ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಅದಾನಿ ಎಂಟರ್‌ಪ್ರೈಸಸ್‌ಗೆ ‘ನಿಫ್ಟಿ–50’ ಮನ್ನಣೆ

ಆರು ತಿಂಗಳಲ್ಲೇ ಶೇ 100ರಷ್ಟು ಮೌಲ್ಯ ಹೆಚ್ಚಿಸಿಕೊಂಡ ಕಂಪನಿ
Last Updated 4 ಸೆಪ್ಟೆಂಬರ್ 2022, 14:44 IST
ಅಕ್ಷರ ಗಾತ್ರ

ಕಳೆದ ಆರು ತಿಂಗಳಲ್ಲಿ ಶೇ 104ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿರುವ ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯು ಸೆಪ್ಟೆಂಬರ್‌ ಅಂತ್ಯಕ್ಕೆ ‘ನಿಫ್ಟಿ–50’ ಸೂಚ್ಯಂಕವನ್ನು ಸೇರುತ್ತಿರುವುದು ಹೂಡಿಕೆದಾರರ ಗಮನವನ್ನು ಸೆಳೆದಿದೆ.

**

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ‘ನಿಫ್ಟಿ–50’ ಸೂಚ್ಯಂಕದ ಮಡಿಲನ್ನು ‘ಅದಾನಿ ಎಂಟರ್‌ಪ್ರೈಸಸ್‌’ ಸೇರಲಿದೆ ಎಂಬ ಸುದ್ದಿಯ ಬೆನ್ನಲ್ಲೇ ಈ ಕಂಪನಿ’ಯ ಷೇರಿನ ಬೆಲೆ ಗಗನಕ್ಕೇರುತ್ತಿದೆ. ಕಳೆದ ಆರು ತಿಂಗಳಲ್ಲೇ ಶೇ 104.40ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿರುವ ಈ ಕಂಪನಿಯ ಷೇರಿನ ಬೆಲೆ ಐತಿಹಾಸಿಕ ದಾಖಲೆಯ ಮಟ್ಟಕ್ಕೆ ಏರುವ ಮೂಲಕ ಗಮನ ಸೆಳೆಯುತ್ತಿದೆ.

‘ನಿಫ್ಟಿ–100’ ಸೂಚ್ಯಂಕದಲ್ಲಿ ವಹಿವಾಟು ನಡೆಸುತ್ತಿದ್ದ ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯು ಸೆಪ್ಟೆಂಬರ್‌ 30ರಂದು ‘ನಿಫ್ಟಿ–50’ ಸೂಚ್ಯಂಕವನ್ನು ಸೇರಲಿದೆ. ಇದರೊಂದಿಗೆ ‘ಶ್ರೀ ಸಿಮೆಂಟ್‌’ ಕಂಪನಿಯು ‘ನಿಫ್ಟಿ–50’ ಸೂಚ್ಯಂಕದಿಂದ ಹೊರಬೀಳಲಿದೆ.

ಎನ್‌ಎಸ್‌ಇ ಇಂಡೈಸಸ್‌ ಲಿಮಿಟೆಡ್‌ನ ‘ದಿ ಇಂಡೆಕ್ಸ್‌ ಮೆಂಟೇನನ್ಸ್‌ ಸಬ್‌ ಕಮಿಟಿ’–ಇಕ್ವಿಟಿ (IMSC)ಯು ಪ್ರತಿ ಆರು ತಿಂಗಳಿಗೆ ಒಮ್ಮೆ ಕಂಪನಿಗಳ ಸಾಧನೆಗಳನ್ನು ಪರಿಶೀಲಿಸಿ ಸೂಚ್ಯಂಕಗಳನ್ನು ಪರಿಷ್ಕರಿಸುತ್ತದೆ. ಅತ್ಯುತ್ತಮ ಸಾಧನೆ ತೋರಿದ ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯನ್ನು 50 ‘ಲಾರ್ಜ್‌ ಕ್ಯಾಪ್‌’ ಕಂಪನಿಗಳಿರುವ ‘ನಿಫ್ಟಿ–50’ ಸೂಚ್ಯಂಕಕ್ಕೆ ಸೇರಿಸಿಕೊಳ್ಳಲು ಐಎಂಎಸ್‌ಸಿ ನಿರ್ಧರಿಸಿದೆ.

ಷೇರುಪೇಟೆಯಲ್ಲಿ ‘ನಿಫ್ಟಿ–50’ ಸೂಚ್ಯಂಕವನ್ನು ಸೇರುವುದು ಕಂಪನಿಗಳ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದೆ. ಶ್ರೀಮಂತಿಕೆಯಲ್ಲಿ ಏಷ್ಯಾದಲ್ಲೇ ಮೂರನೇ ಸ್ಥಾನದಲ್ಲಿರುವ ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್‌ನ ‘ಅದಾನಿ ಪೋರ್ಟ್ಸ್‌ ಆ್ಯಂಡ್‌ ಎಸ್‌ಇಝಡ್‌’ ಕಂಪನಿಯು ಈಗಾಗಲೇ ‘ನಿಫ್ಟಿ–50’ಯ ಭಾಗವಾಗಿದೆ. ಇದೀಗ ಅದಾನಿ ಎಂಟರ್‌ಪ್ರೈಸಸ್‌ ಸಹ ಈ ಸೂಚ್ಯಂಕವನ್ನು ಸೇರಲು ಅರ್ಹತೆ ಪಡೆದಿರುವುದು ‘ಅದಾನಿ ಗ್ರೂಪ್‌’ನ ಬಲವನ್ನು ಇನ್ನಷ್ಟು ಹೆಚ್ಚಿಸಿದೆ.

ಹೆಚ್ಚಲಿರುವ ಬಂಡವಾಳದ ಒಳಹರಿವು
ಹಲವು ಮ್ಯೂಚುವಲ್‌ ಫಂಡ್‌ ಕಂಪನಿಗಳು ಸೂಚ್ಯಂಕಗಳ ಆಧಾರದಲ್ಲಿ ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ‘ನಿಫ್ಟಿ–50’ ಸೂಚ್ಯಂಕದ ಮೇಲೆ ಹೂಡಿಕೆ ಮಾಡಿದಾಗ ಅದರೊಳಗಿರುವ ಕಂಪನಿಗಳ ಪಾಲಿನ ಆಧಾರದಲ್ಲಿ ಷೇರುಗಳನ್ನು ಖರೀದಿಸಲಾಗುತ್ತದೆ.

‘ನಿಫ್ಟಿ–50’ ಸೂಚ್ಯಂಕ ಪರಿಷ್ಕರಣೆ ಆಗುತ್ತಿರುವ ಸಂದರ್ಭದಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯ ಷೇರುಗಳನ್ನು ಖರೀದಿಸಲು ಅಂದಾಜು ₹1,760 ಕೋಟಿಯಷ್ಟು ಬಂಡವಾಳ ಹೂಡಿಕೆ ಮಾಡಲಾಗುತ್ತದೆ. ಇದೇ ಅವಧಿಯಲ್ಲಿ ‘ಶ್ರೀ ಸಿಮೆಂಟ್‌’ ಕಂಪನಿಯಿಂದ ಅಂದಾಜು ₹ 630 ಕೋಟಿಯಷ್ಟು ಬಂಡವಾಳ ಹಿಂತೆಗೆದುಕೊಳ್ಳುವ ಪ್ರತಿಕ್ರಿಯೆ ನಡೆಯಲಿದ್ದು, ಈ ಕಂಪನಿಯ ಷೇರು ಮಾರಾಟದ ಒತ್ತಡಕ್ಕೆ ಸಿಲುಕಲಿದೆ ಎಂದು ಷೇರುಪೇಟೆಯಲ್ಲಿ ವಿಶ್ಲೇಷಿಸಲಾಗುತ್ತಿದೆ.

ನಿಫ್ಟಿ–50 ಸೂಚ್ಯಂಕದಲ್ಲಿ ಆಗಲಿರುವ ಬದಲಾವಣೆಯಿಂದಾಗಿ ಅದಾನಿ ಎಂಟರ್‌ಪ್ರೈಸಸ್‌ ಕಂಪನಿಗೆ ಅನಾಯಾಸವಾಗಿ ಬಂಡವಾಳ ಹರಿದುಬರಲಿದ್ದು, ಷೇರಿನ ಬೆಲೆ ಹೆಚ್ಚುವ ನಿರೀಕ್ಷೆ ಇದೆ. ಇದೇ ಕಾರಣಕ್ಕೆ ಹೂಡಿಕೆದಾರರು ಈ ಕಂಪನಿಯ ಷೇರು ಖರೀದಿಗೆ ಉತ್ಸಾಹ ತೋರಿದ ಪರಿಣಾಮ ಈ ವಾರಾಂತ್ಯದ ವಹಿವಾಟಿನಲ್ಲಿ ಷೇರಿನ ಬೆಲೆಯು ದಾಖಲೆಯ ಮಟ್ಟಕ್ಕೆ ಏರಿದೆ.

ಕಳೆದ ಮಾರ್ಚ್‌ನಲ್ಲಿ ನಡೆದ ಸೂಚ್ಯಂಕಗಳ ಪರಿಷ್ಕರಣೆ ವೇಳೆ ‘ನಿಫ್ಟಿ–50’ಯಿಂದ ‘ಇಂಡಿಯನ್‌ ಆಯಿಲ್‌’ ಕಂಪನಿಯು ಹೊರಕ್ಕೆ ಬಿದ್ದಿತ್ತು. ಅದರ ಸ್ಥಾನವನ್ನು ‘ಅಪೊಲೊ ಹಾಸ್ಪಿಟಲ್‌’ ಕಂಪನಿ ಪಡೆದುಕೊಂಡಿತ್ತು.

ನಿಫ್ಟಿ–50 ಸೂಚ್ಯಂಕದೊಳಗೆ ಸೇರಲು ಆ ಕಂಪನಿಯು ‘ನಿಫ್ಟಿ–100’ ಸೂಚ್ಯಂಕದಲ್ಲಿ ವಹಿವಾಟು ನಡೆಸುತ್ತಿರಬೇಕು. ಜೊತೆಗೆ ಫ್ಯೂಚರ್ಸ್‌ ಆ್ಯಂಡ್‌ ಆಪ್ಷನ್ಸ್‌ (F&O)ನಲ್ಲೂ ವಹಿವಾಟು ನಡೆಸುತ್ತಿರಬೇಕು. ಸರಾಸರಿ ‘ಫ್ರೀ–ಫ್ಲೋಟ್‌ ಮಾರ್ಕೆಟ್‌ ಕೆಪಿಟಲೈಜೇಷನ್‌’ ಕನಿಷ್ಠ 1.5ರಷ್ಟು ಇರಬೇಕು.

‘ನಿಫ್ಟಿ–50’ಗಿಂತ 19 ಪಟ್ಟು ಮೌಲ್ಯ ಹೆಚ್ಚಳ
ಮುಂಬೈ ಷೇರು ವಿನಿಮಯ ಕೇಂದ್ರದ (BSE) ಪ್ರಧಾನ ಸೂಚ್ಯಂಕ ಸೆನ್ಸೆಕ್ಸ್‌ ಕಳೆದ ಒಂದು ವಾರದಲ್ಲಿ ಶೇ 0.11ರಷ್ಟು ಮೌಲ್ಯ ಕಳೆದುಕೊಂಡಿದೆ. ಒಂದು ತಿಂಗಳಲ್ಲಿ ಶೇ 1.15, ಮೂರು ತಿಂಗಳಲ್ಲಿ ಶೇ 5.35, ಆರು ತಿಂಗಳಲ್ಲಿ ಶೇ 6.01 ಹಾಗೂ ಒಂದು ವರ್ಷದಲ್ಲಿ ಶೇ 1.64ರಷ್ಟು ಮೌಲ್ಯ ಹೆಚ್ಚಾಗಿದೆ.

ನಿಫ್ಟಿ–50 ಸೂಚ್ಯಂಕವು ಒಂದು ವಾರದಲ್ಲಿ ಶೇ 0.11ರಷ್ಟು ಕುಸಿತ ಕಂಡಿದೆ. ಒಂದು ತಿಂಗಳಲ್ಲಿ ಶೇ 1.12, ಮೂರು ತಿಂಗಳಲ್ಲಿ ಶೇ 5.48, ಆರು ತಿಂಗಳಲ್ಲಿ ಶೇ 5.62 ಹಾಗೂ ಒಂದು ವರ್ಷದಲ್ಲಿ ಕೇವಲ ಶೇ 1.77ರಷ್ಟು ಏರಿಕೆಯನ್ನು ದಾಖಲಿಸಿದೆ.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಕಳೆದ ಒಂದು ವಾರದಲ್ಲಿ ಶೇ 6.89ರಷ್ಟು ಏರಿಕೆಯನ್ನು ಕಂಡಿದೆ. ಒಂದು ತಿಂಗಳಲ್ಲಿ ಶೇ 25.05 ಹಾಗೂ ಮೂರು ತಿಂಗಳಲ್ಲಿ ಶೇ 51.89ರಷ್ಟು ಮೌಲ್ಯ ಹೆಚ್ಚಾಗಿದೆ. ‘ನಿಫ್ಟಿ–50’ ಸೂಚ್ಯಂಕಕ್ಕೆ ಹೋಲಿಸಿದರೆ ಈ ಕಂಪನಿಯ ಮೌಲ್ಯವು ಕಳೆದ ಆರು ತಿಂಗಳಲ್ಲಿ 19 ಪಟ್ಟು ಹೆಚ್ಚಾಗಿದೆ! ಕಳೆದ ಆರು ತಿಂಗಳಲ್ಲೇ ಶೇ 104.4ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿರುವ ಅದಾನಿ ಎಂಟರ್‌ಪ್ರೈಸಸ್‌ ಇದೀಗ ‘ನಿಫ್ಟಿ–50’ಯ ಭಾಗವಾಗುತ್ತಿರುವುದು ವಿಶೇಷವಾಗಿದೆ. ಈ ಕಂಪನಿಯು ಒಂದು ವರ್ಷದಲ್ಲಿ ಶೇ 113.67, ಎರಡು ವರ್ಷಗಳಲ್ಲಿ ಶೇ 1,045 ಹಾಗೂ ಮೂರು ವರ್ಷಗಳಲ್ಲಿ ಶೇ 2,343ರಷ್ಟು ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ‘ಮಲ್ಟಿಬೆಗರ್‌’ (Multibagger – ಷೇರಿನ ಮೌಲ್ಯ 10 ಪಟ್ಟು ಹೆಚ್ಚಾಗುವುದು) ಕಂಪನಿಯಾಗಿ ಹೊರಹೊಮ್ಮಿದೆ.

2021ರ ಅಕ್ಟೋಬರ್‌ 28ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹ 1367.70) ಕುಸಿದಿದ್ದ ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯ ಷೇರಿನ ಬೆಲೆಯು ಸೆಪ್ಟೆಂಬರ್‌ 2ರಂದು ಇದುವರೆಗಿನ ಗರಿಷ್ಠ ಮಟ್ಟಕ್ಕೆ (₹3,369.40) ಏರುವ ಮೂಲಕ ಹೊಸ ದಾಖಲೆಯನ್ನೇ ನಿರ್ಮಿಸಿದೆ.

ತಗ್ಗಿದ ಲಾಭ; ಹೆಚ್ಚಿದ ಸಾಲದ ಹೊರೆ!
ಷೇರುಪೇಟೆಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯು ‘ಚಿರತೆ’ಯ ವೇಗದಲ್ಲಿ ಓಡುತ್ತಿದೆ! ಆದರೆ, ಈ ಕಂಪನಿಯ ಹಣಕಾಸಿನ ಮೇಲೆ ಕಣ್ಣುಹಾಯಿಸಿದಾಗ ಮೇಲ್ನೋಟಕ್ಕೆ ಹೆಚ್ಚೇನೂ ಆಕರ್ಷಕವಾಗಿ ಕಂಡುಬರುತ್ತಿಲ್ಲ.

2021ರ ಹಣಕಾಸು ವರ್ಷದಲ್ಲಿ ಕಂಪನಿಗೆ ಬಂದಿದ್ದ ಒಟ್ಟು ಆದಾಯ ₹ 40,290 ಕೋಟಿ. 2022ನೇ ಸಾಲಿನಲ್ಲಿ ಆದಾಯದ ಪ್ರಮಾಣವು ₹ 70,432 ಕೋಟಿಗೆ ಹೆಚ್ಚಾಗಿದೆ. 2021ರಲ್ಲಿ ₹ 37,828 ಕೋಟಿ ವೆಚ್ಚ ಮಾಡಿದ್ದ ಕಂಪನಿಯು 2022ರಲ್ಲಿ ₹ 66,954 ಕೋಟಿ ವೆಚ್ಚ ಮಾಡಿದೆ. 2021ರಲ್ಲಿ ಒಟ್ಟು ₹ 746 ಕೋಟಿಯಷ್ಟಿದ್ದ ಕಂಪನಿಯ ಒಟ್ಟು ನಿವ್ವಳ ಲಾಭವು 2022ರ ವೇಳೆಗೆ ₹ 475 ಕೋಟಿಗೆ (ಶೇ –36.32) ಕುಸಿದಿದೆ.

2021ರಲ್ಲಿ ಕಂಪನಿಯು ಒಟ್ಟು ₹ 51,642 ಕೋಟಿ ಸಾಲವನ್ನು ಹೊಂದಿತ್ತು. 2022ರ ವೇಳೆಗೆ ಸಾಲದ ಹೊರೆಯ ಪ್ರಮಾಣ ₹ 1,01,760 ಕೋಟಿಗೆ (ಶೇ 97) ಏರಿಕೆಯಾಗಿರುವುದು ಚಿಂತೆಗೀಡುಮಾಡಿದೆ. 2021ರಲ್ಲಿ ₹ –1,458 ಕೋಟಿಗೆ ಕುಸಿದಿದ್ದ ಕಂಪನಿಯ ‘ಕ್ಯಾಷ್‌ ಫ್ಲೋ’ ಪ್ರಮಾಣವು 2022ರ ಹೊತ್ತಿಗೆ ₹ 246 ಕೋಟಿಗೆ ಏರಿಕೆಯಾಗಿರುವುದು ಸಮಾಧಾನಕರ ಸಂಗತಿ.

ಅದಾನಿ ಎಂಟರ್‌ಪ್ರೈಸಸ್‌ ಕಂಪನಿಯು ವೈವಿಧ್ಯಮಯವಾದ ವ್ಯಾಪಾರದಲ್ಲಿ ತೊಡಗಿಕೊಂಡಿದೆ. ಏರ್‌ಪೋರ್ಟ್‌, ರೈಲು, ಮೆಟ್ರೊ ನಿಲ್ದಾಣ ಹಾಗೂ ರಸ್ತೆಗಳ ನಿರ್ಮಾಣ, ಡಾಟಾ ಸೆಂಟರ್‌, ಡಿಫೆನ್ಸ್‌ ಆ್ಯಂಡ್‌ ಏರೋಸ್ಪೇಸ್‌, ಸೌರಶಕ್ತಿ ಉಪಕರಣಗಳ ಉತ್ಪಾದನೆ ವಲಯಗಳಲ್ಲಿ ಈ ಕಂಪನಿಯು ವಹಿವಾಟು ನಡೆಸುತ್ತಿದೆ.

‘ಶ್ರೀ ಸಿಮೆಂಟ್‌’ ಮೌಲ್ಯ ಶೇ 11ರಷ್ಟು ಕುಸಿತ
‘ನಿಫ್ಟಿ–50’ ಸೂಚ್ಯಂಕದಿಂದ ಹೊರಕ್ಕೆ ಬರುತ್ತಿರುವ, ಸಿಮೆಂಟ್‌ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ‘ಶ್ರೀ ಸಿಮೆಂಟ್‌’ ಕಂಪನಿಯ ಷೇರಿನ ಬೆಲೆಯು ಶುಕ್ರವಾರದ ವಹಿವಾಟಿನಲ್ಲಿ ಶೇ 2.31ರಷ್ಟು ಕಡಿಮೆಯಾಗಿದೆ. ಕಳೆದ ಒಂದು ವಾರದಲ್ಲಿ ಈ ಕಂಪನಿ ಷೇರಿನ ಮೌಲ್ಯವು ಶೇ 4.57, ಒಂದು ತಿಂಗಳಲ್ಲಿ ಶೇ 0.11, ಮೂರು ತಿಂಗಳಲ್ಲಿ ಶೇ 2.53, ಆರು ತಿಂಗಳಲ್ಲಿ ಶೇ 11.88 ಮತ್ತು ಒಂದು ವರ್ಷದಲ್ಲಿ ಶೇ 30.45ರಷ್ಟು ಕುಸಿತ ಕಂಡಿದೆ.

2021ರ ಸೆಪ್ಟೆಂಬರ್‌ 15ರಂದು 52 ವಾರಗಳ ಗರಿಷ್ಠ ಮಟ್ಟಕ್ಕೆ (₹ 31,469.95) ಏರಿಕೆಯಾಗಿದ್ದ ಕಂಪನಿಯ ಷೇರಿನ ಬೆಲೆಯು ಕಳೆದ ಜೂನ್‌ 20ರಂದು 52 ವಾರಗಳ ಕನಿಷ್ಠ ಮಟ್ಟಕ್ಕೆ (₹ 17,865.20) ಕುಸಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT