ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿಯ ಉದ್ಯಮಿ: ಯಶಸ್ಸಿನ ಮೂರು ಮಂತ್ರಗಳು

Last Updated 7 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಗುಣಮಟ್ಟದ ಆರೋಗ್ಯ ಸೇವೆ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಕಾಯಿಲೆಗಳನ್ನು ದೂರವಿಡಲು ನಾವು ಹಲವು ದಾರಿಗಳನ್ನು ಶೋಧಿಸುತ್ತಲೇ ಇದ್ದೇವೆ. ವೈದ್ಯಕೀಯ ಕ್ಷೇತ್ರದ ತಜ್ಞರು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತರುವ ಮೂಲಕ ಆರೋಗ್ಯಕರ ಜೀವನ ನಡೆಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದ್ದಾರೆ. ‘ವಿವೇಕಾನಂದ ಹೆಲ್ತ್‌ ಗ್ಲೋಬಲ್‌’ ಸಂಸ್ಥೆಯ ಸ್ಥಾಪಕಿ ಡಾ. ವಸುಧಾ ಎಂ. ಶರ್ಮ ಅವರು ಅಂಥವರಲ್ಲಿ ಒಬ್ಬರು.

‘ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಬಳಸಿಕೊಂಡು ಸಂಯೋಜಿತ ವೈದ್ಯಕೀಯ ಸೇವೆ ಒದಗಿಸುವ ಕೇಂದ್ರಗಳನ್ನು ನಾವು ನಡೆಸುತ್ತಿದ್ದೇವೆ. ರೋಗಿಯ ಆರೋಗ್ಯ, ಕಾಯಿಲೆ, ದೇಹ–ಮನಸ್ಸಿನ ನಡುವಿನ ಹೊಂದಾಣಿಕೆಯನ್ನು ಪರಿಗಣಿಸಿ ಸರಿಯಾದ ಪರಿಹಾರ ಸೂಚಿಸುವುದು ನಮ್ಮ ಆದ್ಯತೆ’ ಎಂದು ಅವರು ಹೇಳುತ್ತಾರೆ.

ಆರೋಗ್ಯಕರ ಸಮಾಜದ ಕುರಿತು ಡಾ. ವಸುಧಾ ಕಂಡ ಕನಸುಗಳೇ ಈ ಆಸ್ಪತ್ರೆಯ ನಿರ್ಮಾಣಕ್ಕೆ ಕಾರಣವಾದವು. ವೈದ್ಯೆಯಾಗಿ ಅವರು ದಶಕಗಳ ಅನುಭವ ಹೊಂದಿದ್ದಾರೆ. ‘ಆಯುರ್ವೇದ ವೈದ್ಯವಿಜ್ಞಾನದಲ್ಲಿ ಪದವಿ ಪಡೆದ ಬಳಿಕ ನಾನು 2-3 ವರ್ಷ ತಜ್ಞರೊಂದಿಗೆ ಕಲಿಕೆ ಮುಂದುವರೆಸಿದೆ. ಕಲಿಯುವ ಬಯಕೆ ಇನ್ನಷ್ಟು ಹೆಚ್ಚಾದಾಗ ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ನಂತರ ಆಯುರ್ವೇದ ಮತ್ತು ಯೋಗ ಥೆರಪಿ ಬಳಸಿ ತಲೆಶೂಲೆ (ಮೈಗ್ರೇನ್‌) ನಿರ್ವಹಣೆ ವಿಷಯದಲ್ಲಿ ಪಿಎಚ್‌.ಡಿ ಪದವಿ ಪಡೆದೆ. ಅಗತ್ಯ ಶೈಕ್ಷಣಿಕ ಅರ್ಹತೆ ಪಡೆದ ಬಳಿಕ ನಾನು ನನ್ನದೇ ಸ್ವಂತ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದೆ. ವ್ಯಾಸ ಹೆಲ್ತ್‌ ಕೇರ್‌ ಪ್ರೈ.ಲಿ. ಕಂಪನಿ ಹೆಸರಿನ ಅಡಿಯಲ್ಲಿ 2004ರಲ್ಲಿ ವಿವೇಕಾನಂದ ಹೆಲ್ತ್‌ ಗ್ಲೋಬಲ್‌ ಅಸ್ತಿತ್ವಕ್ಕೆ ಬಂತು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

‘ರೋಗಿಗಳ ಮನೆ ಬಾಗಿಲಿಗೇ ಸಂಯೋಜಿತ ವೈದ್ಯ ಸೇವೆಯನ್ನು ಒದಗಿಸುವುದು ವಿವೇಕಾನಂದ ಗ್ಲೋಬಲ್‌ ಹೆಲ್ತ್‌ನ ಹೆಗ್ಗಳಿಕೆ. ಅದು ಯಶಸ್ವಿಯೂ ಆಗಿದೆ’ ಎಂದು ಡಾ. ವಸುಧಾ ಹೇಳುತ್ತಾರೆ. ‘ಸಾಂಪ್ರದಾಯಿಕ ಔಷಧ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮೂಲಕ ರೋಗಿಯನ್ನು ವ್ಯಕ್ತಿಗತವಾಗಿ ಆರೈಕೆ ಮಾಡುವುದರಿಂದ’ ಪರಿಣಾಮಕಾರಿ ಫಲಿತಾಂಶ ಪಡೆಯುವುದು ಸಾಧ್ಯವಾಗಿದೆ ಎಂದು ಅವರು ಹೇಳುತ್ತಾರೆ.

ಕೋವಿಡ್‌–19 ಸಾಂಕ್ರಾಮಿಕದ ಬಿಕ್ಕಟ್ಟಿನ ಸಮಯದಲ್ಲಿಯೂ ಅವರು ರೋಗಿಗಳನ್ನು ಕಂಡು ಆರೈಕೆ ಮಾಡುವುದನ್ನು ಮುಂದುವರೆಸಿದ್ದರು. ‘ಕಳೆದ 20 ವರ್ಷಗಳಿಂದ ನನ್ನ ವೃತ್ತಿ ನಿಂತಿಲ್ಲ. ಆದರೆ ಕಳೆದ ವರ್ಷ, ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ಇದಕ್ಕೆ ವಿರಾಮ ನೀಡಲು ಬಹುತೇಕ ನಿರ್ಧರಿಸಿದ್ದೆ. ಹೀಗಿದ್ದರೂ, ನನ್ನ ತಂಡ ನೀಡಿದ ನೆರವು ಮತ್ತು ಆ ಸಂದರ್ಭಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಿದ್ದರಿಂದ ನಾವು ಮತ್ತೆ ಪುಟಿದೇಳಲು ಸಾಧ್ಯವಾಯಿತು. ಅಗತ್ಯವಿದ್ದರೆ ಬದಲಾವಣೆ ಮಾಡಿಕೊಳ್ಳಬೇಕೆಂಬ ಪಾಠವನ್ನೂ ನನಗೆ ಆ ಪರಿಸ್ಥಿತಿಯು ಕಲಿಸಿತು. ಪರಿಸ್ಥಿತಿಗೆ ತಕ್ಕಂತೆ ನೀವೂ ಬದಲಾಗಬೇಕು. ಭವಿಷ್ಯದಲ್ಲಿ ಇದು ನಿಜಕ್ಕೂ ನಿಮ್ಮ ನೆರವಿಗೆ ಬರುತ್ತದೆ. ಅನೇಕ ಸಂದರ್ಭಗಳಲ್ಲಿ ನಾವು ಇಂಥ ಸವಾಲುಗಳನ್ನು ನಿರೀಕ್ಷಿಸಿರುವುದೇ ಇಲ್ಲ. ಹಾಗಾಗಿ ಪರ್ಯಾಯ ಯೋಜನೆಯೂ ನಮ್ಮಲ್ಲಿ ಇರುವುದಿಲ್ಲ’ ಎಂದು ಡಾ. ವಸುಧಾ ಹೇಳುತ್ತಾರೆ.

ಉದ್ಯಮಿಯಾಗಲು ಬಯಸುವವರಿಗೆ ಯಶಸ್ಸಿನ ಮೂರು ಮಂತ್ರಗಳನ್ನು ಅವರು ಹೇಳುತ್ತಾರೆ. ನಿರಂತರ ಪರಿಶ್ರಮ, ಮಾಡುವ ಕೆಲಸದಲ್ಲಿ ದೃಢನಂಬಿಕೆ ಮತ್ತು ಸುಧಾರಣೆಯ ಕಡೆ ಸತತ ಪ್ರಯತ್ನ ಇರಬೇಕು ಎಂಬುದು ಆ ಮಂತ್ರಗಳು. ಆರೋಗ್ಯಸೇವಾ ಉದ್ಯಮಿಯಾಗಿ 15ಕ್ಕೂ ಹೆಚ್ಚು ವರ್ಷಗಳ ಅನುಭವವಿರುವ ಡಾ. ವಸುಧಾ ಈ ಮಂತ್ರಗಳನ್ನು ತಮ್ಮಲ್ಲಿಯೂ ಅಳವಡಿಸಿಕೊಂಡು ಪ್ರಗತಿಯ ದಾಪುಗಾಲು ಇಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT