ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಯಿದೋಣಿ | ಇಡ್ಲಿ ಮೇಲೆ ನಿಂತ ಫುಡ್‌ಕಿಂಗ್‌

Last Updated 5 ಏಪ್ರಿಲ್ 2020, 5:51 IST
ಅಕ್ಷರ ಗಾತ್ರ
ADVERTISEMENT
""

ಊಟದಲ್ಲಿ ನಾನು ತರಕಾರಿ ಕಂಡಿದ್ದು ನನ್ನ ಹನ್ನೆರಡನೇ ವರ್ಷದಲ್ಲಿ. ವರ್ಷಕ್ಕೊಮ್ಮೆ ಮಾತ್ರ ವಡೆ ಮತ್ತು ಒಂದಿಷ್ಟು ಸಿಹಿತಿನಿಸುಗಳ ಸವಿ. 50 ಗ್ರಾಮಿನ ಖೋವಾ, ಮನೆಯಲ್ಲಿ ಐದು ಪಾಲಾಗುತ್ತಿತ್ತು. ಮಾರಾಟಮಾಡಿ ಉಳಿದ ಇಡ್ಲಿ, ಅನ್ನ ಅಥವಾ ಬೇಳೆಸಾರು ನನ್ನ ಆಹಾರ. ಅಮ್ಮ ಮಾತ್ರ ನೀರು ಕುಡಿದು ನಿದ್ರೆಗೆ ಜಾರುತ್ತಿದ್ದಳು. ಬಹುಶಃ ಅಮ್ಮನ ಮೆಚ್ಚಿನ ಆಹಾರ ಇದೇ ಇರಬೇಕು ಎಂದು ನಾನಾಗ ಅಂದುಕೊಂಡಿದ್ದೆ.

ಚೆನ್ನೈ ಮಾದಿಪಕ್ಕಂ ಕೊಳೆಗೇರಿ ನಾನು ಬೆಳೆದ ಜಾಗ. ತನ್ನ ಐವರು ಮಕ್ಕಳ ಹೊಟ್ಟೆ ತುಂಬಿಸಲು ಅಮ್ಮ ಮೂರು ಪಾಳಿಯ ಕೆಲಸ ಮಾಡುತ್ತಿದ್ದಳು. ಮನೆಮನೆಗೆ ಇಡ್ಲಿಯ ಬಾಕ್ಸ್ ಹೊತ್ತೊಯ್ದು ತಲಾ ಇಪ್ಪತ್ತೈದು ಪೈಸೆಗೊಂದು ಇಡ್ಲಿ ಮಾರುವುದು ನನ್ನ ಪಾಲಿನ ಕೆಲಸವಾಗಿತ್ತು. ಬಾಲ್ಯದ ಹತ್ತಾರು ಘಟನೆಗಳು ನನ್ನ ಸ್ಮೃತಿಪಟಲದಲ್ಲಿವೆ. ಬರೆಯಲು ಒಂದು ನೋಟ್‌ಬುಕ್ ಸಹ ಇರಲಿಲ್ಲ. ಹರಿದ ಯೂನಿಫಾರ್ಮ್ ನನ್ನ ಉಡುಗೆ. ಶಿಕ್ಷಕರೇ ಶುಲ್ಕ ಭರಿಸುತ್ತಿದ್ದರು. ಹೊತ್ತಿನ ಊಟವೂ ಕಷ್ಟ. ಊಟ ಅರಸಿ ಅಕ್ಕಪಕ್ಕದ ಮನೆಗಳಿಗೆ ಹೋಗುವುದು ರೂಢಿಯೇ ಆಗಿತ್ತು. ನಾನಿದ್ದ ಜಾಗದಲ್ಲಿ ಪ್ರತಿ ಹುಣ್ಣಿಮೆಯ ದಿನ 100 ಮಕ್ಕಳಿಗೆ ಊಟ ಬಡಿಸಲಾಗುತ್ತಿತ್ತು. ನಾನು ಅಷ್ಟೊಂದು ಬಗೆಬಗೆಯ ಆಹಾರ ಪದಾರ್ಥಗಳನ್ನು ನೋಡುತ್ತಿದ್ದುದು ಅಂದು ಮಾತ್ರ. ನನ್ನ ಸ್ಥಿತಿ ನೆನಪಿಸಿಕೊಂಡು ದೇವರಿಗೆ ಶಾಪ ಹಾಕುತ್ತಿದ್ದೆನಾದರೂ, ಏನನ್ನಾದರೂ ಸಾಧಿಸುವ ತುಡಿತ ನನ್ನಲ್ಲಿತ್ತು. ಹಾಗೂಹೀಗೂ ಶಾಲೆ ಮುಗಿಯಿತು.

ವರ್ಷಗಳು ಕಳೆದವು. ಪಿಲಾನಿಯ ಬಿಟ್ಸ್‌ನಲ್ಲಿ (ಬಿಐಟಿಎಸ್‌) ಓದು ಮುಗಿಸಿದೆ. ಅದರ ಸಾಲ ತೀರಿಸಲು ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಮೂರು ವರ್ಷ ದುಡಿದೆ. ಇನ್ನಷ್ಟು ಓದಬೇಕು, ಎಂಬಿಎ ಮಾಡಬೇಕು ಎಂಬ ತುಡಿತವಿತ್ತು. ಕ್ಯಾಟ್ ಪರೀಕ್ಷೆ ಬರೆದೆ. ಪ್ರಶ್ನೆಪತ್ರಿಕೆ ಸೋರಿಕೆಯ ಅಡೆತಡೆಯಿಂದ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಯಿತು. ಅದೃಷ್ಟವೋ ಏನೋ, ದೇಶದ 6 ಐಐಎಂಗಳಿಂದ ಸಂದರ್ಶನಕ್ಕೆ ಕರೆ ಬಂದಿತು. 2003ರಲ್ಲಿ ವಿದ್ಯಾರ್ಥಿವೇತನದಡಿ ನಾನು ಅಹಮದಾಬಾದ್‌ನ ಐಐಎಂ ಸೇರಿಕೊಂಡೆ. ಪದವಿ ಪಡೆದು ಹೊರಬಂದೆನಾದರೂ, ಕ್ಯಾಂಪಸ್ ಆಯ್ಕೆಯಿಂದ ಹೊರಗುಳಿದೆ. ಉದ್ಯಮ ಆರಂಭಿಸುವ ಬಯಕೆ ಆಗಲೇ ಚಿಗುರೊಡೆದಿತ್ತು.

ಬಾಲ್ಯದಲ್ಲಿ ಇಡ್ಲಿ ಮಾರಾಟ ಮಾಡಿದ್ದು ಕೇಟರಿಂಗ್ ಉದ್ಯಮ ಆರಂಭಿಸಲು ಕೊಂಚ ನೆರವಾಯಿತು. ಕೇವಲ ₹2000 ಮೂಲ ಬಂಡವಾಳದೊಂದಿಗೆ ಫುಡ್‌ಕಿಂಗ್ ಅಡಿಯಿಟ್ಟಿತು. ಅನಕ್ಷರಸ್ಥರು ಅಥವಾ ಅಲ್ಪಸ್ವಲ್ಪ ಓದಿದವರಿಗೆ ಉದ್ಯೋಗ ನೀಡುವ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸಲು ನಾನು ನಿರ್ಧರಿಸಿಯಾಗಿತ್ತು. ಸಮಾಜಕ್ಕೆ ಏನಾದರೂ ಮರಳಿ ನೀಡಲು ಬಯಸಿದ್ದ ನನಗೆ ಇದು ಪೂರಕವಾಗಿ ಕಂಡಿತು. ಈ ಪಯಣದುದ್ದಕ್ಕೂ ಅಮ್ಮ ನನ್ನ ಆಧಾರಸ್ತಂಭ ಮತ್ತು ಭರವಸೆಯಾಗಿ ನಿಂತಳು. ಮನೆಗೆಲಸ ಮಾಡಿ, ಚೆನ್ನೈನ ಬೀದಿಬದಿಯಲ್ಲಿ ಇಡ್ಲಿ ಮಾರಿ, ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿಯಾಗಿ ದುಡಿದು, ತನ್ನ ಐದು ಕುಡಿಗಳಿಗೆ ಅನ್ನ, ಅಕ್ಷರ ನೀಡಿದವಳು ಆಕೆ. ನಾನು ಇಡ್ಲಿ ಹಿಡಿದು ಮನೆಮನೆ ಬಾಗಿಲು ಬಡಿಯುತ್ತಿದ್ದಾಗಲೇ ಆಕೆ ಉದ್ಯಮಿಯಾಗಿ ಗೆದ್ದಾಗಿತ್ತು. ಅದೇ ಇಡ್ಲಿ ಎಂಬ ಬುನಾದಿಯ ಮೇಲೆ ನಾನೀಗ ಯಶಸ್ವಿ ಉದ್ದಿಮೆಯನ್ನು ಕಟ್ಟಿದ್ದೇನೆ. ಕಠಿಣ ದುಡಿಮೆ ಎಂದಿಗೂ ಸೋಲು ತಾರದೆಂಬ ನಂಬಿಕೆ ನಿಜವಾಗಿದೆ. ಯಾವ ಕೆಲಸದ ಘನತೆಯೂ ಕಡಿಮೆಯಲ್ಲ. ಗೆಲ್ಲಲು ಬೇಕಿರುವುದು ಮನಸ್ಸು ಮಾತ್ರ.

‘ಬೀಯಿಂಗ್‌ ಯೂ’

‘ಬೀಯಿಂಗ್‌ ಯೂ’ಬೆಂಗಳೂರು ಮೂಲದ ಡಿಜಿಟಲ್‌ ಮೀಡಿಯಾ ನವೋದ್ಯಮ ಕಂಪನಿ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಂಪನಿ ಜನಸಾಮಾನ್ಯರು, ಅದರಲ್ಲೂ ಮಹಿಳೆ ಯರ ಯಶೋಗಾಥೆಗಳನ್ನು ಕಟ್ಟಿಕೊಡುತ್ತದೆ. ಜೀವನದ ನೈಜಕಥೆಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಭಾವ ಮೂಡಿಸಿ, ಪ್ರೇರಣೆ ತುಂಬುವ ಕೆಲಸದಲ್ಲಿ ತೊಡಗಿಸಿ ಕೊಂಡಿದೆ. ‘ಪ್ರಜಾವಾಣಿ’ಗಾಗಿ ‘ಬೀಯಿಂಗ್ ಯು’ ಈ ಹಾಯಿದೋಣಿಯ ಈ ಕಥೆಗಳನ್ನು ಕಟ್ಟಿಕೊಡುತ್ತಿದೆ...ಇಮೇಲ್‌:beingyou17@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT