ಬುಧವಾರ, ಜೂನ್ 3, 2020
27 °C

ಉಪ್ಪಿನಕಾಯಿ ಉದ್ದಿಮೆಗೆ ಯಂತ್ರ

ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

Prajavani

ಮಿಡಿ ಸೌತೆ ಅಥವಾ ಕಿರಿ ಸೌತೆ (ಗರ್ಕಿನ್) ಉಪ್ಪಿನಕಾಯಿಯನ್ನು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅದರಲ್ಲಿ ಹುಳು ಇರುವ (ಕೀಟ) ಸೌತೆಕಾಯಿಯನ್ನೂ ಬಳಸಿದ್ದರೆ ಹೇಗಪ್ಪಾ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಇದು ನಿಮ್ಮನ್ನಷ್ಟೇ ಅಲ್ಲ, ತಯಾರಕರನ್ನೂ ಕಾಡುತ್ತದೆ. ಹಾಗೆ ಬಳಸಿದರೆ ಎಲ್ಲವೂ ಹಾಳಾಗುತ್ತದೆ. ಇನ್ನು ಮುಂದೆ ಅದಕ್ಕೆ ನೀವು ಚಿಂತಿಸಬೇಕಿಲ್ಲ.

ಸೌತೆಗೆ ಹುಳು ಹಿಡಿದಿದೆಯೇ? ಇಲ್ಲವೇ? ಎಂಬುದನ್ನು ಪತ್ತೆ ಹಚ್ಚಲು ಯಂತ್ರವೊಂದನ್ನು ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್‌ನ ಸ್ಟಾರ್ಟ್‌ ಅಪ್‌ ಸೆಂಟರ್‌ನಲ್ಲಿರುವ ವೈಡ್‌ ಮೊಬೈಲಿಟಿ ಮೆಕಾಟ್ರಾನಿಕ್ಸ್ ಲಿಮಿಟೆಡ್‌ ಸಿದ್ಧಪಡಿಸಿದೆ. ಆ ಮೂಲಕ ಉತ್ತಮ ಉಪ್ಪಿನಕಾಯಿ ಸಿದ್ಧಪಡಿಸಲು ನೆರವಾಗಲು ಮುಂದಾಗಿದೆ.

ಉಪ್ಪಿನಕಾಯಿ ತಯಾರಿಕಾ ಘಟಕಗಳಲ್ಲಿ ದಿನಕ್ಕೆ ಟನ್‌ಗಟ್ಟಲೇ ಉಪ್ಪಿನಕಾಯಿ ಸಿದ್ಧವಾಗುತ್ತವೆ. ಸಾವಿರಾರು ಕೆಜಿ ಬಳಕೆ ಮಾಡಲಾಗುತ್ತದೆ. ಪ್ರತಿಯೊಂದು ಸೌತೆಯನ್ನು ಪರೀಕ್ಷಿಸುವುದು ಸವಾಲಿನ ಕೆಲಸ. ಮುಂದಿನ ದಿನಗಳಲ್ಲಿ ಈ ಸವಾಲಿನ ಕೆಲಸವನ್ನು ಈ ಸಂಸ್ಥೆ ತಯಾರಿಸಿರುವ ‘ಕಾನ್‌ರೆಡ್‌–ಜಿ’ ಎಂಬ ಯಂತ್ರ ನೋಡಿಕೊಳ್ಳಲಿದೆ.

‘ಸೌತೆ ಸೇರಿದಂತೆ ವಿವಿಧ ತರಕಾರಿ, ಹಣ್ಣುಗಳಲ್ಲಿ ‘ಪ್ರೂಟ್‌ ಫ್ಲೈ’ ಎಂಬ ಹುಳು ಮೊಟ್ಟೆ ಇಡುತ್ತದೆ. ಮುಂದೆ ಆ ಮೊಟ್ಟೆಯೇ ಹುಳುವಾಗಿ ಅವುಗಳನ್ನು ಹಾಳು ಮಾಡುತ್ತವೆ. ಬಹಳಷ್ಟು ಸಲ ಸೂಕ್ಷ್ಮವಾಗಿ ನೋಡದಿದ್ದರೆ ಹುಳು ಹಿಡಿದಿರುವುದು ಗೊತ್ತಾಗುವುದೇ ಇಲ್ಲ. ಟನ್‌ಗಟ್ಟಲೇ ತಯಾರಿಸಿದ ಉಪ್ಪಿನಕಾಯಿಯಲ್ಲಿ ಹುಳ ಇರುವ ಒಂದನ್ನು ಬಳಸಿದರೂ ಕೆಲವೇ ದಿನಗಳಲ್ಲಿ ಅದು ಸಂಪೂರ್ಣವಾಗಿ ಕೆಟ್ಟು ಹೋಗುತ್ತದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಯಂತ್ರ ಸಂಶೋಧಿಸಿದ್ದೇವೆ’ ಎನ್ನುತ್ತಾರೆ ಕಂಪನಿ ಸಂಸ್ಥಾಪಕ ಶೇಖರ ಬಸವಣ್ಣ.

ರಾಜ್ಯದಲ್ಲಿ ಗದಗ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗರ್ಕಿನ್‌ ಬೆಳೆಯಲಾಗುತ್ತದೆ. ಇಂಡಿಯನ್‌ ಗರ್ಕಿನ್ಸ್‌ ಎಕ್ಸಪೋರ್ಟ್‌ ಅಸೋಸಿಯೇಷನ್‌ನವರು ಗರ್ಕಿನ್‌ನಿಂದ ಉಪ್ಪಿನಕಾಯಿ ತಯಾರಿಸಿ ಅಮೆರಿಕ, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ, ಕೆನಡಾ, ಚೀನಾ, ಶ್ರೀಲಂಕಾ ಮುಂತಾದ ಹಲವು ದೇಶಗಳಿಗೆ ರಫ್ತು ಮಾಡುತ್ತಾರೆ. ಈ ಉದ್ಯಮ ₹ 700 ಕೋಟಿ ವಹಿವಾಟು ನಡೆಸುತ್ತಿದೆ. 50 ಸಾವಿರಕ್ಕೂ ಹೆಚ್ಚು ರೈತರು ಗರ್ಕಿನ್‌ ಬೆಳೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ 51 ಕಂಪನಿಗಳಿವೆ.

ಯಂತ್ರದಲ್ಲಿ ಡಿಜಿಟಲ್‌ ರೇಡಿಯೋಗ್ರಫಿ ಸ್ಕ್ಯಾನಿಂಗ್‌ ತಂತ್ರಜ್ಞಾನ ಅಳವಡಿಸಲಾಗಿದೆ. ಇದು ಒಂದು ಗಂಟೆಗೆ 700 ರಿಂದ 1,000 ಕೆಜಿಯವರೆಗೆ ಸ್ಕ್ಯಾನಿಂಗ್‌ ಮಾಡುತ್ತದೆ. ಯಂತ್ರದ ಮುಂದೆ ಲೈನಾಗಿ ಕೆಲವು ಟ್ರೇ, ಯಂತ್ರದಿಂದ ಸ್ವಲ್ಪ ದೂರದಲ್ಲಿ ಕೆಲವು ಟ್ರೇ ಗಳನ್ನು ಇಡಲಾಗುತ್ತದೆ. ಸೌತೆ ಮೊದಲ ಸಾಲಿನಲ್ಲಿರುವ ಟ್ರೇ ಗಳಲ್ಲಿ ಬಿದ್ದರೆ ಚೆನ್ನಾಗಿದೆ ಎಂದೂ, ಎರಡನೇ ಸಾಲಿನ ಟ್ರೇ ಗಳಲ್ಲಿ ಬಿದ್ದರೆ ಹುಳುಕು ಹತ್ತಿರುತ್ತದೆ. ಹುಳುಕು ಹತ್ತಿರುವ ಸೌತೆಕಾಯಿಯನ್ನು ಯಂತ್ರ ಶೂಟ್‌ ಮಾಡುವ ಮೂಲಕ ದೂರದಲ್ಲಿರುವ ಟ್ರೇ ಗಳಲ್ಲಿ ಬೀಳುವಂತೆ ಯಂತ್ರ ಕಾರ್ಯ ನಿರ್ವಹಿಸುತ್ತದೆ. ಯಂತ್ರವನ್ನು ಟಚ್‌ ಸ್ಕ್ರೀನ್‌ ಮೂಲಕ ಆಪರೇಟ್‌ ಮಾಡಬಹುದಾಗಿದೆ.

‘ತಂದೆ ಎಕ್ಸರೇ ಟೆಕ್ನಿಷಿಯನ್ ಆಗಿದ್ದರು. ವೈದ್ಯಕೀಯ ಕ್ಷೇತ್ರದ ಎಕ್ಸರೇ ಚಿತ್ರಗಳನ್ನು ತಂತ್ರಜ್ಞಾನದಿಂದ ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿದ್ದೆವು. ಅಷ್ಟೊತ್ತಿಗೆ ಡಿಜಿಟಲ್‌ ತಂತ್ರಜ್ಞಾನ ಬಂದಿದ್ದರಿಂದ ಅದನ್ನು ಅಷ್ಟಕ್ಕೇ ಕೈಬಿಟ್ಟೆವು. ತಂದೆಯವರ ತಂತ್ರಜ್ಞಾನದ ಸಹಾಯ ಪಡೆದುಕೊಂಡು ಈಗ ಡಿಜಿಟಲ್ ರೇಡಿಯೊಗ್ರಫಿ ಮೂಲಕ ಕೃಷಿ ಕ್ಷೇತ್ರಕ್ಕೆ ನೆರವಾಗುವ ಯಂತ್ರ ಅಭಿವೃದ್ಧಿ ಪಡಿಸಿದ್ದೇನೆ’ ಎಂದರು.

‘ಎಂಎಸ್‌ಸಿ ಎಲೆಕ್ಟ್ರಾನಿಕ್ಸ್ ಅಧ್ಯಯನ ಮಾಡಿರುವ ನಾನು, ಭಾರತ ಎಲೆಕ್ಟ್ರಾನಿಕ್ಸ್‌ನಲ್ಲಿ ಸೇರಿದಂತೆ ಎರಡು ಕಂಪನಿಗಳಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದೆ. ಸ್ವಂತ ಕಂಪನಿ ಆರಂಭಿಸಬೇಕು ಎಂಬ ಉದ್ದೇಶದಿಂದ ಈಗ ಕಂಪನಿ ಆರಂಭಿಸಿದ್ದೇನೆ. ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಮಾವು, ಗೋಡಂಬಿಗಳಲ್ಲಿನ ಹುಳುಗಳನ್ನು ಪತ್ತೆ ಹಚ್ಚಬಹುದಾಗಿದೆ. ಆ ನಿಟ್ಟಿನಲ್ಲಿ ಸಂಶೋಧನೆ ಮುಂದುವರಿದಿದೆ.

‘ಈ ಯಂತ್ರಕ್ಕೆ ರಾಜ್ಯ ಸರ್ಕಾರ ಆಯೋಜಿಸುವ ಎಲಿವೇಟ್‌ ಸ್ಪರ್ಧೆಯಲ್ಲಿ ₹ 20 ಲಕ್ಷ ಬಹುಮಾನ ಲಭಿಸಿದೆ. ಇಂಡಿಯನ್ ಗರ್ಕಿನ್‌ ಎಕ್ಸಪೋರ್ಟ್ಸ್ ಅಸೋಸಿಯೇಷನ್ ₹ 15 ಲಕ್ಷ ನೆರವು ನೀಡಿದೆ. ಅದರಡಿ ಬರುವ ಹಲವಾರು ಸಂಸ್ಥೆಗಳು ಇಂತಹ ಯಂತ್ರಗಳ ಖರೀದಿಗೆ ಮುಂದಾಗಿವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು