ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈ ಕಾರಣಕ್ಕಾಗಿ ಷೇರು ಹೂಡಿಕೆ ಬೇಕು

Last Updated 25 ಜನವರಿ 2021, 19:30 IST
ಅಕ್ಷರ ಗಾತ್ರ

ದುಡ್ಡು ಬೇಕು ಎಂದು ದುಡಿಮೆ ಮಾಡುತ್ತಿದ್ದರೆ ನೀವು ಶ್ರೀಮಂತರಾಗಲು ಸಾಧ್ಯವಿಲ್ಲ; ನಿಮ್ಮ ದುಡ್ಡು ನಿಮಗಾಗಿ ದುಡಿದಾಗ ಮಾತ್ರ ನೀವು ಶ್ರೀಮಂತರಾಗಲು ಸಾಧ್ಯ...

‘ಅರೆ! ದುಡ್ಡು ನಮಗಾಗಿ ದುಡಿಯೋದು ಅಂದರೆ ಏನು’ ಅಂತ ನೀವು ಕೇಳಬಹುದು. ಇದು ಬಹಳ ಸರಳ. ನೀವು ಗಳಿಸಿದ ಹಣವನ್ನು ಹೂಡಿಕೆ ಮಾಡುವುದೇ ದುಡ್ಡನ್ನು ದುಡಿಸುವುದಕ್ಕೆ ಇರುವ ದಾರಿ. ಬಹುತೇಕರು ತಾವು ಗಳಿಸಿದ ಹಣವನ್ನು ಹೂಡಿಕೆ ಮಾಡುವುದಿಲ್ಲ. ಬಂದ ಆದಾಯದಲ್ಲಿ ಖರ್ಚು-ವೆಚ್ಚ ನಿಭಾಯಿಸಿ ಉಳಿದ ಹಣವನ್ನು ಉಳಿತಾಯ ಖಾತೆಯಲ್ಲಿ ಇಟ್ಟಿರುತ್ತಾರೆ. ಹೀಗೆ ಮಾಡಿದರೆ ಖಂಡಿತವಾಗಿಯೂ ಹೆಚ್ಚು ಸಂಪತ್ತು ಗಳಿಸಲು ಆಗುವುದಿಲ್ಲ.

ದುಡ್ಡನ್ನು ಯಾವುದಾದರೊಂದು ರೀತಿಯ ಹೂಡಿಕೆ ಸಾಧನದಲ್ಲಿ ತೊಡಗಿಸಿದಾಗ ಮಾತ್ರ ದುಡ್ಡು ಬೆಳೆಯುತ್ತದೆ. ಸಾಂಪ್ರದಾಯಿಕ ಹೂಡಿಕೆಗಳು ಹೆಚ್ಚು ಲಾಭ ಕೊಡುತ್ತಿಲ್ಲ. ಹೂಡಿಕೆಯಲ್ಲಿ ಎರಡು ಮಾದರಿಯ ಹೂಡಿಕೆಗಳಿವೆ. ಮೊದಲನೆಯದ್ದು ಸಾಂಪ್ರದಾಯಿಕ ಹೂಡಿಕೆಗಳು. ಅಂದರೆ ನಿಶ್ಚಿತ ಠೇವಣಿ, ಅಂಚೆ ಕಚೇರಿ ಉಳಿತಾಯ ಯೋಜನೆ, ಪಿಪಿಎಫ್, ಇಪಿಎಫ್, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಇತ್ಯಾದಿ. ಎರಡನೆಯದು ಮಾರುಕಟ್ಟೆ ಆಧಾರಿತ ಹೂಡಿಕೆಗಳು. ಷೇರು, ಮ್ಯೂಚುವಲ್ ಫಂಡ್, ಎನ್‌ಪಿಎಸ್ , ಬಾಂಡ್ಸ್, ಇಟಿಎಫ್‌ಗಳು ಇತ್ಯಾದಿ.

ಈ ರೀತಿಯ ಹೂಡಿಕೆಗಳು ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಫಲ ತಂದುಕೊಡುತ್ತವೆ. ಸಾಂಪ್ರದಾಯಿಕ ಹೂಡಿಕೆಗಳು ಹೆಚ್ಚು ಲಾಭ ನೀಡುವುದಿಲ್ಲ. ಸದ್ಯದ ಉದಾಹರಣೆಯನ್ನೇ ತೆಗೆದುಕೊಂಡರೆ ಉತ್ತಮ ಬ್ಯಾಂಕುಗಳಲ್ಲಿ ಎಫ್.ಡಿ. ಬಡ್ಡಿ ದರ ಗರಿಷ್ಠ ಶೇ 7ರಷ್ಟಿದೆ. ಪಿಪಿಎಫ್, ರಾಷ್ಟ್ರೀಯ ಉಳಿತಾಯ ಯೋಜನೆ, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿ ದರ ಶೇ 7ರಿಂದ ಶೇ 7.5ರ ಆಸುಪಾಸಿನಲ್ಲಿದೆ.

ಹಾಗೆಂದಮಾತ್ರಕ್ಕೆ ಸಾಂಪ್ರದಾಯಿಕ ಹೂಡಿಕೆಗಳಲ್ಲಿ ಹಣ ತೊಡಗಿಸಲೇಬಾರದು ಎಂದಲ್ಲ. ನಿಮ್ಮ ಆದಾಯದಲ್ಲಿ ಸಾಂಪ್ರದಾಯಿಕ ಹೂಡಿಕೆಗಳಿಗೆ ಒಂದಿಷ್ಟು ಹಣ ಮೀಸಲಿಟ್ಟು, ಮಾರುಕಟ್ಟೆ ಆಧಾರಿತ ಹೂಡಿಕೆಗಳಾದ ಷೇರು ಮತ್ತು ಮ್ಯೂಚುವಲ್ ಫಂಡ್‌ಗಳಿಗೂ ಒಂದಿಷ್ಟು ಹಣ ತೆಗೆದಿಡುವುದು ಒಳಿತು. ಆಗ ಮಾತ್ರ ನೀವು ದೀರ್ಘಾವಧಿಯಲ್ಲಿ ಹೆಚ್ಚು ಹಣ ಗಳಿಸಿ, ಆರ್ಥಿಕ ಗುರಿಗಳನ್ನು ಮುಟ್ಟಲು ಸಾಧ್ಯವಾಗುತ್ತದೆ.

ನಿಮ್ಮ ಹೂಡಿಕೆ ಹಣದುಬ್ಬರವನ್ನು ಮೀರಿ ಬೆಳೆಯಬೇಕು: ಹಣದುಬ್ಬರ ನಿಮ್ಮ ಹಣದ ಮೌಲ್ಯವನ್ನು ತಗ್ಗಿಸುತ್ತದೆ. ಈ ವರ್ಷ ₹ 100ಕ್ಕೆ ಸಿಗುವ ವಸ್ತುವಿನ ಬೆಲೆ ಮುಂದಿನ ವರ್ಷ ₹ 120 ಆಗುತ್ತದೆ. ಅಂಚೆ ಕಚೇರಿ ಹೂಡಿಕೆಗಳು, ಪಿಪಿಎಫ್, ಫಿಕ್ಸೆಡ್ ಡೆಪಾಸಿಟ್‌ಗಳಿಗೆ ಹಣದುಬ್ಬರದ ಪ್ರಮಾಣವನ್ನು ಮೀರಿ ಲಾಭ ಕೊಡುವ ಶಕ್ತಿ ಇಲ್ಲ. ಈ ಸಾಮರ್ಥ್ಯ ಇರುವುದು ಷೇರು ಮಾರುಕಟ್ಟೆಗೆ ಮಾತ್ರ.

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ವೈವಿಧ್ಯತೆ

ಷೇರು ಮಾರುಕಟ್ಟೆಯಲ್ಲಿ ಲಾರ್ಜ್, ಮಿಡ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳಿರುತ್ತವೆ. ಸರಳವಾಗಿ ಇವನ್ನು ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಕಂಪನಿಗಳು ಎಂದು ವಿಂಗಡಿಸಬಹುದು. ಲಾರ್ಜ್ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದಾಗ ರಿಸ್ಕ್ ಪ್ರಮಾಣ ಕಡಿಮೆ. ಮಿಡ್ ಮತ್ತು ಸ್ಮಾಲ್ ಕ್ಯಾಪ್‌ನಲ್ಲಿ ರಿಸ್ಕ್ ಜಾಸ್ತಿ ಇರುತ್ತದೆ. ಇಷ್ಟೇ ಅಲ್ಲ, ಮಾಹಿತಿ ತಂತ್ರಜ್ಞಾನ, ಸರ್ಕಾರಿ ಸ್ವಾಮ್ಯದ ಬ್ಯಾಂಕ್, ಲೋಹ ವಲಯ, ಫಾರ್ಮಾ ವಲಯ, ಎಫ್ಎಂಸಿಜಿ ವಲಯ... ಹೀಗೆ ಹತ್ತಾರು ವಲಯಗಳ ಷೇರುಗಳು ಮಾರುಕಟ್ಟೆಯಲ್ಲಿರುವುದರಿಂದ ಹೂಡಿಕೆಯಲ್ಲಿ ವೈವಿಧ್ಯತೆ ಕಾಯ್ದುಕೊಳ್ಳಲು ಹೆಚ್ಚು ಅವಕಾಶಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT