ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಪ್ರಶ್ನೋತ್ತರ ಅಂಕಣ | ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

Published : 3 ಜೂನ್ 2025, 23:30 IST
Last Updated : 3 ಜೂನ್ 2025, 23:30 IST
ಫಾಲೋ ಮಾಡಿ
Comments
ಪ್ರ

ನಾನು ಹಿರಿಯ ನಾಗರಿಕ. ಕೇಂದ್ರ ಸರ್ಕಾರದಿಂದ ಪಿಂಚಣಿ ಬರುತ್ತಿದೆ. ಈ ಮೊತ್ತ ವರ್ಷಕ್ಕೆ ಸುಮಾರು ₹8 ಲಕ್ಷ. ಇದರ ಜೊತೆಗೆ ಬಡ್ಡಿ ಆದಾಯವೂ ಬರುತ್ತಿದೆ. ನನ್ನ ವಯಸ್ಸು 76 ವರ್ಷ. ನಾನು ಪ್ರತಿ ವರ್ಷ ಆದಾಯ ತೆರಿಗೆ ವಿವರ ಸಲ್ಲಿಸುತ್ತಿದ್ದೇನೆ. ನನಗೆ ಷೇರುಗಳಿಂದ ಡಿವಿಡೆಂಡ್ ಕೂಡ ಬರುತ್ತಿದೆ. ಮತ್ತು ಅದು ನೇರವಾಗಿ ನನ್ನ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಈ ಮೊತ್ತ ಸುಮಾರು ₹50 ಸಾವಿರರಿಂದ ₹60 ಸಾವಿರಗಳಷ್ಟಿದೆ. ವರ್ಷದಲ್ಲಿ ಸುಮಾರು 5ರಿಂದ 10 ಬಾರಿ ನಾನು ಷೇರು ಮಾರಾಟ ಮಾಡುತ್ತೇನೆ. ಆನ್‌ಲೈನ್‌ ವ್ಯವಹಾರಗಳಲ್ಲಿ ನಾನು ಅಷ್ಟು ಪಳಗಿಲ್ಲದ ಕಾರಣ, ಈ ವ್ಯವಹಾರವನ್ನು ಬ್ರೋಕರ್ ಮೂಲಕ ಮಾಡಿಸುತ್ತಿದ್ದೇನೆ.

75 ವರ್ಷ ವಯಸ್ಸು ದಾಟಿದ ನಂತರ ಆದಾಯ ತೆರಿಗೆ ವಿವರ ಸಲ್ಲಿಸುವ ಅಗತ್ಯವಿಲ್ಲವೆಂದು ಇತ್ತೀಚೆಗೆ ನನ್ನ ಸ್ನೇಹಿತರು ತಿಳಿಸಿದ್ದಾರೆ. ಈಗ ಬ್ಯಾಂಕಿನವರು ಪಿಂಚಣಿಗೆ ಸಂಬಂಧಿಸಿ ಅನ್ವಯವಾಗುವ ತೆರಿಗೆ ಕಡಿತ ಮಾಡುತ್ತಿದ್ದಾರೆ. ಅಷ್ಟು ಸಾಕು ಎಂಬುದು ನನ್ನ ಸ್ನೇಹಿತರ ಅಭಿಪ್ರಾಯ. ಹೀಗಾಗಿ, ಈ ವರ್ಷದಿಂದ ತೆರಿಗೆ ವಿವರ ಸಲ್ಲಿಸದೆ ಇರಬಹುದು ಮತ್ತು ಆ ಕುರಿತಾಗಿ ಲೆಕ್ಕ ಪರಿಶೋಧಕರ ಬಳಿ ಹೋಗುವ ಅಗತ್ಯವಿಲ್ಲ ಎಂದು ನಾನು ಯೋಚಿಸುತ್ತಿದ್ದೇನೆ.

ಈ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ನೀಡಿ. ನಾನು ಈ ವರ್ಷ ವಿವರ ಸಲ್ಲಿಸುವ ಅಗತ್ಯವಿದೆಯೇ? ನಾನು ವಿವರ ಸಲ್ಲಿಸದಿದ್ದರೆ ಮುಂದೆ ಯಾವುದೇ ನೋಟಿಸ್ ಬರುವ ಸಾಧ್ಯತೆ ಇದೆಯೇ? ನನ್ನ ಸ್ನೇಹಿತರು ಅನುಸರಿಸುತ್ತಿರುವ ಬಗೆಯನ್ನು ನಾನೂ ಅನುಸರಿಸಬಹುದೆ?

–ಪರಶಿವ ಸ್ವಾಮಿ, ಯಲಹಂಕ

ಆದಾಯ ತೆರಿಗೆ ವಿವರ ಸಲ್ಲಿಸುವ ನಿಯಮಗಳಲ್ಲಿ, 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಿವರ ಸಲ್ಲಿಕೆಯ ಬಗ್ಗೆ ಕೆಲವು ರಿಯಾಯಿತಿಗಳಿವೆ. ಆದರೆ ಈ ವಿನಾಯಿತಿಗೆ ಕೆಲವೆಲ್ಲ ಇತಿ–ಮಿತಿಗಳೂ ಇವೆ. ಆದಾಯ ಮೂಲಕ್ಕೆ ಅನುಸರಿಸಿ ಈ ವಿನಾಯಿತಿ ಸಿಗುತ್ತದೆ. ಹೀಗಾಗಿ, ನಿಮ್ಮ ವಯಸ್ಸು ಮಾತ್ರವೇ ವಿನಾಯಿತಿ ಪಡೆಯಲು ಇರುವ ಮಾನದಂಡವಲ್ಲ.

ಸೆಕ್ಷನ್ 194ಪಿ ಪ್ರಕಾರ, ವಯಸ್ಸು 75 ವರ್ಷ ದಾಟಿದ ಮೇಲೆ ಪಿಂಚಣಿ ಆದಾಯ, ಕೇವಲ ಬಡ್ಡಿ ಆದಾಯ ಗಳಿಸುತ್ತಿದ್ದರೆ ಹಾಗೂ ಅದಕ್ಕೆ ಸಂಬಂಧಿಸಿ ಅಗತ್ಯವಿರುವ ಸಂಪೂರ್ಣ ತೆರಿಗೆಯನ್ನು ಬ್ಯಾಂಕ್‌ನಿಂದ ಕಡಿತ ಮಾಡಿ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತೆರಿಗೆ ಇಲಾಖೆಗೆ ಸಲ್ಲಿಸಿದ್ದರೆ, ನೀವು ಈ ವಿನಾಯಿತಿಯನ್ನು ಖಂಡಿತಾ ಪಡೆಯಬಹುದು.

ಆದರೆ, ನೀವು ಪಿಂಚಣಿ ಹಾಗೂ ಬಡ್ಡಿ ಆದಾಯವಲ್ಲದೆ, ಡಿವಿಡೆಂಡ್ ಆದಾಯವನ್ನೂ ಪಡೆಯುತ್ತಿದ್ದೀರಿ. ಇದಲ್ಲದೆ, ಷೇರುಗಳ ಮಾರಾಟದಿಂದ ಇರುವ ಲಾಭ-ನಷ್ಟಕ್ಕೆ ಸಂಬಂಧಿಸಿದ ಮಾಹಿತಿಯನ್ನೂ ನೀವು ಸಲ್ಲಿಸಬೇಕಾಗಿರುತ್ತದೆ. ಇದಲ್ಲದೆ, ಯಾವುದೇ ವ್ಯಾಪಾರ-ವ್ಯವಹಾರ-ವೃತ್ತಿಗೆ ಸಂಬಂಧಿಸಿದ ಆದಾಯ ಉಳ್ಳವರು ಈ ವಿನಾಯಿತಿ ಪಡೆಯಲು ಅರ್ಹರಲ್ಲ. ಹೀಗಾಗಿ ನೀವು ಆದಾಯ ತೆರಿಗೆ ವಿವರ ಸಲ್ಲಿಸಬೇಕಾಗುತ್ತದೆ. ನಿಮ್ಮ ಸ್ನೇಹಿತರ ಆದಾಯ ಮೂಲ ಪಿಂಚಣಿ ಹಾಗೂ ಬಡ್ಡಿ ಮಾತ್ರ ಆಗಿರಬಹುದು. ಸಲ್ಲಿಸದಿದ್ದರೆ ನೋಟಿಸ್ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ADVERTISEMENT
ಪ್ರ

ನನ್ನ ತಂದೆಯವರು ಕೆಲವು ತಿಂಗಳುಗಳ ಹಿಂದೆ ನಿಧನರಾದರು. ಅವರ ಹೆಸರಲ್ಲಿ ಕೆಲವು ಆದಾಯಗಳು ಬರುತ್ತಿದ್ದವು. ಇದರಲ್ಲಿ ಕೌಟುಂಬಿಕ ಪಿಂಚಣಿ, ಬಡ್ಡಿ ಆದಾಯ ಮತ್ತು ಬಾಡಿಗೆ ಆದಾಯ ಸೇರಿವೆ. ನಾನು ಕಂಪನಿಯಲ್ಲಿ ಉದ್ಯೋಗಿಯಾಗಿದ್ದೇನೆ ಹಾಗೂ ಕಾನೂನು ಪ್ರಕಾರ ಈ ಆಸ್ತಿಗಳು ಶೀಘ್ರದಲ್ಲಿ ನನ್ನ ಹೆಸರಿಗೆ ವರ್ಗವಾಗಲಿವೆ.

ನನ್ನ ಪ್ರಶ್ನೆ ಏನೆಂದರೆ, ನನ್ನ ತಂದೆ ನಿಧನರಾದ ಕಾರಣ, ಅವರ ಹೆಸರಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸಬೇಕೇ? ಹೌದಾದರೆ ಅದು ಹೇಗೆ ಸಲ್ಲಿಸಬೇಕು? ಅಥವಾ ನನ್ನ ಹೆಸರಲ್ಲೇ ಇಡೀ ವರ್ಷದ ಆದಾಯಕ್ಕೆ ಸಂಬಂಧಿಸಿದಂತೆ ವಿವರ ಸಲ್ಲಿಸಬೇಕೆ? ಯಾವುದು ಸರಳ ಮತ್ತು ಕಾನೂನುಬದ್ಧ?

–ಜಿತಿನ್ ಕುಮಾರ್, ಹೊಸಕೋಟೆ

ನೀವು ಕೇಳಿದ ವಿಚಾರದಲ್ಲಿ ಯಾವುದು ಸರಳ ಎನ್ನುವ ವಿಚಾರಕ್ಕಿಂತ ಯಾವುದು ಕಾನೂನುಬದ್ಧ ಎನ್ನುವ ವಿಚಾರ ಹೆಚ್ಚು ಪ್ರಸ್ತುತ. ಆದಾಯ ತೆರಿಗೆ ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿ ನಿಧನರಾದರೆ, ಅವರು ಮೃತಪಟ್ಟ ದಿನದವರೆಗೆ ಅರ್ಜಿಸಿದ ಆದಾಯಕ್ಕೆ ಅವರ ಹೆಸರಿನಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸಲು ಅವರ ಕಾಲಾನಂತರ, ಅವರ ಕಾನೂನುಬದ್ಧ ವಾರಸುದಾರ ಜವಾಬ್ದಾರನಾಗಿರುತ್ತಾನೆ.

ಅಂದರೆ, ನೀವು ನಿಮ್ಮ ತಂದೆಯವರ ನಿಧನದ ದಿನದವರೆಗೆ ಪಡೆದ ಬಡ್ಡಿ, ಬಾಡಿಗೆ ಇತ್ಯಾದಿ ಆದಾಯವನ್ನು ಕೂಡಿಸಿ, ಅವರ ಪರವಾಗಿ ಆದಾಯ ತೆರಿಗೆ ವಿವರ ಸಲ್ಲಿಸಬೇಕು. ಈ ವಿವರ ಸಲ್ಲಿಸುವ ಮೊದಲು ನೀವು ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ನಲ್ಲಿ ಅವರ ವಾರಸುದಾರ ಎನ್ನುವುದನ್ನು ದಾಖಲಿಸಬೇಕು. ಅದಕ್ಕೆ ಅಗತ್ಯವಿರುವ ಪ್ರಮಾಣಪತ್ರ, ಅಗತ್ಯ ದಾಖಲೆಗಳು (ಮರಣ ಪ್ರಮಾಣಪತ್ರ, ವಾರಸುದಾರ ಪ್ರಮಾಣಪತ್ರ, ಪ್ಯಾನ್‌ಕಾರ್ಡ್ ನಕಲುಗಳು) ಇತ್ಯಾದಿ ಸಲ್ಲಿಸಿದ ನಂತರ, ಅವರು ಪಡೆದ ಆದಾಯದ ಮೇಲೆ ನೀವು ವಿವರ ಸಲ್ಲಿಸಬಹುದು.

ಅವರ ನಿಧನದ ನಂತರ ಗಳಿಸಿದ ಎಲ್ಲಾ ಆದಾಯವೂ ನಿಮ್ಮ ಆದಾಯವಾಗಿರುತ್ತದೆ. ಅದರ ತೆರಿಗೆಯನ್ನು ನಿಮ್ಮ ಹೆಸರಲ್ಲೇ ಭರಿಸಬೇಕು. ಈ ಬಗ್ಗೆ ಕಾರ್ಯರೂಪದಲ್ಲಿ ನೀವು ವಿವರ ಸಲ್ಲಿಸುವಾಗ ನಿಮಗೆ ಹೆಚ್ಚಿನ ಸಲಹೆ ಅಗತ್ಯವಿದ್ದೀತು. ಇದಕ್ಕಾಗಿ ಅನುಭವಿ ಸಲಹೆಗಾರರ ಮಾರ್ಗದರ್ಶನ ಪಡೆಯುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT