ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,448 ಅಂಶ ಕುಸಿದ ಸೆನ್ಸೆಕ್ಸ್: ನಿಮಿಷಗಳಲ್ಲಿ ಕರಗಿದ ₹5 ಲಕ್ಷ ಕೋಟಿ ಸಂಪತ್ತು

ಷೇರುಪೇಟೆ ಮಹಾ ಕುಸಿತ
Last Updated 28 ಫೆಬ್ರುವರಿ 2020, 10:25 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಷೇರುಪೇಟೆ ಶುಕ್ರವಾರ ದಿಢೀರ್‌ ಕುಸಿತ ಕಂಡಿದೆ. ಕೊರೊನಾ ವೈರಸ್‌ ಪ್ರಭಾವ ಚೀನಾದಿಂದ ಹೊರಗೂ ವ್ಯಾಪಿಸಿರುವುದರಿಂದ ಜಾಗತಿಕ ಷೇರುಪೇಟೆಗಳಲ್ಲೂ ಮಾರಾಟ ಒತ್ತಡ ಸೃಷ್ಟಿಯಾಗಿದೆ. ವಹಿವಾಟು ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್‌ 1000ಕ್ಕೂ ಅಧಿಕ ಅಂಶಗಳ ತೀವ್ರ ಕುಸಿತದಿಂದ ಆತಂಕದ ಸ್ಥಿತಿ ಎದುರಾಯಿತು. ದಿನದ ವಹಿವಾಟು ಅಂತ್ಯಕ್ಕೆಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,448ಅಂಶಗಳ ಇಳಿಕೆಯೊಂದಿಗೆ 38,297ಅಂಶ ತಲುಪಿತು.

ರಾಷ್ಟ್ರೀಯ ಷೇರು ಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 423ಅಂಶ ಇಳಿಕೆಯಾಗಿ11,210ಅಂಶಗಳನ್ನು ಮುಟ್ಟಿತು. ವಹಿವಾಟು ಆರಂಭವಾದಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರ ₹5 ಲಕ್ಷ ಕೋಟಿ ಕೊಚ್ಚಿ ಹೋಯಿತು. ಮುಂಬೈ ಷೇರುಪೇಟೆಯ ಸುಮಾರು1,700 ಕಂಪನಿಗಳ ಷೇರು ನಷ್ಟಕ್ಕೆ ಒಳಗಾದವು.

ಫೆಬ್ರುವರಿ 24ರಿಂದ 28ರ ವರೆಗೂ, ಐದು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 2,300ಅಂಶಗಳಿಗೂ ಅಧಿಕಇಳಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್‌ ಭೀತಿ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಪರಿಣಾಮ ದೇಶದ ಷೇರುಪೇಟೆಗಳಲ್ಲಿ ತಲ್ಲಣ ಸೃಷ್ಟಿಸಿದೆ. 2008ರಲ್ಲಿ ಉಂಟಾಗಿದ್ದ ಜಾಗತಿಕ ಮಟ್ಟದ ಷೇರುಪೇಟೆ ಮಹಾ ಕುಸಿತದ ನಂತರ ಇದೀಗ ಅತಿ ದೊಡ್ಡ ಪತನ ದಾಖಲಾಗಿದೆ.

ಕೊರೊನಾ ಪ್ರಭಾವದಿಂದ ಅಮೆರಿಕ ಷೇರುಪೇಟೆ ಡೌ ಜೋನ್ಸ್‌ನಲ್ಲಿ 1,190.95 ಅಂಶಗಳಕುಸಿತ ಕಂಡಿರುವುದು ಏಷ್ಯಾ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಜಪಾನ್‌ದ ಟೋಕಿಯೊ ಷೇರುಪೇಟೆ ಶೇ 3.5 ಹಾಗೂ ಚೀನಾದ ಶಾಂಘೈ ಷೇರುಪೇಟೆ ಶೇ 2.5ರಷ್ಟು ಇಳಿ ಮುಖವಾಗಿವೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌, ಟಿಸಿಎಸ್‌, ಎಚ್‌ಡಿಎಫ್‌ಸಿ ಹಾಗೂ ಇನ್ಫೊಸಿಸ್‌ ಷೇರುಗಳು ಶೇ 3–4ರಷ್ಟು ಕುಸಿತ ಕಂಡಿವೆ. ಬಜಾಜ್‌ ಫೈನಾನ್ಸ್‌, ಟೆಕ್‌ ಮಹೀಂದ್ರಾ ಮತ್ತು ಟಾಟಾ ಸ್ಟೀಲ್‌ ಷೇರುಗಳು ಶೇ 4–5ರಷ್ಟು ಇಳಿಕೆಯಾಗಿವೆ. ಹೂಡಿಕೆದಾರರಲ್ಲಿ ಮಹಾ ಭೀತಿ ಎದುರಾಗಿದೆ.

ಸರ್ಕಾರ ಡಿಸೆಂಬರ್‌ ತ್ರೈಮಾಸಿಕದ ಆರ್ಥಿಕ ವೃದ್ಧಿ ದರದ ಅಂಕಿ ಅಂಶಗಳನ್ನು ಇಂದು ಪ್ರಕಟಿಸಲಿದೆ. ಕೆಲವು ಸಮೀಕ್ಷೆಗಳ ಪ್ರಕಾರ, ಹಿಂದಿನ ತ್ರೈಮಾಸಿಕದ ಜಿಡಿಪಿಗಿಂತಲೂ ಹೆಚ್ಚಾಗಲಿದ್ದು, ಶೇ 4.7 ಆಗಿರಲಿದೆ. ಇನ್ನೂ ಕೆಲವು ವಿಶ್ಲೇಷಕರ ಪ್ರಕಾರ ಜಿಡಿಪಿ ಶೇ 4.5 ತಲುಪುವುದೇ ಸವಾಲಿನ ಕಾರ್ಯ.

ಮುಂಬೈ ಷೇರುಪೇಟೆಯಲ್ಲಿ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಷೇರುಗಳು ಮಾರಾಟ ಒತ್ತಡಕ್ಕೆ ಸಿಲುಕಿದ್ದು, ಸೂಚ್ಯಂಕ ಶೇ 2.5ರಷ್ಟು ಇಳಿಕೆಯಾಗಿದೆ.

ಕೊರೊನಾ ವೈರಸ್‌ ಸೋಂಕಿನಿಂದ ಸುಮಾರು 2,800 ಮಂದಿ ಸಾವಿಗೀಡಾಗಿದ್ದು, ಜಾಗತಿಕವಾಗಿ 83,000 ಜನರಿಗೆ ಸೋಂಕು ತಗುಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT