ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ‘ಚಿನ್ನದ ಮೊಟ್ಟೆ’ ಇಟ್ಟ ಅದಾನಿ ಗ್ರೀನ್‌ ಎನರ್ಜಿ!

ಎರಡೂವರೆ ವರ್ಷಗಳಲ್ಲೇ ಷೇರಿನ ಬೆಲೆ 35 ಪಟ್ಟು ಹೆಚ್ಚಳ
Last Updated 29 ನವೆಂಬರ್ 2020, 12:27 IST
ಅಕ್ಷರ ಗಾತ್ರ
ADVERTISEMENT
""
""

ಷೇರುಪೇಟೆಯ ವಹಿವಾಟಿಗೆ ತನ್ನನ್ನು ತೆರೆದುಕೊಂಡ ಎರಡೂವರೆ ವರ್ಷಗಳ ಒಳಗೇ ಷೇರಿನ ಬೆಲೆಯನ್ನು 35 ಪಟ್ಟು ಹೆಚ್ಚಿಸಿಕೊಂಡ ‘ಅದಾನಿ ಗ್ರೀನ್‌ ಎನರ್ಜಿ’ ಕಂಪನಿಯು ಹೂಡಿಕೆದಾರರ ಪಾಲಿಗೆ ‘ಚಿನ್ನದ ಮೊಟ್ಟೆ’ ಇಡುತ್ತಿರುವ ಕೋಳಿಯಾಗಿದೆ...

ದೇಶದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ‘ಅದಾನಿ ಗ್ರೀನ್‌ ಎನರ್ಜಿ’ ಕಂಪನಿಯು ಸದ್ಯ ಹೂಡಿಕೆದಾರ ಪಾಲಿಗೆ ‘ಚಿನ್ನದ ಮೊಟ್ಟೆ’ಗಳನ್ನು ಇಡುತ್ತಿರುವ ಕೋಳಿಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಕೇವಲ ಎರಡೂವರೆ ವರ್ಷಗಳ ಅವಧಿಯಲ್ಲಿ ಈ ಕಂಪನಿಯ ಷೇರಿನ ಬೆಲೆಯು 35 ಪಟ್ಟು ಹೆಚ್ಚಾಗಿರುವುದಕ್ಕೇ ಈ ಮಾತು ಹೇಳುತ್ತಿರುವುದು.

ಬ್ಯಾಂಕ್‌, ಹಣಕಾಸು ಸಂಸ್ಥೆಗಳಲ್ಲಿ ಹಣವನ್ನು ಠೇವಣಿ ಇಟ್ಟರೆ ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕ ಶೇ 10ರಷ್ಟು ಬಡ್ಡಿಯೂ ಸಿಗುವುದಿಲ್ಲ. ಹೀಗಿರುವಾಗ ವರ್ಷಕ್ಕೆ ಸರಾಸರಿ ಶೇ 1000ದಷ್ಟು ಲಾಭ ಸಿಕ್ಕಿದೆ ಎಂದರೆ ನೀವು ಹುಬ್ಬೇರಿಸದೇ ಇರುತ್ತೀರಾ? ಹೌದು, ಅದಾನಿ ಗ್ರೀನ್‌ ಎನರ್ಜಿ ಕಂಪನಿಯು ಷೇರುಪೇಟೆಯಲ್ಲಿ ಇಂತಹ ಸಂಚಲನ ಉಂಟುಮಾಡುವ ಮೂಲಕ ಹೂಡಿಕೆದಾರರಲ್ಲಿ ಅಚ್ಚರಿ ಮೂಡಿಸಿದೆ.

ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಎ.ಇ.ಎಲ್) ಮಾತೃ ಸಂಸ್ಥೆಯಿಂದ 2015ರಲ್ಲಿ ಹೊರಬಂದು ಸ್ವತಂತ್ರ ಕಂಪನಿಯಾದ ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ (ಎ.ಜಿ.ಇ.ಎಲ್‌), ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ತನ್ನದೇ ಆದ ಹೆಜ್ಜೆಗುರುತುಗಳನ್ನು ಮೂಡಿಸುತ್ತಿದೆ.

ಮೌಲ್ಯ 35 ಪಟ್ಟು ಹೆಚ್ಚಳ: ಈ ಕಂಪನಿಯು ₹ 10 ಮುಖಬೆಲೆಯ ಪ್ರತಿ ಷೇರಿಗೆ ₹ 28.90 ಬೆಲೆ ನಿಗದಿಪಡಿಸಿ ಐಪಿಒ ಬಿಟ್ಟಿತ್ತು. ಮುಂಬೈ ಹಾಗೂ ರಾಷ್ಟ್ರೀಯ ಷೇರುಪೇಟೆಯಲ್ಲಿ 2018ರ ಜೂನ್‌ 18ರಂದು ಈ ಕಂಪನಿಯ ಷೇರು ಸಾರ್ವಜನಿಕವಾಗಿ ವಹಿವಾಟು ಆರಂಭಿಸಿದ್ದು, ₹ 29.40ಕ್ಕೆ ಮೊದಲ ದಿನದ ವಹಿವಾಟು ಅಂತ್ಯಗೊಂಡಿತ್ತು. ಕೇವಲ ಎರಡೂವರೆ ವರ್ಷಗಳ ಅವಧಿಯೊಳಗೆ, 2020ರ ನವೆಂಬರ್‌ 27ಕ್ಕೆ ಅಂತ್ಯಗೊಂಡಂತೆ ಕಂಪನಿಯ ಷೇರಿನ ಬೆಲೆಯು ₹ 1048.10 (ಶೇ 3,564.96) ಹೆಚ್ಚಾಗಿದೆ. ಕಂಪನಿಯ ಷೇರು ವಹಿವಾಟು ಆರಂಭಗೊಂಡ ಎರಡೂವರೆ ವರ್ಷಗಳ ಅವಧಿಯಲ್ಲಿ ವಾರ್ಷಿಕ ಸರಾಸರಿ ಹತ್ತು ಪಟ್ಟು (ಶೇ 1,000) ಮೌಲ್ಯ ಹೆಚ್ಚಿದಂತಾಗಿದೆ.

ಕಂಪನಿಯ ಐಪಿಒ ಬಿಡುಗಡೆ ಹೊಂದಿದ ದಿನದಿಂದ ಒಂದು ವರ್ಷದಲ್ಲಿ, ಅಂದರೆ 2019ರ ಜೂನ್‌ 18ಕ್ಕೆ ಷೇರಿನ ಬೆಲೆಯು ಕೇವಲ ₹ 11.40 (ಶೇ 38.77)ರಷ್ಟು ಏರಿಕೆಯಾಗಿತ್ತು. 2019ರ ಸೆಪ್ಟೆಂಬರ್‌ ಬಳಿಕ ಪ್ರಬಲವಾದ ‘ಅಪ್‌ ಟ್ರೆಂಡ್‌’ ಶುರುವಾಗಿದ್ದು, ಈ ಕಂಪನಿಯ ಷೇರಿನ ಬೆಲೆಯು ನಿರಂತರವಾಗಿ ಏರುತ್ತಲೇ ಇತ್ತು. ಎರಡನೇ ವರ್ಷದ ಅಂತ್ಯಕ್ಕೆ (2020ರ ಜೂನ್‌ 18) ಕಂಪನಿಯ ಷೇರಿನ ಬೆಲೆಯು ₹ 371.20 (ಶೇ 1262)ರಷ್ಟು ಹೆಚ್ಚಾಗಿತ್ತು. ಕಳೆದ ಐದು ತಿಂಗಳ ಅವಧಿಯಲ್ಲಿ ಈ ಕಂಪನಿಯ ಷೇರಿನ ಬೆಲೆಯು ₹ 677 (ಶೇ 169)ರಷ್ಟು ಏರಿಕೆ ಕಂಡಿದೆ.

11 ರಾಜ್ಯಗಳಲ್ಲಿ ಕಾರ್ಯಾಚರಣೆ: ಅದಾನಿ ಗ್ರೀನ್‌ ಎನರ್ಜಿ ಕಂಪನಿಯು ಗುಜರಾತ್‌, ಪಂಜಾಬ್‌, ರಾಜಸ್ಥಾನ, ಉತ್ತರ ಪ್ರದೇಶ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸಗಡ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿ 11 ರಾಜ್ಯಗಳ 80 ಸ್ಥಳಗಳಲ್ಲಿ ಸೌರ ಹಾಗೂ ಪವನ ವಿದ್ಯುತ್‌ ಉತ್ಪಾದನೆ ಮಾಡುತ್ತಿದೆ. 473.3 ಕೋಟಿ ಯೂನಿಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗಿದ್ದು, ನವೀಕರಿಸಬಹುದಾದ ಇಂಧನ ಬಳಕೆಯಿಂದಾಗಿ 40 ಲಕ್ಷ ಟನ್‌ ಇಂಗಾಲ ಡಯಾಕ್ಸೈಡ್‌ ಹವಾಮಾನದೊಳಗೆ ಸೇರ್ಪಡೆಯಾಗುವುದು ತಪ್ಪಿದಂತಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

2.5 ಗಿಗಾವಾಟ್‌ ವಿದ್ಯುತ್‌ ಉತ್ಪಾದನೆ: ಅದಾನಿ ಗ್ರೀನ್‌ ಎನರ್ಜಿ ಕಂಪನಿ ಸದ್ಯ 3.10 ಗಿಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು, 2.5 ಗಿಗಾವಾಟ್‌ಗಿಂತಲೂ (2000 ಮೆಗಾ ವಾಟ್‌) ಹೆಚ್ಚು ವಿದ್ಯುತ್‌ ಉತ್ಪಾದನೆ ಮಾಡುತ್ತಿದೆ.

ಸೌರ ಶಕ್ತಿ ಮೂಲದಿಂದ 2,403 ಮೆಗಾವಾಟ್‌ ಉತ್ಪಾದನೆ ಮಾಡಲಾಗುತ್ತಿದ್ದು, 8,425 ಮೆಗಾವಾಟ್‌ ಉತ್ಪಾದಿಸುವ ಯೋಜನೆ ಪ್ರಗತಿಯಲ್ಲಿದೆ. ಪವನ ಶಕ್ತಿ ಮೂಲದಿಂದ 397 ಮೆಗಾವಾಟ್‌ ಉತ್ಪಾದಿಸಲಾಗುತ್ತಿದ್ದು, 1,280 ಮೆಗಾವಾಟ್‌ ಉತ್ಪಾದಿಸುವ ಯೋಜನೆಯ ಕೆಲಸಗಳು ನಡೆಯುತ್ತಿವೆ. ಇದರ ಜೊತೆಗೆ ಸೌರ ಹಾಗೂ ಪವನ ಶಕ್ತಿ ಎರಡನ್ನೂ ಬಳಸಿಕೊಳ್ಳುವ ಹೈಬ್ರೀಡ್‌ ಘಟಕಗಳಿಂದ 1,690 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಯೋಜನೆಯೂ ಪ್ರಗತಿಯಲ್ಲಿದೆ. ಈ ಕಂಪನಿಯು ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಅದಾನಿ ಕಂಪನಿಯಿಂದ ವಿದ್ಯುತ್‌ ಖರೀದಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿದೆ.

ತಮಿಳುನಾಡಿನ ಕುಮಾಥಿಯಲ್ಲಿ 648 ಮೆಗಾವಾಟ್‌ ಉತ್ಪಾದಿಸುವ ಸೌರ ವಿದ್ಯುತ್‌ ಘಟಕವನ್ನು 2015–16ನೇ ಸಾಲಿನಲ್ಲಿ ಕೇವಲ ಎಂಟು ತಿಂಗಳಲ್ಲಿ ನಿರ್ಮಿಸುವ ಮೂಲಕ ಅದಾನಿ ಗ್ರೀನ್‌ ಕಂಪನಿಯು ನವೀಕರಿಸಬಹುದಾಗ ಇಂಧನ ಉತ್ಪಾದನಾ ವಲಯದಲ್ಲಿ ಸಂಚಲನವನ್ನು ಮೂಡಿಸಿತ್ತು. ಕರ್ನಾಟಕದ ಪಾವಗಡದಲ್ಲೂ ಈ ಕಂಪನಿಯು 150 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಘಟಕವನ್ನು ಸ್ಥಾಪಿಸಿದೆ.

25 ಗಿಗಾವಾಟ್‌ ಉತ್ಪಾದನೆ ಗುರಿ: ಹವಾಮಾನ ಬದಲಾವಣೆ ಕುರಿತು 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ‘ಭಾರತವು 2022ರ ವೇಳೆಗೆ ನವೀಕರಿಸಬಹುದಾದ ಮೂಲದಿಂದ 175 ಗಿಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಮೂಲಕ ಜಾಗತಿಕ ತಾಪಮಾನ ಕಡಿಮೆ ಮಾಡಲು ಕೊಡುಗೆ ನೀಡಲಿದೆ’ ಎಂದು ಘೋಷಿಸಿದ್ದರು. ಸರ್ಕಾರದ ಈ ಮಹಾತ್ವಾಕಾಂಕ್ಷೆಯ ಯೋಜನೆ ಲಾಭ ಪಡೆಯಲು ಮುಂದಾಗಿರುವ ಅದಾನಿ ಗ್ರೀನ್‌ ಎನರ್ಜಿ ಕಂಪನಿಯು 2025ರ ವೇಳೆಗೆ ನವೀಕರಿಸಬಹುದಾದ ಮೂಲದಿಂದ 25 ಗಿಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಹೊಂದಿದೆ.

‘ಹಸಿರು ಇಂಧನ ಉತ್ಪಾದಿಸಲು ಬದ್ಧತೆ ತೋರುತ್ತಿರುವ ಭಾರತ ಸರ್ಕಾರದ ಯೋಜನೆಗೆ ನಾವೂ ಕೈಜೋಡಿಸುವ ಮೂಲಕ ಜಗತ್ತಿನಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಕೊಡುಗೆ ನೀಡುತ್ತೇವೆ. 2025ರ ವೇಳೆಗೆ 25 ಗಿಗಾವಾಟ್‌ ವಿದ್ಯುತ್‌ ಉತ್ಪಾದಿಸುವ ಮೂಲಕ ವಿಶ್ವದ ಅತಿ ದೊಡ್ಡ ಸೌರ ವಿದ್ಯುತ್‌ ಉತ್ಪಾದನಾ ಕಂಪನಿ ಎನಿಸಿಕೊಳ್ಳುತ್ತೇವೆ. 2030ರ ವೇಳೆಗೆ ಜಗತ್ತಿನ ಅತಿ ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದನಾ ಕಂಪನಿಯಾಗುವತ್ತ ನಾವು ಹೆಜ್ಜೆ ಇಡುತ್ತೇವೆ’ ಎಂದು ಅದಾನಿ ಗ್ರೀನ್‌ ಎನರ್ಜಿ ಕಂಪನಿಯ ಅಧ್ಯಕ್ಷ ಗೌತಮ್‌ ಅದಾನಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಕಂಪನಿಯ ಹಣಕಾಸಿನ ಸ್ಥಿತಿಗತಿ: ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ಕಂಪನಿಯು ಇದೇ ಮೊದಲ ಬಾರಿಗೆ ನಷ್ಟದಿಂದ ಲಾಭ ಗಳಿಕೆಯತ್ತ ಮುಖ ಮಾಡಿದೆ. 2018ರಲ್ಲಿ ಕಂಪನಿಯು ₹ 46.22 ಕೋಟಿ ನಷ್ಟವನ್ನು ಅನುಭವಿಸಿತ್ತು. 2019ಕ್ಕೆ ನಷ್ಟದ ಪ್ರಮಾಣವು ₹ 34.98 ಕೋಟಿಗೆ ತಗ್ಗಿತ್ತು. 2020ರಲ್ಲಿ ₹ 134.26 ಕೋಟಿ ನಿವ್ವಳ ಲಾಭವನ್ನು ಗಳಿಸಿರುವುದು ಹೂಡಿಕೆದಾರರ ಉತ್ಸಾವವನ್ನು ಹೆಚ್ಚಿಸಿದೆ.

2018ರಲ್ಲಿ ₹ 88.15 ಕೋಟಿ ಇದ್ದ ‘ಆಪರೇಟಿಂಗ್‌ ಪ್ರೊಫಿಟ್‌’ 2019ಕ್ಕೆ ₹ 257.42 ಕೋಟಿಗೆ ತಲುಪಿತ್ತು. 2020ಕ್ಕೆ ಈ ಬಾಬ್ತಿನ ಲಾಭವು ₹ 291.15 ಕೋಟಿಗೆ ಏರಿಕೆಯಾಗಿದೆ. 2018ರಲ್ಲಿ ಸಾಲಕ್ಕೆ ₹ 130.98 ಕೋಟಿ ಬಡ್ಡಿ ಪಾವತಿಸಲಾಗಿತ್ತು. 2019ಕ್ಕೆ ಇದರ ಪ್ರಮಾಣವು ₹ 288.24 ಕೋಟಿಗೆ ಏರಿಕೆಯಾಗಿತ್ತು. 2020ಕ್ಕೆ ಬಡ್ಡಿಯ ಪ್ರಮಾಣವು ₹ 213.13 ಕೋಟಿಗೆ ಇಳಿಕೆಯಾಗಿದೆ. 2020ರಲ್ಲಿ ಕಂಪನಿಯ ಮೇಲೆ 2072.88 ಕೋಟಿ ಸಾಲದ ಹೊರೆ ಇದೆ.

ಕಂಪನಿಯ ಸಾಮರ್ಥ್ಯ–ದೌರ್ಬಲ್ಯಗಳೇನು?: 2018ರ ಆರ್ಥಿಕ ವರ್ಷದ ಅಂತ್ಯಕ್ಕೆ ಕಂಪನಿಯ ‘ಕ್ಯಾಷ್‌ ಫ್ಲೋ’ ₹ 37.93 ಕೋಟಿ ಇತ್ತು. 2019ಕ್ಕೆ ಇದರ ಪ್ರಮಾಣವು ₹ 108.52 ಕೋಟಿಗೆ ಏರಿಕೆಯಾಗಿದೆ. 2020ಕ್ಕೆ ‘ಕ್ಯಾಷ್‌ ಫ್ಲೋ’ ಪ್ರಮಾಣ ₹ 199.88 ಕೋಟಿಗೆ ಹೆಚ್ಚಿದೆ. ಕಳೆದ ಎರಡು ವರ್ಷಗಳಿಂದ ‘ಕ್ಯಾಷ್‌ ಫ್ಲೋ’ ಪ್ರಮಾಣದಲ್ಲಿ ಏರಿಕೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಂಪನಿಯ ಪ್ರವರ್ತಕರು ಸಾಲಕ್ಕೆ ಭದ್ರತೆ ಇಟ್ಟಿದ್ದ ಷೇರಿನ ಪ್ರಮಾಣವೂ ತಗ್ಗಿದೆ. ಷೇರಿನ ಬೆಲೆಯು 52 ವಾರಗಳಲ್ಲಿನ ಗರಿಷ್ಠ ಮಟ್ಟಕ್ಕೆ ತಲುಪಿರುವುದು ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆಯೂ ಹೆಚ್ಚಾಗಿರುವುದು ಕಂಪನಿಯ ಸಾಮರ್ಥ್ಯಕ್ಕಿರುವ ‘ಪ್ಲಸ್‌ ಪಾಯಿಂಟ್‌’ಗಳಾಗಿವೆ.

ದೀರ್ಘಾವಧಿ ಯೋಜನೆಗಳಿಗಾಗಿ ಮಾಡುತ್ತಿರುವ ವೆಚ್ಚದ ಪ್ರಮಾಣ ಹೆಚ್ಚಾಗುತ್ತಿರುವುದು, ಭಾರಿ ಪ್ರಮಾಣದಲ್ಲಿ ಮಾಡಿರುವ ಸಾಲಕ್ಕೆ ಹೆಚ್ಚಿನ ಬಡ್ಡಿ ಪಾವತಿಸುತ್ತಿರುವುದು ಕಂಪನಿಯ ‘ನೆಗೆಟಿವ್‌ ಪಾಯಿಂಟ್‌’ಗಳಾಗಿವೆ. ಅದಾನಿ, ಅಂಬಾನಿ ಕಾರ್ಪೊರೇಟ್‌ ಕಂಪನಿಗಳ ವಿರುದ್ಧ ರೈತ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಕಾಂಗ್ರೆಸ್‌ ಸಹ ಈ ಕಂಪನಿಗಳ ವಿರುದ್ಧ ಧ್ವನಿ ಎತ್ತುತ್ತಿವೆ. ದೇಶದ ರಾಜಕಾರಣದಲ್ಲೇನಾದರೂ ಬದಲಾವಣೆಯಾಗಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಸರ್ಕಾರದ ನೀತಿಗಳು ಬದಲಾದರೆ ಅದಾನಿ ಕಂಪನಿಯ ದೀರ್ಘಾವಧಿಯ ಯೋಜನೆಗಳು ನನೆಗುದಿಗೆ ಬೀಳುವ ಆತಂಕವೂ ಇದೆ.

ಪ್ರವರ್ತಕರ ಬಳಿ ಶೇ 74.92ರಷ್ಟು ಕಂಪನಿಯ ಷೇರುಗಳಿದ್ದು, ಶೇ 14.7ರಷ್ಟು ಷೇರುಗಳನ್ನು ಸಾಲಕ್ಕೆ ಒತ್ತೆ ಇಡಲಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆಯ ಪ್ರಮಾಣ ಶೇ 21.14ರಷ್ಟಿದೆ. ಶೇ 2ರಷ್ಟು ಷೇರುಗಳು ಸಾರ್ವಜನಿಕರ ಬಳಿ ಇವೆ.

ಕಂಪನಿಯ ಷೇರಿನ ಬೆಲೆ ನಿರಂತರವಾಗಿ ಏರುತ್ತಿರುವುದನ್ನು ಕಂಡ ಬಿಡಿ ಹೂಡಿಕೆದಾರರು (ರಿಟೇಲ್‌ ಇನ್‌ವೆಸ್ಟರ್‌) ತಾವೂ ‘ಚಿನ್ನದ ಮೊಟ್ಟೆ’ ಇಡುವ ಕೋಳಿಯನ್ನು ಖರೀದಿಸಲು ಮುಂದೆ ಬರುತ್ತಿದ್ದಾರೆ. ‘ಚಿನ್ನದ ಮೊಟ್ಟೆ’ ಇಡುವುದನ್ನು ಈ ಕೋಳಿ ಯಾವಾಗ ನಿಲ್ಲಿಸಲಿದೆ ಎಂದು ಈಗಲೇ ಹೇಳಲಿಕ್ಕೆ ಸಾಧ್ಯವಿಲ್ಲ. ಷೇರಿನ ಬೆಲೆಯು ಈಗಾಗಲೇ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಈ ಹಂತದಲ್ಲಿ ಹೂಡಿಕೆ ಮಾಡುವುದು ಸೂಕ್ತವಲ್ಲ. ಬೆಲೆ ತುಸು ಇಳಿಕೆಯಾಗುವವರೆಗೂ ಕಾಯುವುದು ಉತ್ತಮ ಎಂಬ ಸಲಹೆಗಳು ಷೇರುಪೇಟೆಯ ತಜ್ಞರಿಂದ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT