ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತಗಟ್ಟೆ ಸಮೀಕ್ಷೆ ಪರಿಣಾಮ: ಸಾರ್ವಕಾಲಿಕ ಏರಿಕೆ ದಾಖಲಿಸಿದ ಸೆನ್ಸೆಕ್ಸ್, ನಿಫ್ಟಿ

Published 3 ಜೂನ್ 2024, 4:51 IST
Last Updated 3 ಜೂನ್ 2024, 4:51 IST
ಅಕ್ಷರ ಗಾತ್ರ

ಮುಂಬೈ: ಬಿಜೆಪಿ ನೇತೃತ್ವದ ಎನ್‌ಡಿಎ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿದ ಬೆನ್ನಲ್ಲೇ ಷೇರುಪೇಟೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಆರಂಭಿಕ ವಹಿವಾಟಿನಲ್ಲೇ ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆಯ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ಏರಿಕೆ ದಾಖಲಿಸಿವೆ. 30 ಷೇರುಗಳ ಸೆನ್ಸೆಕ್ಸ್ ಮತ್ತು 50 ಷೇರುಗಳ ನಿಫ್ಟಿಯ ಎಲ್ಲ ಷೇರುಗಳು ಗಳಿಕೆ ಕಂಡಿವೆ.

ಬಿಎಸ್‌ಇ ಸೆನ್ಸೆಕ್ಸ್ 2,777.58 ಅಂಶಗಳಷ್ಟು ಅಥವಾ ಶೇಕಡ 3.75ರಷ್ಟು ಏರಿಕೆ ಕಂಡು, 76,738.89ರಲ್ಲಿ ವಹಿವಾಟು ಆರಂಭಿಸಿದರೆ, ಎನ್‌ಎಸ್‌ಇ ನಿಫ್ಟಿ 808 ಅಂಶಗಳಷ್ಟು ಏರಿಕೆ ಕಂಡು ಸಾರ್ವಕಾಲಿಕ ದಾಖಲೆಯ 23,338.70 ರಲ್ಲಿ ವಹಿವಾಟು ಆರಂಭಿಸಿತು.

ಸೆನ್ಸೆಕ್ಸ್‌ ಷೇರುಗಳಾದ ಪವರ್ ಗ್ರಿಡ್, ಎನ್‌ಟಿಪಿಸಿ, ಲಾರ್ಸನ್ ಅಂಡ್ ಟೌಬ್ರೊ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕ್, ಇಂಡಸ್ ಲ್ಯಾಂಡ್ ಬ್ಯಾಂಕ್, ಮಹೀಂದ್ರ ಅಂಡ್ ಮಹೀಂದ್ರ, ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹೆಚ್ಚು ಗಳಿಕೆ ದಾಖಲಿಸಿದ ಷೇರುಗಳಾಗಿವೆ.

ಎನ್‌ಡಿಎ ಸರಾಸರಿ 365 ಸ್ಥಾನಗಳನ್ನು ಗಳಿಸಲಿದೆ ಎಂದು 12 ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

ಮಾರ್ಚ್‌ಗೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇಕಡ 8.2ರಷ್ಟು ವೃದ್ಧಿಯಾಗಿದ್ದು, ವಿಶ್ವದ ಅತ್ಯಧಿಕ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕತೆಯ ಸಾಲಿಗೆ ಸೇರಿದೆ.

ಏಷ್ಯಾ ಷೇರುಪೇಟೆಗಳಾದ ಸೋಲ್, ಟೋಕಿಯೊ, ಹಾಂಕಾಂಗ್ ಉತ್ತಮ ಗಳಿಕೆ ಕಂಡರೆ, ಶಾಂಘೈ ಷೇರುಪೇಟೆ ಕುಸಿತ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT