ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ವಿದ್ಯಮಾನಗಳ ಪ್ರಭಾವ

Last Updated 25 ಜೂನ್ 2018, 4:35 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ಎಲ್ಲಾ ಚಟುವಟಿಕೆಯು ವ್ಯವಹಾರಿಕ ದೃಷ್ಟಿಯಿಂದಲೇ ನಡೆಸಲಾಗುತ್ತಿದ್ದು, ಹೂಡಿಕೆ ಎಂಬುದು ಸದ್ಯಕ್ಕೆ ಮರೆಯಾಗಿದೆ.

ಈ ವಾರದ ಚಟುವಟಿಕೆಯಲ್ಲಿ ಅನೇಕ ಪ್ರಮುಖ ಕಂಪನಿಗಳು ರಭಸದ ಏರಿಳಿತ ಪ್ರದರ್ಶಿಸಿದರೆ, ಶುಕ್ರವಾರ ಅಗ್ರಮಾನ್ಯ ಕಂಪನಿಗಳಾದ ಏಷ್ಯನ್‌ ಪೇಂಟ್ಸ್, ಟಿಸಿಎಸ್, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಸಿಪ್ಲಾ, ಬಯೋಕಾನ್, ಎಸಿಸಿ, ತೈಲ ಮಾರಾಟದ ಕಂಪನಿಗಳಾದ ಬಿಪಿಸಿಎಲ್, ಎಚ್‌ಪಿಸಿಎಲ್, ಐಒಸಿ ಅಲ್ಲದೆ ಕಮ್ಮಿನ್ಸ್, ಬಲರಾಂಪುರ್ ಚಿನ್ನಿ, ಹೆಚ್ಚಿನ ಏರಿಳಿತ ಪ್ರದರ್ಶಿಸಿವೆ.

ಜಾಗತಿಕ ವಾಣಿಜ್ಯ ಸಮರವು ಹೆಚ್ಚಿನ ಏರಿಳಿತಗಳಿಗೆ ಕಾರಣವಾಗುತ್ತಿದೆ. ಈ ಕಾರಣಕ್ಕಾಗಿ ಲೋಹ ವಲಯದ ಕಂಪನಿಗಳಾದ ಟಾಟಾ ಸ್ಟೀಲ್, ವೇದಾಂತ, ಹಿಂದ್ ಝಿನ್ಕ್, ಹಿಂಡಾಲ್ಕೊಗಳು ಹೆಚ್ಚಿನ ಒತ್ತಡಕ್ಕೊಳಗಾದವು. ನಂತರದ ದಿನದಲ್ಲಿ ಜಾಗತಿಕ ಪೇಟೆಗಳ ಚೇತರಿಕೆ ಕಾರಣಕ್ಕೆ ಮತ್ತೊಮ್ಮೆ ಏರಿಕೆ ಕಂಡವು.

ಸತತವಾಗಿ ಇಳಿಕೆ ಕಂಡ ಉತ್ತಮ ಷೇರಿನ ಬೆಲೆಯು ಹೂಡಿಕೆದಾರರನ್ನು ಹೇಗೆ ಆಕರ್ಷಿಸುತ್ತದೆ ಎಂಬುದಕ್ಕೆ ಮಹಾನಗರ ಗ್ಯಾಸ್ ಲಿಮಿಟೆಡ್ ಉತ್ತಮ ಉದಾಹರಣೆಯಾಗಿದೆ.

ಒಂದು ತಿಂಗಳಲ್ಲಿ ಷೇರಿನ ಬೆಲೆ ₹ 774 ರ ಸಮೀಪಕ್ಕೆ ಕುಸಿದಿತ್ತು. ಕಂಪನಿ ಪ್ರತಿ ಷೇರಿಗೆ
₹ 11 ರಂತೆ ಲಾಭಾಂಶ ಪ್ರಕಟಿಸಿದ್ದರೂ ಸಹ ಬೆಂಬಲ ಪಡೆಯಲಿಲ್ಲ. ಆದರೆ, ನಂತರದ ದಿನಗಳಲ್ಲಿ ಏರಿಕೆ ಕಂಡಾಗ ವಿತ್ತೀಯ ಸಂಸ್ಥೆಗಳು ಹೂಡಿಕೆಗೆ ಉತ್ತಮ ರೇಟಿಂಗ್ ನೀಡಿದ ಫಲವಾಗಿ ಏರಿಕೆಯನ್ನು ಕಂಡುಕೊಂಡಿತು. ಈ ರೀತಿಯ ಪ್ರಚಾರವು ಷೇರಿಗೆ ತಾತ್ಕಾಲಿಕವಾಗಿ ಹೆಚ್ಚಿನ ಬೆಂಬಲ ದೊರಕಿಸಿ ಕೊಡುತ್ತದೆ.

ಇತ್ತೀಚಿನ ದಿನಗಳಲ್ಲಿ ಹೊಸ ರೀತಿಯ ಕಾರ್ಯ ಶೈಲಿ ಆಚರಣೆಯಲ್ಲಿದೆ. ಕಂಪನಿಗಳು ಕಾರ್ಪೊರೇಟ್ ಫಲಗಳನ್ನು ಪ್ರಕಟಿಸಿದ ನಂತರ ಷೇರಿನ ಬೆಲೆ ಕುಸಿತಕ್ಕೊಳಗಾಗುತ್ತದೆ. ನಂತರ ನಿಗದಿತ ದಿನದ ಸಮಯಕ್ಕೆ ಅಥವಾ ಬೋನಸ್ / ಮುಖಬೆಲೆ ಸೀಳಿಕೆಗೆ ಕರೆಯಬಹುದಾದ
ವಿಶೇಷ ಸಾಮಾನ್ಯ ಸಭೆಯ ಸಮಯಕ್ಕೆ ಪುಟಿದೇಳುತ್ತವೆ.

ಉದಾಹರಣೆಗೆ ಅವಂತಿ ಫೀಡ್ಸ್ ಕಂಪನಿ 1:2 ರ ಅನುಪಾತದ ಬೋನಸ್ ಮತ್ತು ಮುಖಬೆಲೆ ಸೀಳಿಕೆ ಪ್ರಕಟಿಸಿದಾಗ ಷೇರಿನ ಬೆಲೆ ₹ 1,950 ರ ಸಮೀಪಕ್ಕೆ ಜಿಗಿತ ಕಂಡು ನಂತರ ತ್ವರಿತ ಕುಸಿತದಿಂದ ₹1,232 ರ ವಾರ್ಷಿಕ ಕನಿಷ್ಠಕ್ಕೆ ಬಂದಿತ್ತು. ಮತ್ತೆ ಜೂನ್ 14 ರಂದು ಕರೆದಿದ್ದ ವಿಶೇಷ ಸಾಮಾನ್ಯ ಸಭೆಯ ಮುಂಚಿನ ದಿನಗಳಲ್ಲಿ ₹1,900 ರ ಸಮೀಪಕ್ಕೆ ಪುಟಿದೆದ್ದಿತು. ಶುಕ್ರವಾರ ₹1,502 ರವರೆಗೂ ಇಳಿಕೆ ಕಂಡು ₹1,545 ರಲ್ಲಿ ವಾರಾಂತ್ಯ ಕಂಡಿದೆ.

ಬಾಲ್ಮರ್ ಲೌರಿ ಕಂಪನಿ ತನ್ನ ಫಲಿತಾಂಶ ಮತ್ತು ಪ್ರತಿ ಷೇರಿಗೆ ₹10 ರಂತೆ ಲಾಭಾಂಶ ಪ್ರಕಟಿಸಿದ ನಂತರ ಷೇರಿನ ಬೆಲೆ ಹೆಚ್ಚಿನ ಜಿಗಿತ ಕಂಡು ನಿಗದಿತ ದಿನ ಗೊತ್ತು ಪಡಿಸುವ ಮುನ್ನವೇ ಮತ್ತೆ ಕುಸಿದಿದೆ.

ಕೇರ್ ರೇಟಿಂಗ್ಸ್ ಲಿ ಕಂಪನಿಯು ಪ್ರತಿ ಷೇರಿಗೆ ₹ 37 ರಂತೆ ಲಾಭಾಂಶ ಪ್ರಕಟಿಸಿದಾಗ ₹1,295 ರ ಸಮೀಪವಿದ್ದ ಷೇರಿನ ಬೆಲೆ ನಂತರದ ದಿನಗಳಲ್ಲಿ ₹1,398 ರವರೆಗೂ ಜಿಗಿತ ಕಂಡು ₹1,290ಕ್ಕೆ ಹಿಂದಿರುಗಿದೆ.

ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಪ್ರತಿ ಷೇರಿಗೆ ₹18.50 ರ ಲಾಭಾಂಶ ಪ್ರಕಟಿಸುವ ಸಮಯದಲ್ಲಿ ಷೇರಿನ ಬೆಲೆ ₹ 305 ರ ಸಮೀಪವಿದ್ದು ನಂತರದ ದಿನಗಳಲ್ಲಿ ₹ 262 ರ ಸಮೀಪಕ್ಕೆ ಕುಸಿದಿತ್ತು. ನಿಗದಿತ ದಿನ ಪ್ರಕಟವಾಗಿಲ್ಲದಿದ್ದರೂ ಪುಟಿದೆದ್ದು ₹315 ನ್ನು ತಲುಪಿ ಮತ್ತೆ ₹300 ರ ಸಮೀಪಕ್ಕೆ ಇಳಿದು ₹307 ರ ಸಮೀಪ ವಾರಂತ್ಯ ಕಂಡಿದೆ.

ಲಾರ್ಸನ್ ಅಂಡ್ ಟುಬ್ರೊ ಲಿಮಿಟೆಡ್ ಕಂಪನಿ ಉತ್ತಮ ಫಲಿತಾಂಶ ಪ್ರಕಟಿಸಿ
ದಾಕ್ಷಣ ಷೇರಿನ ಬೆಲೆ ₹1,430 ರ ಸಮೀಪದಿಂದ ₹1,284 ರವರೆಗೂ ಕುಸಿದಿದೆ. ಪ್ರತಿ ಷೇರಿಗೆ ₹16 ರಂತೆ ಲಾಭಾಂಶ ಪ್ರಕಟಿಸಿದ ಮೇಲೂ ಈ ರೀತಿಯ ಕುಸಿತ ಹೂಡಿಕೆಗೆ ಅವಕಾಶ ಕಲ್ಪಿಸಿ
ದಂತಾಗಿದೆ.

ಕಮ್ಮಿನ್ಸ್ ಇಂಡಿಯಾ ಲಿಮಿಟೆಡ್ ಕಂಪನಿ ಫಲಿತಾಂಶ ಮತ್ತು ಪ್ರತಿ ಷೇರಿಗೆ ₹ 10 ರ ಲಾಭಾಂಶ ಪ್ರಕಟಿಸಿದ ನಂತರ ಷೇರಿನ ಬೆಲೆಯು ₹ 720 ರ ಸಮೀಪದಿಂದ ₹ 663 ರವರೆಗೂ ಕುಸಿದು ಸ್ವಲ್ಪ ಚೇತರಿಕೆ ಕಂಡು ಮತ್ತೆ ₹ 669 ರ ಸಮೀಪ ವಾರಾಂತ್ಯ ಕಂಡಿದೆ.

ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ಸ್‌ ಕಂಪನಿಯ ಷೇರಿನ ಬೆಲೆ ಒಂದೇ ವಾರದಲ್ಲಿ ₹ 440 ರ ಸಮೀಪದಿಂದ ₹ 420 ರವರೆಗೂ ಇಳಿಕೆ ಕಂಡು ಅಲ್ಲಿಂದ ಮತ್ತೆ ಪುಟಿದೆದ್ದು ₹ 443 ರವರೆಗೂ ಏರಿಕೆ ಕಂಡಿತ್ತು. ಶುಕ್ರವಾರ ₹416 ರವರೆಗೂ ಇಳಿದು ₹425 ಕ್ಕೆ ಚೇತರಿಕೆ ಕಂಡಿದೆ. ರಿಲಯನ್ಸ್ ಕ್ಯಾಪಿಟಲ್ ಷೇರು ಸಹ ಇದೆ ರೀತಿಯ ಪಥದಲ್ಲಿ ಚಲಿಸಿದೆ.

ವಿಸ್ಮಯಕಾರಿ ಬದಲಾವಣೆ: ಮನ್ ಪಸಂದ್ ಬೆವರೇಜಸ್ ಲಿಮಿಟೆಡ್ ಕಂಪನಿ ಇತ್ತೀಚಿಗೆ ಭಾರಿ ಕುಸಿತಕ್ಕೊಳಗಾಗಿದ್ದು, ಒಂದು ತಿಂಗಳಲ್ಲಿ ಸುಮಾರು ₹ 459 ರ ಸಮೀಪದಿಂದ ಗುರುವಾರ ₹ 128.85 ರ ದಿನದ ಕನಿಷ್ಠದಲ್ಲಿತ್ತು. ಸುಮಾರು ಹನ್ನೊಂದು ಗಂಟೆಯ ಸಮಯದಲ್ಲಿ ಕಂಪನಿು ಒಂದು ಪ್ರಕಟಣೆ ಹೊರಡಿಸಿ ಈ ತಿಂಗಳ 27 ರಂದು ಕಂಪನಿ ತನ್ನ ಫಲಿತಾಂಶದೊಂದಿಗೆ ಲಾಭಾಂಶವನ್ನು ಪ್ರಕಟಿಸಲಿದೆ ಎಂದು ತಿಳಿಸುತ್ತಿದ್ದಂತೆ ಭರ್ಜರಿ ಕೊಳ್ಳುವಿಕೆಯ ಕಾರಣ ₹142.35 ರಲ್ಲಿ ದಿನದ ಗರಿಷ್ಠಕ್ಕೆ ಜಿಗಿಯಿತು. ಕನಿಷ್ಠದಿಂದ ಅಲ್ಪ ಸಮಯದಲ್ಲೇ ಗರಿಷ್ಠ ಮಟ್ಟಕ್ಕೆ ಚಿಮ್ಮಿದ್ದು ಒಂದು ವಿಸ್ಮಯಕಾರಿ ಬೆಳವಣಿಗೆಯಾಗಿದೆ. ಶುಕ್ರವಾರವೂ ಗರಿಷ್ಠ ಅವರಣ ಮಿತಿಯಲ್ಲಿ ಕೊನೆಗೊಂಡಿದೆ.

ಹೊಸ ಷೇರು: ವೇರಾಕ್ ಎಂಜಿನಿಯರಿಂಗ್ ಲಿಮಿಟೆಡ್ ಕಂಪನಿ ಈ ತಿಂಗಳ 26 ರಿಂದ 28 ರವರೆಗೂ ತನ್ನ ₹ 1 ರ ಮುಖಬೆಲೆಯ 2.02 ಕೋಟಿ ಷೇರುಗಳನ್ನು ಪ್ರತಿ ಷೇರಿಗೆ ₹ 965 ರಿಂದ ₹ 967 ರ ಅಂತರದಲ್ಲಿ ಆರಂಭಿಕ ಷೇರು ವಿತರಣೆ ಮಾಡಲಿದೆ.

ಅರ್ಜಿಯನ್ನು 15 ಷೇರುಗಳು ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ. ರಿಟೇಲ್ ಹೂಡಿಕೆದಾರರಿಗೆ ₹48 ರ ರಿಯಾಯ್ತಿ ನೀಡಲಿದೆ.

ಬೋನಸ್ ಷೇರು: ಅವಂತಿ ಫೀಡ್ಸ್ ಲಿಮಿಟೆಡ್ ಕಂಪನಿ ವಿತರಿಸಲಿರುವ 1:2 ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 27 ನಿಗದಿತ ದಿನ.

ಬೊರೊಸೀಲ್ ಗ್ಲಾಸ್ ಲಿ ಕಂಪನಿ 3:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಡಿಐಎಲ್ ಲಿಮಿಟೆಡ್ ಕಂಪನಿ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಪ್ರಭಾತ್ ಟೆಲಿಕಾಂ ವಿತರಿಸಲಿರುವ 1:5 ರ ಬೋನಸ್ ಷೇರಿಗೆ ಈ ತಿಂಗಳ 29 ನಿಗದಿತ ದಿನ. ಸಿಟಿ ಯೂನಿಯನ್ ಬ್ಯಾಂಕ್ ವಿತರಿಸಲಿರುವ 1:10 ರ ಬೋನಸ್ ಷೇರಿಗೆ ಜುಲೈ 11 ನಿಗದಿತ ದಿನ.

ಸುಮಿತ್ ಇಂಡಸ್ಟ್ರೀಸ್ 1:4 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

(ಮೊ:98863 13380, ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT