ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡೈರಿ ಡೇ ಯಶೋಗಾಥೆ

Last Updated 7 ಮೇ 2019, 19:30 IST
ಅಕ್ಷರ ಗಾತ್ರ

ಕುಣಿಗಲ್‌ ಮತ್ತು ತಿಪಟೂರಿನವರಾದ ಎಂ.ಎನ್‌. ಜಗನ್ನಾಥ್‌ ಮತ್ತು ಎ. ಬಾಲ್‌ರಾಜು ಅವರು ಹದಿನಾರು ವರ್ಷಗಳ ಹಿಂದೆ ಬಹುರಾಷ್ಟ್ರೀಯ ಸಂಸ್ಥೆಯಲ್ಲಿನ ಉದ್ಯೋಗ ತೊರೆದು ಐಸ್‌ಕ್ರೀಂ ತಯಾರಿಕೆಯ ‘ಡೈರಿ ಡೇ’ ಬ್ರ್ಯಾಂಡ್‌ನ ಹೊಸ ಉದ್ದಿಮೆ ಸ್ಥಾಪಿಸಿ ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿರುವುದು ಪ್ರವರ್ತಕರ ವೃತ್ತಿಪರತೆ, ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ. ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಜನಪ್ರಿಯ ಐಸ್‌ಕ್ರೀಂ ಬ್ರ್ಯಾಂಡ್‌ ಇದಾಗಿದೆ. ಕ್ಯಾಡ್‌ಬರೀಸ್‌, ಸ್ಪೆನ್ಸರ್ಸ್‌, ಡಾಲಪ್ಸ್‌ ಐಸ್‌ಕ್ರೀಂ ಮತ್ತಿತರ ಸಂಸ್ಥೆಗಳಲ್ಲಿ ದುಡಿದಿರುವ ಅನುಭವವನ್ನು ಧಾರೆ ಎರೆದಿರುವ ಪ್ರವರ್ತಕರು ಈ ಸಂಸ್ಥೆಯನ್ನು ಕಟ್ಟಿ ಮುನ್ನಡೆಸುತ್ತಿದ್ದಾರೆ.

ಹಿಂದೂಸ್ತಾನ್‌ ಲೀವರ್ಸ್‌ನಲ್ಲಿ ಕೆಲಸಕ್ಕಿದ್ದ ಸಮಾನ ಮನಸ್ಕರು 2002ರಲ್ಲಿ ಸಂಸ್ಥೆಯಿಂದ ಹೊರಬಂದು ಸ್ವಂತ ನೆಲೆಯಲ್ಲಿ ಐಸ್‌ಕ್ರೀಂ ತಯಾರಿಸುವ ಉದ್ದಿಮೆ ಆರಂಭಿಸಿದ್ದರು. ಭವಿಷ್ಯ ನಿಧಿಯಲ್ಲಿನ ತಮ್ಮ ದುಡ್ಡನ್ನು ಹಾಕಿ ಈ ಸಂಸ್ಥೆ ಸ್ಥಾ‍ಪಿಸಿದ್ದರು. ಉದ್ದಿಮೆ ಸ್ಥಾಪನೆಯ ಇವರ ಸಾಹಸಕ್ಕೆ ಕುಟುಂಬದ ಸದಸ್ಯರು, ಸ್ನೇಹಿತರು ಒತ್ತಾಸೆಯಾಗಿ ನಿಂತಿದ್ದರು. ಸಹ ಸ್ಥಾಪಕರು ₹ 30 ಲಕ್ಷ ಬಂಡವಾಳ ಹಾಕಿ ಸ್ಥಾಪಿಸಿದ್ದ ಉದ್ದಿಮೆ ಈಗ ವಾರ್ಷಿಕ ₹ 200 ಕೋಟಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಸ್ಥಾಪಕ ಸದಸ್ಯರೆಲ್ಲರ ಬದ್ಧತೆ, ಪರಿಶ್ರಮದ ದುಡಿಮೆಯ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ. ನಾವೆಲ್ಲ ಮೊದಲ ತಲೆಮಾರಿನ ಉದ್ದಿಮೆದಾರರು. ನಮಗೆ ಉದ್ದಿಮೆ ನಿರ್ವಹಣೆಯ ಅನುಭವವೇನೂ ಇದ್ದಿರಲಿಲ್ಲ. ಬೇರೆ, ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವೇ ನಮ್ಮ ಬಂಡವಾಳವಾಗಿತ್ತು. ಆ ಕಾಲಕ್ಕೆ ಉದ್ದಿಮೆ ಸ್ಥಾಪಿಸಿದ ಇವರ ಪ್ರಯತ್ನವೂ ಒಂದು ಸ್ಟಾರ್ಟ್‌ಅಪ್‌ ಸಾಹಸ ಆಗಿತ್ತು.

‘ಡೈರಿ ಡೇ’, ಈಗ ದಕ್ಷಿಣ ಭಾರತದ ಐಸ್‌ಕ್ರೀಂ ಮಾರುಕಟ್ಟೆಯಲ್ಲಿ ಮುಂಚೂಣಿ ಸ್ಥಾನಕ್ಕೆ ಏರುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ. ಈಗಾಗಲೇ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ವ್ಯಾಪಕವಾಗಿ ಮಾರುಕಟ್ಟೆ ವಿಸ್ತರಿಸುವ ಸಂಸ್ಥೆಯು ಈಗ ಮಹಾರಾಷ್ಟ್ರದ ಮಾರುಕಟ್ಟೆಗೂ ಲಗ್ಗೆ ಹಾಕಿದೆ. ಆರಂಭದಲ್ಲಿಯೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೋತಿಲಾಲ್‌ ಓಸ್ವಾಲ್‌ ಪ್ರೈವೇಟ್‌ ಈಕ್ವಿಟಿಯು ಸಂಸ್ಥೆಯಲ್ಲಿ ₹ 110 ಕೋಟಿ ಬಂಡವಾಳ ತೊಡಗಿಸಿದೆ. ಈ ಬಂಡವಾಳವನ್ನು ತಯಾರಿಕಾ ಸಾಮರ್ಥ್ಯ ಹೆಚ್ಚಳ ಮತ್ತು ಮಾರುಕಟ್ಟೆ ವಿಸ್ತರಣೆಗೆ ಬಳಸಿಕೊಳ್ಳಲಾಗಿದೆ. ಪ್ರತಿ ದಿನದ ಐಸ್‌ಕ್ರೀಂ ತಯಾರಿಕೆಯ ಸಾಮರ್ಥ್ಯವು ಈಗ ಘಟಕದ ಪೂರ್ಣ ಪ್ರಮಾಣದ 1.40 ಲಕ್ಷ ಲೀಟರ್‌ಗೆ ತಲುಪಿದೆ.

‘ಕೆಲ ವರ್ಷಗಳ ಹಿಂದೆ ಐಸ್‌ಕ್ರೀಮ್‌ ಅಂದರೆ ಸೀಮಿತ ಅವಧಿಗೆ ಅದರಲ್ಲೂ ಬೇಸಿಗೆ ಸಂದರ್ಭದಲ್ಲಿ ಮಾತ್ರ ಹೆಚ್ಚಾಗಿ ಮಾರಾಟವಾಗುವ ಉತ್ಪನ್ನ ಎಂದೇ ಪರಿಗಣಿತವಾಗಿತ್ತು. ಜನರ ಜೀವನ ಮಟ್ಟ ಸುಧಾರಣೆ ಆಗುತ್ತಿದ್ದಂತೆ ಆಹಾರ ಸೇವನೆಯ ಪ್ರವೃತ್ತಿಯೂ ಬದಲಾಗುತ್ತಿದೆ. ಮಹಾನಗರಗಳಲ್ಲಿ ಮದುವೆ ಮತ್ತಿತರ ಸಭೆ ಸಮಾರಂಭ, ಔತಣಕೂಟಗಳಿಗೆ ಮಾತ್ರ ಸೀಮಿತವಾಗಿದ್ದ ಐಸ್‌ಕ್ರೀಂ ಸೇವನೆ ಈಗ ಹಳ್ಳಿ ಹಳ್ಳಿಗೂ ತಲುಪಿದೆ. ಹಬ್ಬ ಹರಿದಿನಗಳಲ್ಲೂ ಐಸ್‌ಕ್ರೀಂ ಸೇವನೆ ಸಾಮಾನ್ಯವಾಗಿದೆ. ಶೈತ್ಯಾಗಾರಗಳು ಜಿಲ್ಲಾ ಕೇಂದ್ರಗಳಿಂದ ತಾಲ್ಲೂಕು, ಹೋಬಳಿಗಳಿಗೂ ತಲುಪಿವೆ. ಇದರಿಂದ ಐಸ್‌ಕ್ರೀಂ ಅನ್ನು ಹೆಚ್ಚಿನ ದಿನಗಳವರೆಗೆ ಸಂರಕ್ಷಿಸುವ ಮತ್ತು ವರ್ಷದ ಯಾವುದೇ ದಿನಗಳಲ್ಲೂ ಪೂರೈಕೆ ಮಾಡಲು ಸಾಧ್ಯವಾಗಿದೆ. ಈಗಲೂ ಶಾಲಾ ಕಾಲೇಜುಗಳ ವಾರ್ಷಿಕ ರಜೆ ಸಂದರ್ಭ ಮತ್ತು ಬೇಸಿಗೆ ದಿನಗಳಲ್ಲಿ ಐಸ್‌ಕ್ರೀಂ ಮಾರಾಟವು ಗಮನಾರ್ಹವಾಗಿ ಹೆಚ್ಚಳಗೊಳ್ಳುತ್ತದೆ ಎನ್ನುವುದು ನಿಜವಾದರೂ, ಮಳೆಗಾಲ, ತೀವ್ರ ಚಳಿಯ ದಿನಗಳನ್ನು ಹೊರತುಪಡಿಸಿದರೆ ಬೇರೆಲ್ಲ ದಿನಗಳಲ್ಲಿ ಐಸ್‌ಕ್ರೀಂ ಸೇವನೆ ಸಾಮಾನ್ಯವಾಗಿದೆ. ಹೀಗಾಗಿ ದೇಶಿ ಐಸ್‌ಕ್ರೀಂ ಮಾರುಕಟ್ಟೆಯು ವಾರ್ಷಿಕ ಶೇ 12ರಷ್ಟು ಬೆಳವಣಿಗೆ ಕಾಣುತ್ತಿದೆ. ವಹಿವಾಟು ವಿಸ್ತರಣೆಗೆ ಇರುವ ಅವಕಾಶವನ್ನು ನಾವು ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ನಾವೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ್ದರಿಂದಲೇ ಈ ಹಂತಕ್ಕೆ ಬೆಳೆದು ನಿಂತಿರುವುದಕ್ಕೆ ಡೈರಿ ಡೇ ಒಂದು ಉತ್ತಮ ನಿದರ್ಶನವಾಗಿದೆ’ ಎಂದೂ ಬಾಲರಾಜು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಸಹ ಸ್ಥಾಪಕರಾದ ಎ. ಬಾಲ್‌ರಾಜ್‌ ಮತ್ತು ಜಗನ್ನಾಥ್‌
ಸಹ ಸ್ಥಾಪಕರಾದ ಎ. ಬಾಲ್‌ರಾಜ್‌ ಮತ್ತು ಜಗನ್ನಾಥ್‌

‘ಸಂಸ್ಥೆಯಲ್ಲಿನ ಹೈನೋದ್ಯಮ, ಆಹಾರ ಮತ್ತು ಸೂಕ್ಷ್ಮ ಜೀವಿ ಶಾಸ್ತ್ರ ಕ್ಷೇತ್ರದಲ್ಲಿನ ಅನುಭವಿ ತಂತ್ರಜ್ಞರು ಉತ್ಪನ್ನಗಳ ಅಭಿವೃದ್ಧಿ, ತಯಾರಿಕೆ ಮತ್ತು ಗ್ರಾಹಕರಿಗೆ ತಲುಪಿಸುವ ಹಂತದವರೆಗೆ ಕೆಲಸ ಮಾಡುವುದರಿಂದ ಗುಣಮಟ್ಟದ ಉತ್ಪನ್ನ ಕೊಟ್ಟು, ಗ್ರಾಹಕರ ಮನಗೆಲ್ಲಲು ಸಾಧ್ಯವಾಗುತ್ತಿದೆ. ನಮ್ಮ ಉತ್ಪನ್ನಗಳ ಗುಣಮಟ್ಟವೇ ಈ ಹಂತಕ್ಕೆ ಎಳೆದು ತಂದಿದೆ.

‘ಡೆನ್ಮಾರ್ಕ್‌ನಿಂದ ತರಿಸಿರುವ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ. ನಂದಿನಿಯ ತಾಜಾ ಹಾಲನ್ನೇ ಬಳಸುವುದರಿಂದ ಉತ್ಪನ್ನಗಳಿಗೆ ತಾಜಾ ಹಾಲಿನ ನೈಸರ್ಜಿಕ ಸ್ವಾದ ಇದೆ. ಮಹಾಬಲೇಶ್ವರನಿಂದ ಸ್ಟ್ರಾಬರಿ, ಮಂಗಳೂರಿನ ಕ್ಯಾಂಪ್ಕೊದಿಂದ ಕೋಕೊ ಹೀಗೆ ಪ್ರತಿಯೊಂದು ವಿಶಿಷ್ಟ ಉತ್ಪನ್ನ ತಯಾರಿಕೆಗೆ ಅತ್ಯುತ್ತಮ ಗುಣಮಟ್ಟದ ಕಚ್ಚಾ ಸರಕು ಬಳಲಾಗುತ್ತಿದೆ. ಯಂತ್ರೋಪಕರಣಗಳ ಅಳವಡಿಕೆ, ಗುಣಮಟ್ಟದ ಕಚ್ಚಾ ಸರಕಿನ ಆಯ್ಕೆ, ಆಕರ್ಷಕ ಪ್ಯಾಕೆಜಿಂಗ್‌ ಮೂಲಕ ಗ್ರಾಹಕರ ಮನ ಗೆಲ್ಲುವುದೂ ವಿಶಿಷ್ಟ ಕಲೆಯಾಗಿದೆ’ ಎಂದೂ ಹೇಳುತ್ತಾರೆ.

‘ಈ ಬಾರಿಯ ಬೇಸಿಗೆಗೆ 18 ಸ್ವಾದಗಳ ಕ್ಲಾಸಿಕ್‌ ರೇಂಜ್‌ ಉತ್ಪನ್ನ ಬಿಡುಗಡೆ ಮಾಡಲಾಗಿದೆ. ಸಂಸ್ಥೆ ತಯಾರಿಸುವ
₹ 5 ರಿಂದ ₹ 70ವರೆಗಿನ ಬೆಲೆಯ ವಿವಿಧ ರುಚಿ, ಸ್ವಾದದ ಕೋನ್‌, ಕಪ್ಸ್‌, ಫ್ಯಾಮಿಲಿ ಪ್ಯಾಕ್‌, ಟಬ್ಸ್‌, ಪ್ರೀಮಿಯಂ ಮುಂತಾದವು ಎಲ್ಲ ವರ್ಗದವರಿಗೆ ಮೆಚ್ಚುಗೆಯಾಗಿವೆ’ ಎನ್ನುವುದು ಅವರ ಅಭಿಪ್ರಾಯವಾಗಿದೆ.

‘ದೀಪಾವಳಿ ಸಂದರ್ಭದಲ್ಲಿ ಗಾಜರ್‌ ಹಲ್ವಾ, ಜಾಮೂನ್‌ ಸ್ವಾದದ ಐಸ್‌ಕ್ರೀಂ ಅನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಐಸ್‌ಕ್ರೀಂ ಮಾರುಕಟ್ಟೆ ನಿಂತ ನೀರಲ್ಲ. ಅದೊಂದು ನಿರಂತರ ಬದಲಾವಣೆಗೆ ಒಳಪಟ್ಟಿರುತ್ತದೆ. ಹೊಸ ಹೊಸ ಉತ್ಪನ್ನಗಳ ಸಂಶೋಧನೆ, ಪ್ರಯೋಗ ನಡೆಯುತ್ತಲೇ ಇರುತ್ತದೆ. ಪ್ರತಿಸ್ಪರ್ಧಿ ಸಂಸ್ಥೆಗಳ ಉತ್ಪನ್ನಗಳಿಗೆ ಪರ್ಯಾಯವಾಗಿ ಹೊಸತನ ಸೇರಿಸಿದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುವ ಸವಾಲನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ವಹಿವಾಟಿನ ಲಾಭವನ್ನು ಉದ್ದಿಮೆಗೆ ಹೂಡಿಕೆ ಮಾಡುತ್ತಲೇ ಹೋಗಿರುವುದರಿಂದ ಈ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ನಾವೆಲ್ಲ ಉದ್ದಿಮೆಯನ್ನು ವೃತ್ತಿಪರತೆಯಿಂದ ನಿಭಾಯಿಸುತ್ತಿದ್ದೇವೆ. ಹಿರಿಯ ಸಿಬ್ಬಂದಿಗೆ ಷೇರುಗಳನ್ನು ಕೊಡಲಾಗಿದೆ’ ಎಂದು ಆಹಾರ ಉದ್ದಿಮೆಯಲ್ಲಿ
35 ವರ್ಷದ ಅನುಭವ ಹೊಂದಿರುವ ಬಾಲರಾಜು ಹೇಳುತ್ತಾರೆ.

2002ರಲ್ಲಿ ಎರಡು ಸಾವಿರ ಚದರ ಅಡಿ ಪ್ರದೇಶದಲ್ಲಿನ ಘಟಕದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾಗಿದ್ದ ಐಸ್‌ಕ್ರೀಂ ತಯಾರಿಕಾ ಸಂಸ್ಥೆಯು ಈಗ ನಗರದ ಹೊರವಲಯದ ಹಾರೋಹಳ್ಳಿಯಲ್ಲಿಯ ಕೈಗಾರಿಕಾ ಪ್ರದೇಶದಲ್ಲಿ 2.5 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ತಯಾರಿಕಾ ಮತ್ತು ವಿತರಣಾ ಘಟಕಗಳನ್ನು ಹೊಂದಿದೆ. 2025ರ ವೇಳೆಗೆ ₹ 500 ಕೋಟಿ ವಹಿವಾಟು ತಲುಪುವ ಗುರಿ ಹಾಕಿಕೊಂಡಿದೆ. ರಾಜ್ಯದ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿ ಇರುವ ಸಂಸ್ಥೆಯು ಈಗ ದಕ್ಷಿಣ ಭಾರತದ ಮುಂಚೂಣಿ ಬ್ರ್ಯಾಂಡ್‌ ಆಗಿ ಬೆಳೆಯುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ. ಇ–ಮಾರುಕಟ್ಟೆ ಮೂಲಕ ಗ್ರಾಹಕರನ್ನು ತಲುಪಲೂ ಉದ್ದೇಶಿಸಿದೆ. ಆಹಾರ ಉದ್ದಿಮೆಗೆ ಮಹತ್ವವಾಗಿರುವ ‘ಐಎಸ್‌ಒ 22,000’ ಪ್ರಮಾಣಪತ್ರವನ್ನೂ ಪಡೆದುಕೊಂಡಿದೆ.

ಸಂಸ್ಥೆಯು ತನ್ನ ಸಾಮಾಜಿಕ ಹೊಣೆಗಾರಿಕೆಯನ್ನೂ ಸಮರ್ಥವಾಗಿ ನಿಭಾಯಿಸುತ್ತಿದೆ. ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕೆ ಹಣಕಾಸು ನೆರವು ನೀಡುತ್ತಿದೆ. ಶಾಲೆಗಳನ್ನು ದತ್ತು ತೆಗೆದುಕೊಂಡಿದೆ. ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಪೂರೈಸುತ್ತಿದೆ.

ಹಾರೋಹಳ್ಳಿಯಲ್ಲಿ ಇರುವ ಅತ್ಯಾಧುನಿಕ ತಯಾರಿಕಾ ಘಟಕದಲ್ಲಿ ಬಗೆ, ಬಗೆಯ ಐಸ್‌ಕ್ರೀಂ ಉತ್ಪನ್ನಗಳ ತಯಾರಿಕಾ ಹಂತದಲ್ಲಿ ಮಾನವನ ಹಸ್ತಕ್ಷೇಪ ಇಲ್ಲದೇ ಎಲ್ಲವೂ ಸ್ವಯಂಚಾಲಿತ ವ್ಯವಸ್ಥೆ ಅಳವಡಿಸಲಾಗಿದೆ. ಐಸ್‌ಕ್ರೀಂ ತಯಾರಿಕೆ ದೊಡ್ಡ ಪ್ರಮಾಣದ ಉದ್ದಿಮೆ ಎನ್ನುವ ವಾಸ್ತವ ಅನುಭವಕ್ಕೆ ಬರುತ್ತದೆ.

ದೇಶಿ ಮಾರುಕಟ್ಟೆ

ದೇಶದಾದ್ಯಂತ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ 20ರಿಂದ 25 ಮಾನ್ಯತೆ ಪಡೆದ ಐಸ್‌ಕ್ರೀಂ ಬ್ರ್ಯಾಂಡ್‌ಗಳಿವೆ. ಇವುಗಳಲ್ಲಿ ಬಹುತೇಕ ಬ್ರ್ಯಾಂಡ್‌ಗಳು ಸೀಮಿತ ಪ್ರಾದೇಶಿಕ ವ್ಯಾಪ್ತಿ ಹೊಂದಿವೆ. ಅಮುಲ್‌, ಕ್ವಾಲಿಟಿ ವಾಲ್ಸ್‌ನಂತಹ ಬೆರಳೆಣಿಕೆಯ ಬ್ರ್ಯಾಂಡ್‌ಗಳು ಮಾತ್ರ ದೇಶದಾದ್ಯಂತ ಮಾರುಕಟ್ಟೆ ಹೊಂದಿವೆ. ಐಸ್‌ಕ್ರೀಂ ತಯಾರಿಕೆ ಮತ್ತು ಮಾರಾಟ ಉದ್ದಿಮೆಯು ಹೆಚ್ಚಾಗಿ ಪ್ರಾದೇಶಿಕ ಕೇಂದ್ರಿತವಾಗಿದೆ. ಬೇರೆ, ಬೇರೆ ರಾಜ್ಯಗಳಲ್ಲಿ ಸ್ಥಳೀಯ ಬ್ರ್ಯಾಂಡ್‌ಗಳು ಜನಪ್ರಿಯತೆ ಹೊಂದಿವೆ. ಅದೇ ಬಗೆಯಲ್ಲಿ ರಾಜ್ಯದಲ್ಲಿ ‘ಡೈರಿ ಡೇ’ ಬ್ರ್ಯಾಂಡ್‌ ಮುಂಚೂಣಿಯಲ್ಲಿ ಇದೆ. ರಾಜ್ಯದಲ್ಲಿನ ಐಸ್‌ಕ್ರೀಂ ಮಾರುಕಟ್ಟೆಯ ವಹಿವಾಟಿನ ಗಾತ್ರ ₹ 600 ಕೋಟಿಗಳಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT