ಮುಂಬೈ: ಜಾಗತಿಕ ಷೇರುಪೇಟೆಗಳಲ್ಲಿ ಕಂಡುಬಂದ ಏರಿಕೆ ಮತ್ತು ವಿದೇಶಿ ಬಂಡವಾಳ ಒಳಹರಿವಿನಿಂದಾಗಿ ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿವೆ.
ದೂರಸಂಪರ್ಕ, ವಾಹನ ಮತ್ತು ತಂತ್ರಜ್ಞಾನ ವಲಯದ ಷೇರುಗಳನ್ನು ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದು ಷೇರುಪೇಟೆಗಳ ಗಳಿಕೆಗೆ ನೆರವಾಯಿತು ಎಂದು ವರ್ತಕರು ಹೇಳಿದ್ದಾರೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸತತ 11ನೇ ದಿನವೂ ಗಳಿಕೆ ಓಟ ಮುಂದುವರಿಸಿತು. ಶುಕ್ರವಾರ 319 ಅಂಶ ಹೆಚ್ಚಾಗಿ 67,838 ಅಂಶಗಳ ದಾಖಲೆ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 89 ಅಂಶ ಏರಿಕೆ ಕಂಡು 20,192 ಅಂಶಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು.
ಸೆನ್ಸೆಕ್ಸ್‌ನಲ್ಲಿ ಭಾರ್ತಿ ಏರ್‌ಟೆಲ್ ಶೇ 2.37ರಷ್ಟು ಗಳಿಕೆ ಕಂಡಿದೆ. ದೂರಸಂರ್ಪಕವು ವಲಯದ ಸೂಚ್ಯಂಕ ಶೇ 1.67ರಷ್ಟು ಏರಿಕೆ ಕಂಡಿದೆ.
‘2007ರ ಅಕ್ಟೋಬರ್ ಬಳಿಕ ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ ಸತತ 11ನೇ ದಿನವೂ ಏರಿಕೆ ಕಂಡಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ರಿಟೇಲ್ ರಿಸರ್ಚ್‌ನ ಮುಖ್ಯಸ್ಥ ದೀಪಕ್ ಜಸನಿ ಹೇಳಿದ್ದಾರೆ.
‘ಚೀನಾ ಮತ್ತು ಅಮೆರಿಕದ ಆರ್ಥಿಕ ಬೆಳವಣಿಗೆಯು ಮಾರುಕಟ್ಟೆ ನಿರೀಕ್ಷೆಗಿಂತಲೂ ಉತ್ತಮವಾಗಿ ಇರುವುದು ದೇಶಿ ಷೇರುಪೇಟೆಗಳಲ್ಲಿ ಗಳಿಕೆ ಓಟ ಮುಂದುವರಿಯುವಂತೆ ಮಾಡಿದೆ’ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್‌ನ ರಿಟೇಲ್ ರಿಸರ್ಚ್‌ನ ಮುಖ್ಯಸ್ಥ ಸಿದ್ದಾರ್ಥ ಖೇಮ್ಕಾ ತಿಳಿಸಿದ್ದಾರೆ.
‘ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚಾಗುವ ಮತ್ತು ಹೊಸ ಒಪ್ಪಂದಗಳು ಆಗುವ ನಿರೀಕ್ಷೆಯಿಂದಾಗಿ ವಾಹನ ಮತ್ತು ಐ.ಟಿ. ಷೇರುಗಳು ಹೆಚ್ಚಿನ ಖರೀದಿ ವಹಿವಾಟಿಗೆ ಒಳಗಾದವು’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಬ್ರೆಂಟ್ ಕಚ್ಚಾ ತೈಲ ದರ ಶೇ 0.26ರಷ್ಟು ಹೆಚ್ಚಾಗಿ ಬ್ಯಾರಲ್‌ಗೆ 93.94 ಡಾಲರ್‌ಗೆ ತಲುಪಿತು.
‘ಸದ್ಯಕ್ಕೆ ಏಕಕಂತಿನ ಹೂಡಿಕೆ ಅಪಾಯ’
ಬೆಂಗಳೂರು: ಏಕಕಂತಿನಲ್ಲಿ ಹೂಡಿಕೆ ಮಾಡುವುದು ಸದ್ಯದ ಮಟ್ಟಿಗೆ ಅಪಾಯಕರ. ಹೆಚ್ಚಿನ ಕುಸಿತದಿಂದ ರಕ್ಷಣೆ ಪಡೆಯಲು ವ್ಯವಸ್ಥಿತ ವರ್ಗಾವಣೆ ಯೋಜನೆಗಳ (ಎಸ್‌ಟಿಪಿ) ಕಡೆಗೆ ಹೂಡಿಕೆದಾರರು ಗಮನ ಹರಿಸಬಹುದು ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.
ಮಾರುಕಟ್ಟೆ ಮೌಲ್ಯವು ಒಟ್ಟಾರೆಯಾಗಿ ಗರಿಷ್ಠ ಮಟ್ಟದಲ್ಲಿ ಇದ್ದರೂ ಫಾರ್ಮಾ, ಸಿಮೆಂಟ್ ಮತ್ತು ಬ್ಯಾಂಕಿಂಗ್ ವಲಯಗಳ ಷೇರುಗಳು ನೈಜ ಮೌಲ್ಯ ಹೊಂದಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಮೌಲ್ಯವು ಆಕರ್ಷಕವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಿಫ್ಟಿಯು 20,200ರ ಸನಿಹ ಬಂದಿರುವುದರಿಂದ ಹೊಸ ಹೂಡಿಕೆದಾರರು ದುಬಾರಿಯಲ್ಲದ ಷೇರುಗಳನ್ನು ಖರೀದಿಸಲು ಗಮನ ಹರಿಸುವುದು ಒಳಿತು. ಶುದ್ಧ ಇಂಧನ ಮತ್ತು ವಿದ್ಯುತ್ ಚಾಲಿತ ವಾಹನ ವಲಯದಲ್ಲಿ ಹೂಡಿಕೆ ಮಾಡಬಹುದು ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಎಸ್. ರಂಗನಾಥನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.