ಡ್ ಬಾಕಿಯನ್ನು ಸಕಾಲದಲ್ಲಿ ಪಾವತಿಸುವುದು ಅಸಾಧ್ಯವಾದರೆ, ಅದರ ತೊಡಕು ಪ್ರತ್ಯೇಕವಾಗಿ ಇದ್ದೇ ಇರುತ್ತದೆ. ಆದರೆ ಸಕಾಲದಲ್ಲಿ ಪಾವತಿಸುವವರಿಗೆ, 40-50 ದಿನಗಳವರೆಗೆ ಯಾವುದೇ ಬಡ್ಡಿ ಇಲ್ಲದೇ ಖರೀದಿಗಳನ್ನು ಮುಂದೂಡಬಹುದು.
ಇಲ್ಲಿ ಹೇಗೆ ಬಹು ಕ್ರೆಡಿಟ್ ಕಾರ್ಡ್ ಹೊಂದುವ ಲಾಭ ಇರುತ್ತದೋ ಅದೇ ರೀತಿ, ಅವನ್ನು ಪರ್ಯಾಯವಾಗಿ ನಿರ್ವಹಿಸುವ ಅವಧಿಯನ್ನು ನೆನಪಿಟ್ಟು ಬಳಸಿಕೊಳ್ಳುವುದು ಕೂಡ ಹೆಚ್ಚು ನಿಗಾ ಇರಿಸಬೇಕಾದ ಕೆಲಸ. ಈ ನಿರ್ವಹಣೆ ಯಾರಿಗೆ ಸಾಧ್ಯವೋ ಅವರಿಗಷ್ಟೇ ಇದು ಹೆಚ್ಚು ಸೂಕ್ತ. ಇದಲ್ಲದೆ, ಬಹು ಕ್ರೆಡಿಟ್ ಕಾರ್ಡ್ ಹೊಂದಿದಾಗ ನಿಮಗೆ ಒಂದೇ ಕಾರ್ಡ್‌ಗೆ ಸಿಗುವ ಮಿತಿಗಿಂತ ಮೂರು ಕಾರ್ಡ್‌ಗಳಿಗೆ ಸೇರಿ ಸಿಗುವ ಮಿತಿ ಹೆಚ್ಚಾಗಿರುತ್ತದೆ. ಹೀಗಾಗಿ ಅತಿಯಾಗಿ ಖರ್ಚು ಮಾಡುವ ಅಪಾಯ ಹೆಚ್ಚುವರಿ ಕ್ರೆಡಿಟ್ ಲಿಮಿಟ್ ಇದ್ದರೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಆರ್ಥಿಕ ಶಿಸ್ತು ಪಾಲಿಸಿಕೊಂಡು, ಕಾರ್ಡ್ ಹೊಂದುವುದು ಹೆಚ್ಚು ಲಾಭದಾಯಕ. ಹೀಗಾಗಿ ಈ ಬಗ್ಗೆ ಯೋಚಿಸಿ ನಿರ್ಧರಿಸಿ. ಅವನ್ನು ಶಿಸ್ತಿನಿಂದ ನಿಭಾಯಿಸುವ ಹೊಣೆ, ಸಕಾಲದ ಪಾವತಿ ಸಾಧ್ಯತೆ ಇತ್ಯಾದಿ ಎಲ್ಲವೂ ಮುಖ್ಯ.
ನಾನು ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದು ನನ್ನ ಸಂಬಳದ ಭಾಗವಾಗಿ ಆಗಾಗ್ಗೆ ಕಂಪನಿಯ ವಿದೇಶಿ ಷೇರುಗಳು ಮಂಜೂರು ಆಗುತ್ತವೆ. ಈ ಷೇರುಗಳು ವಿದೇಶಿ ಟ್ರೇಡಿಂಗ್ ಅಕೌಂಟ್‌ನಲ್ಲಿ ಜಮೆಯಾಗುತ್ತವೆ. ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿಯೇ ನಾನು ಮಾರಬಹುದಾದರೂ, ಕೆಲವೊಂದು ಅವಧಿಯವರೆಗೆ ಬ್ಲಾಕ್ ಔಟ್ ಅವಧಿಯಲ್ಲಿ ಮಾರಲು ಸಾಧ್ಯವಾಗುವುದಿಲ್ಲ. ಒಮ್ಮೊಮ್ಮೆ ಬ್ಲಾಕ್ ಔಟ್ ಅವಧಿ ಮುಗಿದಾಗ ಮಾರುಕಟ್ಟೆಯ ದರ ಕಡಿಮೆಯಾಗಿರುತ್ತದೆ. ಅದಲ್ಲದೆ ಮಾರಾಟ ಮಾಡಿ ಬಂದ ಲಾಭದ ಮೇಲೆ ಅಲ್ಪಾವಧಿ ಅಥವಾ ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್ ತೆರಿಗೆಯನ್ನೂ ಕೊಡಬೇಕಾಗುತ್ತದೆ. ಡಾಲರ್ ವಿನಿಮಯ ದರಕ್ಕೆ ತಕ್ಕ ಹಾಗೆ ಲಾಭದಲ್ಲೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಇವೆಲ್ಲ ವಿಷಯಗಳನ್ನು ಪರಿಗಣಿಸಿ, ನನಗೆ ಸಿಗುತ್ತಿರುವ ಷೇರುಗಳಿಂದ ಅತ್ಯಧಿಕ ಲಾಭವನ್ನು ಪಡೆದು, ಅಗತ್ಯವಿದ್ದಲ್ಲಿ ಅವುಗಳಿಂದ ಸಿಗುವ ಹಣದಿಂದ ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ನನ್ನ ಸಂಪತ್ತನ್ನು ಹೇಗೆ ವೃದ್ಧಿ ಮಾಡಬಹುದೆಂದು ತಿಳಿಸಿ.
-ಗೌತಮ, ಬೆಂಗಳೂರು
ಯಾವುದೇ ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ, ಅದರಲ್ಲೂ ಮುಖ್ಯವಾಗಿ ಹೂಡಿಕೆಯ ಕ್ಷೇತ್ರಕ್ಕೆ ಸಂಬಂಧಿಸಿ ಹೇಳುವುದಾದರೆ, ಯಾವುದೇ ಆರ್ಥಿಕ ಅಪಾಯವೇ ಇರದ ಹೂಡಿಕೆ ಎಂಬುದು ಇಲ್ಲ. ಒಂದು ವೇಳೆ ಆರ್ಥಿಕ ಅಪಾಯ ಏನೂ ಇಲ್ಲ ಎಂದಾದಲ್ಲಿ ನಾವೆಲ್ಲಾ ಬಹು ನಿರೀಕ್ಷಿಸುವ ಸಂಪತ್ತು ವೃದ್ಧಿಸುವ ಅವಕಾಶ ಖಂಡಿತ ಇದ್ದೇ ಇದೆ ಎಂದು ಧೈರ್ಯದಿಂದ ಹೇಳಲಾಗದು. ನೀವೇ ಊಹಿಸಿ, ಬ್ಯಾಂಕ್, ಅಂಚೆ ಠೇವಣಿಯ ಹೂಡಿಕೆ, ನಿಶ್ಚಿತ ಬಡ್ಡಿಯನ್ನು ಯಾವುದೇ ಆರ್ಥಿಕ ಅಪಾಯ ಇಲ್ಲದೆ ನೀಡುತ್ತದೆ. ನಿಮ್ಮ ಅಸಲು ಮೊತ್ತಕ್ಕೂ ಯಾವುದೇ ಧಕ್ಕೆ ಇಲ್ಲ. ಆದರೆ, ಇದಕ್ಕಿಂತ ಹಲವು ಪಟ್ಟು ಲಾಭ ನೀಡುವ ಈಕ್ವಿಟಿ ಮಾರುಕಟ್ಟೆ, ಮ್ಯೂಚುವಲ್ ಫಂಡ್ ಇತ್ಯಾದಿ ಎಲ್ಲವೂ ಸಂಪತ್ತು ಸೃಷ್ಟಿಸುವ ನಿಟ್ಟಿನಲ್ಲಿ ಅತ್ಯುತ್ತಮವೆ. ಆದರೆ ಅದನ್ನು ನಾವು ಎಷ್ಟು ಸೂಕ್ಷ್ಮತೆಯಿಂದ, ಸಮಯೋಚಿತ ನಿರ್ಧಾರಗಳ ಮೂಲಕ ನಿಗಾ ಇರಿಸಿ ಅದರ ಒಳಹೊರಹುಗಳನ್ನು ಅರ್ಥೈಸಿ ಹೂಡಿಕೆ ಮಾಡುತ್ತೇವೆ ಎಂಬುದರ ಮೇಲೆ ಈ ಉದ್ದೇಶ ಸಾಧ್ಯವಾಗಿಸಬೇಕಾಗಿರುತ್ತದೆ. ಬಹುತೇಕ ಸಂದರ್ಭದಲ್ಲಿ ಲಾಟರಿ ರೀತಿ ನಾವು ಇಂತಹ ಹೂಡಿಕೆಗಳಲ್ಲಿ ಹಣ ತೊಡಗಿಸುತ್ತೇವೆ. ಆದರೆ, ಇದರಿಂದ ನಮ್ಮ ಗುರಿ ಸಾಧನೆ ಆಗಲಾರದು. ಸಕಾಲಕ್ಕೆ ಕಾಯಬೇಕು, ಹಂತ ಹಂತದ ಹೂಡಿಕೆ ಬೇಕು.
ಹೀಗಾಗಿ ಪ್ರತಿ ಹೂಡಿಕೆಗೂ ಇರಬೇಕಾದ ಪೂರ್ಣ ತಯಾರಿ ಹಾಗೂ ಯೋಜಿತ ನಿರ್ಧಾರದಿಂದ ಮಾತ್ರ ಇದು ಸಾಧ್ಯವಾಗುವ ವಿಚಾರ. ಅದನ್ನು ಅದೇ ರೀತಿ ನಿರ್ವಹಿಸುವುದು ಹೆಚ್ಚು ಸೂಕ್ತ. ಆ ಬಗ್ಗೆ ಯೋಚಿಸಿ ನಿರ್ಧರಿಸಿ. ನಿಮ್ಮ ಹಣ ಸಕಾಲದಲ್ಲಿ ಈ ವಿಭಾಗದಲ್ಲಿ ತೊಡಗಿಸಲು ಮಾನಸಿಕ ಸಿದ್ಧತೆ ಹಾಗೂ ಐದರಿಂದ ಹತ್ತು ವರ್ಷಗಳ ಮುಂದಿನ ಯೋಜನೆ ಇರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.