ಸೋಮವಾರ, ಜೂನ್ 27, 2022
28 °C
ಸ್ಫೂರ್ತಿಯ ಉದ್ಯಮಿ

ಮಹಿಳೆಯರೇ ಮುನ್ನಡೆಸುವ ಉದ್ಯಮ...

ಎಂ. ಶ್ರೀನಿವಾಸ ರಾವ್ Updated:

ಅಕ್ಷರ ಗಾತ್ರ : | |

PV Photo

‘ಉದ್ಯಮಿಯಾಗಬೇಕೆಂಬುದು ಚಿಕ್ಕಂದಿನಿಂದಲೂ ನನ್ನಲ್ಲಿದ್ದ ಆಸೆ. ಆ ನಿಟ್ಟಿನಲ್ಲಿಯೇ ಕಲಿಕೆ ಮುಂದುವರೆಸಬೇಕು ಎಂದು ಬಯಸಿದ್ದೆ. ನನ್ನ ಕನಸಿನ ಉದ್ಯಮಕ್ಕೆ ಸಂಬಂಧಿಸಿದ ಬ್ರ್ಯಾಂಡ್‌ಗಳನ್ನು ಆಯ್ಕೆ ಮಾಡಿ ಅವುಗಳಲ್ಲಿ ಕೆಲಸ ಮಾಡಿದೆ. ಉದ್ಯಮಿಯಾಗುವ ಮುನ್ನ ಅಲ್ಲಿರುವ ವ್ಯವಸ್ಥೆ, ಪ್ರಕ್ರಿಯೆಗಳನ್ನೆಲ್ಲ ಕಲಿತುಕೊಂಡೆ’.

–ಇದು ಬೆಂಗಳೂರಿನಲ್ಲಿ ಭೋಗರಾಜು ಫುಡ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ನಡೆಸುತ್ತಿರುವ ವಸುಧಾ ಅವರ ಮಾತುಗಳು. ಅವರ ಸಾಹಸಕ್ಕೆ ತಾಯಿ ಜೊತೆಯಾಗಿದ್ದಾರೆ. ಉದ್ಯಮಕ್ಕೆ ಸರಿಯಾದ ಕೌಶಲವನ್ನು ಗಳಿಸಿಕೊಳ್ಳಲು ವಸುಧಾ ಎಂಬಿಎ ಪದವಿ ಪಡೆದಿದ್ದಲ್ಲದೆ, ಎರಡು ದಶಕಗಳ ಕಾಲ ಐ.ಟಿ., ಬ್ಯಾಂಕಿಂಗ್‌ ಮತ್ತು ಟೆಲಿಕಾಂ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಪ್ರಾಯೋಗಿಕ ಅನುಭವ ಗಳಿಸಿದರು. ಅವರ ಪೋಷಕರು 1984ರಿಂದಲೂ ಲಕ್ಷ್ಮಿ ಫುಡ್‌ ಇಂಡಸ್ಟ್ರೀಸ್‌ ಕಂಪನಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದರು. ಮನೆಯಲ್ಲೇ ತಯಾರಿಸಿದ ಉಪ್ಪಿನಕಾಯಿ, ಮಸಾಲೆ ಪುಡಿಗಳು, ಚಟ್ನಿ ಪುಡಿಗಳನ್ನು ಇದು ಮಾರಾಟ ಮಾಡುತ್ತಿತ್ತು. ವಸುಧಾ ಅವರಿಗೆ ಇದೇ ಪ್ರೇರಣೆ ನೀಡಿತ್ತು.

ತಮ್ಮ ಪಯಣದ ಬಗ್ಗೆ ಮಾತನಾಡುವ ವಸುಧಾ, ಹೊಸ ವಿಷಯ ಕಲಿಯಬೇಕು ಹಾಗೂ ಉದ್ಯಮಿ ಆಗಬೇಕು ಎಂಬ ಬಯಕೆಯೇ ತಮ್ಮ ಕಂಪನಿಗೆ ಪ್ರೇರಣೆ ಎನ್ನುತ್ತಾರೆ. ತಪ್ಪುಗಳು ಹೊಸದನ್ನು ಕಲಿಯುವುದಕ್ಕೆ ಅವಕಾಶ ಎಂದು ಭಾವಿಸುವ ವಸುಧಾ ಅವುಗಳಿಂದಲೇ ಉದ್ಯಮವನ್ನು ಸುಧಾರಿಸಿದರು. 2018ರಲ್ಲಿ ವಸುಧಾ ಉದ್ಯಮ ಆರಂಭಿಸಿದರು. ಇ–ವಾಣಿಜ್ಯ ಕ್ಷೇತ್ರ ಪಡೆದುಕೊಳ್ಳುತ್ತಿದ್ದ ಜನಪ್ರಿಯತೆ ಗಮನಿಸಿ ವೆಬ್‌ತಾಣ ಆರಂಭಿಸಿ ಆದಾಯ ಹೆಚ್ಚಿಸಿಕೊಂಡರು. ಮಾರುಕಟ್ಟೆಯ ಅಧ್ಯಯನ ನಡೆಸಿದರು. ಭೋಗರಾಜು ಪ್ರೈವೇಟ್‌ ಲಿಮಿಟೆಡ್‌ ಕಂಪನಿಯನ್ನು ಹುಟ್ಟುಹಾಕಿದರು.

ಕೋವಿಡ್‌–19 ಸಾಂಕ್ರಾಮಿಕದ ಕಾರಣದಿಂದಾಗಿ ಜಾರಿಗೆ ಬಂದ ಲಾಕ್‌ಡೌನ್‌ ಕ್ರಮಗಳು ಭೋಗರಾಜು ಕಂಪನಿಯ ಮೇಲೆಯೂ ದುಷ್ಪರಿಣಾಮ ಬೀರಿತು. ಹಲವು ಪಾಲುದಾರರು ವಹಿವಾಟು ಸ್ಥಗಿತಗೊಳಿಸಿದ್ದರಿಂದ ಬೇಡಿಕೆ ಇಳಿಮುಖವಾಯಿತು. ಆದರೆ, ‘ಭೋಗರಾಜು’ ಅಗತ್ಯ ಸೇವೆಗಳ ವ್ಯಾಪ್ತಿಯಲ್ಲಿ ಇದ್ದುದರಿಂದ ಗ್ರಾಹಕರು ಉತ್ಪನ್ನಗಳ ಸಗಟು ಖರೀದಿಗೆ ಮುಂದಾದರು. ಆನ್‌ಲೈನ್‌ ಮಾರಾಟದಿಂದ ಬಂದ ಆದಾಯ ಹಿಂದಿನ ಮತ್ತು ಈ ವರ್ಷದ ನಷ್ಟವನ್ನು ಸರಿದೂಗಿಸಿತು. ಅರಿಸಿಣ ಬಳಕೆಯು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಕಂಪನಿಯು ಅರಿಸಿಣದ ಉಪ್ಪಿನಕಾಯಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

‘ನನ್ನ ತಾಯಿಯೇ ನನ್ನ ಆಧಾರಸ್ತಂಭ. ಕಂಪನಿಯಲ್ಲಿನ ಶೇಕಡ 95ರಷ್ಟು ಸಿಬ್ಬಂದಿ ಮಹಿಳೆಯರು. ವಿವಿಧ ಕೆಲಸಗಳಿಗೆ ನಾವು ಮಹಿಳೆಯರನ್ನೇ ನೇಮಿಸಿ ಅವರ ಸಬಲೀಕರಣಕ್ಕೆ ಪ್ರಯತ್ನಿಸುತ್ತಿದ್ದೇವೆ. ಉದ್ಯಮಿಯಾಗಿ ಅಗತ್ಯವಿರುವ ಹಣಕಾಸು ಹೊಂದಿಸುವುದು ದೊಡ್ಡ ಸವಾಲು. ಆದರೆ ಕಂಪನಿಯ ವಹಿವಾಟನ್ನು ವೃದ್ಧಿಸಲು ಇದು ಅಡೆತಡೆ ಎನಿಸಲೇ ಇಲ್ಲ. ಸಿಬ್ಬಂದಿಯ ಹಿತ ಕಾಯುವುದು ನಮ್ಮ ಮುಖ್ಯ ಗುರಿ. ಯಾವುದೇ ಪ್ರತಿಕೂಲ ಪರಿಸ್ಥಿತಿಯೂ ಅವರ ವೇತನಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಿದ್ದೇವೆ’ ಎಂದು ವಸುಧಾ ಹೇಳುತ್ತಾರೆ.

‘ಉದ್ಯಮಿಯಾಗುವ ಬಯಕೆ ಇರುವವರಿಗೆ ನಾನು ಹೇಳುವುದಿಷ್ಟು. ನಿಮ್ಮಲ್ಲಿ ಏನಾದರೂ ಹೊಸ ಆಲೋಚನೆಗಳಿದ್ದರೆ, ಅದರ ಮೇಲೆ ವಿಶ್ವಾಸವಿಟ್ಟು ಮುಂದುವರೆಯಿರಿ. ನಿಮ್ಮ ಬಗ್ಗೆ ನಂಬಿಕೆ ಇರಲಿ. ಉದ್ಯಮದತ್ತ ಮೊದಲ ಹೆಜ್ಜೆ ಇಡಿ. ಉಳಿದಿದ್ದು ತಾನಾಗಿಯೇ ಹಿಂಬಾಲಿಸುತ್ತದೆ’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು