ಮಂಗಳವಾರ, ಮೇ 26, 2020
27 °C
ಹೆಚ್ಚಿನ ಬಂಡವಾಳ ಹೊರಹರಿವು

ಕೊರೊನಾ: ತಿಂಗಳಲ್ಲಿ ಕರಗಿದ್ದು ₹33.31 ಲಕ್ಷ ಕೋಟಿ, ಷೇರುಪೇಟೆ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಕೊರೊನಾ ವೈರಸ್‌ ಸೋಂಕು ಭಾರತದ ಷೇರುಪೇಟೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿದ್ದ ವಹಿವಾಟು ಇದೀಗ ಕುಸಿತದ ಹಾದಿ ಹಿಡಿದಿದ್ದು, ದಿನದಿಂದ ದಿನಕ್ಕೆ ಹೂಡಿಕೆದಾರರ ಸಂಪತ್ತು ಕರಗುತ್ತಲೇ ಇದೆ.

ಮಾರ್ಚ್‌ 2ರಂದು 38,144 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿದ್ದ ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ ಶುಕ್ರವಾರದ (ಮಾರ್ಚ್‌ 27) ಅಂತ್ಯಕ್ಕೆ 29,815ಕ್ಕೆ ಬಂದು ತಲುಪಿದೆ. ತಿಂಗಳ ವಹಿವಾಟಿನಲ್ಲಿ 8,329 ಅಂಶಗಳಷ್ಟು ಕುಸಿತ ಕಂಡಿದೆ. ತಿಂಗಳಿನಲ್ಲಿಯೇ ಎರಡು ಬಾರಿ ಸಾರ್ವಕಾಲಿಕ ದಾಖಲೆ ಕುಸಿತವನ್ನೂ ಅನುಭವಿಸಿದೆ.

ಮಂದಗತಿಯ ಆರ್ಥಿಕತೆಗೆ, ಕೊರೊನಾ ಪರಿಣಾಮವೂ ಸೇರಿಕೊಂಡು ಹೂಡಿಕೆ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ತಿಂಗಳಲ್ಲಿ ನಡೆದಿರುವ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹145.80 ಲಕ್ಷ ಕೋಟಿಗಳಿಂದ ₹ 112.49 ಲಕ್ಷ ಕೋಟಿಗಳಿಗೆ ₹33.31 ಲಕ್ಷ ಕೋಟಿಗಳಷ್ಟು ಕರಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ ಮಾರ್ಚ್‌ 2ರಂದು 11,132 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತ್ತು. ಶುಕ್ರವಾರದ (ಮಾರ್ಚ್‌ 27) ಅಂತ್ಯಕ್ಕೆ 8,660 ಅಂಶಗಳಿಗೆ 2,472 ಅಂಶಗಳಷ್ಟು ಇಳಿಕೆ ಕಂಡಿದೆ.

ವಾರದ ವಹಿವಾಟು: ಸತತ ಆರನೇ ವಾರವೂ ಷೇರುಪೇಟೆಗಳ ವಹಿವಾಟು ನಕಾರಾತ್ಮಕವಾಗಿ ಅಂತ್ಯಗೊಂಡಿದೆ. ಕೊರೊನಾದಿಂದಾಗಿ ಅತಿಯಾದ ಮಾರಾಟದ ಒತ್ತಡ ಕಂಡುಬಂದಿದ್ದು, ವಿದೇಶಿ ಬಂಡವಾಳ ಹೊರಹರಿವು ಹೆಚ್ಚಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು